ಉಗ್ರದಮನಕ್ಕೆ ಸ್ತ್ರೀಶಕ್ತಿ! ಸೇನೆಯಿಂದ ಮಹಿಳೆಯರಿಗೆ ತರಬೇತಿ

Army trains women
Army trains women
Published on
ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಯಾವುದೋ ಸಣ್ಣ ಕುಗ್ರಾಮವನ್ನು ಅಥವಾ ಅರಣ್ಯಪ್ರದೇಶ ಬಳಿಯ ಸ್ಥಳವನ್ನು ಅಡಗುತಾಣವಾಗಿಸಿಕೊಳ್ಳುವುದು ವಾಡಿಕೆ. ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ದೊರೆತರೂ ಆ ಗ್ರಾಮಸ್ಥರು ಏನೂ ಮಾಡದಂಥ ಸ್ಥಿತಿ ಇತ್ತು. ಆದರೆ, ಬೇರುಮಟ್ಟದಲ್ಲಿ ಭಯೋತ್ಪಾದಕರ ಪತ್ತೆಗಾಗಿ ಸೇನೆ ನಾಗರಿಕರಿಗೆ ಸೂಕ್ತ ತರಬೇತಿ ನೀಡಿ, ವಿಲೆಜ್ ಡಿಫೆನ್ಸ್ ಗಾರ್ಡ್ಸ್ ಆಗಿ ನೇಮಿಸುತ್ತಿದೆ. ಮೊದಲಿನ ವರ್ಷಗಳಲ್ಲಿ ಈ ತರಬೇತಿ ಕೇವಲ ಪುರುಷರಿಗೆ ನೀಡಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಮಹಿಳೆಯರಿಗೂ ತರಬೇತಿ ನೀಡಲಾಗುತ್ತಿದ್ದು, ಹಳ್ಳಿಗಳಲ್ಲಿ ಸ್ತ್ರೀಶಕ್ತಿ ಪಹರೆ ನಡೆಸುತ್ತಿದೆ. ಈ ಪ್ರಕ್ರಿಯೆ ಇತರ ಮಹಿಳೆಯರಲ್ಲಿ ಹೇಗೆ ಸ್ಪೂರ್ತಿ ತುಂಬುತ್ತಿದೆ ಎಂಬುದರ ಅವಲೋಕನ ಇಲ್ಲಿದೆ.
ಜಮ್ಮುವಿನ ದೋಡಾದಲ್ಲಿ ಇರುವ ಅನಿತಾ ರಾಜ್ ವಿಲೇಜ್ ಡಿಫೆನ್ಸ್ ಗಾರ್ಡ್ಸ್ನ (ವಿಡಿಜಿ) ತರಬೇತಿ ಪಡೆಯುತ್ತಿದ್ದಾರೆ. ಅವರು ಮೊದಲಬಾರಿಗೆ ಆಟೋಮ್ಯಾಟಿಕ್ ರೈಫಲ್ ಚಲಾಯಿಸುವುದನ್ನು ಕಲಿತಿದ್ದಾರೆ. ತರಬೇತಿಯಿಂದ ಆತ್ಮವಿಶ್ವಾಸ ಗಳಿಸಿರುವ ಅನಿತಾ, ‘ಈಗ ಚಳಿಗಾಲದ ಅವಧಿ. ಭಯೋತ್ಪಾದಕರು ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯರಾಗುತ್ತಾರೆ. ಹವಾಮಾನ ವೈಪರೀತ್ಯವನ್ನು ದುರುಪಯೋಗ ಪಡಿಸಿಕೊಂಡು ಪಾಕಿಸ್ತಾನದಿಂದ ನುಸುಳಿ ಬರುತ್ತಾರೆ. ಇದಕ್ಕಾಗಿ ನಾವು 24 ಗಂಟೆಯೂ ಅಲರ್ಟ್ ಆಗಿ ಇರುತ್ತೇವೆ’ ಎನ್ನುತ್ತಾರೆ.
