Instagram Reels ಹುಚ್ಚಿಗೆ ಮಹಿಳೆ ಬಲಿ: ನೇಣಿನ ದೃಶ್ಯ ಚಿತ್ರೀಕರಿಸುವಾಗ ಸಂಭವಿಸಿದ ಘೋರ ದುರಂತ!

Instagram Reels
Instagram Reels
Published on
ಉತ್ತರ ಪ್ರದೇಶ: ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಬೇಕೆಂಬ ಹಂಬಲ ಹಾಗೂ ರೀಲ್ಸ್ ಕ್ರೇಜ್(Instagram Reels) ಇಂದು ಹೆಣ್ಣುಮಗಳೊಬ್ಬಳ ಪ್ರಾಣವನ್ನೇ ಬಲಿಪಡೆದಿದೆ. ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ 'ನೇಣು ಹಾಕಿಕೊಳ್ಳುವ ನಾಟಕ'ದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ 27 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಬಬೇರು ಪ್ರದೇಶದ ಕರುಯಿಯಾ ಪುರ್ವಾ ನಿವಾಸಿ ಜಗದೀಶ್ ಎಂಬುವವರ ಪತ್ನಿ ಮೋಹಿನಿ (27) ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರು. ಫೆಬ್ರವರಿ 2 ರಂದು ಸಂಜೆ ಈ ಘಟನೆ ಸಂಭವಿಸಿದೆ. ಮೋಹಿನಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದೆಂದರೆ ಎಲ್ಲಿಲ್ಲದ ಆಸಕ್ತಿ.
ಅಂದು ಮನೆಯ ಕೋಣೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಮೊಬೈಲ್ ಫೋನ್ ಕ್ಯಾಮೆರಾ ಆನ್ ಮಾಡಿ ಅತಿ ನಾಟಕೀಯವಾದ 'ನೇಣು ಹಾಕಿಕೊಳ್ಳುವ' ದೃಶ್ಯವನ್ನು ಶೂಟ್ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಸೀಲಿಂಗ್ ಕೊಂಡಿಗೆ ಹಗ್ಗ ಕಟ್ಟಿ, ಸ್ಟೂಲ್ ಮೇಲೆ ನಿಂತು ಕುತ್ತಿಗೆಗೆ ಫಾಸು ಹಾಕಿಕೊಂಡಿದ್ದಾರೆ. ಆದರೆ, ಚಿತ್ರೀಕರಣದ ಮಧ್ಯೆ ಆಕಸ್ಮಿಕವಾಗಿ ಸ್ಟೂಲ್ ಮೇಲಿನ ನಿಯಂತ್ರಣ ತಪ್ಪಿ ಜಾರಿದ್ದಾರೆ. ಸೆಕೆಂಡುಗಳ ಅವಧಿಯಲ್ಲಿ 'ನಟನೆ'ಯಾಗಿದ್ದ ದೃಶ್ಯ ನೈಜ ನೇಣಾಗಿ ಪರಿಣಮಿಸಿ, ಮೋಹಿನಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ತಾಯಿಯ ಶವ ನೋಡಿ ಕಿರುಚಾಡಿದ 4 ವರ್ಷದ ಪುತ್ರಿ!
ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು ಮೋಹಿನಿ ಅವರ ನಾಲ್ಕು ವರ್ಷದ ಪುಟ್ಟ ಮಗಳು ಕೋಣೆಗೆ ಬಂದಾಗ. ತನ್ನ ತಾಯಿ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಮಗು ಜೋರಾಗಿ ಕಿರುಚಾಡಲು ಪ್ರಾರಂಭಿಸಿದೆ. ಮಗುವಿನ ಅಳಲು ಕೇಳಿ ನೆರೆಹೊರೆಯವರು ಧಾವಿಸಿ ಬಂದು ಮೋಹಿನಿ ಅವರನ್ನು ಕೆಳಗಿಳಿಸಿದರೂ, ಅಷ್ಟರಲ್ಲಾಗಲೇ ಅವರು ಪ್ರಾಣ ಬಿಟ್ಟಿದ್ದರು.
ಪೊಲೀಸ್ ತನಿಖೆ
ಘಟನಾ ಸ್ಥಳಕ್ಕೆ ಧಾವಿಸಿದ ಬಬೇರು ಕೊತ್ವಾಲಿ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಪಲಾಸ್ ಬನ್ಸಾಲ್, "ಪ್ರಾಥಮಿಕ ತನಿಖೆಯ ಪ್ರಕಾರ ಇದು ರೀಲ್ಸ್ ಚಿತ್ರೀಕರಣದ ವೇಳೆ ನಡೆದ ಆಕಸ್ಮಿಕ ಸಾವು ಎಂದು ತಿಳಿದುಬಂದಿದೆ. ಆದರೂ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
ಈ ಘಟನೆಯು ಸಾಮಾಜಿಕ ಜಾಲತಾಣದ ಕಂಟೆಂಟ್‌ಗಳಿಗಾಗಿ ಜನರು ಎಂತಹ ಅಪಾಯಕಾರಿ ಹಂತಕ್ಕೆ ಹೋಗುತ್ತಿದ್ದಾರೆ ಎಂಬ ಆತಂಕವನ್ನು ಮೂಡಿಸಿದೆ. ಪ್ರಾಣಕ್ಕೆ ಸಂಚಕಾರ ತರುವಂತಹ ಸಾಹಸಗಳನ್ನು ಮಾಡಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net