ಹಳೆ ದೋಸ್ತಿ ಇಲ್ಲ, ಹೊಸಬರ ನಂಬಿಕೆಯೂ ಇಲ್ಲ! ಆದ್ರೂ ಪಂಜಾಬ್ ಮೇಲೆ ಮೋದಿ ಕಣ್ಣಿಟ್ಟಿರುವುದರ ಅಸಲಿ ರಹಸ್ಯವೇನು ಗೊತ್ತಾ..? | PM Modi Punjab Visit

PM Modi Punjab Visit | ಪಂಜಾಬ್ ಮೇಲೆ ಮೋದಿ ಕಣ್ಣಿಟ್ಟಿರುವುದರ ಅಸಲಿ ರಹಸ್ಯವೇನು ಗೊತ್ತಾ..?
PM Modi Punjab Visit | ಪಂಜಾಬ್ ಮೇಲೆ ಮೋದಿ ಕಣ್ಣಿಟ್ಟಿರುವುದರ ಅಸಲಿ ರಹಸ್ಯವೇನು ಗೊತ್ತಾ..?
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜುಲೈ 17ರ ಪಂಜಾಬ್ ಭೇಟಿಯು (PM Modi Punjab Visit) ದೇಶದ ರಾಜಕೀಯ ವಲಯದಲ್ಲಿ ಅತ್ಯಂತ ಮಹತ್ವದ ತಿರುವು ಪಡೆದುಕೊಳ್ಳುವ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಎದುರಾಗುತ್ತಿರುವ ಬೆನ್ನಲ್ಲೇ, ನಿರ್ಣಾಯಕ ಸಿಖ್ ಸಮುದಾಯದ ಮತಬ್ಯಾಂಕ್ ಸೆಳೆಯಲು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಭಾರಿ ಕಸರತ್ತು ನಡೆಸುತ್ತಿದೆ.
ಪ್ರಧಾನಿಯವರ ಈ ಪ್ರವಾಸವು ಕೇವಲ ಕೋಟಿ ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಅಥವಾ ಉದ್ಘಾಟನಾ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ, ಐತಿಹಾಸಿಕವಾಗಿ ತಾನು ಮೂಲೆಗುಂಪಾಗಿದ್ದ ಪಂಜಾಬ್‌ನ ಮಣ್ಣಿನಲ್ಲಿ ಮೊದಲ ಬಾರಿಗೆ ಯಾವುದೇ ಪ್ರಾದೇಶಿಕ ಪಕ್ಷಗಳ ಹಂಗಿಲ್ಲದೆ, ಸ್ವತಂತ್ರವಾಗಿ ಮತ್ತು ಭದ್ರವಾಗಿ ಹೆಜ್ಜೆ ಊರಲು ಬಿಜೆಪಿ ಹೆಣೆದಿರುವ ಬೃಹತ್ ರಾಜಕೀಯ ಮಾಸ್ಟರ್ ಪ್ಲಾನ್‌ನ ಭಾಗವಾಗಿದೆ.

ತಂತ್ರಗಾರಿಕೆಯಲ್ಲಿ ಬದಲಾವಣೆ!..