ಇದು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ನಾಗರಿಕ ಗುಂಪುಗಳು, ಅದರಲ್ಲೂ ಮಹಿಳೆಯರು ಸಮರ ಸಾರಿರುವ ರೀತಿಯ ಮುಖ್ಯಾಂಶ. ಜಮ್ಮುವಿನ ದೋಡಾ ಭಯೋತ್ಪಾದನೆಯ ಸಂತ್ರಸ್ತ ಪ್ರದೇಶ. ಮಾತ್ರವಲ್ಲ, ಇಲ್ಲಿ ಆಗಾಗ ಉಗ್ರರ ಚಲನವಲನಗಳು ಗೋಚರಿಸುತ್ತವೆ. ಹಾಗಾಗಿ, ಭಯೋತ್ಪಾದನೆ ವಿರುದ್ಧ ಸೇನೆ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಹೋರಾಡುವ ಗ್ರಾಮ ರಕ್ಷಣಾ ಪಡೆಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಡೋಡಾ ಜಿಲ್ಲೆಯಿಂದ ತರಬೇತಿ ಪಡೆದು ಈಗಾಗಲೇ ಹಲವು ಮಹಿಳೆಯರು ವಿಲೇಜ್ ಡಿಫೆನ್ಸ್ ಗಾರ್ಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸ್ಥಳೀಯರಲ್ಲಿ ಆತ್ಮವಿಶ್ವಾಸದ ಜತೆಗೆ ಭಯೋತ್ಪಾದನೆ ವಿರುದ್ಧ ಹೋರಾಡುವ ಕೆಚ್ಚನ್ನು ಹೆಚ್ಚಿಸಿದೆ.
ಮಾತ್ರವಲ್ಲ, ಉಗ್ರವಾದದ ವಿರುದ್ಧ ಹೋರಾಡುವುದು ಸೇನೆ, ಅರೆಸೇನಾ ಪಡೆ ಮತ್ತು ಪೊಲೀಸ್ ಇಲಾಖೆಗಳ ಕೆಲಸ ಮಾತ್ರವಲ್ಲ, ಇದರಲ್ಲಿ ತಮ್ಮ ಕರ್ತವ್ಯವೂ ಪ್ರಮುಖವಾಗಿದೆ ಎಂಬ ನಾಗರಿಕಪ್ರಜ್ಞೆ ಜಾಗೃತಗೊಂಡಿದೆ. ಮುಂಚೆ, ಅರಣ್ಯದಂಚಿನ ಪ್ರದೇಶಗಳಲ್ಲಿ, ಗಡಿ ಸಮೀಪದ ಕುಗ್ರಾಮಗಳಲ್ಲಿ ಉಗ್ರರ ಚಲನವಲನ ಕಂಡುಬಂದರೆ ಜನರು ಆತಂಕ ಪಡುತ್ತಿದ್ದರು. ಈಗ ಮನಸ್ಥಿತಿ ಬದಲಾಗಿದ್ದು, ಇಂಥ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಗ್ರಾಮ ರಕ್ಷಣಾ ಪಡೆಗಳಿಗೆ ಅಥವಾ ಇದರಲ್ಲಿ ಕಾರ್ಯನಿರ್ವಹಿಸುವ ತಂಡದ ಸದಸ್ಯರಿಗೆ ಮಾಹಿತಿ ನೀಡುತ್ತಾರೆ. ಭಯೋತ್ಪಾದಕರ ಷಡ್ಯಂತ್ರಗಳನ್ನು ತಡೆಯಲು ಇದು ಪರಿಣಾಮಕಾರಿ ಪ್ರಯೋಗವಾಗಿ ಸಾಬೀತಾಗಿದೆ.

