ವಿಜಯ್​​ ಸರ್ಕಾರದ ಆಯಸ್ಸು ಕೇವಲ 6 ತಿಂಗಳು!...ಆ ಶಾಸಕರನ್ನ ಮಂತ್ರಿ ಮಾಡಿದ್ರೆ ಸಿಬಿಐ ತನಿಖೆ ಗ್ಯಾರಂಟಿ ಎಂದು ದಿನಕರನ್​ ಎಚ್ಚರಿಕೆ | TTV Dhinakaran

TTV Dhinakaran | ಎಎಮ್‌ಎಂಕೆ ಪಕ್ಷದ ಮುಖ್ಯಸ್ಥ ಟಿ.ಟಿ.ವಿ. ದಿನಕರನ್
TTV Dhinakaran | ಎಎಮ್‌ಎಂಕೆ ಪಕ್ಷದ ಮುಖ್ಯಸ್ಥ ಟಿ.ಟಿ.ವಿ. ದಿನಕರನ್
Published on
TTV Dhinakaran: ಎಎಮ್‌ಎಂಕೆ ಪಕ್ಷದಿಂದ ಗೆದ್ದು ಸದ್ಯ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ಶಾಸಕ ಎಸ್. ಕಾಮರಾಜ್​ರನ್ನು ಮಂತ್ರಿ ಮಾಡಿದರೆ, ಶಾಸಕರ ಖರೀದಿ ಆರೋಪದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಪಕ್ಷದ ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ವಿಜಯ್ ಮಂಡಿಸಿದ ವಿಶ್ವಾಸಮತ ಯಾಚನೆ ವೇಳೆ ಸರ್ಕಾರದ ಪರವಾಗಿ ಮತ ಚಲಾಯಿಸಿದ ಮನ್ನಾರ್ಗುಡಿಯ ಏಕೈಕ ಎಎಮ್‌ಎಂಕೆ ಶಾಸಕ ಎಸ್. ಕಾಮರಾಜ್​ರನ್ನು, ದಿನಕರನ್ ಪಕ್ಷದಿಂದ ವಜಾಗೊಳಿಸಿದ ಕೆಲವೇ ದಿನಗಳ ಬಳಿಕ ಟಿವಿಕೆ ಸರ್ಕಾರಕ್ಕೆ ಈ ಹೊಸ ಶಾಕ್ ನೀಡಿದ್ದಾರೆ.
ಶಾಸಕ ಕಾಮರಾಜ್ ಮತ ಪಡೆಯಲು ಟಿವಿಕೆ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ದಿನಕರನ್ ಆರೋಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಈ ವೇಳೆ ಸಣ್ಣ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ಬಹುಮತದ ಗಡಿಯನ್ನು ದಾಟುವಲ್ಲಿ ಯಶಸ್ವಿಯಾಯಿತು.
ಕಾಮರಾಜ್ ಬೆಂಬಲವನ್ನು ಪಡೆಯಲು ಟಿವಿಕೆ ಪಕ್ಷವು ನಕಲಿ ಪತ್ರ ಮತ್ತು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ವಿಡಿಯೋವನ್ನು ಬಳಸಿಕೊಂಡಿದೆ ಎಂದು ದಿನಕರನ್ ಆರೋಪಿಸಿದ್ದು, ನಮ್ಮ ಶಾಸಕರೊಂದಿಗೆ ಟಿವಿಕೆ ನಾಯಕರು ಏನೇನು ಮಾತುಕತೆ ನಡೆಸಿದ್ದಾರೆ, ಯಾವ ರೀತಿಯ ಆಮಿಷವೊಡ್ಡಿ ಸೆಳೆದುಕೊಂಡಿದೆ ಎನ್ನುವುದು ನಮಗೆ ಗೊತ್ತಿದ್ದು, ಇದು ಕುದುರೆ ವ್ಯಾಪಾರವಲ್ಲದೆ ಇನ್ನೇನು ಎಂದು ಟಿಟಿವಿ ಪ್ರಶ್ನಿಸಿದ್ದಾರೆ.

ಟಿವಿಕೆ ಸರ್ಕಾರ ಅಲ್ಪಾವಧಿಯದ್ದು...

