ನವ ಭಾರತದ ನಾರಿ ಶಕ್ತಿ

Women Power
Women Power
Published on
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ನಿಂತಿದ್ದಾರೆ. ಅಡುಗೆಮನೆಯಿಂದ ಬಾಹ್ಯಾಕಾಶದವರೆಗೆ ಅವರ ಸಾಧನೆಯ ಪಥ ವಿಸ್ತರಿಸಿದೆ. ಇಸ್ರೋದ ಮಂಗಳಯಾನ ಮತ್ತು ಚಂದ್ರಯಾನದಂತಹ ಜಟಿಲ ಯೋಜನೆಗಳಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ನಿರ್ಣಾಯಕವಾಗಿದ್ದರೆ, ರಕ್ಷಣಾ ಕ್ಷೇತ್ರದಲ್ಲಿ ಫೈಟರ್ ಜೆಟ್ ಹಾರಿಸುವ ಮೂಲಕ ಶೌರ್ಯ ಮೆರೆಯುತ್ತಿದ್ದಾರೆ. ನಾಗರಿಕ ವಿಮಾನಯಾನದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್​ಗಳನ್ನು ಹೊಂದಿರುವ ಹೆಮ್ಮೆ ಭಾರತದ್ದಾಗಿದೆ. ಉದ್ಯಮರಂಗದಲ್ಲಿ ಡ್ರೋನ್ ದೀದಿ ಮತ್ತು ಲಖ್​ಪತಿ ದೀದಿಯರು ಹೊಸ ಅಲೆ ಸೃಷ್ಟಿಸುತ್ತಿದ್ದಾರೆ. ಶಿಕ್ಷಣ, ಡಿಜಿಟಲ್ ಕ್ರಾಂತಿ ಮುಂತಾದ ಕ್ರಮಗಳಿಂದಾಗಿ ಮಹಿಳೆಯರು ಇಂದು ದೇಶದ ಆರ್ಥಿಕತೆಯ ನಿಜವಾದ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಈಗ ಯಾವ ಪ್ರಮಾಣದಲ್ಲಿದೆ ಎಂಬುದರ ಮಾಹಿತಿ ಇಲ್ಲಿದೆ.

ವಿಜ್ಞಾನ-ತಂತ್ರಜ್ಞಾನ

ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಭಾರತದ ಒಟ್ಟು ವಿಜ್ಞಾನ-ತಂತ್ರಜ್ಞಾನ ಪದವೀಧರರಲ್ಲಿ ಶೇ. 43 ಮಹಿಳೆಯರಿದ್ದಾರೆ. ಇದು ಅಮೆರಿಕ (ಶೇ. 34) ಮತ್ತು ಕೆನಡಾ (ಶೇ. 31) ಮುಂತಾದ ಮುಂದುವರಿದ ದೇಶಗಳಿಗಿಂತಲೂ ಅಧಿಕ. ಪ್ರತಿವರ್ಷ ಸುಮಾರು 2.5 ಲಕ್ಷ ಮಹಿಳೆಯರು ಭಾರತದಲ್ಲಿ ವಿಜ್ಞಾನ-ತಂತ್ರಜ್ಞಾನ ವಿಷಯಗಳಲ್ಲಿ ಪದವಿ ಪಡೆಯುತ್ತಿದ್ದಾರೆ. ಇಸ್ರೋದ ಮಂಗಳಯಾನ ಮತ್ತು ಚಂದ್ರಯಾನ-3 ಮಿಷನ್​ಗಳಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ನಿರ್ಣಾಯಕವಾಗಿತ್ತು. 54 ಮಹಿಳಾ ವಿಜ್ಞಾನಿಗಳು ಚಂದ್ರಯಾನ-3 ಯೋಜನೆಯಲ್ಲಿ ನೇರವಾಗಿ ಕೆಲಸ ಮಾಡಿದ್ದಾರೆ. ದೇಶ ದಲ್ಲೀಗ ಸುಮಾರು ಶೇ. 16.6ರಷ್ಟು ಜನರು ಸಕ್ರಿಯ ಸಂಶೋಧಕಿಯರಾಗಿದ್ದಾರೆ.

