ಯುವಜನತೆಯನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ ಸರ್ಕಾರ!... ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಉತ್ತರಿಸಲೇಬೇಕು ಎಂದು ರಾಹುಲ್ | Rahul Gandhi

Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on

ಜುಲೈ 20 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದು, ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸುವ ಬದಲು ಪ್ರಧಾನಿಯವರು ಕ್ಷಮಾದಾನಗಳನ್ನು ಹಂಚುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಶನಿವಾರ ನಡೆದ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ ಪ್ರತಿಧ್ವನಿ) ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಈ ಘಟನೆಗೆ ಕಾರಣರಾದವರು ಉತ್ತರಿಸಲೇಬೇಕು ಎಂದು ಆಗ್ರಹಿಸಿದರು. ನನಗೆ ಬೇರೆ ದಾರಿಯಿಲ್ಲ ಎಂದು ಪ್ರಯಾಗ್‌ರಾಜ್‌ನಲ್ಲಿ ವಿದ್ಯಾರ್ಥಿಯೊಬ್ಬ ತಮ್ಮ ಬಳಿ ಅಳಲು ತೋಡಿಕೊಂಡಿದ್ದನ್ನು ರಾಹುಲ್ ಸ್ಮರಿಸಿದರು. ವರ್ಷಗಟ್ಟಲೆ ತಯಾರಿ, ಜಮೀನು ಮಾರಾಟ, ಪೋಷಕರ ಸಾಲ, ಇಷ್ಟೆಲ್ಲಾ ಮಾಡಿದರೂ ಯಾವುದೇ ಉದ್ಯೋಗ ಸಿಗುತ್ತಿಲ್ಲ. ಇದು ಆ ವಿದ್ಯಾರ್ಥಿಯ ಸೋಲಲ್ಲ, ಆತನ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ನಿರಾಕರಿಸಿದ ನಮ್ಮ ವ್ಯವಸ್ಥೆಯ ಸೋಲು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ರಾಷ್ಟ್ರದ ಆಶಾಕಿರಣಗಳು, ತಾವು ಅವರ ಬೆಂಬಲಕ್ಕೆ ಸಂಪೂರ್ಣ ಶಕ್ತಿಯೊಂದಿಗೆ ನಿಲ್ಲುವುದಾಗಿ ಹೇಳಿದ ಕಾಂಗ್ರೆಸ್ ನಾಯಕ, ಘಟನೆ ನಡೆದು 13 ದಿನಗಳು ಕಳೆದರೂ ಗೃಹ ಸಚಿವ ಅಮಿತ್ ಷಾ ಅವರಿಂದ ಒಂದೇ ಒಂದು ಪ್ರತಿಕ್ರಿಯೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷಮೆ ಕೇಳುವ ಬದಲು ಮೋದಿ ಅವರು ಕ್ಷಮಾದಾನಗಳನ್ನು ನೀಡುತ್ತಿದ್ದಾರೆ. ರಾಜಧಾನಿಯ ಬೀದಿಗಳಲ್ಲಿ ಮಕ್ಕಳ ಮೇಲೆ ಲಾಠಿ ಮತ್ತು ಪೆಲೆಟ್ ದಾಳಿ ನಡೆದರೂ ಸರ್ಕಾರ ಮೌನವಾಗಿದೆ. ಹೊಣೆಗಾರಿಕೆ ಕೇಳುವುದನ್ನು ನಾವು ನಿಲ್ಲಿಸುವುದಿಲ್ಲ, ಇಂದಲ್ಲ ನಾಳೆ ಸರ್ಕಾರ ಈ ಅಪರಾಧಕ್ಕೆ ಉತ್ತರಿಸಲೇಬೇಕು ಎಂದು ಎಚ್ಚರಿಕೆ ನೀಡಿದರು.

ಚಕ್ರವ್ಯೂಹದಲ್ಲಿ ದೇಶದ ಯುವಕರು!...

ಭಾರತದ ಯುವಜನತೆಯನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ ರಾಹುಲ್, ಯುವಕರು ಶಿಕ್ಷಣದ ಪ್ರಮಾಣಪತ್ರಗಳಿಗಾಗಿ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ ಉದ್ಯೋಗದ ಯಾವುದೇ ಖಾತರಿ ಇಲ್ಲದಂತಾಗಿದೆ ಎಂದರು. ಕುಟುಂಬಗಳು ಶಿಕ್ಷಣಕ್ಕಾಗಿ ಹಣ ಸುರಿದು ಕೇವಲ ಪ್ರಮಾಣಪತ್ರ ಪಡೆಯುತ್ತಿವೆ. ಪರೀಕ್ಷಾ ಪತ್ರಿಕೆಗಳು ಸೋರಿಕೆಯಾಗುತ್ತಿವೆ, ಶ್ರೀಮಂತರು ಆ ಪತ್ರಿಕೆಗಳನ್ನು ಖರೀದಿಸುತ್ತಿದ್ದಾರೆ ಎಂದು ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.
ಡೇಟಾ ಮತ್ತು ಸಾಮರ್ಥ್ಯ ಯುವಕರದ್ದೇ ಆಗಿದ್ದರೂ ವ್ಯವಸ್ಥೆ ಅವರನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದೆ ಎಂದ ಅವರು, ಪ್ರತಿ 1000 ಯುವಕರಲ್ಲಿ ಕೇವಲ 12 ಮಂದಿಗೆ ಮಾತ್ರ ಕಾಯಂ ಉದ್ಯೋಗ ಸಿಗುತ್ತಿದೆ ಎಂಬ ಅಂಕಿಅಂಶ ನೀಡಿದರು. ಯುವಕರ ಡೇಟಾವನ್ನು ಜಿಯೋ, ಅದಾನಿ, ಫೇಸ್‌ಬುಕ್ ಮತ್ತು ಗೂಗಲ್‌ನಂತಹ ದೊಡ್ಡ ಸಂಸ್ಥೆಗಳಿಗೆ ಒಪ್ಪಿಸಿ ಅವರನ್ನು ಬಲೆಗೆ ಬೀಳಿಸಲಾಗಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುವುದು, ವಾಟ್ಸಾಪ್ ಮೆಸೇಜ್ ಮಾಡುವುದು 21ನೇ ಶತಮಾನದ ವ್ಯಸನವಾಗಿದೆ. ಕೊನೆಗೆ ಈ ಯುವಕರಿಗೆ ಬ್ಲಿಂಕಿಟ್, ಉಬರ್‌ನಂತಹ ಸಂಸ್ಥೆಗಳಲ್ಲಿ ದುಡಿಯಲು ಅಥವಾ ಕೂಲಿ ಕೆಲಸ ಮಾಡಲು ದೂಡಲಾಗುತ್ತಿದೆ ಎಂದು ವಿವರಿಸಿದರು. ಇದೇ ವೇಳೆ, ವಿದ್ಯಾರ್ಥಿಗಳು ದ್ವೇಷ ಅಥವಾ ಹಿಂಸಾಚಾರಕ್ಕೆ ಇಳಿಯಬಾರದು, ಬದಲಾಗಿ ಪ್ರೀತಿ ಮತ್ತು ವಿಶ್ವಾಸದಿಂದ ಈ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಬೇಕು ಎಂದು ರಾಹುಲ್ ಗಾಂಧಿ ಯುವಜನತೆಗೆ ಸಲಹೆ ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net