ಮಹಿಳಾ ಮತಗಳೇ ಟಾರ್ಗೆಟ್​

West Bengal Elections
West Bengal Elections
Published on

ವಿಕ್ರಮ್ ನಂದೋಡಿ ಕೋಲ್ಕತ್ತಾ

ಈ ಬಾರಿಯ ಪಶ್ಚಿಮ ಬಂಗಾಳದ ಚುನಾವಣೆ 2021ರ ಚುನಾವಣಾ ಕಣಕ್ಕಿಂತ ರಂಗೇರಿದ್ದು, ಬಿಜೆಪಿ ಹಾಗೂ ಟಿಎಂಸಿ ನಡುವಿನ ನೇರ ಪೈಪೋಟಿ ಇದೀಗ ಉಭಯ ಪಕ್ಷಗಳು ಮಹಿಳಾ ಮತಗಳನ್ನು ಸೆಳೆಯುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಲಕ್ಷ್ಮೀ ಭಂಡಾರ್ ಯೋಜನೆ ಮೂಲಕ ಮಹಿಳಾ ಮತಗಳನ್ನು ಹಾಗೂ ಎಸ್​ಐಆರ್ ವಿಚಾರದಿಂದಾಗಿ ಮುಸ್ಲಿಂ ಮತಗಳನ್ನು ಕ್ರೋಡೀಕರಿಸುವ ಲೆಕ್ಕಾಚಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರದಾದರೆ, ಲಕ್ಷ್ಮೀ ಭಂಡಾರದ ದುಪ್ಪಟ್ಟು ಹಣವನ್ನು ಮಹಿಳೆಯರಿಗೆ ನೀಡುವುದಾಗಿ ಬಿಜೆಪಿ ಘೋಷಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ತಂತ್ರಗಳಿಗೆ ಮಮತಾ ಬ್ಯಾನರ್ಜಿ ಪ್ರತಿ ತಂತ್ರ ರೂಪಿಸಿದ್ದು, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಸೆಡ್ಡು ಹೊಡೆಯುವ ಪ್ರಯತ್ನ ನಡೆಸಿದ್ದಾರೆ. ಎಸ್​ಐಆರ್​ನಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಮತಬ್ಯಾಂಕ್ ಮೇಲೆ ಪರಿಣಾಮ ಆಗಲಿದೆ ಎಂದು ಅರಿತಿದ್ದ ದೀದಿ, ಎಸ್​ಐಆರ್ ಸಂಬಂಧ ಸುಪ್ರೀಂಕೋರ್ಟ್​ನಲ್ಲಿ ಫೆಬ್ರವರಿ 4ರಂದು ನಡೆದ ವಿಚಾರಣೆಯಲ್ಲಿ ಖುದ್ದು ಭಾಗಿಯಾಗಿ ತಮ್ಮ ವಾದ ಮಂಡಿಸಿದ್ದರು. ರಾಜ್ಯದ ಪರವಾಗಿ ಹಿರಿಯ ವಕೀಲರು ಇದ್ದರೂ ಮಮತಾ ಬ್ಯಾನರ್ಜಿ ಖುದ್ದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಹಾಜರಾಗಿ ವಾದ ಮಂಡಿಸಿರುವುದು ಇದೀಗ ಚುನಾವಣಾ ವಿಷಯವಾಗಿ ಮಾರ್ಪಾಟಾಗಿದೆ.
ಅಲ್ಲದೆ, ಈ ವಿಚಾರದ ಸದುಪಯೋಗ ಪಡೆದುಕೊಂಡ ಟಿಎಂಸಿ, ಮಮತಾ ಹಾಗೂ ಸುಪ್ರೀಂ ಕೋರ್ಟ್ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಲ್ಲದೆ, ರಾಯಲ್ ಬೆಂಗಾಲ್ ಟೈಗರ್ ಎಂದು ರೀಲ್ಸ್​ಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಬಂಗಾಳದಾದ್ಯಂತ ಮುಸ್ಲಿಂ ಮತದಾರರಲ್ಲಿ ಎಸ್​ಐಆರ್ ವಿಚಾರವಾಗಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ಉಂಟಾಗಿದ್ದು, ದೀದಿ ಸಹ ಈ ಬಗ್ಗೆ ಧ್ವನಿ ಎತ್ತುತ್ತಿರುವುದು ಮುಸ್ಲಿಂ ಮತಗಳ ಕ್ರೋಡೀಕರಣಕ್ಕೆ ಸಹಾಯವಾಗಲಿದೆ. 2021ರ ಚುನಾವಣೆಯಲ್ಲಿ ತೀವ್ರ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ದೀದಿ, ಅದನ್ನು ಮರೆಮಾಚುವ ನಿಟ್ಟಿನಲ್ಲಿ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ವೀಲ್​ಚೇರ್​ನಲ್ಲಿ ಕುಳಿತು ರ‍್ಯಾಲಿ ನಡೆಸಿ ‘ನಾನು ಬಂಗಾಳದ ಮಗಳು’ ಎಂಬ ಭಾವನೆಯನ್ನು ಮತದಾರರಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಈ ಬಾರಿಯ ಚುನಾವಣೆ ಘೋಷಣೆಗೂ ಮುನ್ನ ಮಂಡಿಸಿದ ಬಜೆಟ್​ನಲ್ಲಿ ಮಹಿಳಾ ಮತಗಳ ಮೇಲೆ ಗಮನಹರಿಸಿಯೇ ಲಕ್ಷ್ಮೀ ಭಂಡಾರ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ 500 ರೂ. ಹೆಚ್ಚಳ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ತಿಂಗಳಿಗೆ 1000 ರೂ. ಹೆಚ್ಚಿಸುವುದಾಗಿ ಘೋಷಿಸಲಾಗಿದೆ. ಈಗಾಗಲೇ ಲಕ್ಷ್ಮೀ ಭಂಡಾರ್ ಯೋಜನೆಯಡಿ ರಾಜ್ಯದ 2 ಕೋಟಿ ಮಹಿಳೆಯರು ಲಾಭ ಪಡೆದುಕೊಂಡಿರುವುದು ಮಹಿಳಾ ಮತಗಳು ಟಿಎಂಸಿಗೆ ಭದ್ರವಾಗಿರಲು ಕಾರಣವಾಗಿದೆ. 21ರಿಂದ 40 ವರ್ಷದೊಳಗಿನ ನಿರುದ್ಯೋಗಿ ಯುವಕರಿಗೆ (10ನೇ ತರಗತಿ ತೇರ್ಗಡೆಯಾದವರು) 5 ವರ್ಷ ಅಥವಾ ಉದ್ಯೋಗ ಸಿಗುವವರೆಗೆ ತಿಂಗಳಿಗೆ 1500 ರೂ. ನೀಡುವ ಯೋಜನೆ ಘೋಷಿಸಲಾಗಿದೆ.

