ಪೆಲೆಟ್ ಗನ್, ಲಾಠಿ ಪ್ರಹಾರಕ್ಕೆ ಅಮಿತ್ ಷಾ ನೇರ ಹೊಣೆ; ಬಿಜೆಪಿ, ಆರ್‌ಎಸ್‌ಎಸ್‌ಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದ ರಾಹುಲ್ | Rahul Gandhi

 Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಲು ಆದೇಶಿಸಿದ್ದಾರೆ ಎಂದು ಲೋಕಸಭೆಯಲ್ಲಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನಿರಾಕರಿಸಿದ್ದಾರೆ. ಪೇಪರ್ ಲೀಕ್ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ತಮ್ಮನ್ನು ಮಾತನಾಡದಂತೆ ಪದೇ ಪದೇ ತಡೆಯಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಸದನ ಮುಂದೂಡಲ್ಪಟ್ಟ ಬಳಿಕ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಸದನದಲ್ಲಿ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ರಾಜನಾಥ್ ಸಿಂಗ್ ಮತ್ತು ಕಿರಣ್ ರಿಜಿಜು ಅವರಿಗೆ ಹಲವು ಬಾರಿ ಮಾತನಾಡಲು ಅವಕಾಶ ನೀಡಲಾಯಿತು. ನಾನು ಕ್ಷಮೆಯಾಚಿಸಿದರೆ ಮಾತನಾಡುವುದನ್ನು ಮುಂದುವರಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ನಾನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದರು.
ವಿರೋಧ ಪಕ್ಷದ ನಾಯಕನಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ ರಾಹುಲ್​, ನೀಟ್ ಪೇಪರ್ ಲೀಕ್ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವು ದೇಶದ ಮುಂದಿರುವ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು. ತಮ್ಮ ಆರೋಪಗಳನ್ನು ಪುನರುಚ್ಚರಿಸಿದ ಅವರು, ಪೆಲೆಟ್ ಗನ್‌ನಿಂದ ಗಾಯಗೊಂಡ ಒಬ್ಬ ಹುಡುಗ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಹಂತದಲ್ಲಿದ್ದಾನೆ. ಆತನಿಗೆ ಪೆಲೆಟ್ ಗನ್‌ನಿಂದ ಗಾಯವಾಗಿದೆ ಎಂದು ತೋರಿಸುವ ಏಮ್ಸ್ ವೈದ್ಯಕೀಯ ಪ್ರಮಾಣಪತ್ರವನ್ನು ನಾನು ನೋಡಿದ್ದೇನೆ ಎಂದರು.

ಪೊಲೀಸರಿಗೆ ಈ ರೀತಿಯ ಆಲೋಚನೆ ಎಲ್ಲಿಂದ ಬಂತು..?

ಅಷ್ಟೇ ಅಲ್ಲದೆ, ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರು ಸೇರಿದಂತೆ ಪ್ರತಿಭಟನಾಕಾರರ ಮೇಲಿನ ಕಾರ್ಯಾಚರಣೆಯ ವೇಳೆ ಪೊಲೀಸರು ಶಾಕ್ ಬ್ಯಾಟನ್ ಹಾಗೂ ಮೊಳೆಗಳಿರುವ ಲಾಠಿಗಳನ್ನು ಬಳಸಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದರು. ಪೊಲೀಸರಿಗೆ ಈ ರೀತಿಯ ಆಲೋಚನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರರೊಬ್ಬರಿಗೆ ಕೆನ್ನೆಗೆ ಹೊಡೆಯುವುದನ್ನು ತಾವು ಕಂಡಿದ್ದಾಗಿ ತಿಳಿಸಿದರು.
ಇದೇ ವೇಳೆ ಗೃಹ ಸಚಿವ ಅಮಿತ್ ಷಾ ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೇರ ನಿರ್ದೇಶನ ನೀಡುತ್ತಿರುವುದನ್ನು ತಾವು ವೈಯಕ್ತಿಕವಾಗಿ ನೋಡಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದರು. ನಾವು ಸಂಸತ್ ಭವನದಲ್ಲಿದ್ದಾಗ ಅಮಿತ್ ಷಾ ಅವರು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡುತ್ತಿರುವುದನ್ನು ನಾನು ನನ್ನ ಕಣ್ಣಾರೆ ಕಂಡಿದ್ದೇನೆ. ಜಿತೇಂದ್ರ ಸಿಂಗ್ ಅವರಿಗೆ ಷಾ ಅವರಿಂದ ಸಾಲು ಸಾಲು ಕರೆಗಳು ಬರುತ್ತಿದ್ದುದನ್ನು ನಾನು ನೋಡಿದ್ದೇನೆ. ಹಾಗಾಗಿ ರಸ್ತೆಯಲ್ಲಿ ಏನು ನಡೆಯುತ್ತಿದೆ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು ಎಂದು ಹೇಳಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಲು ಅಮಿತ್ ಷಾ ಆದೇಶಿಸಿದ್ದಾರೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದ ಕೆಲವೇ ಗಂಟೆಗಳ ನಂತರ ಈ ಪತ್ರಿಕಾಗೋಷ್ಠಿ ನಡೆದಿದೆ. ಈ ಆರೋಪಗಳು ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದ್ದವು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ತಮ್ಮ ಆರೋಪಗಳಿಗೆ ಆಧಾರ ಒದಗಿಸಬೇಕೆಂದು ಆಗ್ರಹಿಸಿದ್ದರು. ಇನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಈ ಆರೋಪಗಳನ್ನು ವಾಸ್ತವಕ್ಕೆ ದೂರವಾದದ್ದು ಎಂದು ತಳ್ಳಿಹಾಕಿದ್ದು, ಪ್ರತಿಭಟನೆಯ ವೇಳೆ ಯಾವುದೇ ಗುಂಡು ಹಾರಿಸಿಲ್ಲ ಹಾಗೂ ಗುಂಡು ಹಾರಿಸಲು ಯಾವುದೇ ಆದೇಶ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net