ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಎರಡು ಬಣಗಳು ಒಂದಾಗುತ್ತವೆಯೇ?: ವಿಲೀನದ ಊಹಾಪೋಹಗಳಿಗೆ ಸುಪ್ರಿಯಾ ಸುಳೆ ನೀಡಿದ ಸ್ಪಷ್ಟನೆ ಇಲ್ಲಿದೆ.. Supriya Sule

ಅಜಿತ್ ಪವಾರ್, ಸುಪ್ರಿಯಾ ಸುಳೆ, ದೇವೇಂದ್ರ ಫಡ್ನವೀಸ್
ಅಜಿತ್ ಪವಾರ್, ಸುಪ್ರಿಯಾ ಸುಳೆ, ದೇವೇಂದ್ರ ಫಡ್ನವೀಸ್
Published on
ಪುಣೆ: ಭಾನುವಾರ (ಜ.11) ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ (Supriya Sule) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಾಯಕತ್ವದಲ್ಲಿ ನಂಬಿಕೆ ಇರುವುದಾಗಿ ಹೇಳಿದ್ದಾರೆ.
ಅಜಿತ್​ ಪವಾರ್​ ಅವರ ಪಕ್ಷದ ಸಿದ್ಧಾಂತವು ತಮ್ಮ ಪಕ್ಷದಂತೆಯೇ ಇದೆ ಎಂದ ಸುಪ್ರಿಯಾ, ಎರಡು ಎನ್‌ಸಿಪಿ ಬಣಗಳ ನಡುವಿನ ವಿಲೀನದ ಊಹಾಪೋಹಗಳನ್ನು ತಿರಸ್ಕರಿಸಿದರು. ಅಂತಹ ಯಾವುದೇ ಪ್ರಸ್ತಾಪವನ್ನು ಇಲ್ಲಿಯವರೆಗೆ ಯಾರೂ ಮಾಡಿಲ್ಲ ಎಂದು ಹೇಳಿದರು. ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಸಂಸದೆ, ಉಭಯ ಎನ್‌ಸಿಪಿ ಪಕ್ಷಗಳ ವಿಲೀನವನ್ನು ಶರದ್ ಪವಾರ್ ಅನುಮೋದಿಸಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದರು.
ಅಂತಹ ವಿಷಯಗಳನ್ನು ತಮ್ಮ ಮನೆಯಲ್ಲಿ ಎಂದಿಗೂ ಚರ್ಚಿಸಲಾಗಿಲ್ಲ ಮತ್ತು ತಮ್ಮ ಪಕ್ಷವು ಪ್ರಸ್ತುತ ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಎರಡು ಎನ್‌ಸಿಪಿ ಬಣಗಳು ಮೈತ್ರಿ ಮಾಡಿಕೊಂಡಿರುವುದು ಪುರಸಭೆ ಚುನಾವಣೆಗಾಗಿ ಮಾತ್ರ ಎಂದು ಹೇಳಿದರು. ನಾವು ರಾಜ್ಯಕ್ಕೆ ಸೇವೆ ಸಲ್ಲಿಸಲು ಒಟ್ಟಿಗೆ ಬಂದಿದ್ದೇವೆ. ನಾವು ಅಜಿತ್ ಪವಾರ್ ನೇತೃತ್ವದಲ್ಲಿ ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ಎನ್‌ಸಿಪಿ (ಅಜಿತ್ ಪವಾರ್) ಮತ್ತು ನಮ್ಮ ಸಿದ್ಧಾಂತ ಒಂದೇ ಎಂದು ಅವರು ಹೇಳಿದರು.
ಪಕ್ಷ ವಿಲೀನದ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಇದಕ್ಕೆ ಕಾಲ ಮಾತ್ರ ಉತ್ತರಿಸಲು ಸಾಧ್ಯ, ನಾನು ಊಹಿಸಲು ಬಯಸುವುದಿಲ್ಲ ಸಧ್ಯ ನಾವು ಎರಡು ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಮಾತ್ರ ಒಟ್ಟಿಗೆ ಸ್ಪರ್ಧಿಸುತ್ತಿದ್ದೇವೆ ಎಂದರು.

ಬಿಜೆಪಿ ಮತ್ತು ಫಡ್ನವೀಸ್ ವಿರುದ್ಧ ವಾಗ್ದಾಳಿ

ಸಂದರ್ಶನದಲ್ಲಿ, ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಸರಿ ಪಕ್ಷವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಣ ಮತ್ತು ಸ್ನಾಯುಬಲ ಬಳಸುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು ಆದರೆ ಅವರದೇ ಪಕ್ಷ ಮಹಾರಾಷ್ಟ್ರದಲ್ಲಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ ಆದರೆ ಇಲ್ಲಿಯವರೆಗೆ ಮುಂಬೈಯನ್ನು ಗುಂಡಿ ಮುಕ್ತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಸುಳೆ ಆರೋಪಿಸಿದರು. ಮಹಾರಾಷ್ಟ್ರದಲ್ಲಿ ಅವಿಭಜಿತ ಎನ್‌ಸಿಪಿ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅವರು ಮುಂಬೈನಲ್ಲಿ ವಸತಿ ಸೌಲಭ್ಯಗಳನ್ನು ಒದಗಿಸಿದ ಕುರಿತು ಹೇಳಿದರು.
ಮುಂಬೈಯನ್ನು ರೋಹಿಂಗ್ಯಾಗಳು ಮತ್ತು ಅಕ್ರಮ ಬಾಂಗ್ಲಾದೇಶಿಗಳಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿದ್ದನ್ನು ಸುಳೆ ಟೀಕಿಸಿದರು. ಗೃಹ ಸಚಿವಾಲಯವನ್ನು ಯಾರ ಹಿಡಿತದಲ್ಲಿದೆ? ಕೇಂದ್ರ ಮತ್ತು ರಾಜ್ಯ, ಗೃಹ ಸಚಿವಾಲಯ ನಿಮ್ಮಬಳಿಯಿದೆ. ಆದ್ದರಿಂದ ನೀವು ಮಾತ್ರ ಇದಕ್ಕೆ ಉತ್ತರಿಸಬೇಕು. ರಾಷ್ಟ್ರೀಯ ಭದ್ರತೆ ಮತ್ತು ಗಡಿ ಭದ್ರತೆ ಬಿಜೆಪಿಯ ಬಳಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಬಿಜೆಪಿಯ ನೇತೃತ್ವದಲ್ಲಿವೆ. ಆದ್ದರಿಂದ, ಬಿಜೆಪಿ ಈ ಪ್ರಶ್ನಗೆ ಉತ್ತರಿಸಬೇಕು ಎಂದು ಅವರು ತಿಳಿಸಿದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net