ಬಿಜೆಪಿ ರಣತಂತ್ರವೇನು?

ಕಳೆದ ಚುನಾವಣೆಯಲ್ಲಿ 294 ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವ ಧಾವಂತದಲ್ಲಿದೆ. ಟಿಎಂಸಿ ಪಕ್ಷದ ಪ್ರಮುಖ ಮತಬ್ಯಾಂಕ್ ಆಗಿರುವ ಮಹಿಳೆಯರ ಮತ ಗಳಿಕೆಗಾಗಿ ಈ ಬಾರಿ ಬಿಜೆಪಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಮಹಿಳೆಯರಿಗೆ ಮಾಸಿಕ 3000 ರೂ. ಹಾಗೂ ಬಸ್​ಗಳಲ್ಲಿ ಉಚಿತ ಪ್ರಯಾಣ, ಸರ್ಕಾರಿ ನೌಕರಿಯಲ್ಲಿ ಶೇ. 33ರಷ್ಟು ಮೀಸಲಾತಿ ಹಾಗೂ ಮಹಿಳಾ ಸಬಲೀಕರಣ ಯೋಜನೆಯನ್ನು ಘೋಷಿಸಿದೆ. ಕಳೆದ ಬಾರಿ ಉತ್ತರ ಬಂಗಾಳದಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ದಕ್ಷಿಣದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಯುವ ಜನತೆಯನ್ನು ಆಕರ್ಷಿಸುವುದಕ್ಕೆ ಹೆಚ್ಚು ಒತ್ತು ನೀಡಿದೆ. ಯುವ ಜನತೆಗಾಗಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿರುವುದು ಒಂದೆಡೆಯಾದರೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೂ ಮಾಸಿಕವಾಗಿ 3000 ರೂ. ನೀಡುವ ಯೋಜನೆಯನ್ನು ಘೋಷಿಸಿದೆ. ಮಹಿಳೆಯರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಟಿಎಂಸಿ ನೀಡುವ ಹಣಕ್ಕಿಂತ ಬಿಜೆಪಿ ಘೊಷಿಸಿರುವ ಹಣ ದುಪ್ಪಟ್ಟು ಎಂಬುದು ಗಮನಾರ್ಹ.

ಟಿಎಂಸಿಗೆ ಮತವಿಭಜನೆ ಆತಂಕ

ಮುಸ್ಲಿಂ ಪ್ರಾಬಲ್ಯ ಹೊಂದಿರುವ ಮಾಲ್ಡಾ ಮತ್ತು ಮುಶಿದಾಬಾದ್ ಜಿಲ್ಲೆಗಳು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಟಿಎಂಸಿ ನಡುವಿನ ಪೈಪೋಟಿಯ ಕೇಂದ್ರ ಬಿಂದುವಾಗಿವೆ. ಒಂದೆಡೆ ಬಾಂಗ್ಲಾದೇಶ ಹಾಗೂ ಮತ್ತೊಂದೆಡೆ ಬಿಹಾರದ ಗಡಿ ಭಾಗದಲ್ಲಿನ ಈ ಜಿಲ್ಲೆಗಳು ಒಂದು ಕಾಲದಲ್ಲಿ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದವು. 