ರಾಹುಲ್ ವಿರುದ್ಧ ಪೋಸ್ಟ್, ಪ್ರೊಫೆಸರ್‌ಗೆ ನೆಟ್ಟಿಗರ ಗ್ರಾಮರ್ ಲೆಸನ್!... ಇಂಗ್ಲಿಷ್‌ನಲ್ಲಿ ಎಂಎ ಮಾಡಿದ್ರೂ ವ್ಯಾಕರಣ ತಪ್ಪಾಗಿ ಬರೆದು ಟ್ರೋಲ್ ಆದ ಶಿಕ್ಷಕಿ | Arpita Chatterjee

Arpita Chatterjee |ರಾಹುಲ್ ವಿರುದ್ಧ ಪೋಸ್ಟ್, ಪ್ರೊಫೆಸರ್‌ಗೆ ನೆಟ್ಟಿಗರ ಗ್ರಾಮರ್ ಲೆಸನ್!
Arpita Chatterjee |ರಾಹುಲ್ ವಿರುದ್ಧ ಪೋಸ್ಟ್, ಪ್ರೊಫೆಸರ್‌ಗೆ ನೆಟ್ಟಿಗರ ಗ್ರಾಮರ್ ಲೆಸನ್!
Published on

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಲು ಹೋದ ಸಹಾಯಕ ಪ್ರಾಧ್ಯಾಪಕಿಯೊಬ್ಬರು, ತಮ್ಮ ಪೋಸ್ಟ್‌ನಲ್ಲಿಯೇ ವ್ಯಾಕರಣದ ತಪ್ಪುಗಳನ್ನು ಮಾಡಿ ಸೋಷಿಯಲ್ ಮೀಡಿಯಾ ಬಳಕೆದಾರರಿಂದ ತೀವ್ರ ಟ್ರೋಲ್‌ಗೆ ಒಳಗಾದ ಘಟನೆ ನಡೆದಿದೆ. ತಾನು ಇಂಗ್ಲಿಷ್ ಮತ್ತು ಶಿಕ್ಷಣ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದೇನೆ ಎಂದು ಹೇಳಿಕೊಂಡರೂ, ಅವರ ಕಳಪೆ ವ್ಯಾಕರಣವನ್ನು ನೆಟ್ಟಿಗರು ತಿದ್ದಿ ಸರಿಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿ ಎಂದು ತಮ್ಮನ್ನು ಪರಿಚಯಿಸಿಕೊಂಡಿರುವ ಅರ್ಪಿತಾ ಚಟರ್ಜಿ ಎಂಬುವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದರು. ರಾಹುಲ್ ಗಾಂಧಿಯವರ ಅಂಧಭಕ್ತ ಹೇಳಿಕೆಯನ್ನು ಪ್ರಶ್ನಿಸಿದ್ದ ಅವರು, ತಮಗೆ ಎರಡು ಮಾಸ್ಟರ್ಸ್ ಡಿಗ್ರಿ ಹಾಗೂ ಬಿ ಎಡ್ ಪದವಿ ಇದೆ ಮತ್ತು ಪ್ರಸ್ತುತ ಪಿಎಚ್‌ಡಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
ತಮ್ಮ ಪೋಸ್ಟ್‌ನಲ್ಲಿ ಅರ್ಪಿತಾ, ಆತ್ಮೀಯ ರಾಹುಲ್ ಗಾಂಧಿ, ನಾನು ಒಬ್ಬ ಹೆಮ್ಮೆಯ ಅಂಧಭಕ್ತೆ ಮತ್ತು ಸಹಾಯಕ ಪ್ರಾಧ್ಯಾಪಕಿ. ನಾನು ಎರಡು ಮಾಸ್ಟರ್ಸ್ ಡಿಗ್ರಿ (ಇಂಗ್ಲಿಷ್ ಮತ್ತು ಶಿಕ್ಷಣ) ಹೊಂದಿದ್ದು, ಬಿ.ಎಡ್ ಪದವಿಯನ್ನೂ ಪಡೆದಿದ್ದೇನೆ ಹಾಗೂ ಪಿಎಚ್‌ಡಿ ಮಾಡುತ್ತಿದ್ದೇನೆ. ನಿಮ್ಮ ಪ್ರಕಾರ ಅಂಧಭಕ್ತ ಎಂದರೆ ಒಬ್ಬ ಮೂರ್ಖ. ಹಾಗಾದರೆ ನಾನು ಮೂರ್ಖಳೇ..? ನಿಮಗೆ ಖಚಿತವಿದೆಯೇ? ಎಂದು ಪ್ರಶ್ನಿಸಿದ್ದರು.

