ರಾಪಿಡೋ ಸವಾರಿ ಬೆನ್ನಲ್ಲೇ ವಾಟ್ಸಾಪ್‌ನಲ್ಲಿ ಚಾಲಕನ ಸಂದೇಶ: ಬೆಚ್ಚಿಬಿದ್ದ ಯುವತಿ, ಕಂಪನಿಯಿಂದ ಕ್ಷಮೆಯಾಚನೆ Rapido Rider

Rapido Rider (ಚಿತ್ರ Instagram)
Rapido Rider (ಚಿತ್ರ Instagram)
Published on
Rapido Rider: ಇತ್ತೀಚಿನ ದಿನಗಳಲ್ಲಿ ಸಾರಿಗೆ ಅಪ್ಲಿಕೇಶನ್‌ಗಳಾದ ರಾಪಿಡೋ, ಉಬರ್ ಮತ್ತು ಓಲಾ ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಇವುಗಳ ಬಳಕೆಯ ಜೊತೆಗೆ ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತಿವೆ. ಇತ್ತೀಚೆಗೆ ನಡೆದ ಇಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅನುಷ್ಕಾ ಎಂಬ ಯುವತಿಯೊಬ್ಬರು ರಾಪಿಡೋ ಸವಾರನಿಂದ ಅನುಭವಿಸಿದ ಕಹಿ ಅನುಭವವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗಿದೆ.

ಘಟನೆ ಏನು?

ಅನುಷ್ಕಾ ರಾಪಿಡೋ ಮೂಲಕ ಬೈಕ್​ ಬುಕ್​ ಮಾಡಿಕೊಂಡು ತಾವು ಹೋಗಬೇಕಾದ ಸ್ಥಳಕ್ಕೆ ತಲುಪಿದ್ದರು. ಪ್ರಯಾಣದ ಸಮಯದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಸವಾರಿ ಮುಗಿದ ನಂತರ ಚಾಲಕ ಮಹಿಳೆಯ ಸಂಖ್ಯೆಗೆ ವಾಟ್ಸಾಪ್​ ಮೂಲಕ ಸಂದೇಶವನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ.
ಅವರು ಹಂಚಿಕೊಂಡಿರುವ ಸ್ಕ್ರೀನ್​ ಶಾಟ್​ಗಳ ಪ್ರಕಾರ, ಚಾಲಕನು ಹಾಯ್​ ಎಂದು ಸಂದೇಶ ಕಳುಹಿಸಿ ನಂತರ ಅಸಭ್ಯವಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ. ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ವೃತ್ತಿಪರ ಕೆಲಸದ ಹೊರತಾಗಿ ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡಿದ್ದು ಅನುಷ್ಕಾ ಅವರ ಆತಂಕಕ್ಕೆ ಕಾರಣವಾಯಿತು.
ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಪ್ರತಿಕ್ರಿಯಿಸಿದ್ದು, ಸವಾರನಿಗೆ ಮೊಬೈಲ್​ ಸಂಖ್ಯೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ.

ರಾಪಿಡೊ ಅವರ ಪ್ರತಿಕ್ರಿಯೆ

ಪೋಸ್ಟ್ ನಂತರ, ರಾಪಿಡೋ ಕಾಮೆಂಟ್​ ವಿಭಾಗದಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಇಂತಹ ನಡವಳಿಕೆಗಳು ಸ್ವೀಕಾರವಲ್ಲ ಎಂದು ತಿಳಿಸಿದೆ. ಆದಾಗ್ಯೂ, ಚಾಲಕನ ಅನುಚಿತ ವರ್ತನೆಗೆ ಕ್ಷಮೆಯಾಚಿಸಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.
ಆದಾಗ್ಯೂ, ಕಂಪನಿಯು ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ರೈಡ್ ಐಡಿಯನ್ನು ನೇರ ಸಂದೇಶದ ಮೂಲಕ ಹಂಚಿಕೊಳ್ಳಲು ವಿನಂತಿಸಿದೆ. ಈ ಮೂಲಕ ಚಾಲಕನನ್ನು ತನಿಖೆ ಮಾಡಬಹುದು ಎಂದು ತಿಳಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net