ಏಕೆ ಅವಶ್ಯ?

ಜಮ್ಮುವಿನ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳವರೆಗೆ ತಲುಪಲು ಕಾಲ್ನಡಿಗೆ ದಾರಿಗಳು ಮಾತ್ರ ಇವೆ. ಎತ್ತರದ ಪ್ರದೇಶ, ವಿಭಿನ್ನ ಭೌಗೋಳಿಕ ವಿನ್ಯಾಸದಿಂದ ಇಲ್ಲಿ ವಾಹನಗಳು ತಲುಪಲು ಸಾಧ್ಯವಿಲ್ಲ. ಅಲ್ಲದೆ, ಒಂದು ಮನೆಯಿಂದ ಮತ್ತೊಂದು ಮನೆಯ ನಡುವಿನ ಅಂತರ ತುಂಬ ಇದೆ. ಹೀಗಿರುವಾಗ ಭಯೋತ್ಪಾದಕರು ದಾಳಿ ಮಾಡಿದರೂ, ಆ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಲು ಸಾಕಷ್ಟು ಸಮಯ ಬೇಕು. ಹೀಗಾಗಿ, ನಾಗರಿಕರನ್ನೇ ಸಜ್ಜುಗೊಳಿಸಿದರೆ ಭೀತಿಯೂ ನಿವಾರಣೆಯಾಗಿ ಸ್ವರಕ್ಷಣೆ ಸಾಧ್ಯವಾಗುತ್ತದೆ. ಅಲ್ಲದೆ, ತರಬೇತಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದನ್ನು ಜಮ್ಮು ಹಾಗೂ ಕಾಶ್ಮೀರದ ಮತ್ತಷ್ಟು ಗ್ರಾಮಗಳಿಗೆ ವಿಸ್ತರಿಸುವ ಯೋಜನೆ ಇದೆ.

ಸುರಕ್ಷೆ ಹೆಚ್ಚಿದೆ

ಕಳೆದ ಎರಡು ವರ್ಷಗಳಲ್ಲಿ ವಿಲೇಜ್ ಡಿಫೆನ್ಸ್ ಗಾರ್ಡ್ಸ್ ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ನಿರ್ಜನ ಬೆಟ್ಟದ ತುದಿಯಲ್ಲಿರುವ ಬೆರಳೆಣಿಕೆ ಮನೆಗಳಲ್ಲಿ ಮಹಿಳೆಯರು ಒಂಟಿಯಾಗಿ ಇರುತ್ತಾರೆ. ಗ್ರಾಮ ರಕ್ಷಣಾ ಪಡೆ ತಂಡದ ಸದಸ್ಯರಾಗಲು ತರಬೇತಿ ಪಡೆದ ಬಳಿಕ ಬಹಳಷ್ಟು ಬದಲಾವಣೆ ಗೋಚರವಾಗಿದೆ. ಮುಖ್ಯವಾಗಿ, ಮಹಿಳೆಯರಲ್ಲಿ ವಿಶ್ವಾಸ ಹೆಚ್ಚಿದ್ದು, ಕ್ಲಿಷ್ಟಕರ ಅಥವಾ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗಿದ್ದಾರೆ. ವಿಡಿಜಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಸೇನೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಇದರಿಂದ, ಭದ್ರತಾ ವ್ಯವಸ್ಥೆ ಹೆಚ್ಚಿದ್ದು, ನಾಗರಿಕರ ಸಹಕಾರ ಶ್ಲಾಘನೀಯ ಎನ್ನುತ್ತಾರೆ ವಿಡಿಜಿ ತರಬೇತಿ ನೀಡುವ ಹಿರಿಯ ಅಧಿಕಾರಿ.