ಸ್ಥಳೀಯ ಆಡಳಿತ

ದೇಶದ ಪಂಚಾಯತ್​ರಾಜ್ ಸಂಸ್ಥೆಗಳಲ್ಲಿ ಶೇ. 46ರಷ್ಟು ಚುನಾಯಿತ ಪ್ರತಿನಿಧಿಗಳು ಮಹಿಳೆಯರು. ಸುಮಾರು 20 ರಾಜ್ಯಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಕಡ್ಡಾಯಗೊಳಿಸಿವೆ. ದೇಶದಾದ್ಯಂತ 14.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ಇತ್ತೀಚಿನ ‘ನಾರಿ ಶಕ್ತಿ ವಂದನ್ ಅಧಿನಿಯಮ’ (128ನೇ ಸಂವಿಧಾನ ತಿದ್ದುಪಡಿ) ಮೂಲಕ ಲೋಕಸಭೆ ಮತ್ತು ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಲು ಹಾದಿ ಸುಗಮವಾಗಿದೆ.

ಆರ್ಥಿಕ ಒಳಗೊಳ್ಳುವಿಕೆ

ಯುಪಿಐ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಕೆಯಲ್ಲಿ ಮಹಿಳೆಯರ ಪಾತ್ರ ಕಳೆದ 2 ವರ್ಷಗಳಲ್ಲಿ ಶೇ. 24ರಷ್ಟು ವೃದ್ಧಿಸಿದೆ. ಜನ್​ಧನ್ ಯೋಜನೆಯಡಿ ತೆರೆಯಲಾದ ಒಟ್ಟು ಖಾತೆಗಳಲ್ಲಿ ಶೇ. 55.6ಕ್ಕಿಂತ ಹೆಚ್ಚು ಅಂದರೆ ಸುಮಾರು 28.7 ಕೋಟಿ ಖಾತೆಗಳು ಮಹಿಳೆಯರದ್ದಾಗಿವೆ. ಈ ಖಾತೆಗಳಲ್ಲಿರುವ ಒಟ್ಟು ಠೇವಣಿ ಸುಮಾರು 1 ಲಕ್ಷ ಕೋಟಿ ರೂ. ದಾಟಿದೆ. ಸರ್ಕಾರದ ವಿವಿಧ ಯೋಜನೆಗಳ ಹಣವು ನೇರವಾಗಿ ಮಹಿಳೆಯರ ಖಾತೆಗೆ (ಡಿಬಿಟಿ) ಜಮೆಯಾಗುತ್ತಿರುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದೆ. 2023-24ರಲ್ಲಿ ಸುಮಾರು 3.2 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತ ಮಹಿಳಾ ಫಲಾನುಭವಿಗಳಿಗೆ ಡಿಜಿಟಲ್ ರೂಪದಲ್ಲಿ ತಲುಪಿದೆ. ಇದು ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಗ್ರಾಮೀಣ ಉದ್ಯಮಶೀಲತೆ

ಮಹಿಳಾ ಸಬಲೀಕರಣ ನಗರಗಳಿಗೆ ಸೀಮಿತವಾಗದೆ ಗ್ರಾಮೀಣ ಭಾಗದಲ್ಲೂ ಕ್ರಾಂತಿ ಸೃಷ್ಟಿಸುತ್ತಿದೆ. ಮುದ್ರಾ ಯೋಜನೆಯಡಿ ವಿತರಿಸಲಾದ ಒಟ್ಟು ಸಾಲಗಳಲ್ಲಿ ಶೇ. 68ಕ್ಕಿಂತ ಹೆಚ್ಚು ಸಾಲಗಳನ್ನು ಮಹಿಳಾ ಉದ್ಯಮಿಗಳು ಪಡೆದಿದ್ದಾರೆ. ಇದರಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಲ್ಲಿ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಹೆಚ್ಚಾಗಿದೆ. ಲಖ್​ಪತಿ ದೀದಿ ಯೋಜನೆಯಡಿ ದೇಶಾದ್ಯಂತ 3 ಕೋಟಿ ಮಹಿಳೆಯರನ್ನು ವಾರ್ಷಿಕ ಕನಿಷ್ಠ 1 ಲಕ್ಷ ರೂ. ಆದಾಯ ಗಳಿಸುವಂತೆ ಮಾಡುವುದು ಕೇಂದ್ರದ ಗುರಿ. ಈಗಾಗಲೇ ಲಕ್ಷಾಂತರ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಈ ಗುರಿ ತಲುಪಿದ್ದಾರೆ. ಡ್ರೋನ್ ದೀದಿ ಯೋಜನೆಯಡಿ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್​ಗಳನ್ನು ನೀಡಲಾಗುತ್ತಿದೆ. ಇದು ಕೃಷಿ ಸೇವೆಗಳಲ್ಲಿ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶ ನೀಡಿದೆ. ದೇಶದ ಒಟ್ಟು ಯುನಿಕಾರ್ನ್​ಗಳ (1 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಗಳು) ಪೈಕಿ ಸುಮಾರು ಶೇ. 18ರಷ್ಟು ಯುನಿಕಾರ್ನ್​ಗಳನ್ನು ಸ್ಥಾಪಿಸಿದವರು ಮಹಿಳೆಯರು.