2021ರಲ್ಲಿ ಟಿಎಂಸಿ ಸರ್ಕಾರ ಈ ಎರಡೂ ಜಿಲ್ಲೆಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರ ಪರಿಣಾಮ ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿಯೂ ಜಯ ಗಳಿಸಲು ವಿಫಲವಾಗಿತ್ತು. ಕಳೆದುಕೊಂಡ ಕ್ಷೇತ್ರಗಳನ್ನು ಮರಳಿ ಪಡೆಯುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಈ ಬಾರಿ ಈ ಜಿಲ್ಲೆಗಳಲ್ಲಿ ಪಕ್ಷದ ಘಟಾನುಘಟಿ ನಾಯಕರುಗಳನ್ನೇ ಕಣಕ್ಕಿಳಿಸಿದ್ದು, ಬೆಹರಾಂಪುರ್ ಕ್ಷೇತ್ರದಿಂದ ಹಿರಿಯ ನಾಯಕ ಅಧಿರಂಜನ್ ಚೌಧರಿ, ಮಾಲತಿಪುರ್ ಕ್ಷೇತ್ರದಿಂದ ಮೋಸಮ್ ಬೆನಜೀರ್ ನೂರ್ ಕಣಕ್ಕಿಳಿದಿದ್ದಾರೆ.
ಸಿದ್ದಿಕಿ ಅಲಿ, ಹಿರು ಹಲಾರ್, ಡಾ. ಮಂದಾರ್ ಕಾಂತಿ ಮಂಡಲ್​ರಂಥ ಪ್ರಮುಖ ನಾಯಕರನ್ನು ಅಭ್ಯರ್ಥಿಗಳನ್ನಾಗಿ ಮಾಡಿದೆ. ಅಲ್ಪಸಂಖ್ಯಾತ ಪ್ರಾಬಲ್ಯದ ಮಾಲ್ಡಾ ಹಾಗೂ ಮುಶಿದಾಬಾದ್ ಜಿಲ್ಲೆಗಳು ಬಿಹಾರದ ಸೀಮಾಂಚಲ ಪ್ರದೇಶಕ್ಕೆ ಹತ್ತಿರವಾಗಿವೆ. 2025ರ ನವೆಂಬರ್​ನಲ್ಲಿ ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ ಓವೈಸಿ ನೇತೃತ್ವದ ಪಕ್ಷ ಸೀಮಾಂಚಲ ಪ್ರದೇಶದಲ್ಲಿ ಮುಸ್ಲಿಂ ಮತಗಳಿಕೆಯ ಮೂಲಕ 5 ಕ್ಷೇತ್ರಗಳನ್ನು ಗೆದ್ದಿತ್ತು. ಇದೀಗ ಬಂಗಾಳ ಚುನಾವಣೆಯಲ್ಲಿ ಎಐಎಂಐಎಂ (ಒವೈಸಿ ಪಕ್ಷ) ಹಾಗೂ ಹುಮಾಯೂನ್ ಕಬೀರ್ ನೇತೃತ್ವದ ಆಮ್ ಜನತಾ ಉನ್ನಾಯನ್ ಪಕ್ಷ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಈ ಪಕ್ಷಕ್ಕೂ ಸಹ ಲಭಿಸಲಿವೆ. ಕಾಂಗ್ರೆಸ್ ಹಾಗೂ ಓವೈಸಿ ನೇತೃತ್ವದ ಪಕ್ಷದಿಂದಾಗಿ ಮುಸ್ಲಿಂ ಮತಗಳು ವಿಭಜನೆಯಾಗುವುದು ಖಚಿತ ಎಂಬ ಆತಂಕ ಟಿಎಂಸಿ ಪಕ್ಷದ್ದಾಗಿದೆ.

