ಹೊಸ ವರ್ಷದ ಮಧ್ಯರಾತ್ರಿ ಮನೆಗೆ ಕರೆದ ಪ್ರೇಯಸಿ: ಖುಷಿಯಿಂದಲೇ ಹೋದ ಪ್ರಿಯಕರನಿಗೆ ಕಾದಿತ್ತು ಬಿಗ್​ ಶಾಕ್​! New Year

ಹೊಸ ವರ್ಷದಂದು ಪ್ರಿಯಕರನಿಗೆ ಶಾಕ್​ ಕೊಟ್ಟ ಪ್ರೇಯಸಿ
ಹೊಸ ವರ್ಷದಂದು ಪ್ರಿಯಕರನಿಗೆ ಶಾಕ್​ ಕೊಟ್ಟ ಪ್ರೇಯಸಿ
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ವರ್ಷದ ಆರಂಭವನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ
  • ಪ್ರೇಯಸಿ ತನ್ನ ಮನೆಗೆ ಆಹ್ವಾನಿಸಿದಳು ಅಂತ ತುಂಬಾ ಖುಷಿಯಿಂದ ಆಕೆಯ ಮನೆಗೆ ಹೋದ
  • ಪ್ರಿಯಕರನಿಗೆ ಹೊಸ ವರ್ಷದ ಆರಂಭ ಜೀವನವಿಡೀ ನೆನಪಿನಲ್ಲಿಡಬೇಕಾದ ಕರಾಳ ವರ್ಷವಾಗಿದೆ
ಮುಂಬೈ: ಹೊಸ ವರ್ಷದ ( New Year ) ಆರಂಭವನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅದೇ ರೀತಿ ತನ್ನ ಪ್ರೇಯಸಿ ತನ್ನ ಮನೆಗೆ ಆಹ್ವಾನಿಸಿದಳು ಅಂತ ತುಂಬಾ ಖುಷಿಯಿಂದ ಆಕೆಯ ಮನೆಗೆ ಹೋದ ಪ್ರಿಯಕರನಿಗೆ ಹೊಸ ವರ್ಷದ ಆರಂಭ ಜೀವನವಿಡೀ ನೆನಪಿನಲ್ಲಿಡಬೇಕಾದ ಕರಾಳ ವರ್ಷವಾಗಿ ಬದಲಾಗಿದೆ.
ಈ ಘಟನೆ ಮುಂಬೈನಲ್ಲಿ ನಡೆದಿದೆ. ಹೊಸ ವರ್ಷ ಹಿನ್ನೆಲೆಯಲ್ಲಿ ಸ್ವೀಟ್​ ಕೊಡುವುದಾಗಿ ಹೇಳಿ 25 ವರ್ಷದ ವಿವಾಹಿತೆ ತನ್ನ 44 ವರ್ಷದ ವಿವಾಹಿತ ಪ್ರಿಯಕರನನ್ನು ಮನೆಗೆ ಆಹ್ವಾನಿಸಿದಳು. ಪ್ರೇಯಸಿ ಕರೆದಳು ಅಂತ ಪ್ರಿಯಕರ ಬಹಳ ಖುಷಿಯಿಂದ ಆಕೆಯ ಮನೆಗೆ ಓಡೋಡಿ ಹೋದ. ಪ್ರೇಯಸಿ ಜತೆ ಒಂದೊಳ್ಳೆ ಸಮಯ ಕಳೆಯಬಹುದು ಅನ್ನೋದು ಆತನ ಆಸೆಯಾಗಿತ್ತು. ಆದರೆ, ಅಲ್ಲಿ ನಡೆದಿದ್ದು ಮಾತ್ರ ಯಾರೂ ಊಹಿಸದ ಭೀಕರತೆ.
ಅಷ್ಟಕ್ಕೂ ಏನಾಯಿತು ಅಂದರೆ, ಪ್ರೇಯಸಿಯ ಮನೆಗೆ ಹೋದ ಪ್ರಿಯಕರ, ವಾಪಸ್​ ಬಂದಿದ್ದು ತನ್ನ ಖಾಸಗಿ ಅಂಗದಲ್ಲಿ ಸೋರುತ್ತಿರುವ ರಕ್ತದೊಂದಿಗೆ. ಸ್ವೀಟ್​ ಕೊಡುವುದಾಗಿ ಕರೆಸಿ, ಚಾಕುವಿನಿಂದ ಪ್ರಿಯಕರನ ಗುಪ್ತಾಂಗದ ಮೇಲೆ ಪ್ರೇಯಸಿ ದಾಳಿ ಮಾಡಿದಳು. ತೀವ್ರ ರಕ್ತಸ್ರಾವದಿಂದ ಪ್ರೇಯಸಿ ಮನೆಯಿಂದ ಎಸ್ಕೇಪ್​ ಆಗಿ ಬಂದ ಪ್ರಿಯಕರನನ್ನು ಮುಂಬೈನ ಸಿಯಾನ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಘಟನೆಯ ಬೆನ್ನಲ್ಲೇ ಪ್ರೇಯಸಿ ಪರಾರಿಯಾಗಿದ್ದಾಳೆ.
