ತಂತ್ರಜ್ಞಾನ ಮತ್ತು ಕ್ರಿಟಿಕಲ್ ಮಿನರಲ್ಸ್ ಅಸ್ತ್ರ ಮಾಡಿಕೊಂಡ್ರೆ!...ಜಿನ್‌ ಪಿಂಗ್‌ಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ರಾ ಪ್ರಧಾನಿ ಮೋದಿ..? | Critical Minerals

Critical Minerals | ತಂತ್ರಜ್ಞಾನ ಮತ್ತು ಕ್ರಿಟಿಕಲ್ ಮಿನರಲ್ಸ್ ಅಸ್ತ್ರ ಮಾಡಿಕೊಂಡರೆ ಪ್ರಗತಿಗೆ ಕಂಟಕ ಎಂದ ಪ್ರಧಾನಿ ಮೋದಿ
Critical Minerals | ತಂತ್ರಜ್ಞಾನ ಮತ್ತು ಕ್ರಿಟಿಕಲ್ ಮಿನರಲ್ಸ್ ಅಸ್ತ್ರ ಮಾಡಿಕೊಂಡರೆ ಪ್ರಗತಿಗೆ ಕಂಟಕ ಎಂದ ಪ್ರಧಾನಿ ಮೋದಿ
Published on
ನವದೆಹಲಿ: ಇಂದು (ಭಾನುವಾರ) ಭಾರತ ಮಂಟಪದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಮಾರೋಪ ಭಾಷಣದಲ್ಲಿ ಸಮಗ್ರತೆಗೆ ಹೆಚ್ಚಿನ ಒತ್ತು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತಂತ್ರಜ್ಞಾನ ಮತ್ತು ಅಪರೂಪದ ಖನಿಜಗಳನ್ನು (Critical Minerals) ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ನಮ್ಮ ಜಂಟಿ ಮತ್ತು ಸಾಮಾನ್ಯ ಪ್ರಗತಿಗೆ ದೊಡ್ಡ ಅಡೆತಡೆಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್ ಉಪಸ್ಥಿತಿಯಲ್ಲೇ ಪ್ರಧಾನಿ ಮೋದಿ ನೀಡಿದ ಈ ಖಡಕ್ ಹೇಳಿಕೆಗಳು, ಜಾಗತಿಕ ಕ್ರಿಟಿಕಲ್ ಮಿನರಲ್ಸ್ ಹಾಗೂ ಅಪರೂಪದ ಭೂಮಿಯ ಖನಿಜಗಳ ಪೂರೈಕೆ ಸರಪಳಿಯಲ್ಲಿ ಸಂಪೂರ್ಣ ಆಧಿಪತ್ಯ ಹೊಂದಿರುವ ಚೀನಾಗೆ ರವಾನಿಸಿದ ಸ್ಪಷ್ಟ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬ್ರಿಕ್ಸ್ ಶೃಂಗಸಭೆಯ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ (Resilience, Innovation, Cooperation and Sustainability) ಕುರಿತ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳ ಅಸ್ತ್ರೀಕರಣವು ನಮ್ಮ ಹಂಚಿಕೆಯ ಪ್ರಗತಿಗೆ ಅಡ್ಡಿಪಡಿಸಬಹುದು. ಆದ್ದರಿಂದ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸಮಗ್ರತೆಗೆ ಹೆಚ್ಚಿನ ಒತ್ತು ನೀಡಿದ್ದೇವೆ ಎಂದು ಹೇಳಿದರು.

ಇದು ಚೀನಾಗೆ ನೀಡಿದ ಸಂದೇಶನಾ..?

