ಕಾರಿನಿಂದ ಕಸ ಎಸೆದ ಮಹಿಳೆ: ಬೆನ್ನಟ್ಟಿ ಹೋಗಿ ಕ್ಲಾಸ್ ತಗೊಂಡ ಅನೂಪ್ ನೌಟಿಯಾಲ್; ವಿಡಿಯೋ ವೈರಲ್! Viral Video
ಬೆನ್ನಟ್ಟಿ ಹೋಗಿ ಕ್ಲಾಸ್ ತಗೊಂಡ ಅನೂಪ್ ನೌಟಿಯಾಲ್
Published on:
Copied
Follow Us
ಮಸ್ಸೂರಿ: ಸುಂದರವಾದ ಬೆಟ್ಟಗಳು, ತಂಪಾದ ಗಾಳಿ, ಪ್ರಕೃತಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಾರೆ. ಆದರೆ, ಅಲ್ಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರವಾಸಿಗರು ಎಷ್ಟು ಶ್ರಮವಹಿಸುತ್ತಾರೆ? ಎಂಬ ಪ್ರಶ್ನೆ ಈಗ ಇಡೀ ದೇಶಾದ್ಯಂತ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಪ್ರಕೃತಿಯ ಮಡಿಲಲ್ಲಿ ಕಾರಿನ ಕಿಟಕಿಯಿಂದ ಪ್ಲಾಸ್ಟಿಕ್ ಕಸ ಎಸೆದು ಹೋಗುತ್ತಿದ್ದ ಪ್ರವಾಸಿಗರಿಗೆ, ಸಾಮಾಜಿಕ ಕಾರ್ಯಕರ್ತರೊಬ್ಬರು ರಡು ಬದಿಯಲ್ಲೇ ಕಾರು ಅಡ್ಡಗಟ್ಟಿ ತಕ್ಕ ಪಾಠ ಕಲಿಸಿದ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ರಸ್ತೆ ಮಧ್ಯೆ ಕಾರು ನಿಲ್ಲಿಸಿ ಕ್ಲಾಸ್ ತಗೊಂಡ ಅನೂಪ್ ನೌಟಿಯಾಲ್!
ಈ ಘಟನೆ ಉತ್ತರಾಖಂಡದ ಪ್ರಸಿದ್ಧ ಗಿರಿಧಾಮ ಮಸ್ಸೂರಿಗೆ ಹೋಗುವ ರಸ್ತೆಯಲ್ಲಿ ನಡೆದಿದ್ದು, ಸಾಮಾಜಿಕ ಕಾರ್ಯಕರ್ತ ಅನೂಪ್ ನೌಟಿಯಾಲ್ ಅವರು ಮಸ್ಸೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಮುಂದೆ ಹೋಗುತ್ತಿದ್ದ ಟ್ಯಾಕ್ಸಿಯೊಂದರ ಕಿಟಕಿಯಿಂದ ಬಳಸಿದ ಪ್ಲಾಸ್ಟಿಕ್ ಕಪ್ ಮತ್ತು ಚಮಚಗಳನ್ನು ರಸ್ತೆಬದಿಗೆ ಎಸೆಯಲಾಗಿತ್ತು.
ಇದನ್ನು ನೋಡಿ ಸುಮ್ಮನಿರಲಾಗದ ಅನೂಪ್ ನೌಟಿಯಾಲ್, ತಕ್ಷಣ ರಸ್ತೆಯಲ್ಲಿದ್ದ ಪ್ಲಾಸ್ಟಿಕ್ ಕಸವನ್ನು ಕೈಗೆತ್ತಿಕೊಂಡು ಆ ಟ್ಯಾಕ್ಸಿಯನ್ನು ಬೆನ್ನಟ್ಟಿ ಹೋಗಿ ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಆ ಪ್ರವಾಸಿಗರ ಬಳಿ ಹೋಗಿ, ತಾವು ಎಸೆದಿದ್ದ ಕಸವನ್ನು ಅವರ ಕೈಗೇ ಮರಳಿ ನೀಡಿ ತರಾಟೆಗೆ ತಗೆದುಕೊಂಡಿದ್ದಾರೆ.