ಭಯೋತ್ಪಾದಕರ ವಿರುದ್ಧ ನಾಗರಿಕ ಪಡೆಗಳು

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ದಾಳಿಯಿಂದ ಆತ್ಮರಕ್ಷಣೆಗಾಗಿ 1995ರಲ್ಲಿ ಶಸ್ತ್ರಾಸ್ತ್ರ ಸನ್ನದ್ಧ ನಾಗರಿಕ ಗುಂಪುಗಳನ್ನು ರಚಿಸಲಾಯಿತು. ಇದಕ್ಕೆ ವಿಲೇಜ್ ಡಿಫೆನ್ಸ್ ಕಮಿಟಿ (ವಿಡಿಸಿ) ಎಂದು ನಾಮಕಾರಣ ಮಾಡಲಾಯಿತು.
2020ರಲ್ಲಿ ವಿಲೇಜ್ ಡಿಫೆನ್ಸ್ ಕಮಿಟಿಗಳನ್ನು ರದ್ದುಗೊಳಿಸಿ, ವಿಲೇಜ್ ಡಿಫೆನ್ಸ್ ಗ್ರೂಪ್ (ವಿಡಿಜಿ)ಗಳನ್ನು ರಚಿಸಲಾಯಿತು ಮತ್ತು ಗ್ರಾಮ ರಕ್ಷಣಾ ಗುಂಪುಗಳ ಸದಸ್ಯರನ್ನು ವಿಲೇಜ್ ಡಿಫೆನ್ಸ್ ಗಾರ್ಡ್ಸ್ (ವಿಡಿಜಿ) ಎಂದು ಕರೆಯಲಾಯಿತು. ಮತ್ತು ಆತ್ಮರಕ್ಷಣೆ ಮಾತ್ರವಲ್ಲ, ಭಯೋತ್ಪಾದಕರ ಚಲನವಲನಗಳನ್ನು ಗುರುತಿಸುವುದು ಮತ್ತು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ಇವರಿಗೆ ಭಾರತೀಯ ಸೇನೆಯಿಂದಲೇ ತರಬೇತಿ ನೀಡಿ, ಅವರವರ ಗ್ರಾಮಗಳಲ್ಲಿ ನಿಯೋಜಿಸಲಾಗುತ್ತದೆ.
ಭಯೋತ್ಪಾದನೆ ನುಸುಳುವಿಕೆ ತೀವ್ರ ಪ್ರಮಾಣದಲ್ಲಿ ಇರುವ, ಉಗ್ರರ ಚಲನವಲನಗಳು ಇರುವ, ಉಗ್ರರು ಈ ಹಿಂದೆ ಅಡಗುತಾಣ ಮಾಡಿಕೊಂಡಿದ್ದ ಪ್ರದೇಶ ಸೇರಿದಂತೆ ಹಲವು ಸೂಕ್ಷ್ಮ ವಲಯಗಳಲ್ಲಿ ವಿಡಿಜಿಗಳನ್ನು ನಿಯೋಜಿಸಲಾಗುತ್ತದೆ.
ವಿಲೇಜ್ ಡಿಫೆನ್ಸ್ ಗ್ರೂಪ್ಗಳು ಕನಿಷ್ಠ 10 ಮತ್ತು ಗರಿಷ್ಠ 15 ಸದಸ್ಯರನ್ನು ಹೊಂದಿರುತ್ತವೆ. ಈ ನಾಗರಿಕ ಗುಂಪಿಗೆ ಸೇನೆ ಅಥವಾ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳಿಂದ ಶಸ್ತ್ರಾಸ್ತ್ರ ತರಬೇತಿ ನೀಡಿ, ಶಸ್ತ್ರಾಸ್ತ್ರ ಒದಗಿಸಲಾಗುತ್ತದೆ. ಗಸ್ತು ಕಾರ್ಯದ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.
2022ರ ಆಗಸ್ಟ್ನಲ್ಲಿ ಗೃಹ ಸಚಿವಾಲಯ ಆದೇಶ ನೀಡಿದ ನಂತರ ವಿಡಿಜಿಗಳಿಗೆ ಆಟೋಮ್ಯಾಟಿಕ್ ರೈಫಲ್ ನೀಡಲಾಗುತ್ತಿದೆ.
ವಿಲೇಜ್ ಡಿಫೆನ್ಸ್ ಗಾರ್ಡ್ಸ್ಗಾಗಿ ಪುರುಷರಿಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಆದರೆ, 2024ರಿಂದ ಮಹಿಳೆಯರಿಗೂ ತರಬೇತಿ ನೀಡಿ, ನಿಯೋಜಿಸಲಾಗುತ್ತಿದೆ. ಹಾಗಾಗಿ, ಈಗ ಉಗ್ರ ದಮನದಲ್ಲಿ ಮಹಿಳೆಯರೂ ಪ್ರಮುಖ ಪಾತ್ರ ವಹಿಸುವಂತಿದೆ.
15 ಜನರ ಗ್ರಾಮ ರಕ್ಷಣಾ ತಂಡಕ್ಕೆ ಸೇನೆಯ ನಿವೃತ್ತ ಅಧಿಕಾರಿ ಅಥವಾ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಆಯಾ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹಾಗೂ ಜಿಲ್ಲಾಧಿಕಾರಿ ಈ ಗುಂಪುಗಳ ಕಾರ್ಯನಿರ್ವಹಣೆಯ ಮೇಲೆ ನಿಗರಾಣಿ ವಹಿಸುತ್ತಾರೆ.
ವಿಲೇಜ್ ಡಿಫೆನ್ಸ್ ಗಾರ್ಡ್ಸ್ (ವಿಡಿಜಿ) ಗಳಿಗೆ ಮಾಸಿಕ 4 ಸಾವಿರ ರೂ.ಗಳಿಂದ 4500 ರೂ.ವರೆಗೆ ಗೌರವಧನ/ಸಂಭಾವನೆ ನೀಡಲಾಗುತ್ತದೆ.