35 ವರ್ಷಗಳ ಬಳಿಕ ರಾಜ್ಯಕ್ಕೆ ಅಧಿರಂಜನ್

ಕಾಂಗ್ರೆಸ್​ನ ಹಿರಿಯ ನಾಯಕ, ಐದು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಹಾಗೂ 2019ರಿಂದ 2024ರ ಅವಧಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಅಧಿರಂಜನ್ ಚೌಧರಿ ಈ ಬಾರಿ ಬೆಹರಾಂಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದು, 35 ವರ್ಷಗಳ ಬಳಿಕ ರಾಜ್ಯ ರಾಜಕಾರಣಕ್ಕೆ ಪುನಃ ಪ್ರವೇಶಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸದಾಕಾಲ ವಾಗ್ದಾಳಿ ನಡೆಸುತ್ತಿದ್ದ ಅಧಿರಂಜನ್ ಚೌಧರಿ, 2024ರ ಲೋಕಸಭಾ ಚುನಾವಣೆಯಲ್ಲಿ ಕ್ರಿಕೆಟಿಗ ಯೂಸೂಫ್ ಪಠಾಣ್ ಎದುರು ಸೋಲನುಭವಿಸಿದ್ದರು.

ಮತದಾರರು ಹೇಳುವುದೇನು..?

