ಬ್ರೇನ್​ ಸರ್ಜರಿ ಮಧ್ಯೆ ನೆಚ್ಚಿನ ನಟನ ಸಿನಿಮಾ ನೋಡಿದ ರೋಗಿ! ಮಹಿಳೆಯ ಆಸೆಗೆ ವೈದ್ಯರು ಅಸ್ತು ಎಂದಿದ್ದೇ ಈ ಕಾರಣಕ್ಕೆ

ಘಟನೆಯ ದೃಶ್ಯ, ತೆಲುಗು ನಟ ಪವನ್ ಕಲ್ಯಾಣ್​
ಘಟನೆಯ ದೃಶ್ಯ, ತೆಲುಗು ನಟ ಪವನ್ ಕಲ್ಯಾಣ್​
Published on

ಪ್ರಮುಖ ಮುಖ್ಯಾಂಶಗಳು

  • ಬ್ರೇನ್​ ಸರ್ಜರಿ ನಡುವೆ ಪವನ್​ ಕಲ್ಯಾಣ್​ ಸಿನಿಮಾ ನೋಡಿದ ರೋಗಿ
  • ವೈದ್ಯರು ಬಯಸಿದ್ದು ಇದೇ, ರೋಗಿ ಕೇಳಿದ್ದು ಇದೇ
ಗುಂಟೂರು: ಸಾಮಾನ್ಯವಾಗಿ ಸರ್ಜರಿ ಅಥವಾ ಆಪರೇಷನ್​ ಎಂದರೆ ರೋಗಿಗಳು ತೀರ ಆತಂಕಕ್ಕೆ ಒಳಗಾಗುತ್ತಾರೆ. ಅದು ಖಾಯಿಲೆ ಚಿಕ್ಕದ್ದೇ ಇರಲಿ ಅಥವಾ ದೊಡ್ಡದ್ದೇ ಇರಲಿ, ಭಯ ಮಾತ್ರ ವಿಪರೀತವಾಗಿ ಕಾಡುತ್ತಿರುತ್ತದೆ. ಇದೊಂದು ಕಾರಣಕ್ಕೆ ಅನೇಕ ರೋಗಿಗಳು ಶಸ್ತ್ರಚಿಕಿತ್ಸೆ ಬೇಡವೆಂದು ಸುಮ್ಮನೆ ಮುಂದೂಡುತ್ತಿರುತ್ತಾರೆ. ಆದರೆ, ಆಂಧ್ರಪ್ರದೇಶದ ಗುಂಟೂರಿನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಹಿಳಾ ರೋಗಿಯೊಬ್ಬರು ಸರ್ಜರಿ ವೇಳೆ ಸಿನಿಮಾ ನೋಡಿದ ಘಟನೆ ಸದ್ಯ ಹಲವರ ಹುಬ್ಬೇರಿಸುವಂತಿದೆ. 
ಇಂಡಿಯಾ ಟುಡೇ ವರದಿ ಪ್ರಕಾರ, ಡಿವಿಸಿ ಆಸ್ಪತ್ರೆಯಲ್ಲಿ ಬ್ರೇನ್​ ಟ್ಯೂಮರ್​ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಸರ್ಜರಿ ಮಾಡಲೇಬೇಕಿತ್ತು. ಇಲ್ಲವಾದರೆ, ಅವರ ಜೀವಕ್ಕೆ ಅಪಾಯ ಕಾದಿತ್ತು. ಈ ನಿಟ್ಟಿನಲ್ಲಿ ಆಪರೇಷನ್​ಗೆ ಮುಂದಾದ ವೈದ್ಯರ ತಂಡ, ರೋಗಿಯ ಸಮಸ್ಯೆಯ ಗಂಭೀರತೆಯನ್ನು ಪರಿಶೀಲಿಸಿ, ಆಕೆಯನ್ನು ಎಚ್ಚರಿಕೆಯಲ್ಲಿರಿಸಿ ಆಪರೇಷನ್ ಮಾಡುವ ಅನಿವಾರ್ಯತೆ ಎದುರಾಯಿತು. ಈ ನಡುವೆ ರೋಗಿ ಪವನ್​ ಕಲ್ಯಾಣ್​ ಅವರ ಅಪ್ಪಟ ಅಭಿಮಾನಿ ಎಂಬ ಸಂಗತಿ ಗೊತ್ತಾಯಿತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ವೈದ್ಯರು, ನಮ್ಮ ಪಾಡಿಗೆ ನಾವು ಸರ್ಜರಿ ಮಾಡ್ತೀವಿ. ಈ ಮಧ್ಯೆ ನೀವು ನಿಮ್ಮ ನೆಚ್ಚಿನ ನಟನ ಸಿನಿಮಾ ನೋಡಿ ಎಂದರು. ಇದು ಆಕೆಗೆ ಭಾರೀ ಖುಷಿ ನೀಡಿತು. ಇಲ್ಲೇ ಇದ್ದದ್ದು ಕ್ಯಾಚ್​.
ಶಸ್ತ್ರಚಿಕಿತ್ಸೆಗೂ ಮುನ್ನ ಎಂಆರ್​ಐ ಸ್ಕ್ಯಾನ್ ಸೇರಿ ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ವೈದ್ಯರು, ಆಕೆಯ ದೇಹದ ಚಲನೆ ಮತ್ತು ಇತರ ಪ್ರಮುಖ ನರವೈಜ್ಞಾನಿಕ ಕಾರ್ಯಗಳಿಗೆ ಕಾರಣವಾದ ಮೆದುಳಿನ ನಿರ್ಣಾಯಕ ಪ್ರದೇಶಕ್ಕೆ ಹತ್ತಿರದಲ್ಲಿರುವ ಗೆಡ್ಡೆಯನ್ನು ಪತ್ತೆಹಚ್ಚಿದರು. ಇದರ ಬೆನ್ನಲ್ಲೇ ರೋಗಿಯನ್ನು ಎಚ್ಚರಿಕೆಯಲ್ಲಿರಿಸಿಯೇ ಗೆಡ್ಡೆಯನ್ನು ತೆಗೆಯುವುದು ಸೂಕ್ತ ಎಂದು ನಿರ್ಧರಿಸಿದ್ದಾಗಿ ವರದಿಯಾಗಿದೆ. 
ಮಹಿಳಾ ರೋಗಿಯನ್ನು ಕೋಟೇಶ್ವರಮ್ಮ ಎನ್ನಲಾಗಿದ್ದು, ಆಪರೇಷನ್​ ಪೂರ ಸಮಯ ಪವನ್ ಕಲ್ಯಾಣ್ ಅವರ ಓಜಿ ಚಿತ್ರವನ್ನು ನೋಡುತ್ತ ಆನಂದಿಸಿದ್ದಾರೆ. ಅತ್ತ ಎಚ್ಚರಿಕೆಯಲ್ಲಿದ್ದ ಮಹಿಳೆಯ ಮಿದುಳಿನಲ್ಲಿದ್ದ  ಗೆಡ್ಡೆಯನ್ನು ವೈದ್ಯರ ತಂಡ ಯಶಸ್ವಿಯಾಗಿ ತೆಗೆದುಹಾಕಿದೆ. ಇನ್ನು ರೋಗಿಯು ಸಿನಿಮಾ ನೋಡುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರ ಗಮನ ಸೆಳೆದಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net