ಸ್ಕಿಲ್ ಇಂಡಿಯಾ

ಆರ್ಥಿಕತೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸ್ಕಿಲ್ ಇಂಡಿಯಾ ಅಭಿಯಾನ ಭದ್ರ ಬುನಾದಿ ಹಾಕಿದೆ. ಈ ಯೋಜನೆಯಡಿ ತರಬೇತಿ ಪಡೆದ ಒಟ್ಟು ಫಲಾನುಭವಿಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಸಾಂಪ್ರದಾಯಿಕ ಕೆಲಸಗಳಿಗಷ್ಟೇ ಅಲ್ಲದೆ, ಆಧುನಿಕ ತಾಂತ್ರಿಕ ಕೌಶಲಗಳಿಗೂ ಮಹಿಳೆಯರು ತೆರೆದುಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿ ಪಡೆದ 1.4 ಕೋಟಿ ಜನರಲ್ಲಿ, 56 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಕೇವಲ ಹೊಲಿಗೆ, ಬ್ಯೂಟಿ ಪಾರ್ಲರ್ ಅಲ್ಲ, ಐಟಿ, ಎಲೆಕ್ಟ್ರಾನಿಕ್ಸ್, ಲಾಜಿಸ್ಟಿಕ್ಸ್, ಸೌರಶಕ್ತಿ ಕ್ಷೇತ್ರಗಳಲ್ಲೂ ಮಹಿಳೆಯರ ದಾಖಲಾತಿ ಶೇ. 25ರಷ್ಟು ಹೆಚ್ಚಾಗಿದೆ. ತರಬೇತಿ ಪಡೆದ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಜನರಿಗೆ ವಿವಿಧ ಕೈಗಾರಿಕೆಗಳಲ್ಲಿ ಉದ್ಯೋಗ ದೊರೆತಿದೆ ಅಥವಾ ಅವರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ದೇಶಾದ್ಯಂತ ಮಹಿಳೆಯರಿಗಾಗಿಯೇ 19 ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.

ಮಾಹಿತಿ ತಂತ್ರಜ್ಞಾನ

ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರ ಮಹಿಳಾ ಸಬಲೀಕರಣದ ಅತಿದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಭಾರತೀಯ ಐಟಿ ವಲಯದ ಒಟ್ಟು ಉದ್ಯೋಗಿಗಳಲ್ಲಿ ಶೇ. 34ರಷ್ಟು ಮಹಿಳೆಯರಿದ್ದಾರೆ. ಇದು ಜಾಗತಿಕ ಸರಾಸರಿಗಿಂತಲೂ (ಶೇ. 25-28) ಅಧಿಕ. ನ್ಯಾಸ್ಕಾಮ್ ವರದಿ ಪ್ರಕಾರ, ದೇಶದ ಐಟಿ ಕ್ಷೇತ್ರದಲ್ಲಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ಐಟಿ ವಲಯಕ್ಕೆ ಸೇರ್ಪಡೆಯಾಗುತ್ತಿರುವ ಹೊಸ ಉದ್ಯೋಗಿಗಳಲ್ಲಿ ಮಹಿಳೆಯರ ಪ್ರಮಾಣ ಶೇ. 40ರಿಂದ ಶೇ. 45ರಷ್ಟಿದೆ. ಶೇ. 20ರಷ್ಟು ಮಹಿಳೆಯರು ಐಟಿ ಕಂಪನಿಗಳಲ್ಲಿ ಮಧ್ಯಮ ಮತ್ತು ಉನ್ನತ ಮಟ್ಟದ ಮ್ಯಾನೇಜ್​ವೆುಂಟ್ ಸ್ಥಾನಗಳಲ್ಲಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್​ನಂತಹ ತಂತ್ರಜ್ಞಾನಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಳೆದ 3 ವರ್ಷಗಳಲ್ಲಿ ಶೇ. 25ರಷ್ಟು ಹೆಚ್ಚಾಗಿದೆ.

