

ಭೋಪಾಲ್: ಯುವಕರು ತಮ್ಮ ಆತಂಕಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸುವುದನ್ನು ರಾಷ್ಟ್ರ ವಿರೋಧಿ ಎನ್ನಲಾಗುವುದಿಲ್ಲ ಎಂದಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ಸರ್ಕಾರ ಯುವಕರ ಆತಂಕಗಳತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ನ. 2ರಿಂದ 4ರವರೆಗೆ ಇಂದೋರ್‌ನಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ದಶಕಗಳ ಹಿಂದೆ, ನಾನು ಕೂಡ ಯುವಕನಾಗಿದ್ದೆ ಮತ್ತು ಜೆಪಿ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾಗ ಅಂದಿನ ಜನರಲ್ ಝಡ್‌ನ ಭಾಗವಾಗಿದ್ದೆ. ಯುವಕರ ಆಕಾಂಕ್ಷೆಗಳು ಮತ್ತು ಕಾಳಜಿಗಳ ಬಗ್ಗೆ ಸರಿಯಾದ ಗಮನ ಹರಿಸಬೇಕಾಗಿದೆ ಎಂದಿದ್ದಾರೆ.
ಯುವಕರ ಕಳವಳಗಳನ್ನು ಪರಿಹರಿಸಲು ಮತ್ತು ಅರಾಜಕತಾವಾದಿ ಶಕ್ತಿಗಳಿಂದ ಅವರನ್ನು ದೂರವಿಡಲು ಸಕಾರಾತ್ಮಕ ಮತ್ತು ನಿರಂತರ ಸಂವಾದದ ಅಗತ್ಯವಿದೆ ಎಂದ ಅವರು, "ಯುವಜನರ ಪ್ರತಿಭಟನೆಗಳು ಮತ್ತು ಚಳುವಳಿಗಳನ್ನು ರಾಜಕೀಯ ಕಾರ್ಯಸೂಚಿಗಳನ್ನು ಮುನ್ನಡೆಸಲು, ಸಮಾಜ ಅಥವಾ ದೇಶವನ್ನು ವಿಭಜಿಸಲು, ಹಾಗೂ ಇಂತಹ ಪ್ರತಿಭಟನೆಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಲು ಅಥವಾ ಹರಡಲು ದುರ್ಬಳಕೆ ಮಾಡಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಹಾಗೂ ಇತರ ದೇಶಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ದೇಶದ ಒಳಗಿನ ಮತ್ತು ಹೊರಗಿನ ಅರಾಜಕತಾವಾದಿ ಶಕ್ತಿಗಳ ಪಿತೂರಿಯೊಂದು ಇರಲು ಸಾಕಷ್ಟು ಸಾಧ್ಯತೆಯಿದೆ. ಚುನಾವಣೆಗಳ ಮೂಲಕ ಆಡಳಿತ ಬದಲಾವಣೆಯಾಗುವುದು ಬೇರೆ ವಿಷಯ. ಆದರೆ ಪ್ರತಿಭಟನೆಗಳ ಹೆಸರಿನಲ್ಲಿ, ವಿಶೇಷವಾಗಿ ಯುವಕರನ್ನು ಪ್ರಚೋದಿಸುವ ಮೂಲಕ ಹಿಂಸಾಚಾರ ಮತ್ತು ಅರಾಜಕತೆಯನ್ನು ಹರಡುವುದು ಸಮಾಜದ ಅಥವಾ ರಾಷ್ಟ್ರದ ಹಿತಾಸಕ್ತಿಗೆ ಎಂದಿಗೂ ಪೂರಕವಲ್ಲ ಎಂದು ಪ್ರತಿಪಾದಿಸಿದ್ದಾರೆ.
ಭಾರತದಲ್ಲಿ ಅರಾಜಕತಾವಾದಿ ಶಕ್ತಿಗಳು ಮೇಲುಗೈ ಸಾಧಿಸದಂತೆ ತಡೆಯಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು. ಇದಕ್ಕಾಗಿ, ಮನೆಯಲ್ಲಿಯೇ ಸುಮ್ಮನೆ ಕುಳಿತಿರುವ ಸಕಾರಾತ್ಮಕ ಚಿಂತನೆಯುಳ್ಳ ವ್ಯಕ್ತಿಗಳು, ತಮ್ಮಂತೆಯೇ ಯೋಚಿಸುವ ಇತರರನ್ನು ಒಗ್ಗೂಡಿಸಿ, ಅರಾಜಕತಾವಾದಿಗಳನ್ನು ಮೌನಗೊಳಿಸಲು ಒಂದು ಪ್ರಬಲ ಧ್ವನಿಯಾಗಿ ರೂಪುಗೊಳ್ಳಬೇಕು. ಮನೆಯಲ್ಲಿಯೇ ಸುಮ್ಮನೆ, ನಿಷ್ಕ್ರಿಯರಾಗಿ ಕುಳಿತುಕೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).