ಲಿಂಬೊ ಸ್ಕೇಟಿಂಗ್​ನಲ್ಲಿ ಶ್ರಿಷ್ಟಿ ಶರ್ಮಾ ವಿಶ್ವ ದಾಖಲೆ: 6.86 ಸೆಕೆಂಡುಗಳಲ್ಲಿ 50 ಮೀಟರ್ ಕ್ರಮಿಸಿ "ಗಿನ್ನೆಸ್" ಪುಟ ಸೇರಿದ ವೈದ್ಯಕೀಯ ವಿದ್ಯಾರ್ಥಿನಿ! Shrishti Sharma

Medical student Shrishti Dharmendra Sharma has set a new Guinness World Record by completing a 50-meter limbo skating run in just 6.86 seconds.
ವೈದ್ಯಕೀಯ ವಿದ್ಯಾರ್ಥಿನಿ ಶ್ರಿಷ್ಟಿ ಧರ್ಮೇಂದ್ರ ಶರ್ಮಾ ಕೇವಲ 6.86 ಸೆಕೆಂಡುಗಳಲ್ಲಿ 50 ಮೀಟರ್ ಲಿಂಬೊ ಸ್ಕೇಟಿಂಗ್ ಪೂರ್ಣಗೊಳಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Published on: 

ಮುಂಬೈ: ಕಠಿಣ ವೈದ್ಯಕೀಯ ಶಿಕ್ಷಣದ ಒತ್ತಡದ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡುವ ಮೂಲಕ ಭಾರತೀಯ ವಿದ್ಯಾರ್ಥಿನಿಯೊಬ್ಬರು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಮಹಾರಾಷ್ಟ್ರದ ಉಮ್ರೆಡ್ ಮೂಲದ ಶ್ರಿಷ್ಟಿ ಧರ್ಮೇಂದ್ರ ಶರ್ಮಾ ಎಂಬಾಕೆ ಕೇವಲ 6.86 ಸೆಕೆಂಡುಗಳಲ್ಲಿ 50 ಮೀಟರ್ ದೂರದ ಲಿಂಬೊ ಸ್ಕೇಟಿಂಗ್ (Limbo Skating) ಪೂರ್ಣಗೊಳಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅಕ್ಟೋಬರ್ 8, 2026 ರಂದು ಮಹಾರಾಷ್ಟ್ರದ ಉಮ್ರೆಡ್-ಸೇವ್ ರಸ್ತೆಯಲ್ಲಿ ಈ ರೋಮಾಂಚಕಾರಿ ಸಾಹಸ ಪ್ರದರ್ಶನ ನಡೆದಿತ್ತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನವೆಂಬರ್ 17 ರಂದು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶ್ರಿಷ್ಟಿ ಅವರ ಈ ಸಾಧನೆಯ ವಿಡಿಯೋವನ್ನು ಹಂಚಿಕೊಂಡಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತನ್ನದೇ ದಾಖಲೆಗಳನ್ನು ಮುರಿದ ಸಾಹಸಿ!

ಲಿಂಬೊ ಸ್ಕೇಟಿಂಗ್ ಅತ್ಯಂತ ಕಠಿಣ ಮತ್ತು ಅಪಾಯಕಾರಿ ಕ್ರೀಡೆಗಳಲ್ಲಿ ಒಂದಾಗಿದೆ. ಕ್ರಮೇಣ ಕೆಳಗಿಳಿಯುವ ಸಮತಲ ಕಂಬಗಳ ಸರಣಿಯ ಕೆಳಗೆ ದೇಹವನ್ನು ನೆಲಕ್ಕೆ ತಾಗದಂತೆ ಹಾಗೂ ಕಂಬಗಳಿಗೆ ಸ್ಪರ್ಶಿಸದಂತೆ ಅತಿ ವೇಗದಲ್ಲಿ ಸ್ಕೇಟಿಂಗ್ ಮಾಡುವುದು ಇದರ ವಿಶೇಷತೆಯಾಗಿದೆ. ಶ್ರಿಷ್ಟಿ ಅವರು ಅತ್ಯಂತ ಚಾಕಚಕ್ಯತೆಯಿಂದ ಸಮತೋಲನ ಮತ್ತು ವೇಗವನ್ನು ಕಾಯ್ದುಕೊಂಡು ಈ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶ್ರಿಷ್ಟಿ 2023 ರಲ್ಲಿ 6.94 ಸೆಕೆಂಡುಗಳಲ್ಲಿ ಈ ಸಾಧನೆ ಮಾಡಿದ್ದರು. ಬಳಿಕ 2025ರಲ್ಲಿ 7.46 ಸೆಕೆಂಡುಗಳ ಸಮಯ ದಾಖಲಿಸಿದ್ದರು. ಇದೀಗ 6.86 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ತಮ್ಮದೇ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದ್ದಾರೆ.

