ಹಾಲಿನ ರೂಪದಲ್ಲಿ ಬಂದ ಯಮಧರ್ಮ: ಆಂಧ್ರದಲ್ಲಿ ಕಲಬೆರಿಕೆ ಹಾಲು ಕುಡಿದ 13 ಜನ ದುರ್ಮರಣ; 11 ಮಂದಿ ಸ್ಥಿತಿ ಗಂಭೀರ! Adulterated Milk

ಕಲಬೆರಿಕೆ ಹಾಲನ್ನು ಕುಡಿದು 13 ಜನ ಸಾವು(ಸಾಂದರ್ಭಿಕ ಚಿತ್ರ)
ಕಲಬೆರಿಕೆ ಹಾಲನ್ನು ಕುಡಿದು 13 ಜನ ಸಾವು(ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಕಲಬೆರಿಕೆ ಹಾಲನ್ನು ಕುಡಿದು 13 ಜನ ಸಾವು
  • ಗಂಭೀರ ಸ್ಥಿತಿಯಲ್ಲಿರುವ 11 ಜನ
  • ಅಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿರುವ ಘಟನೆ
ಆಂಧ್ರಪ್ರದೇಶ: ಕಲಬೆರಿಕೆಯಾಗಿದ್ದ ಹಾಲ (Adulterated Milk) ನ್ನು ಕುಡಿದ ಪರಿಣಾಮ 13 ಜನ ಮೃತ ಪಟ್ಟಿದ್ದು 11 ಜನ ಸಾವು-ಬದುಕಿನೊಂದಿಗೆ ಹೋರಾಡುತ್ತಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಫೆಬ್ರವರಿ 22 ರಂದು ಹಲವಾರು ವೃದ್ಧ ನಿವಾಸಿಗಳು, ವಾಂತಿ, ಹೊಟ್ಟೆ ನೋವು ಮತ್ತು ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿದ್ದು, ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಲಬೆರಿಕೆ ಹಾಲಿನ ಪ್ರಕರಣದಲ್ಲಿ ಸಾವಿನ ಸಂಖ್ಯೆ 13 ಕ್ಕೆ ತಲುಪಿದ್ದು, ಏಳು ಜನರು ರಾಜಮಹೇಂದ್ರವರಂನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಯ ನಂತರ, ಹಾಲಿನ ಮಾದರಿಗಳನ್ನು ವಿವರವಾದ ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿದ್ದು, ಹಾಲು ಕಲುಷಿತಗೊಂಡಿರುವದು ದೃಢವಾಗಿದೆ ಎಂದು ಅವರು ಹೇಳಿದ್ದಾರೆ.
106 ಕುಟುಂಬಗಳ ಮನೆ ಸೇರಿದ್ದ ಹಾಲು!
ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆಯಲ್ಲಿ, ಪೀಡಿತರ ರಕ್ತದಲ್ಲಿ ಯೂರಿಯಾ ಮತ್ತು ಸೀರಮ್ ಕ್ರಿಯೇಟಿನೈನ್‌ ಹೆಚ್ಚಾಗಿರುವುದು ಕಂಡುಬಂದಿದ್ದು, ಇದು ಕಲಬೆರಿಕೆಯಾದ ಹಾಲನ್ನು ಸೇವಿಸಿದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ವರದಿಯಲ್ಲಿ, ಕೊರುಕೊಂಡ ಮಂಡಲ ಪ್ರದೇಶದ ಹಳ್ಳಿಯೊಂದರಲ್ಲಿ ವರಲಕ್ಷ್ಮಿ ಮಿಲ್ಕ್ ಡೈರಿಯಿಂದ ಸುಮಾರು 106 ಕುಟುಂಬಗಳಿಗೆ ಹಾಲು ಸರಬರಾಜು ಮಾಡಲಾಗಿದೆ ಎಂದು ವರದಿಯಾಗಿದೆ. ಪ್ರಕರಣಗಳು ಬೆಳಕಿಗೆ ಬಂದ ನಂತರ ಪೂರೈಕೆಯನ್ನು ತಕ್ಷಣವೇ ನಿಲ್ಲಿಸಲಾಗಿದೆ.
ಪೀಡಿತ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ವೈದ್ಯರು ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು 24/7 ನಿಯೋಜಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ನಿರ್ವಹಿಸಲು ಜಿಲ್ಲಾ ಕಣ್ಗಾವಲು ಅಧಿಕಾರಿ, ವೈದ್ಯರು, ಸೂಕ್ಷ್ಮ ಜೀವಶಾಸ್ತ್ರಜ್ಞರು, ಮಕ್ಕಳ ತಜ್ಞರು, ವಿಧಿವಿಜ್ಞಾನ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಮೂತ್ರಪಿಂಡಶಾಸ್ತ್ರಜ್ಞರನ್ನು ಒಳಗೊಂಡ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.

