7 ವರ್ಷಗಳ ವಿರಾಮದ ನಂತರ ಚೀನಾ ಅಧ್ಯಕ್ಷರ ಭಾರತ ಭೇಟಿ!...ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ ಜಿನ್‌ಪಿಂಗ್! | BRICS Summit 2026

BRICS Summit 2026 | ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ ಜಿನ್‌ಪಿಂಗ್!
BRICS Summit 2026 | ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ ಜಿನ್‌ಪಿಂಗ್!
Published on
ನವದೆಹಲಿ: ಸೆಪ್ಟೆಂಬರ್ 12 ರಿಂದ ನವದೆಹಲಿಯಲ್ಲಿ ಆರಂಭವಾಗಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit 2026) ಭಾಗವಹಿಸಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಚೀನಾ ಗುರುವಾರ ಸ್ಪಷ್ಟಪಡಿಸಿದೆ. ಇದರೊಂದಿಗೆ ಅವರ ಭೇಟಿಯ ಕುರಿತು ಕಳೆದ ಕೆಲವು ದಿನಗಳಿಂದ ವ್ಯಕ್ತವಾಗುತ್ತಿದ್ದ ಕುತೂಹಲಕ್ಕೆ ತೆರೆಬಿದ್ದಂತಾಗಿದೆ. ಇದು ಕಳೆದ 7 ವರ್ಷಗಳಲ್ಲಿ ಚೀನಾ ಅಧ್ಯಕ್ಷರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ.
ಈ ವಿಷಯವಾಗಿ ಪ್ರಕಟಣೆ ಹೊರಡಿಸಿರುವ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ 12 ರಿಂದ 13 ರವರೆಗೆ ಹೊಸದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.

ಗಲ್ವಾನ್ ಸಂಘರ್ಷದ ನಂತರ ಮೊದಲ ಭೇಟಿ!...

ಇದು ಸುಮಾರು ಏಳು ವರ್ಷಗಳ ನಂತರ ಜಿನ್‌ಪಿಂಗ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಅವರು ಕೊನೆಯದಾಗಿ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆಗಾಗಿ ಚೆನ್ನೈ ಬಳಿಯ ಮಾಮಲ್ಲಪುರಂಗೆ ಆಗಮಿಸಿದ್ದರು. ಆದರೆ 2020 ರ ಗಲ್ವಾನ್ ಕಣಿವೆಯ ಗಡಿ ಸಂಘರ್ಷದ ನಂತರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕ್ಷೀಣಿಸಿದ್ದವು.
ಇದಕ್ಕೂ ಮೊದಲು ಅವರು 2016 ರಲ್ಲಿ ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು. ಇನ್ನು ಸೆಪ್ಟೆಂಬರ್ 2014 ರಲ್ಲಿ ಉಭಯ ನಾಯಕರು ತಮ್ಮ ಮೊದಲ ಅವಧಿಯ ಆಡಳಿತದಲ್ಲಿದ್ದಾಗ ಷಿ ಜಿನ್‌ಪಿಂಗ್ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿ ಮೋದಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು.

ಭಾರತದಲ್ಲಿ ಬ್ರಿಕ್ಸ್ ಶೃಂಗಸಭೆ!...