ಕಳೆದ ವರ್ಷ, ಅಮೆರಿಕದೊಂದಿಗಿನ ವ್ಯಾಪಾರ ಸಮರದ ನಡುವೆ, ಅತ್ಯಾಧುನಿಕ ತಂತ್ರಜ್ಞಾನ ತಯಾರಿಕೆಗೆ ಅತ್ಯಗತ್ಯವಾಗಿರುವ ಅಪರೂಪದ ಭೂಮಿಯ ಖನಿಜಗಳು ಮತ್ತು ಇತರ ವಸ್ತುಗಳ ರಫ್ತು ನಿಯಂತ್ರಣವನ್ನು ಚೀನಾ ಬಿಗಿಗೊಳಿಸಿತ್ತು. ಆದಾಗ್ಯೂ, ನಂತರದ ದಿನಗಳಲ್ಲಿ ಅದು ಆ ನಿರ್ಬಂಧಗಳಲ್ಲಿ ಕೆಲವನ್ನು ಸಡಿಲಗೊಳಿಸಿದೆ. ಸೌರ ಫಲಕಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳವರೆಗೆ ಪ್ರತಿಯೊಂದರ ತಯಾರಿಕೆಗೆ ಬಳಸಲಾಗುವ ವಿಶ್ವದ ಸುಮಾರು 90% ನಷ್ಟು ಅಪರೂಪದ ಖನಿಜಗಳನ್ನು ಚೀನಾವೇ ಸಂಸ್ಕರಿಸುತ್ತದೆ.
ತನ್ನ ಉತ್ಪಾದನಾ ಕ್ಷೇತ್ರ ಮತ್ತು ಹಸಿರು ಇಂಧನ ವಲಯವನ್ನು ವಿಸ್ತರಿಸಲು ಶ್ರಮಿಸುತ್ತಿರುವ ಭಾರತಕ್ಕೆ ಕ್ರಿಟಿಕಲ್ ಮಿನರಲ್ಸ್‌ಗಳ ಪೂರೈಕೆಯು ಅತ್ಯಂತ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬ್ರಿಕ್ಸ್ ಲಾಜಿಸ್ಟಿಕ್ಸ್ ಪೂರೈಕೆ ಸರಪಳಿ ಸಹಕಾರ ಚೌಕಟ್ಟು ನಮ್ಮ ಪೂರೈಕೆ ಸರಪಳಿಗಳನ್ನು ಮತ್ತಷ್ಟು ನಂಬಿಕಸ್ಥ ಮತ್ತು ಸ್ಥಿತಿಸ್ಥಾಪಕತ್ವದಿಂದ ಕೂಡಿರುವಂತೆ ಮಾಡಲು ಸಹಾಯ ಮಾಡುತ್ತದೆ ಎಂದರು.

