ಟ್ರಿಪ್ ಮುಗಿದ್ರೂ ಮುಗಿಯದ ಕಾಟ: ರಾಪಿಡೋ ಚಾಲಕನ ಕಿರುಕುಳಕ್ಕೆ ಬೆಚ್ಚಿಬಿದ್ದ ಯುವತಿ; ವಿಡಿಯೋ ವೈರಲ್! Rapido Harassment

Rapido Harassment ಚಿತ್ರ Instagram
Rapido Harassment ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಿಂದ ಗ್ರೇಟರ್ ನೋಯ್ಡಾಕ್ಕೆ ಪ್ರಯಾಣಿಸುತ್ತಿದ್ದ ಯುವತಿಗೆ ರಾಪಿಡೋ ಚಾಲಕನಿಂದ ಕಿರುಕುಳ
  • ಯುವತಿ ಕೆಲಸದ ನಿಮಿತ್ತ ದೆಹಲಿಯಿಂದ ಗ್ರೇಟರ್ ನೋಯ್ಡಾಕ್ಕೆ ತೆರಳಲು ರಾಪಿಡೋ ಬುಕ್​ ಮಾಡಿದ್ದರು
  • ಪ್ರಯಾಣದ ದಾರಿಯುದ್ದಕ್ಕೂ ಅಶ್ಲೀಲ ಹಾಡುಗಳನ್ನು ಹೇಳುತ್ತಾ ಅನುಚಿತವಾಗಿ ವರ್ತಿಸಿದ ಚಾಲಕ
  • ಮಹಿಳೆ ಸಂಖ್ಯೆಯನ್ನು ಬ್ಲಾಕ್​ ಮಾಡಿದರೂ ಕೂಡಾ ಬೇರೆ ಸಂಖ್ಯೆಗಳಿಂದ ನಿರಂತರವಾಗಿ ಕರೆಗಳು
ನವದೆಹಲಿ: ದೆಹಲಿಯಿಂದ ಗ್ರೇಟರ್ ನೋಯ್ಡಾಕ್ಕೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರಿಗೆ ರಾಪಿಡೋ ಚಾಲಕನೊಬ್ಬ ಕಿರುಕುಳ (Rapido Harassment) ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ಕುರಿತು ಯುವತಿಯು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾಳೆ.

ಘಟನೆ ಏನು?

ಯುವತಿ ಕೆಲಸದ ನಿಮಿತ್ತ ದೆಹಲಿಯಿಂದ ಗ್ರೇಟರ್ ನೋಯ್ಡಾಕ್ಕೆ ತೆರಳಲು ರಾಪಿಡೋ ಬುಕ್​ ಮಾಡಿದ್ದರು. ಆದರೆ, ಪ್ರಯಾಣದ ಸಮಯದಲ್ಲಿ ಚಾಲಕ ದಾರಿಯುದ್ದಕ್ಕೂ ಅನುಚಿತವಾಗಿ ವರ್ತಿಸಿದ್ದಾನೆ ಎಂದಿದ್ದಾರೆ. ಈ ವೇಳೆ ಚಾಲಕ ಲೈಂಗಿಕ ಮತ್ತು ಅಶ್ಲೀಲ ಹಾಡುಗಳನ್ನು ಹೇಳುತ್ತಾ, ನನ್ನ ಕುಟುಂಬ ಮತ್ತು ಖಾಸಗಿ ಜೀವನದ ಬಗ್ಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದನು ಇದರಿಂದ ನನಗೆ ಅನಾನುಕೂಲ ಉಂಟಾಯಿತು ಎಂದು ಹೇಳಿದರು.
ಪ್ರಯಾಣ ಮುಗಿದ ನಂತರ, ಚಾಲಕ ನಿರಂತರವಾಗಿ ಕರೆ ಮಾಡಲು ಪ್ರಾರಂಭಿಸಿದನು. ಮಹಿಳೆ ಸಂಖ್ಯೆಯನ್ನು ಬ್ಲಾಕ್​ ಮಾಡಿದರೂ ಕೂಡಾ ಬೇರೆ ಸಂಖ್ಯೆಗಳಿಂದ ನಿರಂತರವಾಗಿ ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದನು. ಇದಾದ ಬಳಿಕ ಸ್ನಾನಗೃಹದಿಂದ ವಿಡಿಯೋ ಕರೆ ಮಾಡಲು ಪ್ರಾರಂಭಿಸಿದನು ಎಂದು ಯುವತಿ ವಿಡಿಯೋದಲ್ಲಿ ತಿಳಿಸಿದ್ದಾರೆ.

