ರಾಮಭಕ್ತರಿಗೆ ಯೋಗಿ ಸರ್ಕಾರದ ಬಂಪರ್ ಗಿಫ್ಟ್: ಯುಪಿಯಲ್ಲಿ ಸತತ ಎರಡು ದಿನಗಳ ಕಾಲ ರಾಮನವಮಿ ರಜೆ ಘೋಷಿಸಿದ ಸಿಎಂ| Ram Navami Holiday

ಮಾರ್ಚ್​ 26 ಹಾಗೂ ಮಾರ್ಚ್​ 27 ರಂದು ರಜೆ ಘೋಷಿಸಿದ ಯೋಗಿ ಸರ್ಕಾರ
ಮಾರ್ಚ್​ 26 ಹಾಗೂ ಮಾರ್ಚ್​ 27 ರಂದು ರಜೆ ಘೋಷಿಸಿದ ಯೋಗಿ ಸರ್ಕಾರ
Published on

ಪ್ರಮುಖ ಮುಖ್ಯಾಂಶಗಳು

  • ದೇಶದೆಲ್ಲಡೆ ರಾಮನವಮಿ ಸಂಭ್ರಮ
  • ಮಾರ್ಚ್​ 26 ಹಾಗೂ ಮಾರ್ಚ್​ 27 ರಂದು ರಜೆ ಘೋಷಿಸಿದ ಯೋಗಿ ಸರ್ಕಾರ
  • ರಾಮ ಭಕ್ತರಿಗೆ ಅನುಕೂಲವಾಗಲೆಂದು ಈ ನಿರ್ಧಾರ ಎಂದ ಸಿಎಂ
ಉತ್ತರ ಪ್ರದೇಶ: ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಇದೇ ಮಾರ್ಚ್​ 26 ರಂದು ದೇಶದಾದ್ಯಂತ ರಾಮನವಮಿ (Ram Navami Holiday) ಆಚರಿಸಲಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಮಾರ್ಚ್​ 27 ರಂದು ಸಹ ಸಾರ್ವಜನಿಕ ರಜೆಯನ್ನು ಯೋಗಿ ಸರ್ಕಾರ ಘೋಷಿಸಿದೆ.
ಉತ್ತರ ಪ್ರದೇಶದಲ್ಲಿ ರಾಮನವಮಿಯನ್ನು ಬಹಳ ಅದ್ಧೂರಿಯಾಗಿ ಆಚರಿಸುವ ಹಿನ್ನಲೆ ಇಲ್ಲಿನ ದೇವಸ್ಥಾನಗಳೆಗೆ ಅಧಿಕ ಭಕ್ತರು ಆಗಮಿಸುವ ಕಾರಣ ಮಾರ್ಚ್​ 26 ಮತ್ತು ಮಾರ್ಚ್​ 27 ಎರಡು ದಿನ ರಜೆಯನ್ನು ನೀಡಲಾಗಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ. ನಮ್ಮ ಸರ್ಕಾರ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೆವೆ ಮತ್ತು ಅವರಿಗೆ ಧಾರ್ಮಿಕ ಆಚರಣೆಗಳನ್ನು ನಡೆಸಲು ಅನುಕೂಲ ಮಾಡಿಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಭಾರತದಲ್ಲಿ ರಾಮನವಮಿಯನ್ನು ಏಕೆ ಆಚರಿಸುತ್ತಾರೆ?
ರಾಮನವಮಿಯನ್ನು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಶ್ರೀಮನ್ನಾರಾಯಣನ ಏಳನೇ ಅವತಾರವಾದ ಶ್ರೀರಾಮಚಂದ್ರನ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಅಯೋಧ್ಯೆಯ ರಾಜ ದಶರಥ ಮತ್ತು ಕೌಸಲ್ಯ ದಂಪತಿಗಳಿಗೆ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು (ನವಮಿ) ಶ್ರೀರಾಮನು ಜನಿಸಿದನು. ಜಗತ್ತಿನಲ್ಲಿ ಅಧರ್ಮ ಮತ್ತು ರಾವಣನಂತಹ ಅಸುರರ ಅಟ್ಟಹಾಸವನ್ನು ಅಂತ್ಯಗೊಳಿಸಿ, ಧರ್ಮವನ್ನು ಮರುಸ್ಥಾಪಿಸಲು ವಿಷ್ಣುವು ರಾಮನಾಗಿ ಅವತರಿಸಿದನು ಎಂಬುದು ನಂಬಿಕೆ.
ರಾಮನವಮಿಯ ಆಚರಣೆಯು ಕೇವಲ ಜನ್ಮದಿನದ ಸಂಭ್ರಮಕ್ಕೆ ಸೀಮಿತವಾಗಿಲ್ಲ, ಇದು ಶ್ರೀರಾಮನ ಆದರ್ಶಯುತ ಜೀವನ, ಸತ್ಯನಿಷ್ಠೆ ಮತ್ತು ಮರ್ಯಾದಾ ಪುರುಷೋತ್ತಮ ಎಂಬ ಅವನ ಗುಣಗಳನ್ನು ಸ್ಮರಿಸುವ ದಿನವಾಗಿದೆ. ಜನರು ಈ ದಿನದಂದು ಉಪವಾಸ ಕೈಗೊಂಡು, ರಾಮಾಯಣ ಪಠಣ ಮಾಡುತ್ತಾರೆ ಮತ್ತು ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಭಜನೆಗಳನ್ನು ಏರ್ಪಡಿಸುತ್ತಾರೆ.
ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಈ ದಿನವನ್ನು ಶ್ರೀರಾಮ ಮತ್ತು ಸೀತೆಯ ವಿವಾಹದ ಸಂಕೇತವಾಗಿ ಶ್ರೀರಾಮ ಸೀತಾ ಕಲ್ಯಾಣೋತ್ಸವನ್ನಾಗಿ ಆಚರಿಸುವ ಸಂಪ್ರದಾಯವೂ ಇದೆ. ಹಬ್ಬದ ಅಂಗವಾಗಿ ಮನೆಮನೆಗಳಲ್ಲಿ ಪಾನಕ, ಮಜ್ಜಿಗೆ ಮತ್ತು ಕೋಸಂಬರಿಯನ್ನು ಪ್ರಸಾದವಾಗಿ ಹಂಚುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಒಟ್ಟಾರೆಯಾಗಿ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರಲು ಮತ್ತು ಸನ್ಮಾರ್ಗದಲ್ಲಿ ನಡೆಯುವ ಸ್ಫೂರ್ತಿ ಪಡೆಯಲು ಭಾರತೀಯರು ರಾಮನವಮಿಯನ್ನು ಆಚರಿಸುತ್ತಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net