ಬದಲಾವಣೆಯ ಮುಖ

ಮಹಿಳೆಯರು ಮನೆಕೆಲಸಕ್ಕೆ ಸೀಮಿತವಾಗದೆ ಸ್ವಯಂಸ್ಪೂರ್ತಿಯಿಂದ ಈ ತರಬೇತಿಗೆ ಸೇರ್ಪಡೆಯಾಗುತ್ತಿದ್ದಾರೆ ಮತ್ತು ತರಬೇತಿ ಪೂರ್ಣಗೊಳಿಸಿದ ಮೇಲೆ ಅಷ್ಟೇ ಪರಿಣಾಮಕಾರಿಯಾಗಿ ಗಸ್ತನ್ನು ನಿರ್ವಹಿಸುತ್ತಿದ್ದಾರೆ. ‘ನಾನು ಕಳೆದ ಒಂದು ವರ್ಷದಿಂದ ವಿಲೇಜ್ ಡಿಫೆನ್ಸ್ ಗ್ರೂಪ್ನಲ್ಲಿ ಇದ್ದೇನೆ. ನಾವು ಯಾವುದೇ ಕಾರಣಕ್ಕೂ ಭಯೋತ್ಪಾದಕರ ಬೆದರಿಕೆಗಳಿಗೆ ಬಗ್ಗುವುದಿಲ್ಲ, ಹೆದರುವುದಿಲ್ಲ. ದೇಶಕ್ಕಾಗಿ ಹೋರಾಡುವುದು ತುಂಬ ಖುಷಿ ಮತ್ತು ಹೆಮ್ಮೆ ಎನಿಸುತ್ತಿದೆ’ ಎನ್ನುತ್ತಾರೆ ಡೋಡಾದ ಸೋನಾಲಿ.
"

ನಮಗೆ ತರಬೇತಿ ದೊರೆತಿರುವುದರಿಂದ ಆತ್ಮವಿಶ್ವಾಸ ಹೆಚ್ಚಾಗಿದೆ. ಹೆಣ್ಣುಮಕ್ಕಳು ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಿರುವಾಗ ಶತ್ರುಗಳ ವಿರುದ್ಧ ಹೋರಾಡಲು ಏಕೆ ಹಿಂದೆ ಇರಬೇಕು? ಈ ಕೊರತೆ ವಿಡಿಜಿ ತರಬೇತಿಯಿಂದ ನಿವಾರಣೆಯಾಗಿದೆ. ದೇಶಕ್ಕಾಗಿ ಕೆಲಸ ಮಾಡುವ ಇಂಥ ಅವಕಾಶ ಸಿಕ್ಕಿರುವುದರಿಂದ ಸಂತೋಷವಾಗಿದೆ. ನಮ್ಮನ್ನು ನೋಡಿ ನಮ್ಮ ಗೆಳತಿಯರು ವಿಡಿಜಿ ತರಬೇತಿ ಪಡೆಯಲು ಮುಂದೆ ಬಂದಿದ್ದಾರೆ

| ಮಧುಬಾಲಾ ವಿಲೇಜ್ ಡಿಫೆನ್ಸ್ ಗಾರ್ಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net