ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕೆಂಬ ಬಯಕೆಯಿಂದ ವಿದೇಶಗಳಲ್ಲಿ ಓದು ಮತ್ತು ಉದ್ಯೋಗದಲ್ಲಿ ತೊಡಗಿರುವ ಭಾರತೀಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಆದರೆ, ವಿದೇಶಗಳಲ್ಲಿ ಸೂಕ್ತ ಭದ್ರತೆ ಇಲ್ಲದೆ ಭಾರತೀಯ ವಿದ್ಯಾರ್ಥಿಗಳು ಮತ್ತು ಕಾರ್ವಿುಕರು ಸಾವಿಗೀಡಾಗುತ್ತಿರುವುದು ಕಳವಳದ ವಿಚಾರ. ಕಳೆದ ಐದು ವರ್ಷಗಳಲ್ಲೇ ವಿದೇಶಗಳಲ್ಲಿ ಕಾರ್ಯನಿರ್ವಹಿಸುವ 37,740 ಭಾರತೀಯರು ಮೃತಪಟ್ಟಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದೆ. ಅಂದರೆ ದಿನಕ್ಕೆ ಸರಾಸರಿ 20 ಭಾರತೀಯರು ವಿದೇಶಿ ನೆಲದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ಗಂಭೀರ ಮಾನವೀಯ ಮತ್ತು ರಾಜತಾಂತ್ರಿಕ ಸವಾಲಾಗಿದೆ. ಯುಎಇಯಲ್ಲಿ 12,380, ಸೌದಿ ಅರೇಬಿಯಾದಲ್ಲಿ 11,757, ಕುವೈತ್ನಲ್ಲಿ 3,890, ಒಮನ್ನಲ್ಲಿ 2,821, ಮಲೇಷ್ಯಾದಲ್ಲಿ 1,915, ಕತಾರ್ನಲ್ಲಿ 1,760, ಅಮೆರಿಕದಲ್ಲಿ 454, ಸಿಂಗಾಪುರದಲ್ಲಿ 451, ನೈಜೀರಿಯಾದಲ್ಲಿ 210 ಮತ್ತು ಬ್ರಿಟನ್ನಲ್ಲಿ 188 ಭಾರತೀಯ ಉದ್ಯೋಗಿಗಳು ಕಳೆದ ಐದು ವರ್ಷಗಳಲ್ಲಿ ಮರಣ ಹೊಂದಿದ್ದಾರೆ.