ಶನಿವಾರದಿಂದ (ಸೆಪ್ಟೆಂಬರ್ 12) ಭಾರತದ ಆತಿಥ್ಯದಲ್ಲಿ ನಡೆಯಲಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯು, ಜಾಗತಿಕವಾಗಿ ಭೌಗೋಳಿಕ-ರಾಜಕೀಯ ಪರಿಸ್ಥಿತಿ ಸಂಕೀರ್ಣಗೊಳ್ಳುತ್ತಿರುವ ಈ ಸಮಯದಲ್ಲಿ ಆಹಾರ, ಇಂಧನ, ಆರೋಗ್ಯ ರಕ್ಷಣೆ, ವಿಪತ್ತು ನಿರ್ವಹಣೆ ಮತ್ತು ಪ್ರಮುಖ ಪೂರೈಕೆ ಸರಪಳಿಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಂಟಿ ಸಾಮರ್ಥ್ಯವನ್ನು ಬಲಪಡಿಸುವತ್ತ ಗಮನಹರಿಸಲಿದೆ.
ರಷ್ಯಾ-ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾ ಬಿಕ್ಕಟ್ಟು, ಹೊರ್ಮುಜ್ ಜಲಸಂಧಿಯ ದಿಗ್ಬಂಧನ ಹಾಗೂ ಟ್ರಂಪ್ ಆಡಳಿತದ ವ್ಯಾಪಾರ ಮತ್ತು ಸುಂಕದ ನೀತಿಗಳು ಸೇರಿದಂತೆ ಜಾಗತಿಕ ಆರ್ಥಿಕತೆಗೆ ಎದುರಾಗಿರುವ ಸಾಲು ಸಾಲು ಸವಾಲುಗಳ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ಷಿ ಜಿನ್‌ಪಿಂಗ್ ಅವರ ಹೊರತಾಗಿ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶೃಂಗಸಭೆಗೆ ಇನ್ನು ಮೂರು ದಿನಗಳು ಬಾಕಿ ಇರುವಾಗ, ಜಂಟಿ ಹೇಳಿಕೆಯ ಕುರಿತು ಸದಸ್ಯ ರಾಷ್ಟ್ರಗಳು ಸರ್ವಸಮ್ಮತ ಅಭಿಪ್ರಾಯಕ್ಕೆ ಬಂದಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಭಿನ್ನಾಭಿಪ್ರಾಯಗಳು ಈ ಪ್ರಯತ್ನಗಳನ್ನು ಸಂಕೀರ್ಣಗೊಳಿಸಬಹುದು, ವಿಶೇಷವಾಗಿ ಬ್ರಿಕ್ಸ್ ಸರ್ವಸಮ್ಮತ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.

ಬ್ರಿಕ್ಸ್ ಒಕ್ಕೂಟ!...

ಮೂಲತಃ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್, 2024 ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾವನ್ನು ಸೇರ್ಪಡೆಗೊಳಿಸುವ ಮೂಲಕ ವಿಸ್ತರಿಸಲ್ಪಟ್ಟಿತು. ಇಂಡೋನೇಷ್ಯಾ 2025 ರಲ್ಲಿ ಈ ಒಕ್ಕೂಟವನ್ನು ಸೇರಿಕೊಂಡಿತು. ಕಳೆದ ವರ್ಷ ಬೆಲಾರಸ್, ಬೊಲಿವಿಯಾ, ಕಜಕಸ್ತಾನ್, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥೈಲ್ಯಾಂಡ್, ಉಗಾಂಡಾ, ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ ದೇಶಗಳನ್ನು ಪಾಲುದಾರ ದೇಶಗಳಾಗಿ ಸೇರಿಸಿಕೊಳ್ಳಲಾಗಿದೆ.
ಬ್ರಿಕ್ಸ್ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳ ಪ್ರಭಾವಶಾಲಿ ಒಕ್ಕೂಟವಾಗಿ ಹೊರಹೊಮ್ಮಿದ್ದು, ಇದರ 11 ಸದಸ್ಯ ರಾಷ್ಟ್ರಗಳು ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡಾ 49.5 ರಷ್ಟು, ಜಾಗತಿಕ ಜಿಡಿಪಿಯ ಶೇಕಡಾ 40 ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇಕಡಾ 26 ರಷ್ಟು ಪಾಲು ಹೊಂದಿವೆ. ಭಾರತದ ಅಧ್ಯಕ್ಷತೆಯಲ್ಲಿ, ಈ ಒಕ್ಕೂಟದ ಕಾರ್ಯಸೂಚಿಯು ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕೃತವಾಗಿದೆ: ಚೇತರಿಕೆ (Resilience), ನಾವೀನ್ಯತೆ (Innovation), ಸಹಕಾರ (Cooperation) ಮತ್ತು ಸುಸ್ಥಿರತೆ (Sustainability).(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net