ಯೋಗ ದಿನದ ಅಂಗವಾಗಿ ಪಶ್ಚಿಮ ಬಂಗಾಳದ ಕೋಲ್ಕತದ ಐತಿಹಾಸಿಕ ರೆಡ್ ರೋಡ್ನಲ್ಲಿ ಮುಖ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡು ಸಾವಿರಾರು ಜನರೊಂದಿಗೆ ಯೋಗಾಭ್ಯಾಸ ಮಾಡಿದರು. ಬಿಳಿ ಟಿಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದ ಪ್ರಧಾನಿ, 40 ನಿಮಿಷ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯೋಗಾಸನ ಮಾಡುತ್ತಿದ್ದವರನ್ನು ಸೂಕ್ಷ್ಮವಾಗಿ ಗಮನಿಸುತ್ತ, ಯೋಗದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಿರುವುದು ಕಂಡುಬಂದಿತು. ಹಲವು ಸಂದರ್ಭದಲ್ಲಿ ಅವರು ಯೋಗಾಸನ ಮಾಡುತ್ತಿದ್ದವರಿಗೆ ಭಂಗಿಗಳನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡಿದರು. ರಾಜ್ಯಪಾಲ ಆರ್.ಎನ್. ರವಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಸಚಿವರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್ ಹಾಗೂ ದೀಪಕ್ ಬರ್ಮನ್ ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.