ಅತ್ಯಧಿಕ ಮಹಿಳಾ ಪೈಲಟ್​ಗಳು

ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸ್ತ್ರೀಶಕ್ತಿಯ ಮೂಲಕ ಹೊಸ ದಾಖಲೆ ಬರೆದಿದೆ. ವಿಶ್ವದ ಬೇರೆಲ್ಲ ಮುಂದುವರಿದ ದೇಶಗಳಿಗಿಂತ ಭಾರತದಲ್ಲಿ ಅತಿ ಹೆಚ್ಚು ಮಹಿಳಾ ಪೈಲಟ್​ಗಳಿರುವುದು ಹೆಮ್ಮೆಯ ವಿಷಯ. ಪ್ರಸ್ತುತ ಭಾರತದಲ್ಲಿ ಸುಮಾರು ಶೇ. 15ರಷ್ಟು ಮಹಿಳಾ ಪೈಲಟ್​ಗಳಿದ್ದಾರೆ. ಇದು ಜಾಗತಿಕ ಸರಾಸರಿಯಾದ ಶೇ. 5ಕ್ಕಿಂತ ಮೂರು ಪಟ್ಟು ಅಧಿಕ. ದೇಶದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಇತ್ತೀಚಿನ ವರದಿ ಪ್ರಕಾರ, ದೇಶದಲ್ಲಿ ಸಕ್ರಿಯವಾಗಿರುವ ಸುಮಾರು 17,726 ಪೈಲಟ್​ಗಳಲ್ಲಿ 2,764ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ ಕೇವಲ ಶೇ. 6 ಮತ್ತು ಬ್ರಿಟನ್​ನಲ್ಲಿ ಶೇ. 4.7ರಷ್ಟಿದೆ. ಪ್ರತಿವರ್ಷ ವಿತರಿಸಲಾಗುವ ವಾಣಿಜ್ಯ ಪೈಲಟ್ ಪರವಾನಗಿಗಳ ಪೈಕಿ ಶೇ. 18-20ರಷ್ಟು ಪರವಾನಗಿಗಳನ್ನು ಮಹಿಳೆಯರು ಪಡೆಯುತ್ತಿದ್ದಾರೆ. 2021ರಲ್ಲಿ ಏರ್ ಇಂಡಿಯಾದ ನಾಲ್ವರು ಮಹಿಳಾ ಪೈಲಟ್​ಗಳ ತಂಡ ಸ್ಯಾನ್​ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಉತ್ತರ ಧ್ರುವದ ಮೂಲಕ ಜಗತ್ತಿನ ಸುದೀರ್ಘ ವಾಣಿಜ್ಯ ವಿಮಾನ ಹಾರಾಟ ನಡೆಸಿ ಇತಿಹಾಸ ನಿರ್ವಿುಸಿತ್ತು.

ಉನ್ನತ ಶಿಕ್ಷಣ

ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅಂಕಿಅಂಶಗಳಲ್ಲಿ ಮಾತ್ರವಲ್ಲದೆ, ಒಂದು ದೊಡ್ಡ ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್​ಎಚ್​ಇ) ವರದಿಯ ಪ್ರಕಾರ, ಉನ್ನತ ಶಿಕ್ಷಣಕ್ಕೆ ದಾಖಲಾಗುವ ಮಹಿಳೆಯರ ಸಂಖ್ಯೆ 2014-15ರಿಂದ ಶೇ. 32ರಷ್ಟು ಏರಿಕೆಯಾಗಿದೆ. ಅಂದರೆ, ಸುಮಾರು 2 ಕೋಟಿಗೂ ಹೆಚ್ಚು ಮಹಿಳೆಯರು ಇಂದು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ ಮಹಿಳೆಯರ ಸಾಧನೆ ಅದ್ವಿತೀಯ. ಪ್ರಸ್ತುತ ಎಂಬಿಬಿಎಸ್ ಮತ್ತು ಡೆಂಟಲ್ ಕೋರ್ಸ್​ಗಳಲ್ಲಿ ಶೇ. 52ರಷ್ಟು ಸೀಟುಗಳನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಪಿಎಚ್​ಡಿ ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರ ದಾಖಲಾತಿ ಶೇ. 45ರಷ್ಟು ಹೆಚ್ಚಾಗಿದೆ. ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲೂ ಮಹಿಳೆಯರ ಪ್ರಮಾಣ ಪುರುಷರಿಗೆ ಸಮನಾಗಿ ಅಥವಾ ಅವರಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ.