ನೀಟ್ ಸಾಧಕಿ; ಭಾವಿ ವೈದ್ಯೆ!

ಶ್ರಿಷ್ಟಿ ಅವರ ಸಾಧನೆ ಕೇವಲ ರೋಲರ್ ಸ್ಕೇಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಓದಿನಲ್ಲೂ ಅಷ್ಟೇ ಮುಂದಿರುವ ಅವರು, ನೀಟ್​ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ಅವರು ನಾಗ್ಪುರದ ಪ್ರತಿಷ್ಠಿತ ಇಂದಿರಾ ಗಾಂಧಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ (MBBS) ವ್ಯಾಸಂಗ ಮಾಡುತ್ತಿದ್ದಾರೆ. ವೈದ್ಯಕೀಯ ಅಧ್ಯಯನದ ಕಠಿಣ ವೇಳಾಪಟ್ಟಿಯ ನಡುವೆಯೂ ಸ್ಕೇಟಿಂಗ್ ಅಭ್ಯಾಸಕ್ಕೆ ಸಮಯ ಮೀಸಲಿಟ್ಟು, ಶಿಸ್ತು ಮತ್ತು ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Also Read
ಡೊನಾಲ್ಡ್ ಟ್ರಂಪ್ ಹತ್ಯೆ ಸಂಚು: ಇರಾನ್ ಪರ ಕೆಲಸ ಮಾಡಿದ್ದ ಪಾಕಿಸ್ತಾನಿ ಏಜೆಂಟ್‌ಗೆ 27.5 ವರ್ಷಗಳ ಜೈಲು ಶಿಕ್ಷೆ ಪ್ರಕಟ! Asif Merchant
Medical student Shrishti Dharmendra Sharma has set a new Guinness World Record by completing a 50-meter limbo skating run in just 6.86 seconds.

‘ಬೇಟಿ ಬಚಾವೊ, ಬೇಟಿ ಪಡಾವೊ’ ರಾಯಭಾರಿ

ತಮ್ಮ ಈ ಜಾಗತಿಕ ಯಶಸ್ಸನ್ನು ಶ್ರಿಷ್ಟಿ ಅವರು ಸಾಮಾಜಿಕ ಜಾಗೃತಿಗೆ ಬಳಸಿಕೊಳ್ಳುತ್ತಿದ್ದಾರೆ. ‘ಬೇಟಿ ಬಚಾವೊ, ಬೇಟಿ ಪಡಾವೊ’ ಅಭಿಯಾನ ಹಾಗೂ ‘ಸೇವ್ ಎ ಗರ್ಲ್ ಚೈಲ್ಡ್’ ಉಪಕ್ರಮದ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ.

"ಹೆಣ್ಣು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಮಾನ ಅವಕಾಶ ಮತ್ತು ಪ್ರೋತ್ಸಾಹ ಸಿಗಬೇಕು. ಶಿಕ್ಷಣವಿರಲಿ ಅಥವಾ ಕ್ರೀಡೆಯಿರಲಿ, ಯುವತಿಯರು ತಮ್ಮ ಕನಸುಗಳನ್ನು ಬೆನ್ನಟ್ಟಲು ನನ್ನ ಈ ಪ್ರಯತ್ನ ಸ್ಫೂರ್ತಿಯಾಗಲಿ" ಎಂಬುದು ಶ್ರಿಷ್ಟಿ ಅವರ ಆಶಯವಾಗಿದೆ. ವರ್ಷಗಳ ಸತತ ಪರಿಶ್ರಮ, ಕುಟುಂಬದ ಬೆಂಬಲ ಮತ್ತು ದೃಢ ಸಂಕಲ್ಪದಿಂದ ಶ್ರಿಷ್ಟಿ ಧರ್ಮೇಂದ್ರ ಶರ್ಮಾ ಇಂದು ದೇಶದ ಯುವಜನತೆಗೆ ನಿಜವಾದ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದಾರೆ, (ಏಜೆನ್ಸೀಸ್​).