ಎಂಜಿಆರ್ ಇರುವವರೆಗೆ ನೀರಿನ ಸಮಸ್ಯೆ ತಲೆದೋರಿದಾಗೆಲ್ಲಾ ಕರ್ನಾಟಕದ ಮುಖ್ಯಮಂತ್ರಿಗಳ ಜತೆ ನೇರವಾಗಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದರು. ಡಿಎಂಕೆ ನಾಯಕ ಕರುಣಾನಿಧಿ ನುರಿತ ರಾಜಕಾರಣಿ ನಿಜ. ಆದರೆ ದಶಕದ ಹಿಂದೆ ಹಿಡಿದ ರಾಜಕೀಯ ಗ್ರಹಣದಿಂದ ಹೊರಬರಲು ಕಾವೇರಿ ವಿವಾದವನ್ನು ಬೀದಿಗೆ ತರುವುದು ಲಾಭಕರ ಎಂದವರು ಲೆಕ್ಕಹಾಕಿದರೆ, ತಮ್ಮ ಕರ್ನಾಟಕ ಮೂಲವೇ ತಮ್ಮ ರಾಜಕೀಯ ಆಸೆಗಳಿಗೆ ಮುಳುವಾಗಬಹುದೆಂದು ಶಂಕಿಸಿದ ಜಯಲಲಿತಾ, ಕಾವೇರಿ ವಿವಾದದಲ್ಲಿ ತಾವು ಕರ್ನಾಟಕದ ವಿರುದ್ಧವಾಗಿ ನಡೆದಷ್ಟೂ ತಮಿಳರು ತಮ್ಮನ್ನು ‘ಪುರಚ್ಚಿ ತಲೈವರ್’ರ ನಿಜವಾದ ಉತ್ತರಾಧಿಕಾರಿಯೆಂದೂ, ‘ಅಣ್ಣಾಚ್ಚಿ’ಯವರ ಅಭಿಮಾನಿಗಳ ‘ಅಣ್ಣಿ’ಯೆಂದೂ, ಅಂತಿಮವಾಗಿ ತಮ್ಮನ್ನು ‘ಪುರಚ್ಚಿ ತಲೈವಿ’ಯೆಂದೂ ತಮಿಳುನಾಡಿನ ಜನತೆ ಸ್ವೀಕರಿಸಿಬಿಡುತ್ತಾರೆಂದು ಭವಿಷ್ಯ ಕಂಡರು. ಅವರ ವಿರುದ್ಧ ರಾಜಕೀಯ ರಣತಂತ್ರಗಳನ್ನು ಪೇರಿಸಲು, 1988ರ ವಿಧಾನಸಭಾ ಚುನಾವಣೆಗಳಲ್ಲಿ ದಕ್ಕಿದ ಅನಿರೀಕ್ಷಿತ ಗೆಲುವನ್ನು ಶಾಶ್ವತಗೊಳಿಸಿಕೊಳ್ಳಲು ಹೊರಟ ಕರುಣಾನಿಧಿ, ವಿ.ಪಿ. ಸಿಂಗ್ರ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿ ಸೇರಿ, ಬೆಂಬಲಕ್ಕೆ ಪ್ರತಿಯಾಗಿ ಸಿಂಗ್ ಸರ್ಕಾರದಿಂದ ಕಾವೇರಿ ವಿವಾದವನ್ನು ಬಗೆಹರಿಸುವುದಕ್ಕಾಗಿ ಟ್ರಿಬ್ಯೂನಲ್ ರಚಿಸುವಂತೆ ಒತ್ತಾಯಿಸಿ ಯಶಸ್ವಿಯಾದರು. ಅದನ್ನವರು ಲೋಕಸಭೆ, ವಿಧಾನಸಭೆ ಹಾಗೂ ತಮಿಳುನಾಡಿನ ಬೀದಿಬೀದಿಗಳಲ್ಲಿ ಆಚರಿಸಿದ್ದು ಈಗ ಇತಿಹಾಸ.