ರೈತ ಕಾಯ್ದೆಗಳ ವಿರುದ್ಧದ ಸುದೀರ್ಘ ಪ್ರತಿಭಟನೆಯ ನಂತರ, ತನ್ನ ದಶಕಗಳ ಕಾಲದ ಹಳೆಯ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳದೊಂದಿಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಿತು. ಅಂದಿನಿಂದ ಪಂಜಾಬ್‌ನಲ್ಲಿ ತನ್ನದೇ ಆದ ಸ್ವತಂತ್ರ ರಾಜಕೀಯ ಅಸ್ತಿತ್ವವನ್ನು ನಿರ್ಮಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಹಿಂದೆ ಬಿಜೆಪಿ ಕೇವಲ ನಗರ ಪ್ರದೇಶದ ಹಿಂದೂ ಮತದಾರರನ್ನು ನೆಚ್ಚಿಕೊಂಡಿತ್ತು ಮತ್ತು ಅಕಾಲಿದಳವು ಸಿಖ್ ಮತಗಳ ಬೆಂಬಲವನ್ನು ಕ್ರೋಡೀಕರಿಸುತ್ತಿತ್ತು. ಆದರೆ ಈ ಹಳೆಯ ಮಾದರಿಯನ್ನು ಸಂಪೂರ್ಣವಾಗಿ ಬದಲಿಸಿರುವ ಬಿಜೆಪಿ, ಈಗ ನೇರವಾಗಿ ಸಿಖ್ ಮತದಾರರು, ಧಾರ್ಮಿಕ ಸಂಸ್ಥೆಗಳು ಮತ್ತು ವಿದೇಶಗಳಲ್ಲಿರುವ ಪಂಜಾಬಿ ಸಮುದಾಯವನ್ನು ತಲುಪಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಾಜತಾಂತ್ರಿಕತೆಯ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದ್ದು, ಕಳೆದ ಎರಡು ಅವಧಿಯಲ್ಲಿ ಅವರ ಸರ್ಕಾರವು ಭಾರತದ ಸಿಖ್ ಯಾತ್ರಿಕರಿಗಾಗಿ ಪಾಕಿಸ್ತಾನದಲ್ಲಿರುವ ಪವಿತ್ರ ಕರ್ತಾರ್‌ಪುರ ಸಾಹಿಬ್‌ಗೆ ತೆರಳಲು ಕಾರಿಡಾರ್ ನಿರ್ಮಿಸಿದೆ. ಜೊತೆಗೆ ಗುರುನಾನಕ್ ದೇವ್ ಅವರ 550ನೇ ಪ್ರಕಾಶ್ ಪೂರ್ಬ್ ಅನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಿದ್ದು, ಸಾಹಿಬ್‌ಜಾದೆಯರ ತ್ಯಾಗದ ನೆನಪಿನಲ್ಲಿ ವೀರ್ ಬಾಲ್ ದಿವಸ್ ಆಚರಣೆಯನ್ನು ಜಾರಿಗೆ ತಂದಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಾಗ ಅಲ್ಲಿಂದ ಶ್ರೀ ಗುರು ಗ್ರಂಥ ಸಾಹಿಬ್ ಜೀ ಅವರ ಸ್ವರೂಪಗಳನ್ನು ಸುರಕ್ಷಿತವಾಗಿ ಭಾರತಕ್ಕೆ ತಂದಿದ್ದು ಮತ್ತು ವಿದೇಶದಲ್ಲಿರುವ ಅನೇಕ ಸಿಖ್ಖರ ಮೇಲಿದ್ದ ವೀಸಾ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು ಈ ತಂತ್ರದ ಪ್ರಮುಖ ಭಾಗಗಳಾಗಿವೆ. ಮೂರು ರೈತ ಕಾಯ್ದೆಗಳನ್ನು ಹಿಂಪಡೆದದ್ದು ರಾಜಕೀಯವಾಗಿ ಅನಿವಾರ್ಯವಾಗಿದ್ದರೂ, ಪಂಜಾಬ್‌ನ ರೈತರು ಮತ್ತು ಜನರ ನಂಬಿಕೆಯನ್ನು ಮರುಗಳಿಸಲು ಬಿಜೆಪಿ ನೀಡಿದ ಪ್ರಮುಖ ಸಂದೇಶವಾಗಿ ಉಳಿದಿದೆ.

ವಿದೇಶಿ ಮಣ್ಣಿನಿಂದಲೇ ಸಿಖ್ ಗುರುಗಳಿಗೆ ಗೌರವ!...

