ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುತ್ತೇನೆ!.. ವದಂತಿ ನಂಬಿ ಇಂಧನಕ್ಕೆ ಮುಗಿಬಿದ್ದವರಿಗೆ ಸಿಎಂ ಅಬ್ದುಲ್ಲಾ ಖಡಕ್ ವಾರ್ನಿಂಗ್ | Omar Abdullah

Omar Abdullah |  ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Omar Abdullah | ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Published on
ಶ್ರೀನಗರ: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳನ್ನು ನಂಬಿ ಸಾರ್ವಜನಿಕರು ಆತಂಕದಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಮುಗಿಬೀಳುತ್ತಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, ಪೆಟ್ರೋಲ್ ಪಂಪ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ಜನರು ಬಿಡದಿದ್ದರೆ, ಮುಂದಿನ ಕೆಲವು ದಿನಗಳವರೆಗೆ ಕೇಂದ್ರಾಡಳಿತ ಪ್ರದೇಶದಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಲು ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಅಶಾಂತಿಯಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಸಿಲಿಂಡರ್‌ಗಳ ಯಾವುದೇ ಕೊರತೆಯಿಲ್ಲ ಎಂದು ಜನರಿಗೆ ಭರವಸೆ ನೀಡಿರುವ ಅವರು, ಸರ್ಕಾರ ನೀಡುವ ಅಧಿಕೃತ ಮಾಹಿತಿಯನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ, ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ವದಂತಿಗಳನ್ನು ಜನರು ನಂಬುತ್ತಿರುವುದು ವಿಷಾದಕರ ಎಂದರು.
ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ದೇಶದ ಸನ್ನದ್ಧತೆಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆದಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಆನ್‌ಲೈನ್ ಸಭೆಯಲ್ಲಿ ತಾವು ಭಾಗವಹಿಸುವುದಾಗಿ ಇದೇ ವೇಳೆ ಒಮರ್ ಅಬ್ದುಲ್ಲಾ ಖಚಿತಪಡಿಸಿದ್ದು, ಬಳಕೆಯನ್ನು ಕಡಿಮೆ ಮಾಡಲು ಅಥವಾ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಬಗ್ಗೆ ಕೇಂದ್ರದಿಂದ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎಂಗಳೊಂದಿಗೆ ಪ್ರಧಾನಿ ಮೋದಿ ಸಭೆ

ಪ್ರಧಾನಿ ಮೋದಿಯವರು ನಡೆಸಲಿರುವ ಈ ರಾಷ್ಟ್ರವ್ಯಾಪಿ ಪರಿಶೀಲನಾ ಸಭೆಯಿಂದ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾದರಿ ನೀತಿ ಸಂಹಿತೆಯ ಕಾರಣದಿಂದ ವಿನಾಯಿತಿ ನೀಡಲಾಗಿದೆ.
ಈ ರಾಜ್ಯಗಳ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಮುಖ್ಯ ಕಾರ್ಯದರ್ಶಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯುದ್ಧದ ನಾಲ್ಕನೇ ವಾರದಲ್ಲಿ ಭಾರತದ ಆರ್ಥಿಕ ಮತ್ತು ಇಂಧನ ಸುರಕ್ಷತೆಯನ್ನು ಕಾಪಾಡುವುದು ಈ ಎಲ್ಲಾ ಸಭೆಗಳ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net