ವೈದ್ಯಕೀಯ ಲೋಕದಲ್ಲಿ ಮಹಾ ಪವಾಡ; 5 ದಿನಗಳ ಅಂತರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಯುಪಿ ಮಹಿಳೆ! Delayed Interval Delivery

Delayed Interval Delivery ಸಾಂದರ್ಭಿಕ ಚಿತ್ರ
Delayed Interval Delivery ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ಜಗತ್ತೇ ಆಶ್ಚರ್ಯಚಕಿತರಾಗುವಂತಹ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ
  • ಮಹಿಳೆಯೊಬ್ಬರು ಐದು ದಿನಗಳ ಸುದೀರ್ಘ ಅವಧಿಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ
  • ರಿಗೆ ನಂತರ ತಾಯಿ ಮತ್ತು ನಾಲ್ಕು ನವಜಾತ ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ
  • ಒಂದೇ ಗರ್ಭದಲ್ಲಿ ನಾಲ್ಕು ಭ್ರೂಣಗಳು ಬೆಳೆಯುವುದು ತಾಯಿ ಮತ್ತು ಮಕ್ಕಳಿಬ್ಬರ ಜೀವಕ್ಕೂ ಅತ್ಯಂತ ಅಪಾಯಕಾರಿ
ಉತ್ತರ ಪ್ರದೇಶ: ವೈದ್ಯಕೀಯ ಜಗತ್ತೇ ಆಶ್ಚರ್ಯಚಕಿತರಾಗುವಂತಹ ಅಪರೂಪದ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಐದು ದಿನಗಳ ಸುದೀರ್ಘ ಅವಧಿಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ಹೆರಿಗೆ ನಂತರ ತಾಯಿ ಮತ್ತು ನವಜಾತ ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಶುಕ್ರವಾರ (ಮೇ 15) ತಿಳಿಸಿದ್ದಾರೆ. ಜನಿಸಿದ ಮಕ್ಕಳಲ್ಲಿ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಲೋಧಿಪುರ ತೀರ್ಥಂಕೇರ್ ಮಹಾವೀರ್ ವಿಶ್ವವಿದ್ಯಾಲಯ ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಸಂಭಾಲ್​ ಜಿಲ್ಲೆಯ ಓವರಿ ಗ್ರಾಮದ ನಿವಾಸಿ ಅಮಿನಾ ಮೇ 9 ರಂದು ಒಂದು ಮಗುವಿಗೆ ಮತ್ತು ಮೇ 14 ರಂದು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.
ಗರ್ಭಧಾರಣೆಯನ್ನು 'ಅತಿ ಅಪಾಯಕಾರಿ' ಎಂದು ವರ್ಗೀಕರಿಸಿದ್ದರೂ ವೈದ್ಯರು ಸಿಸೇರಿಯನ್​ ಇಲ್ಲದೇಯೇ ನಾಲ್ಕು ಮಕ್ಕಳನ್ನು ಹೆರಿಗೆ ಮಾಡಿಸಿದ್ದಾರೆ. ಆದಾಗ್ಯೂ, ಈ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆ ಮೂಲಕ ನಾಲ್ಕು ಮಕ್ಕಳಿಗೆ ಹೆರಿಗೆ ಮಾಡಿದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯೆ ಶುಭ್ರಾ ಅಗರವಾಲ್​ ಅಭಿಪ್ರಾಯ ಪಟ್ಟಿದ್ದಾರೆ.
ಒಂದೇ ಗರ್ಭದಲ್ಲಿ ನಾಲ್ಕು ಭ್ರೂಣಗಳು ಬೆಳೆಯುವುದು ತಾಯಿ ಮತ್ತು ಮಕ್ಕಳಿಬ್ಬರ ಜೀವಕ್ಕೂ ಅತ್ಯಂತ ಅಪಾಯಕಾರಿ ಎಂದು ವೈದ್ಯರು ಮೊದಲೇ ಗುರುತಿಸಿದ್ದರು. ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್ ವರದಿಗಳನ್ನು ಪರಿಶೀಲಿಸಿದ ವೈದ್ಯಕೀಯ ತಂಡವು, ತಾಯಿಯ ಆರೋಗ್ಯ ಮತ್ತು ಕನಿಷ್ಠ ಇಬ್ಬರು ಮಕ್ಕಳನ್ನಾದರೂ ಸುರಕ್ಷಿತವಾಗಿ ಉಳಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಲು 'ಭ್ರೂಣ ಕಡಿತ' (Fetal Reduction) ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಕುಟುಂಬಕ್ಕೆ ಸಲಹೆ ನೀಡಿದ್ದರು. ಆದರೆ, ಕುಟುಂಬವು ಗರ್ಭಾಧಾರಣೆಯನ್ನು ಮುಂದುವರೆಸಲು ನಿರ್ಧರಿಸಿದರು ಎಂದರು.