ಈ ಸಿಖ್ ಸಮುದಾಯವನ್ನು ತಲುಪುವ ತಂತ್ರವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾಡಿದ ಭಾಷಣದ ಬಹುಭಾಗವನ್ನು ಸಿಖ್ ಪರಂಪರೆ ಮತ್ತು ಸಿಖ್ಖರ ಕೊಡುಗೆಗೆ ಮೀಸಲಿಟ್ಟಿದ್ದರು. ವಿದೇಶಿ ಮಣ್ಣಿನಲ್ಲಿ ನಿಂತು ಸಿಖ್ ಗುರುಗಳ ಗೌರವ, ಸಂಪ್ರದಾಯಗಳ ಸಂರಕ್ಷಣೆ ಮತ್ತು ಧಾರ್ಮಿಕ ಯಾತ್ರೆಗಳ ಕುರಿತು ಪ್ರಧಾನಿ ಮಾತನಾಡಿದ್ದು, ವಿದೇಶಿ ಸಿಖ್ಖರಿಗೆ ಮಾತ್ರವಲ್ಲದೆ ಪಂಜಾಬ್‌ನಲ್ಲಿರುವ ಸಿಖ್ ಸಮುದಾಯಕ್ಕೂ ಸ್ಪಷ್ಟ ರಾಜಕೀಯ ಸಂದೇಶ ತಲುಪಿಸಿದೆ.
ಜುಲೈ 17ರ ಈ ಭೇಟಿಯು ಸುದೀರ್ಘ ಪ್ರಯತ್ನಗಳನ್ನು ಮತಗಳಾಗಿ ಪರಿವರ್ತಿಸಲು ಬಿಜೆಪಿ ಮಾಡುತ್ತಿರುವ ಸತತ ಕಸರತ್ತಾಗಿದೆ. ಬಿಜೆಪಿ ಎಂದಿಗೂ ಪಂಜಾಬ್‌ನಲ್ಲಿ ಮುಖ್ಯ ಆಡಳಿತ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿಲ್ಲ. ಹಿಂದೆ ಅಕಾಲಿದಳದ ಜೊತೆ ಮೈತ್ರಿ ಇದ್ದಾಗಲೂ ಬಿಜೆಪಿಯ ಪ್ರಭಾವ ನಗರ ಪ್ರದೇಶದ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಮೈತ್ರಿ ಮುರಿದುಬಿದ್ದ ಮೇಲೆ, ಸಾಂಪ್ರದಾಯಿಕ ಮಿತ್ರನ ಬೆಂಬಲವಿಲ್ಲದೆ ಗ್ರಾಮೀಣ ಭಾಗಗಳಿಗೆ ಕಾಲಿಡುವುದು ಮತ್ತು ಸಿಖ್ಖರ ನಂಬಿಕೆ ಗಳಿಸುವುದು ಬಿಜೆಪಿಗೆ ಸವಾಲಾಗಿತ್ತು. ಇದನ್ನು ಮೆಟ್ಟಿ ನಿಲ್ಲಲು ಬಿಜೆಪಿ ಈಗ ಪ್ರಭಾವಿ ಸಿಖ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ, ಧಾರ್ಮಿಕ ಸಂಸ್ಥೆಗಳೊಂದಿಗೆ ಸಂಪರ್ಕ ಹೆಚ್ಚಿಸುತ್ತಿದೆ ಮತ್ತು ಪ್ರಾದೇಶಿಕ ಮೈತ್ರಿಕೂಟಗಳ ಹಂಗಿಲ್ಲದೆ ನೇರವಾಗಿ ಪಂಜಾಬ್ ಜನರೊಂದಿಗೆ ವ್ಯವಹರಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದೆ.

ರಾಜಕೀಯ ಸವಾಲುಗಳು

ಪಂಜಾಬ್ ರಾಜಕೀಯವು ಕೇವಲ ಅಭಿವೃದ್ಧಿಯ ವಿಷಯಗಳ ಮೇಲೆ ನಡೆಯುವುದಿಲ್ಲ. ಅಲ್ಲಿ ಅಸ್ಮಿತೆ, ಕೃಷಿ, ಒಕ್ಕೂಟ ವ್ಯವಸ್ಥೆ, ಇತಿಹಾಸ ಮತ್ತು ಪ್ರಾದೇಶಿಕ ಆಕಾಂಕ್ಷೆಗಳು ಆಳವಾಗಿ ಬೇರೂರಿವೆ. ಬಿಜೆಪಿ ತನ್ನ ಸಾಂಸ್ಥಿಕ ನೆಲೆಯನ್ನು ವಿಸ್ತರಿಸಿದ್ದರೂ, ಅದನ್ನು ಮತಗಳಾಗಿ ಪರಿವರ್ತಿಸುವುದು ಸವಾಲಿನ ಕೆಲಸವಾಗಿದೆ.
ಆದ್ದರಿಂದ ಜುಲೈ 17ರ ಪ್ರಧಾನಿ ಮೋದಿ ಅವರ ಭೇಟಿಯು ಕೇವಲ ಯೋಜನೆಗಳ ಉದ್ಘಾಟನೆಗಿಂತ ಹೆಚ್ಚಾಗಿ ರಾಜಕೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸಿಖ್ ಇತಿಹಾಸಕ್ಕೆ ಗೌರವ ನೀಡುವ, ಪಂಜಾಬ್‌ನ ಆಕಾಂಕ್ಷೆಗಳನ್ನು ಅರ್ಥೈಸಿಕೊಳ್ಳುವ ಬಿಜೆಪಿಯ ನಿರೂಪಣೆಯನ್ನು ಪ್ರಧಾನಿಯವರು ಸ್ವತಃ ಪ್ರತಿಪಾದಿಸಲು ಇದು ವೇದಿಕೆಯಾಗಲಿದೆ. ಈ ಸುದೀರ್ಘ ರಾಜಕೀಯ ತಂತ್ರಗಳು ಪಂಜಾಬ್ ರಾಜಕೀಯದ ಚಿತ್ರಣವನ್ನು ಬದಲಾಯಿಸುತ್ತವೆಯೇ ಎಂಬುದು ಚುನಾವಣಾ ಫಲಿತಾಂಶದ ನಂತರಷ್ಟೇ ತಿಳಿಯಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net