ಈ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಅವರಿಬ್ಬರಿಗೂ ವಿವಾಹೇತರ ಸಂಬಂಧವಿರುವುದಾಗಿ ತಿಳಿದುಬಂದಿದೆ. ಆರೋಪಿ ಮಹಿಳೆ, ಸಂತ್ರಸ್ತನ ಸಹೋದರಿಯ ಅತ್ತಿಗೆ ಎಂದು ವರದಿಯಾಗಿದೆ. ಇಬ್ಬರೂ ಕಳೆದ ಆರೇಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ತನ್ನ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಸಂತ್ರಸ್ತನ ಮೇಲೆ ಆರೋಪಿ ಮಹಿಳೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.
ಕಳೆದ 18 ವರ್ಷಗಳಿಂದ ಮುಂಬೈನ ಸಾಂತಾ ಕ್ರೂಜ್ ಪೂರ್ವದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಸಂತ್ರಸ್ತ, 2025ರ ನವೆಂಬರ್‌ನಲ್ಲಿ ಬಿಹಾರಕ್ಕೆ ಹೋಗಿದ್ದ. ಆತ ಬಿಹಾರದಲ್ಲಿದ್ದರೂ ಅಲ್ಲಿಗೂ ಫೋನ್​ ಮಾಡುತ್ತಿದ್ದ ಆರೋಪಿ ಮಹಿಳೆ, ತನ್ನ ಮದುವೆ ಆಗುವಂತೆ ಒತ್ತಾಯ ಮಾಡಿ, ಬೆದರಿಕೆ ಹಾಕುತ್ತಲೇ ಇದ್ದಳು. ಡಿಸೆಂಬರ್ 19 ರಂದು ಸಂತ್ರಸ್ತ, ಬಿಹಾರದಿಂದ ಮುಂಬೈಗೆ ಹಿಂದಿರುಗಿದ ನಂತರ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದ.
ಡಿಸೆಂಬರ್ 31 ರಂದು, ಬೆಳಗಿನ ಜಾವ 1.30ರ ಸುಮಾರಿಗೆ, ಹೊಸ ವರ್ಷದ ಹಿನ್ನೆಲೆಯಲ್ಲಿ ಸ್ವೀಟ್ಸ್​ ಕೊಡುವ ನೆಪದಲ್ಲಿ ಆತನನ್ನು ತನ್ನ ಮನೆಗೆ ಆಹ್ವಾನಿಸಿದಳು. ಆ ಸಮಯದಲ್ಲಿ, ಮಹಿಳೆಯ ಮಕ್ಕಳು ಕೂಡ ಮನೆಯಲ್ಲೇ ಮಲಗಿದ್ದರು. ವರದಿಯ ಪ್ರಕಾರ, ಮಹಿಳೆ ಮೊದಲು ಪ್ಯಾಂಟ್ ತೆಗೆಯುವಂತೆ ಪ್ರಿಯಕರನಿಗೆ ಹೇಳಿದ್ದಾಳೆ. ಇದಾದ ಬಳಿಕ ಅಡುಗೆಮನೆಗೆ ಹೋದ ಆಕೆ, ತರಕಾರಿ ಕತ್ತರಿಸುವ ಚಾಕು ತಂದು, ಇದ್ದಕ್ಕಿದ್ದಂತೆ ಸಂತ್ರಸ್ತನ ಖಾಸಗಿ ಅಂಗದ ಮೇಲೆ ದಾಳಿ ಮಾಡಿದ್ದಾಳೆ. ಇದರಿಂದ ಆತನಿಗೆ ಗಂಭೀರ ಗಾಯಗಳಾಗಿ, ತೀವ್ರ ರಕ್ತಸ್ರಾವವಾಗಿದೆ.
ತೀವ್ರವಾದ ಗಾಯದ ಹೊರತಾಗಿಯೂ, ಸಂತ್ರಸ್ತ ಅಲ್ಲಿಂದ ಎಸ್ಕೇಪ್​ ಆಗಿ, ಮನೆಗೆ ಹಿಂತಿರುಗಿದನು. ಈ ವೇಳೆ ಆತನ ಮಕ್ಕಳು ಮತ್ತು ಸ್ನೇಹಿತರು ವಿಎನ್ ದೇಸಾಯಿ ಆಸ್ಪತ್ರೆಗೆ ಕರೆದೊಯ್ದರು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಯಾನ್ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಪ್ರಕಾರ, ಗಾಯವು ಗಂಭೀರವಾಗಿದ್ದು, ಆಪರೇಷನ್​ ಅಗತ್ಯವಿರಬಹುದು ಎಂದಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net