ಡೈರಿ ಮಾಲೀಕ ವಶಕ್ಕೆ ಪಡೆದ ಅಧಿಕಾರಿಗಳು

ಆಹಾರ ಸುರಕ್ಷತಾ ಇಲಾಖೆಯು ಪೂರೈಕೆಗೆ ಸಂಬಂಧಿಸಿದ ಡೈರಿ ಘಟಕವನ್ನು ಪರಿಶೀಲಿಸಿತು ಮತ್ತು ಕಣ್ಗಾವಲು ಮತ್ತು ಜಾರಿಗಾಗಿ ಹಾಲು, ಪನೀರ್, ತುಪ್ಪ, ಕುಡಿಯುವ ನೀರು ಮತ್ತು ವಿನೆಗರ್ ಮಾದರಿಗಳನ್ನು ಸಂಗ್ರಹಿಸಿಹಲಾಗಿದೆ.ಶಂಕಿತ ಹಾಲು ಮಾರಾಟಗಾರ, ನರಸಪುರಂ ಗ್ರಾಮದ ನಿವಾಸಿ ಅಡ್ಡಲ ಗಣೇಶರಾವ್ (33) ಅವರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಪೂರೈಕೆಗೆ ಸಂಬಂಧಿಸಿದ ಡೈರಿ ಘಟಕವನ್ನು ಸೀಲ್ ಮಾಡಲಾಗಿದೆ.
ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆಯಿರುವ ಸಿಹಿತಿಂಡಿಗಳು, ಖಾರ ಪದಾರ್ಥಗಳು ಮತ್ತು ಹಾಲು ಆಧಾರಿತ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಆಹಾರ ಸುರಕ್ಷತಾ ತಂಡಗಳು ಮಾರ್ಚ್ 2 ರಿಂದ ಮಾರ್ಚ್ 4 ರವರೆಗೆ ರಾಜ್ಯಾದ್ಯಂತ ತಪಾಸಣೆ ನಡೆಸಿವೆ.

140 ಅಂಗಡಿಗಳ ಮೇಲೆ ರೈಡ್​​

ಈ ಅಭಿಯಾನದ ಸಮಯದಲ್ಲಿ, ಅಧಿಕಾರಿಗಳು 140 ಆಹಾರ ಮಳಿಗೆಗಳನ್ನು ಪರಿಶೀಲಿಸಿ ಪ್ರಯೋಗಾಲಯ ವಿಶ್ಲೇಷಣೆಗಾಗಿ 221 ಆಹಾರ ಮಾದರಿಗಳನ್ನು ಸಂಗ್ರಹಿಸಿದರು. ತಪಾಸಣೆಯ ಸಮಯದಲ್ಲಿ ಕಂಡುಬಂದ 12 ಅಸುರಕ್ಷಿತ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, ಆ ಅಂಗಡಿಗೆ ನೋಟಿಸ್​ ನೀಡಿರುವುದಾಗಿ ತಿಳಿದು ಬಂದಿದೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದ ಸಂಸ್ಥೆಗಳ ವಿರುದ್ಧ ನಿಯಂತ್ರಕ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಆಹಾರ ಕಲಬೆರಕೆಯನ್ನು ತಡೆಗಟ್ಟಲು ಮತ್ತು ನಾಗರಿಕರು ಹಬ್ಬವನ್ನು ಸುರಕ್ಷಿತವಾಗಿ ಆಚರಿಸಬಹುದೆಂದು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net