ಕಾರ್ಪೆರೇಟ್ ವಲಯ

ದೇಶದ ಕಾರ್ಪೆರೇಟ್ ವಲಯದಲ್ಲಿ ಮಹಿಳೆಯರು ಕೇವಲ ಉದ್ಯೋಗಿಗಳಾಗಿ ಇರದೆ, ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಭಾರತೀಯ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ 2017ರಲ್ಲಿ ಶೇ. 11ರಷ್ಟಿದ್ದಿದ್ದು, 2024ರ ವೇಳೆಗೆ ಶೇ. 18.3ಕ್ಕೆ ಏರಿಕೆಯಾಗಿದೆ. ದೇಶದ ಪ್ರಮುಖ 500 ಕಂಪನಿಗಳ ಪೈಕಿ ಶೇ. 95 ಕಂಪನಿಗಳು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕರನ್ನು ಹೊಂದಿವೆ. ಅಗ್ರ 500 ಕಂಪನಿಗಳಲ್ಲಿ ಮಹಿಳಾ ಸಿಇಒಗಳ ಪ್ರಮಾಣ ಶೇ. 7ರಿಂದ ಶೇ. 10ರಷ್ಟಿದೆ. ದೇಶದ ಪ್ರತಿ 5 ಸ್ಟಾರ್ಟಪ್​ಗಳಲ್ಲಿ ಒಂದನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ. ಮಹಿಳಾ ನೇತೃತ್ವದ ಕಂಪನಿಗಳು ಹೂಡಿಕೆದಾರರ ವಿಶ್ವಾಸ ಗಳಿಸುವಲ್ಲಿ ಮುಂಚೂಣಿಯಲ್ಲಿದ್ದು, ಇದು ದೇಶದ ಜಿಡಿಪಿಗೆ ಪೂರಕವಾಗಿದೆ. ಕೇಂದ್ರ ಜಾರಿಗೆ ತಂದ ಕಂಪನಿಗಳ ಕಾಯ್ದೆ-2013 (ಪ್ರತಿ ಕಂಪನಿಯಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಇರಬೇಕು ಎಂಬ ನಿಯಮ) ಈ ಬದಲಾವಣೆಗೆ ಬುನಾದಿ ಹಾಕಿದೆ.

ಫೈಟರ್ ಪೈಲಟ್​ಗಳು

ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಕೇವಲ ಸೇವೆಗೆ ಸೀಮಿತವಾಗದೆ, ನಿರ್ಣಾಯಕ ನಾಯಕತ್ವದತ್ತ ಸಾಗುತ್ತಿದೆ. ಸುಪ್ರೀಂಕೋರ್ಟ್​ನ ಐತಿಹಾಸಿಕ ತೀರ್ಪಿನ ನಂತರ, ಸಶಸ್ತ್ರ ಪಡೆಗಳ ಎಲ್ಲಾ 10 ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ನೀಡಲಾಗುತ್ತಿದೆ. ಅವರು ನಿವೃತ್ತಿಯವರೆಗೆ ಸೇವೆ ಸಲ್ಲಿಸಲು ಮತ್ತು ಉನ್ನತ ಶ್ರೇಣಿಯ ಕಮಾಂಡರ್ ಆಗಲು ಇದು ಅವಕಾಶ ಮಾಡಿಕೊಟ್ಟಿದೆ. ಭಾರತೀಯ ವಾಯುಪಡೆಯಲ್ಲಿ 20ಕ್ಕೂ ಹೆಚ್ಚು ಮಹಿಳಾ ಫೈಟರ್ ಪೈಲಟ್​ಗಳಿದ್ದಾರೆ. 2016ರಲ್ಲಿ ಅವನಿ ಚತುರ್ವೆದಿ, ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್ ಮೊದಲ ಬಾರಿಗೆ ಯುದ್ಧ ವಿಮಾನ ಹಾರಿಸಿ ಇತಿಹಾಸ ನಿರ್ವಿುಸಿದರು. 2021-22ರಿಂದ ದೇಶದ ಎಲ್ಲ 33 ಸೈನಿಕ್ ಶಾಲೆಗಳಿಗೂ ಬಾಲಕಿಯರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಸಾವಿರಾರು ವಿದ್ಯಾರ್ಥಿನಿಯರು ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ವೈದ್ಯಕೀಯ ವಿಭಾಗ ಹೊರತುಪಡಿಸಿ ಸುಮಾರು 7,000ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಪ್ಟನ್ ಶಿವ ಚೌಹಾಣ್ ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್​ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net