ಗರ್ಭಾವಸ್ಥೆಯಲ್ಲಿ, ಅಮಿನಾ ರಕ್ತದೊತ್ತಡ ಮತ್ತು ಯಕೃತ್ತಿಗೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆಗಾಗಿ ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದುಬಂದಿದೆ.
ಆಸ್ಪತ್ರೆ ಆಡಳಿತದ ಪ್ರಕಾರ, ಅಮಿನಾ ಮೊದಲು ಮೇ 8 ರಂದು ಹೆರಿಗೆ ನೋವು ಅನುಭವಿಸಿದರು. ಮೇ 9 ರಂದು ಮೊದಲ ಗಂಡು ಮಗುವಿಗೆ ಜನ್ಮ ನೀಡಿದರು, ಮಗುವಿನ ತೂಕ ಸುಮಾರು 710 ಗ್ರಾಂ. ನಂತರ ವೈದ್ಯರು ಸ್ಥಿತಿಯನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಗರ್ಭಧಾರಣೆ ಆರೂವರೆ ರಿಂದ ಏಳು ತಿಂಗಳ ಹಂತದಲ್ಲಿದ್ದ ಕಾರಣ ಉಳಿದ ಹೆರಿಗೆಗಳನ್ನು ವಿಳಂಬಗೊಳಿಸಿದರು.
ಐದು ದಿನಗಳ ನಂತರ, ಮೇ 14 ರಂದು ಮತ್ತೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಅಮಿನಾ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂರು ಶಿಶುಗಳಿಗೆ ಜನ್ಮ ನೀಡಿದ್ದು, ಒಂದು ಮಗು ಸಂಪೂರ್ಣ ಆರೋಗ್ಯವಾಗಿದ್ದು, ಇನ್ನೆರಡು ಮಕ್ಕಳನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ತಂಡವು ಅಮಿನಾ ಅವರ ಈ ಹೆರಿಗೆ ಪ್ರಕರಣವನ್ನು "ಅಸಾಧಾರಣವಾಗಿ ಅಪರೂಪ ಮತ್ತು ಅತ್ಯಂತ ಸವಾಲಿನದ್ದು" ಎಂದು ಬಣ್ಣಿಸಿದೆ. ಸಾಮಾನ್ಯವಾಗಿ ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ಸಿಜೇರಿಯನ್ (ಶಸ್ತ್ರಚಿಕಿತ್ಸೆ) ಮೊರೆ ಹೋಗುವುದು ಹೆಚ್ಚು. ಆದರೆ, ಇಲ್ಲಿ ವೈದ್ಯರು ಯಶಸ್ವಿಯಾಗಿ ನಾರ್ಮಲ್​ ಹೆರಿಗೆಯನ್ನು ಮಾಡಿಸಿರುವುದು ವೈದ್ಯಕೀಯ ಲೋಕವನ್ನೇ ಆಶ್ಚರ್ಯಚಕಿತಗೊಳಿಸಿದೆ.
ಈ ಅಪರೂಪದ ವೈದ್ಯಕೀಯ ಪವಾಡದ ಯಶಸ್ಸಿನ ಹಿಂದೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಹಗಲಿರುಳಿನ ಶ್ರಮವಿದೆ. ಅತ್ಯಂತ ಅಪಾಯಕಾರಿಯಾಗಿದ್ದ ಈ ಗರ್ಭಧಾರಣೆ ಮತ್ತು ಹೆರಿಗೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಕಾಲಿಕ ಹಸ್ತಕ್ಷೇಪ, ನಿರಂತರ ಮೇಲ್ವಿಚಾರಣೆ ಹಾಗೂ ಕುಟುಂಬದ ಸಹಕಾರವೇ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಚಿಕಿತ್ಸೆ ನೀಡಿದ ವೈದ್ಯರ ತಂಡ ಒಮ್ಮತದಿಂದ ಹೇಳಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net