ಕೈ ನಾಯಕರ ಅರಬೆತ್ತಲೆ ಪ್ರಕರಣ..ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್‌ಗೆ ಬಿಡುಗಡೆ ಭಾಗ್ಯ ನೀಡಿದ ನ್ಯಾಯಾಲಯ | Uday Bhanu Release

Uday Bhanu Release | ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್‌
Uday Bhanu Release | ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್‌
Published on
ದೆಹಲಿ: ಎಐ ಶೃಂಗಸಭೆಯಲ್ಲಿ ಅರಬೆತ್ತಲೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನು ಚಿಬ್​ಗೆ ಪಟಿಯಾಲ ಹೌಸ್ ನ್ಯಾಯಾಲಯದ ಡ್ಯೂಟಿ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಲಯವು 50,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದ್ದು, ಚಿಬ್ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಲು ದೆಹಲಿ ಪೊಲೀಸರು ಮಾಡಿದ ಮನವಿಯನ್ನು ವಿರೋಧಿಸಿ ಕಾಂಗ್ರೆಸ್​ ಅಧ್ಯಕ್ಷನ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು.
ಚಿಬ್ ಪೊಲೀಸ್ ಕಸ್ಟಡಿ ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ಕೋರಿ ದೆಹಲಿ ಪೊಲೀಸ್ ಅಪರಾಧ ವಿಭಾಗವು ತಡರಾತ್ರಿ ಅರ್ಜಿ ಸಲ್ಲಿಸಿತ್ತು. ಇದೇ ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳ ಕಸ್ಟಡಿಗೆ ಕೋರಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಚಿಬ್ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿದರು.
ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಸಮರ್ಥವಾಗಿರುವಷ್ಟು ಸಾಕ್ಷ್ಯ ಒದಗಿಸಲು ಅಪರಾಧ ವಿಭಾಗವು ವಿಫಲವಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ನ್ಯಾಯಾಲಯದ ಷರತ್ತುಗಳೇನು..?

ಜಾಮೀನು ನೀಡುವ ಮುಂಚೆ ನ್ಯಾಯಾಲಯವು ಚಿಬ್‌ ಅವರ ಪಾಸ್‌ಪೋರ್ಟ್ ನ್ನು ಒಪ್ಪಿಸುವಂತೆ ಸೂಚನೆ ನೀಡಿದ್ದು, ಜಾಮೀನು ಷರತ್ತುಗಳ ಭಾಗವಾಗಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಸುವಂತೆಯೂ ಆದೇಶಿಸಲಾಗಿದೆ.

ಶೃಂಗಸಭೆ ಪ್ರತಿಭಟನೆ

ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆದ AI ಶೃಂಗಸಭೆಯ ಸಂದರ್ಭದಲ್ಲಿ ಅರಬೆತ್ತಲೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಫೆಬ್ರವರಿ 24 ರಂದು ದೆಹಲಿ ಪೊಲೀಸರು ಚಿಬ್​ರನ್ನು ಬಂಧಿಸಿದ್ದರು. ಇದಾದ ಬಳಿಕ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಎಐ ಶೃಂಗಸಭೆ ಪ್ರಕರಣದ ಎಫ್‌ಐಆರ್‌ನಲ್ಲಿ ಹಲವು ಗಂಭೀರ ಆರೋಪಗಳಿವೆ. ಇವುಗಳಲ್ಲಿ ಕ್ರಿಮಿನಲ್ ಪಿತೂರಿ, ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಅಥವಾ ಬಲಪ್ರಯೋಗ, ಕರ್ತವ್ಯದ ಸಮಯದಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು, ಅಧಿಕೃತ ಆದೇಶಗಳ ಅವಿಧೇಯತೆ, ಕಾನೂನುಬಾಹಿರ ಸಭೆ, ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತ ಹೇಳಿಕೆಗಳು ಸೇರಿವೆ.

ಬಂಧನ ಖಂಡಿಸಿದ್ದ ಕಾಂಗ್ರೆಸ್

ಬಂಧನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ತನ್ನ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದು, ಚಿಬ್​​ರನ್ನು ವಶಕ್ಕೆ ಪಡೆದಿರುವುದು ಸಂಪೂರ್ಣವಾಗಿ ಅಸಂವಿಧಾನಿಕ ಎಂದು ಕರೆದಿದೆ. ಪ್ರತಿಯೊಬ್ಬ ನಾಗರಿಕನಿಗೂ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ಪಡೆದುಕೊಂಡಿದ್ದು, ಸಾರ್ವಜನಿಕ ಸಮಸ್ಯೆಗಳನ್ನು ನಿರ್ಭಯವಾಗಿ ಎತ್ತುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ.
ಈ ತಂತ್ರಗಳಿಂದ ನಾವು ಬೆದರುವುದಿಲ್ಲ. ಜನರಿಗಾಗಿ ಹೋರಾಡುತ್ತಲೇ ಇರುತ್ತೇವೆ. ಜೈ ಹಿಂದ್ - ಜೈ ಕಾಂಗ್ರೆಸ್ ಎಂದು ಬರೆದುಕೊಂಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net