ಕ್ಷಮೆಯಾಚಿಸಿದ ರಾಪಿಡೊ

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಘಟನೆಯ ಬಗ್ಗೆ ಎಚ್ಚೆತ್ತುಕೊಂಡ ರಾಪಿಡೋ (Rapido) ಕಂಪನಿಯು ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, "ಹಾಯ್ ಶೈವ್ಯಾ, ನೀವು ಇಂತಹ ದುಃಖಕರ ಅನುಭವವನ್ನು ಅನುಭವಿಸಬೇಕಾಗಿ ಬಂದಿದ್ದಕ್ಕೆ ನಮಗೆ ನಿಜಕ್ಕೂ ವಿಷಾದವಿದೆ. ಸವಾರಿಯ ಸಮಯದಲ್ಲಿ ಅಥವಾ ನಂತರ ಯಾರೂ ಎಂದಿಗೂ ಅಸುರಕ್ಷಿತರೆಂದು ಭಾವಿಸಬಾರದು.
ಅಂತಹ ಕಾಳಜಿಗಳನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಈ ರೀತಿಯ ನಡವಳಿಕೆಯು ನಮ್ಮ ವೇದಿಕೆಯಲ್ಲಿ ಸಂಪೂರ್ಣವಾಗಿ ಸ್ವೀಕಾರರ್ಹವಲ್ಲ ಎಂದು ದಯವಿಟ್ಟು ತಿಳಿದುಕೊಳ್ಳಿ. ರಾಪಿಡೊದಲ್ಲಿ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಮರೆಮಾಡಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಜೊತೆಗೆ ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದರು.
ಪ್ರಯಾಣಿಕರ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆ. ಆದರೆ, ನಿಮಗೆ ತೊಂದರೆ ನೀಡಿದ ಚಾಲಕನ ವಿರುದ್ಧ ಕ್ರಮಕೈಗೊಳ್ಳಲು ನಾವು ಎಂದಿಗೂ ಬದ್ಧರಾಗಿದ್ದೇವೆ. ದಯವಿಟ್ಟು ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆ ಮತ್ತು ಸವಾರಿ ವಿವರಗಳನ್ನು ಡಿಎಂ ಮೂಲಕ ಹಂಚಿಕೊಳ್ಳಿ ಇದರಿಂದ ನಾವು ತುರ್ತಾಗಿ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಕಂಪನಿಯು ಕ್ಷಮೆಯಾಚಿಸಿದೆಯಾದರೂ, ಕೇವಲ "ವಿಷಾದ" ವ್ಯಕ್ತಪಡಿಸುವುದರಿಂದ ಮಹಿಳೆಯರ ಸುರಕ್ಷತೆ ಖಾತ್ರಿಯಾಗುವುದಿಲ್ಲ ಎಂಬುದು ನೆಟ್ಟಿಗರ ವಾದವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಚಾಲಕನ ಮೇಲೆ ಕೈಗೊಂಡಿರುವ ಶಿಸ್ತುಕ್ರಮಗಳೇನು ಮತ್ತು ಕಂಪನಿಯ ಸುರಕ್ಷತಾ ಪ್ರೋಟೋಕಾಲ್‌ಗಳಲ್ಲಿ ಯಾವ ಬದಲಾವಣೆ ತರಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net