ಪರಸ್ಪರ ಗೆಲುವಿನ ಸಹಕಾರ

ಭಾಷಣದ ಆರಂಭದಲ್ಲೇ, ಬ್ರಿಕ್ಸ್‌ನ ಅಧ್ಯಕ್ಷತೆ ವಹಿಸಿರುವ ಭಾರತದ ಪ್ರಯತ್ನಗಳು ಸ್ಥಿತಿಸ್ಥಾಪಕತ್ವ (Resilience), ನಾವೀನ್ಯತೆ (Innovation), ಸಹಕಾರ (Cooperation) ಮತ್ತು ಸುಸ್ಥಿರತೆ (Sustainability) ಎಂಬ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಗಮನ ಹರಿಸಿವೆ ಎಂದು ಪ್ರಧಾನಿ ಮೋದಿ ಒತ್ತಿಹೇಳಿದರು. ನಿಮ್ಮ ಸಹಕಾರ ಮತ್ತು ಬೆಂಬಲದೊಂದಿಗೆ, ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪ್ರತಿಯೊಬ್ಬರಿಗೂ ಗೆಲುವು ತಂದುಕೊಡುವ ಸಹಕಾರವನ್ನಾಗಿ ಪರಿವರ್ತಿಸಲು ನಮಗೆ ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು
ಪ್ರಧಾನಮಂತ್ರಿಯವರ ಭಾಷಣದ ಅತ್ಯಂತ ಮುಖ್ಯಾಂಶವೆಂದರೆ ಸಮಗ್ರತೆಗಾಗಿ ಅವರು ನೀಡಿದ ಕರೆ ಹಾಗೂ ಅಭಿವೃದ್ಧಿಶೀಲ ಅಥವಾ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಉಲ್ಲೇಖಿಸಲು ಬಳಸಲಾಗುವ ಗ್ಲೋಬಲ್ ಸೌತ್‌ಗೆ ಹೆಚ್ಚಿನ ಧ್ವನಿ ಸಿಗಬೇಕು ಎಂಬ ಅವರ ವಾದವಾಗಿತ್ತು. ನಾವು ಬ್ರಿಕ್ಸ್ ಮೂಲಕ ಒಳಗೊಳ್ಳುವ ಜಾಗತಿಕ ಪ್ರಗತಿಯನ್ನು ಉತ್ತೇಜಿಸಲು ಶ್ರಮಿಸಿದ್ದೇವೆ. ಬ್ರಿಕ್ಸ್ ಒಳಗೆ ಅಭಿವೃದ್ಧಿಪಡಿಸಲಾದ ಪರಿಹಾರಗಳು ಕೇವಲ ಬ್ರಿಕ್ಸ್ ದೇಶಗಳಿಗೆ ಮಾತ್ರ ಪ್ರಯೋಜನವನ್ನು ನೀಡಬಾರದು. ಅವು ಗ್ಲೋಬಲ್ ಸೌತ್ ರಾಷ್ಟ್ರಗಳ ಅಗತ್ಯಗಳಿಗೂ ಲಭ್ಯವಾಗುವಂತೆ ಮಾಡಬೇಕು ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಗ್ಲೋಬಲ್ ಸೌತ್ ದೇಶಗಳಿಗೆ ಬ್ರಿಕ್ಸ್ ಮೇಲಿದ್ದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ, ಏಕೆಂದರೆ ಅವರ ಧ್ವನಿಯನ್ನು ಆಲಿಸಲಾಗುತ್ತಿದೆ, ಅವರ ಅನುಭವಗಳನ್ನು ಗೌರವಿಸಲಾಗುತ್ತಿದೆ ಮತ್ತು ಪರಿಹಾರಗಳನ್ನು ಕೇವಲ ಅವರಿಗಾಗಿ ಮಾತ್ರವಲ್ಲದೆ, ಅವರೊಂದಿಗೆ ಸೇರಿ ರಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿರುವ ಮೋದಿ, ನಾವು ಬೇರೆ ಬೇರೆ ವಾಸ್ತವಗಳಲ್ಲಿ ನೆಲೆಸಿರಬಹುದು, ಆದರೆ ನಾವೆಲ್ಲರೂ ಸಹಕಾರದ ಮೂಲಕ ಒಟ್ಟಾಗಿ ಬೆಳೆಯುತ್ತೇವೆ ಮತ್ತು ಮಾನವೀಯತೆಗಾಗಿ ವಿಕಸನಗೊಳ್ಳುತ್ತೇವೆ ಎಂದರು.
ನಾವೀನ್ಯತೆಯ ಅಡಿಯಲ್ಲಿ, ಬ್ರಿಕ್ಸ್ ಇನ್‌ಕ್ಯುಬೇಟರ್ ನೆಟ್‌ವರ್ಕ್ ನಮ್ಮ ಸ್ಟಾರ್ಟ್‌ಅಪ್‌ಗಳು ಮತ್ತು ಇನ್‌ಕ್ಯುಬೇಟರ್‌ಗಳನ್ನು ಒಂದಕ್ಕೊಂದು ಸಂಪರ್ಕಿಸುತ್ತದೆ. ನವೀನ ಮತ್ತು ವಿಸ್ತರಿಸಬಹುದಾದ ಪರಿಹಾರಗಳನ್ನು ಉತ್ತೇಜಿಸಲು, ನಾವು ಬ್ರಿಕ್ಸ್ ಸ್ಟಾರ್ಟ್‌ಅಪ್ ನಾವೀನ್ಯತೆ ನಿಧಿಯನ್ನು ಪ್ರಸ್ತಾಪಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net