ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಯೋಗ ಶಿಕ್ಷಕಿ: 18ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ!
Parul Aggarwal
Published on:
Copied
Follow Us
ನೋಯ್ಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್-100ರ ಲೋಟಸ್ ಸ್ಪೇಸಿಯಾ ಸೊಸೈಟಿಯಲ್ಲಿ 46 ವರ್ಷದ ಯೋಗ ಶಿಕ್ಷಕಿ ಪಾರುಲ್ ಅಗರ್ವಾಲ್(Parul Aggarwal) ಅವರು ಮಂಗಳವಾರ ಬೆಳಗ್ಗೆ 18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಸುಮಾರು 9.15ರ ವೇಳೆಗೆ ಈ ಘಟನೆ ನಡೆದಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಸೆಕ್ಟರ್-39 ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ತನಿಖೆ ಆರಂಭ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಫೊರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಯ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ಪಲ್ಲವ್ ಅಗರ್ವಾಲ್ ಅವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪಾರುಲ್ ಅವರು ಕೆಲ ಸಮಯದಿಂದ ಖಿನ್ನತೆ (ಡಿಪ್ರೆಶನ್) ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಅಂತಿಮ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿಲ್ಲ.
ಕುಟುಂಬದವರಿಂದ ಈ ಸಂಬಂಧ ಯಾವುದೇ ಲಿಖಿತ ದೂರು ಸಲ್ಲಿಕೆಯಾಗಿಲ್ಲ. ಪಾರುಲ್ ಅವರಿಗೆ ಒಬ್ಬ ಪುತ್ರಿ ಇದ್ದಾಳೆ ಎಂದು ವರದಿಯಾಗಿದೆ.
ಸಾವಿಗೆ ಕಾರಣವೇನು?
ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣ ಎನ್ನುವ ಶಂಕೆ ವ್ಯಕ್ತವಾಗಿದ್ದರೂ, ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ,(ಏಜೆನ್ಸೀಸ್).