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಟೀಕಿಸುವ ಉದ್ದೇಶದಿಂದ ಈ ಪೋಸ್ಟ್ ಮಾಡಲಾಗಿದ್ದರೂ, ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಮಾತ್ರ ಅವರು ಬಳಸಿದ ಕಳಪೆ ಭಾಷೆ ಮತ್ತು ವಾಕ್ಯ ರಚನೆಯತ್ತ ನೆಟ್ಟಿತ್ತು. ಅರ್ಪಿತಾ ರಾಜಕೀಯ ಹೇಳಿಕೆಗಿಂತ ಹೆಚ್ಚಾಗಿ ಅವರ ವ್ಯಾಕರಣದ ತಪ್ಪುಗಳನ್ನೇ ನೆಟ್ಟಿಗರು ಗುರಿಯಾಗಿಸಿಕೊಂಡರು. ಇಂಗ್ಲಿಷ್ ವಿಷಯದಲ್ಲೇ ಮಾಸ್ಟರ್ಸ್ ಡಿಗ್ರಿ ಪಡೆದಿದ್ದೇನೆ ಎಂದು ಹೇಳಿಕೊಳ್ಳುವ ಪ್ರೊಫೆಸರ್ ಪೋಸ್ಟ್‌ನಲ್ಲಿ ಇಷ್ಟೊಂದು ತಪ್ಪುಗಳಿವೆಯಲ್ಲ ಎಂದು ಹಲವರು ಬೆಟ್ಟು ಮಾಡಿ ತೋರಿಸಿದರು.

ಕೆಲವು ಬಳಕೆದಾರರು ಅವರ ವಾಕ್ಯಗಳನ್ನು ಸರಿಪಡಿಸಿ, having two master's degree ಎನ್ನುವ ಬದಲು having two masters degrees ಎಂದು ಬಹುವಚನ ಬಳಸಬೇಕಿತ್ತು ಹಾಗೂ pursuing PhD ಎನ್ನುವ ಬದಲು pursuing a PhD ಎಂದು ಬರೆಯಬೇಕಿತ್ತು ಎಂದು ಸಲಹೆ ನೀಡಿದರು. ಇನ್ನು ಕೆಲವರು ಇಂಗ್ಲಿಷ್ ಮಾಸ್ಟರ್ಸ್ ಮಾಡಿದವರೇ ಇಂತಹ ತಪ್ಪುಗಳನ್ನು ಮಾಡಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರೆ, ಮತ್ತೂ ಕೆಲವರು ಈ ರಾಜಕೀಯ ಪೋಸ್ಟ್ ಕೊನೆಗೆ ಇಂಗ್ಲಿಷ್ ವ್ಯಾಕರಣ ಕಲಿಯುವ ಪಾಠವಾಗಿ ಬದಲಾಯಿತು ಎಂದು ತಮಾಷೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ನಾಯಕರನ್ನು ಟೀಕಿಸುವ ಭರದಲ್ಲಿ, ಶೈಕ್ಷಣಿಕ ಅರ್ಹತೆಯನ್ನು ಮುಂದಿಟ್ಟುಕೊಂಡು ಪೋಸ್ಟ್ ಹಂಚಿಕೊಳ್ಳುವಾಗ ಎಚ್ಚರಿಕೆ ಅಗತ್ಯ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ. ವಿಷಯ ಏನೇ ಇರಲಿ, ಭಾಷೆಯ ಬಳಕೆಯಲ್ಲಿ ಸಣ್ಣ ತಪ್ಪುಗಳಾದರೂ ಸಹ ವಿಷಯಾಂತರವಾಗಿ ಟ್ರೋಲ್‌ಗೆ ಕಾರಣವಾಗಬಹುದು ಎಂಬುದನ್ನು ಈ ಪ್ರಕರಣ ಎತ್ತಿ ತೋರಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net