ಪಶ್ಚಿಮ ಬಂಗಾಳ ಚುನಾವಣೆ ಸಂಬಂಧ ಬಿಜೆಪಿ ಘೋಷಣೆ ಮಾಡಿರುವ ಗ್ಯಾರಂಟಿಗಳು ಇದೀಗ ಮಹಿಳೆಯರ ಮಧ್ಯೆ ಒಂದಿಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿವೆ. ಬಿಜೆಪಿಯ ಗ್ಯಾರಂಟಿ ಘೋಷಣೆ ಬಗ್ಗೆ ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡ ಭಿಧಾನಗರ ವಿಧಾನಸಭಾ ಕ್ಷೇತ್ರದ ರೋಶಿನಿ ಹಾಗೂ ಗೀತಿಕಾ, ‘ದೀದಿ ಸರ್ಕಾರ ನೀಡುತ್ತಿರುವ ಲಕ್ಷ್ಮೀ ಭಂಡಾರ ಯೋಜನೆಯೇ ನಾವು ಟಿಎಂಸಿಗೆ ಮತ ನೀಡುತ್ತಿದ್ದುದಕ್ಕೆ ಕಾರಣ. ಆದರೆ ಈ ಬಾರಿ ಬಿಜೆಪಿ ಈ ಯೋಜನೆಗಿಂತ ಎರಡು ಪಟ್ಟು ಹಣ ನೀಡುವುದಾಗಿ ಘೋಷಿಸಿರುವ ಕಾರಣ ಈ ಬಾರಿ ಮತ ಚಲಾವಣೆಗೂ ಮುನ್ನ ಯೋಚಿಸಬೇಕಿದೆ. ಅಲ್ಲದೆ, ಮಹಿಳಾ ಸುರಕ್ಷತೆಯ ಬಗ್ಗೆಯೂ ನಾವು ಚಿಂತನೆ ನಡೆಸಬೇಕಾಗಿದೆ. ಯಾವ ಪಕ್ಷಕ್ಕೆ ಮತ ನೀಡಿದರೆ ಒಳಿತು ಎಂದು ಒಮ್ಮೆ ಯೋಚಿಸುತ್ತೇವೆ’ ಎಂದಿದ್ದಾರೆ.

‘ಮುಸ್ಲಿಮರ ತೀವ್ರ ಆಕ್ರೋಶ

ಚುನಾವಣಾ ಆಯೋಗ ನಡೆಸಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಇದೀಗ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಯೋಗದ ಕ್ರಮದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿರುವುದು ಒಂದೆಡೆಯಾದರೆ, ಖುದ್ದು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಹಲವು ಮತದಾರರಿಗೆ ಬೇಸರ ಉಂಟುಮಾಡಿದೆ.
ಈ ಬಗ್ಗೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಮಾಲ್ಡಾ ಜಿಲ್ಲೆಯ ಇಂಗ್ಲಿಷ್ ಬಜಾರ್ ಕ್ಷೇತ್ರದ ಸಂಸೇರ್, ‘ನಮ್ಮ ಮನೆಯಲ್ಲಿ 8 ಜನ ಇದ್ದೇವೆ. ಎಲ್ಲರ ಬಳಿಯೂ ಸರಿಯಾದ ದಾಖಲೆಗಳಿವೆ. ಅವುಗಳನ್ನು ಒದಗಿಸಿದ್ದರೂ 4 ಜನರ ಹೆಸರು ಮತದಾರರ ಪಟ್ಟಿಯಿಂದ ಕಡಿತಗೊಂಡಿದೆ. ನಾವು ಟಿಎಂಸಿಗೆ ಮತ ನೀಡುತ್ತೇವೆ ಎಂಬ ಕಾರಣಕ್ಕಾಗಿ ನಮ್ಮ ಮತಗಳನ್ನು ತೆಗೆದುಹಾಕಿದ್ದಾರೆ’ ಎಂದರು. ಇನ್ನು ಕೋಲ್ಕತ್ತಾ ನಿವಾಸಿ ಶಹನಾಜ್ ಮಾತನಾಡಿ, ‘ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಇಲ್ಲಿನ ಪ್ರಜೆಯಾಗಿ ಮತದಾನ ನನ್ನ ಹಕ್ಕು, ಆದರೆ ಈ ಬಾರಿ ಮತದಾನಕ್ಕೆ ನನಗೆ ಅವಕಾಶವಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿ ಪ್ರಶ್ನೆ ಮಾಡಿದ್ದೇನೆ. ಆದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net