ಟಿವಿಕೆ ಸರ್ಕಾರದತ್ತ ಆಯುಷ್ಯದ ಬಗ್ಗೆ ಮಾತನಾಡಿರುವ ದಿನಕರನ್, ಮುಖ್ಯಮಂತ್ರಿ ವಿಜಯ್​ಗೆ ಆರು ತಿಂಗಳಿಗಿಂತ ಹೆಚ್ಚು ಕಾಲ ಆಡಳಿತವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದು, ಈ ಸರ್ಕಾರದ ಆಯಸ್ಸು ಈಗಾಗಲೇ ಡೋಲಾಯಮಾನವಾಗಿದ್ದು, ಇದು ಖಂಡಿತವಾಗಿಯೂ ಆ ಪಕ್ಷಕ್ಕೆ ಕೆಟ್ಟ ಸಮಯ ಎಂದು ಹೇಳಿದ್ದಾರೆ.
ರಾಜ್ಯದ ನಿರಂತರ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಿಂದಾಗಿ, ತಲಾ ಇಬ್ಬರು ಮತ್ತು ನಾಲ್ಕು ಶಾಸಕರನ್ನು ಹೊಂದಿರುವ ವಿಸಿಕೆ (VCK) ಮತ್ತು ಎಡಪಕ್ಷಗಳು ಆರು ತಿಂಗಳಿಗಿಂತ ಹೆಚ್ಚು ಕಾಲ ಸರ್ಕಾರವನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ ಎಂದರು. ವಿಶ್ವಾಸಮತ ಪರೀಕ್ಷೆಯಲ್ಲಿ ಜಯಗಳಿಸಿದ ಬಳಿಕ ಟಿವಿಕೆ ಸರ್ಕಾರವು ಕನಿಷ್ಠ ನವೆಂಬರ್ ವರೆಗೆ ಸ್ಥಿರವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಡಿಎಂಕೆ ಕೂಡ ಕನಿಷ್ಠ ಆರು ತಿಂಗಳವರೆಗೆ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗುವುದಿಲ್ಲ ಎಂದು ದಿನಕರನ್​ ಭವಿಷ್ಯ ನುಡಿದಿದ್ದಾರೆ.

ಅಣ್ಣಾಡಿಎಂಕೆ ಬಂಡಾಯ ಶಾಸಕರಿಗೆ ಅನರ್ಹತೆಯ ಭೀತಿ

ಅಣ್ಣಾಡಿಎಂಕೆ (AIADMK) ಪಕ್ಷದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಮಾತನಾಡಿದ ದಿನಕರನ್, ಪಕ್ಷಾಂತರ ವಿರೋಧಿ ಕಾಯ್ದೆಯಿಂದ ಪಾರಾಗಲು ಅಗತ್ಯವಿರುವಷ್ಟು ಸಂಖ್ಯಾಬಲ ಬಂಡಾಯ ಶಾಸಕರ ಬಳಿ ಇಲ್ಲ ಎಂದು ಹೇಳಿದರು. ದಿನಕರನ್ ಇ. ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆ ಬಣದ ಮಿತ್ರರಾಗಿದ್ದಾರೆ.
ಅಣ್ಣಾಡಿಎಂಕೆ ಒಟ್ಟು 47 ಶಾಸಕರನ್ನು ಹೊಂದಿದ್ದು, ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಬಂಡಾಯ ಬಣಕ್ಕೆ 25 ಶಾಸಕರ ಬೆಂಬಲವಿದೆ. ಆದರೆ, ಅನರ್ಹತೆಯಿಂದ ಪಾರಾಗಲು ಅವರಿಗೆ 32 ಶಾಸಕರ ಬೆಂಬಲದ ಅಗತ್ಯವಿದೆ. ಅಮ್ಮ (ಜಯಲಲಿತಾ) ಅವರ ಸರ್ಕಾರವನ್ನು ಮರುಸ್ಥಾಪಿಸುವ ಹೆಸರಿನಲ್ಲಿ ಟಿವಿಕೆ ಸರ್ಕಾರವನ್ನು ಬೆಂಬಲಿಸುತ್ತಿರುವ ಬಂಡಾಯಗಾರರು ಮತ್ತು ಅವರನ್ನು ಬೆಂಬಲಿಸುವ ಕಾರ್ಯಕರ್ತರ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಟಿಟಿವಿ ತಿಳಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net