ಅನೂಪ್ ಅವರ ಪ್ರಕಾರ, ಕಾರಿನಲ್ಲಿದ್ದ ಒಬ್ಬ ಮಧ್ಯವಯಸ್ಕ ಮಹಿಳೆ ಆ ಪ್ಲಾಸ್ಟಿಕ್ ಕಸವನ್ನು ಹೊರಗೆ ಎಸೆದಿದ್ದರು. ಮತ್ತೆ ಇಂತಹ ತಪ್ಪುಗಳನ್ನು ಮಾಡಬೇಡಿ, ಸಾರ್ವಜನಿಕ ಸ್ಥಳಗಳನ್ನು ನಿಮ್ಮ ಮನೆಯಂತೆ ಗೌರವಿಸಿ ಎಂದು ಅನೂಪ್ ಆ ಪ್ರವಾಸಿಗರಲ್ಲಿ ವಿನಂತಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ವೀಕ್ಷಣೆ, ನೆಟ್ಟಿಗರು ಫುಲ್ ಫಿದಾ!
ಅನೂಪ್ ನೌಟಿಯಾಲ್ ಅವರು ಈ ಇಡೀ ಘಟನೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ಈ ಕ್ಲಿಪ್ ಬರೋಬ್ಬರಿ ಎರಡು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇಂದು ಮಸ್ಸೂರಿಗೆ ಹೋಗುವಾಗ ನನ್ನ ಮುಂದೆ ಇದ್ದ ಕಾರಿನವರು ಕಸ ಹೊರಗೆ ಎಸೆದಾಗ ನನಗೆ ತಡೆಯಲು ಸಾಧ್ಯವಾಗಲಿಲ್ಲ. ನಾನು ಅವರನ್ನ ಬೆನ್ನತ್ತಿ ಅವರ ಪ್ಲಾಸ್ಟಿಕ್ ಕಸವನ್ನು ಅವರಿಗೇ ವಾಪಸ್ ಕೊಟ್ಟೆ. ಉತ್ತರಾಖಂಡವನ್ನು ಸ್ವಚ್ಛವಾಗಿಡೋಣ, ದೇಶವನ್ನು ಸ್ವಚ್ಛವಾಗಿಡೋಣ ಎಂದು ಅನೂಪ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ಜನಕ್ಕೆ ನಾಗರಿಕ ಪ್ರಜ್ಞೆಯೇ ಇಲ್ಲ: ಕಿಡಿಕಾರಿದ ನೆಟ್ಟಿಗರು
ವಿಡಿಯೋ ವೈರಲ್ ಆಗುತ್ತಿದ್ದಂತೆ ಕಮೆಂಟ್ ಸೆಕ್ಷನ್ನಲ್ಲಿ ಜನ ಭಾರತೀಯರ ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ತೀವ್ರ ಬೇಸರ ಮತ್ತು ಆಕ್ರೋಶ ಹೊರಹಾಕುತ್ತಿದ್ದಾರೆ. ಒಬ್ಬ ಬಳಕೆದಾರರು ಕಮೆಂಟ್ ಮಾಡಿ, ಭಾರತೀಯರು ಈ ದೇಶವನ್ನು ತಮ್ಮ ಸ್ವಂತ ಮನೆ ಅಂದುಕೊಳ್ಳಲ್ಲ, ಅದಕ್ಕೆ ಹೀಗೆ ಮಾಡೋದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು, ಈ ಪ್ರವಾಸಿಗರು ಯಾವಾಗಲೂ ಹೀಗೆ ಯಾಕೆ ಮಾಡ್ತಾರೆ? ಇವರು ತಮ್ಮ ಮನೆಯಲ್ಲೂ ಹೀಗೆ ರಸ್ತೆಗೆ ಕಸ ಹಾಕ್ತಾರಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅದಕ್ಕೇ ನಮ್ಮ ದೇಶ ಹೀಗಿರೋದು, ಇಲ್ಲಿನ ಜನರಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲ ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).