ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಗ್ ಶಾಕ್: ಹಾರ್ದಿಕ್ ಪಾಂಡ್ಯ ವಿರುದ್ಧ FIR ದಾಖಲಿಸಲು ದೂರು! ಅಸಲಿಗೆ ಕಾರಣವೇನು? | Hardik Pandya

Hardik Pandya
Hardik Pandya
Published on
ಪುಣೆ: ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಗೆದ್ದು ಐತಿಹಾಸಿಕ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಬೆನ್ನಲ್ಲೇ, ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು,ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ ವಿಜಯೋತ್ಸವದ ವೇಳೆ ರಾಷ್ಟ್ರಧ್ವಜಕ್ಕೆ ಅಪಚಾರ ಎಸಗಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಪುಣೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ
ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದ ನಂತರ, ಇಡೀ ತಂಡ ಮೈದಾನದಲ್ಲಿ ಸಂಭ್ರಮಿಸುತ್ತಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಅವರು ತ್ರಿವರ್ಣ ಧ್ವಜವನ್ನು ತಮ್ಮ ಮೈಮೇಲೆ ಸುತ್ತಿಕೊಂಡಿದ್ದರು. ಈ ವರ್ತನೆಯು ರಾಷ್ಟ್ರಧ್ವಜದ ಘನತೆಗೆ ಕುಂದು ತಂದಿದೆ ಮತ್ತು ಇದು 'ಅಸಭ್ಯ ವರ್ತನೆ'ಯಾಗಿದೆ ಎಂದು ಆರೋಪಿಸಿ ವಕೀಲ ವಾಜಿದ್ ಖಾನ್ ಅವರು ಪುಣೆಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

"ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಕೇವಲ ಪ್ರದರ್ಶಿಸದೆ, ಅದನ್ನು ತಮ್ಮ ದೇಹಕ್ಕೆ ಬಟ್ಟೆಯಂತೆ ಸುತ್ತಿಕೊಂಡಿದ್ದಾರೆ. ಇದು ಭಾರತೀಯ ಧ್ವಜ ಸಂಹಿತೆಯ ಉಲ್ಲಂಘನೆಯಾಗಿದೆ. ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ಕೃತ್ಯವು ಕಾನೂನುಬಾಹಿರವಾಗಿದ್ದು, ಅವರ ವಿರುದ್ಧ ತಕ್ಷಣವೇ FIR ದಾಖಲಿಸಬೇಕು," ಎಂದು ವಾಜಿದ್ ಖಾನ್ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಕಾನೂನು ತಜ್ಞರ ಅಭಿಪ್ರಾಯ

ಭಾರತದ ರಾಷ್ಟ್ರ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971ರ ಪ್ರಕಾರ, ರಾಷ್ಟ್ರಧ್ವಜವನ್ನು ಸೊಂಟದ ಕೆಳಗೆ ಧರಿಸುವುದು ಅಥವಾ ಬಟ್ಟೆಯಂತೆ ಮೈಮೇಲೆ ಸುತ್ತಿಕೊಳ್ಳುವುದು ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಈ ಹಿಂದೆ ಅನೇಕ ಸೆಲೆಬ್ರಿಟಿಗಳು ಇಂತಹದ್ದೇ ಕಾರಣಕ್ಕೆ ಕಾನೂನು ಸಂಕಷ್ಟ ಎದುರಿಸಿದ್ದಾರೆ.
ಒಂದೆಡೆ ವಿವಾದದ ಕಾವು ಏರುತ್ತಿದ್ದರೆ, ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಟೂರ್ನಿಯಲ್ಲಿ 9 ವಿಕೆಟ್ ಪಡೆದ ಪಾಂಡ್ಯ, ಬ್ಯಾಟಿಂಗ್‌ನಲ್ಲೂ ಮಿಂಚಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. 2024ರ ವಿಶ್ವಕಪ್ ವಿಜಯದ ನಂತರ, ಸತತ ಎರಡನೇ ಬಾರಿಗೆ (2026) ವಿಶ್ವಕಪ್ ಗೆದ್ದ ಸಾಧನೆಯಲ್ಲಿ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. 2026ರ ಟಿ20 ವಿಶ್ವಕಪ್‌ನ ಐಸಿಸಿ 'ಟೀಮ್ ಆಫ್ ದಿ ಟೂರ್ನಮೆಂಟ್'ನಲ್ಲಿ ಸ್ಥಾನ ಪಡೆದ ನಾಲ್ವರು ಭಾರತೀಯರಲ್ಲಿ ಪಾಂಡ್ಯ ಒಬ್ಬರು.

ಪಾಂಡ್ಯ ಅವರ ಪ್ರತಿಕ್ರಿಯೆ

ಗೆಲುವಿನ ನಂತರ ಮಾತನಾಡಿದ್ದ ಪಾಂಡ್ಯ, "2024ರಲ್ಲಿ ಬಾರ್ಬಡೋಸ್‌ನಲ್ಲಿ ಗೆದ್ದಾಗ ನಾನು ನನಗೆ ಒಂದು ಭರವಸೆ ನೀಡಿದ್ದೆ. ಯಾವುದೇ ಟೂರ್ನಿ ಆಡಿದರೂ ಭಾರತಕ್ಕಾಗಿ ಟ್ರೋಫಿ ಗೆಲ್ಲುವುದೇ ನನ್ನ ಗುರಿ ಎಂದು. ಈಗ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ಸೋಲಿಸಿ ಗೆದ್ದಿರುವುದು ನನ್ನ ಹಳೆಯ ನೋವುಗಳಿಗೆ ಮತ್ತು ಸವಾಲುಗಳಿಗೆ ಸಿಕ್ಕ ಪ್ರತಿಫಲ," ಎಂದಿದ್ದರು. ಆದರೆ, ಈಗ ಈ ಹೊಸ ಕಾನೂನು ಸಂಕಷ್ಟ ಅವರ ಗೆಲುವಿನ ಸಂಭ್ರಮಕ್ಕೆ ತಣ್ಣೀರು ಎರಚುವ ಸಾಧ್ಯತೆಯಿದೆ,(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net