ಇಂದಿನಿಂದ ಚಳಿಗಾಲದ ಸಂಸತ್​ ಅಧಿವೇಶನ ಆರಂಭ; ಎಸ್​ಐಆರ್ ಕುರಿತು ಸಂಘರ್ಷ ಸಾಧ್ಯತೆ | Winter session

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಇಂದಿನಿಂದ(ಡಿ. 01) ಸಂಸತ್ತಿನ ಚಳಿಗಾಲ ಅಧಿವೇಶನ(Winter session) ಆರಂಭವಾಗುತ್ತಿದ್ದು, ಭಾರತೀಯ ಚುನಾವಣೆ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್​ಐಆರ್​) ಕುರಿತು ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ವಿಷಯವನ್ನು ಎತ್ತುವುದರ ಜೊತೆಗೆ, ವಿಶೇಷ ತೀವ್ರ ಪರಿಷ್ಕರಣೆ ಪಟ್ಟಿ (SIR), ದೆಹಲಿ ಕಾರು ಸ್ಫೋಟ ವಿಷಯದ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಎಸ್​ಐಆರ್ ಕುರಿತು ಚರ್ಚೆಗೆ ಸರ್ಕಾರ ಅವಕಾಶ ಕೊಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಬೆಳಗ್ಗೆ 10 ಗಂಟೆಗೆ ಸಂಸತ್​ ಬಳಿ ಪ್ರಧಾನಿ ಮೋದಿ ಅಧಿವೇಶನದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. 11 ಗಂಟೆಗೆ ಲೋಕಸಭೆ ಮತ್ತು ರಾಜ್ಯಸಭೆ ಸದನಗಳ ಕಲಾಪ ಆರಂಭವಾಗಲಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಭಾನುವಾರ(ನ. 30) ನಡೆದ ಸರ್ವಪಕ್ಷ ಸಭೆಯಲ್ಲಿ, ಕಾಂಗ್ರೆಸ್ ಮತ್ತು ಇತರ ಹಲವಾರು ವಿರೋಧ ಪಕ್ಷಗಳು ದೆಹಲಿ ಸ್ಫೋಟದ ನಂತರದ ರಾಷ್ಟ್ರೀಯ ಭದ್ರತೆ ಮತ್ತು ಹೆಚ್ಚುತ್ತಿರುವ ವಾಯುಮಾಲಿನ್ಯ ಸೇರಿದಂತೆ ಹಲವಾರು ಇತರ ವಿಷಯಗಳ ಕುರಿತು ಚರ್ಚೆಗೆ ಪ್ರಯತ್ನಿಸಿದವು, ಆದರೆ ರಾಷ್ಟ್ರವ್ಯಾಪಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಅವರ ಸಭೆಯ ಅಂಶವಾಗಿ ಹೊರಹೊಮ್ಮಿದೆ. ಅಧಿವೇಶನದಲ್ಲಿ ಹಲವಾರು ಹೊಸ ಮಸೂದೆಗಳನ್ನು ಮಂಡಿಸುವ ನಿರೀಕ್ಷೆಯಿದೆ. ಚಳಿಗಾಲದ ಅಧಿವೇಶನವು ನಾಳೆಯಿಂದ ಆರಂಭವಾಗಿ ಡಿ. 19 ರವರೆಗೆ ನಡೆಯುತ್ತದೆ.
ಎಸ್​ಐಆರ್ ಚರ್ಚೆ ಕುರಿತು ಮಾತನಾಡಿರುವ ಎಸ್​ಪಿ ಸಂಸದ ರಾಮ್ ಗೋಪಾಲ್ ಯಾದವ್, ಎಸ್‌ಐಆರ್ ಕುರಿತು ಚರ್ಚೆ ನಡೆಸದಿದ್ದರೆ ನಾವು ಸಂಸತ್ತು ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಮತದಾರ ಪಟ್ಟಿಗಳ ಪರಿಶೀಲನೆಯು ಅಕ್ರಮಗಳಿಂದ ಕೂಡಿದೆ ಮತ್ತು ಕೆಲವು ಬೂತ್ ಮಟ್ಟದ ಅಧಿಕಾರಿಗಳು ಒತ್ತಡದಿಂದಾಗಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ಅನೇಕ ಎಸ್‌ಪಿ ಶಾಸಕರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಸಿ ವರ್ಗಕ್ಕೆ ಸೇರಿಸಲಾಗಿದೆ. ಯಾಕಂದರೆ ವಿಪಕ್ಷಗಳ ಮತದಾರರನನ್ನು ಪಟ್ಟಿಯಿಂದ ಅಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net