Mallikarjun Kharge | ನೀವು ಬ್ರಿಟಿಷರಿಗಾಗಿ ಕೆಲಸ ಮಾಡಿದ್ದಿರಿ; ಮೋದಿ, ಅಮಿತ್​ ಷಾ ವಿರುದ್ಧ ಹರಿಹಾಯ್ದ ಮಲ್ಲಿಕಾರ್ಜುನ ಖರ್ಗೆ

Mallikarjun Kharge | ವಂದೇ ಮಾತರಂ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ
Mallikarjun Kharge | ವಂದೇ ಮಾತರಂ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ
Published on
ನವದೆಹಲಿ: ನೀವು ಬ್ರಿಟಿಷರಿಗಾಗಿ ಕೆಲಸ ಮಾಡಿದವರು, ನಮಗೆ ದೇಶಭಕ್ತಿಯನ್ನು ಕಲಿಸಬಾರದು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಬಿಜೆಪಿ ವಿರುದ್ದ ಮಂಗಳವಾರ (ಡಿ.09) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ವಂದೇ ಮಾತರಂ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಖರ್ಗೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಅನ್ನು ಘೋಷಣೆಯನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಅಲ್ಲದೆ, ನಿಮ್ಮ ಇತಿಹಾಸವೆಂದರೆ ನೀವು ಯಾವಾಗಲೂ ಸ್ವಾತಂತ್ರ್ಯ ಹೋರಾಟ ಮತ್ತು ದೇಶಭಕ್ತಿ ಗೀತೆಗಳನ್ನು ವಿರೋಧಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಅಲ್ಲದೆ, 1921 ರಲ್ಲಿ ಮಹಾತ್ಮ ಗಾಂಧಿಯವರು ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದಾಗ, ಕಾಂಗ್ರೆಸ್‌ನ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ವಂದೇ ಮಾತರಂ ಎಂದು ಜಪಿಸುತ್ತಾ ಜೈಲಿಗೆ ಹೋದರು. ನೀವು ಏನು ಮಾಡುತ್ತಿದ್ದಿರಿ? ನೀವು ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದೀರಿ ಗೃಹ ಸಚಿವ ಅಮಿತ್​ ಷಾಗೆ ಖರ್ಗೆ ತಿರುಗೇಟು ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾಜಿ ಪ್ರಧಾನಿ ನೆಹರು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಅಲ್ಲದೆ, ಮೋದಿ ಜವಾಹರಲಾಲ್ ನೆಹರು ಅವರನ್ನು ಅವಮಾನಿಸಲು ಸಿಕ್ಕ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ದೇಶದ ಗೃಹ ಸಚಿವ ಕೂಡ ಅದನ್ನೇ ಅನುಸರಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಅಮಿತ್​ ಷಾ ಹೇಳಿದ್ದೇನು..?

ರಾಜ್ಯಸಭೆಯಲ್ಲಿ ಮಂಗಳವಾರ (ಡಿ.9) ನಡೆದ ವಂದೇ ಮಾತರಂನ 150 ವರ್ಷಗಳ ಸ್ಮರಣಾರ್ಥ ಚರ್ಚೆಯ ನೇತೃತ್ವ ವಹಿಸಿದ್ದ ಸಚಿವ ಷಾ, ಇಂತಹ ಮೌಲ್ಯಯುತ ಚರ್ಚೆಯ ಅಗತ್ಯವನ್ನು ಸದನದ ಕೆಲ ಸದಸ್ಯರು ಪ್ರಶ್ನಿಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಂಸದೆ ಪ್ರಿಯಾಂಕಾ ಹೇಳಿಕೆಗಳನ್ನು ಉಲ್ಲೇಖಿಸಿದರು. ವಂದೇ ಮಾತರಂನ ಪ್ರಸ್ತುತತೆ ಹಿಂದೆಯೂ ಇತ್ತು, ಈಗಲೂ ಇದೆ ಮತ್ತು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ, ಇದು ಸಾರ್ವಕಾಲಿಕ, ಅದರ ಮಹತ್ವವನ್ನು ನೋಡಲು ವಿಫಲರಾದವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಾಗಿ ಈ ಚರ್ಚೆ ಆಯೋಜಿಸಲಾಗಿದೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ ಷಾ, ನಮ್ಮ ರಾಷ್ಟ್ರೀಯ ಗೀತೆಯ ವೈಭವೀಕರಣವನ್ನು ಕೆಲವರು ಕಡಿಮೆ ಮಾಡಲು ಬಯಸುತ್ತಾರೆ. ಬಂಕಿಮ್ ಚಂದ್ರ ಚಟರ್ಜಿ ಬಂಗಾಳ ಮೂಲದವರಾಗಿದ್ದರೂ, ಆನಂದ್ ಮಠ ಕೂಡ ಬಂಗಾಳದಲ್ಲಿ ಹುಟ್ಟಿಕೊಂಡಿತು, ವಂದೇ ಮಾತರಂ ಎನ್ನುವುದು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿದ್ದಲ್ಲ ಎಂದರು. ಇಂದಿಗೂ, ದೇಶವನ್ನು ಒಳಗಿನಿಂದ ಕಾಪಾಡುವ ಪೊಲೀಸ್, ದೇಶದ ಗಡಿಯಲ್ಲಿರುವ ಸೈನಿಕರ ತುಟಿಗಳಲ್ಲಿ ವಂದೇ ಮಾತರಂ ಎಂಬ ಮಾತು ಮೊದಲು ಬರುತ್ತದೆ, ಇದು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಒಂದು ಘೋಷವಾಕ್ಯವಾಯಿತು ಮತ್ತು ಇಂದು ಸ್ಫೂರ್ತಿಯ ಮೂಲವಾಗಿ ಉಳಿದಿದೆ ಎಂದು ಹೇಳಿದರು.
ಈಗ ಸಂಸತ್ತಿನ ಚಳಿಗಾಲದ ಸಮಯದಲ್ಲಿ ಎರಡೂ ಸದನಗಳಲ್ಲಿ ಈ ಚರ್ಚೆಯನ್ನು ಆಯೋಜಿಸುವ ಮೂಲಕ, ಮುಂದಿನ ಪೀಳಿಗೆಗಳು ವಂದೇ ಮಾತರಂನ ಶಾಶ್ವತ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಗೀತೆಯ ಕುರಿತು ಚರ್ಚೆ ಅಗತ್ಯವಾಗಿದ್ದು, ಭವಿಷ್ಯದಲ್ಲಿ 2047 ಕ್ಕೆ ನಾವು ಕಲ್ಪಿಸಿಕೊಂಡಿರುವ ಉಜ್ವಲ ಭವಿಷ್ಯಕ್ಕಾಗಿ ಇದು ಯಾವಾಗಲೂ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net