ಸಂಪುಟದಿಂದ ವಜಾಗೊಂಡ ಕೊಂಡ ಸುರೇಖಾ ಕಮಲ ಮುಡೀತಾರಾ..? ಬಿಜೆಪಿ ಸಂಸದೆ ಅರುಣಾ ಹೇಳಿದ್ದೇನು..? | Konda Surekha

Konda Surekha | ಸಂಪುಟದಿಂದ ವಜಾಗೊಂಡ ಕೊಂಡ ಸುರೇಖಾ ಕಮಲ ಮುಡೀತಾರಾ..? ಬಿಜೆಪಿ ಸಂಸದೆ ಅರುಣಾ ಹೇಳಿದ್ದೇನು..?
Konda Surekha | ಸಂಪುಟದಿಂದ ವಜಾಗೊಂಡ ಕೊಂಡ ಸುರೇಖಾ ಕಮಲ ಮುಡೀತಾರಾ..? ಬಿಜೆಪಿ ಸಂಸದೆ ಅರುಣಾ ಹೇಳಿದ್ದೇನು..?
Published on
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಸರ್ಕಾರದಲ್ಲಿ ಸಚಿವೆಯಾಗಿದ್ದ ಕೊಂಡ ಸುರೇಖಾ (Konda Surekha) ಅವರನ್ನು ಸಂಪುಟದಿಂದ ವಜಾ ಮಾಡಲಾಗಿದ್ದು, ಅವರ ಮುಂದಿನ ನಡೆ ಏನು ಎಂಬುದರ ಕುರಿತು ನಾನಾ ತರಹದ ಚರ್ಚೆಗಳ ಆರಂಭವಾಗಿವೆ. ಈ ವಿಷಯವಾಗಿ ಬಿಜೆಪಿ ಸಂಸದೆ ಡಿ ಕೆ ಅರುಣಾ ಪ್ರತಿಕ್ರಿಯೆ ನೀಡಿದ್ದಾರೆ.
ಕೊಂಡ ಸುರೇಖಾ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಮಾತನಾಡಿದ ಸಂಸದೆ ಅರುಣಾ, ಇಲ್ಲಿಯವರೆಗೆ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ಸುರೇಖಾ ಅವರು ಹಿರಿಯ ನಾಯಕಿಯಾಗಿದ್ದು, ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯವೇ ಅವರನ್ನು ಸಂಪುಟದಿಂದ ಕೈ ಬಿಡಲು ಪ್ರಮುಖ ಕಾರಣ, ಆ ಪಕ್ಷದಲ್ಲಿ ದಿನಕ್ಕೊಂದು ಆಂತರಿಕ ಕಲಹಗಳು ಹೊರಬರುತ್ತಿರುವುದು ಹೊಸದೇನಲ್ಲ ಎಂದಿದ್ದಾರೆ.
2009 ರಲ್ಲಿ ಇಬ್ಬರು ಸಚಿವರಾಗಿ ಒಟ್ಟಿಗೆ ಕೆಲಸ ಮಾಡಿದ್ದರೆಂದು ನೆನಪಿಸಿಕೊಂಡ ಅರುಣಾ, ಕೊಂಡ ಸುರೇಖಾ ಒಬ್ಬ ಹಿರಿಯ ನಾಯಕಿ. 2009 ರಲ್ಲಿ, ಅವರು ಮತ್ತು ನಾನು ಸಚಿವರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಸಹವರ್ತಿ ಮಹಿಳಾ ನಾಯಕಿಯೊಬ್ಬರು ತೆಲಂಗಾಣಕ್ಕೆ ಸಚಿವೆಯಾಗಿ ಸೇವೆ ಸಲ್ಲಿಸುವುದನ್ನು ಕಂಡು ನಮಗೆ ಸಂತೋಷವಾಗಿತ್ತು. ಅವರನ್ನು ವಜಾಗೊಳಿಸಿರುವುದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ ಎಂದು ಅರುಣಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳಿಗೆ ಬಹಳಷ್ಟು ಅನುಕೂಲ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ನಾನು ಕೂಡ ಅದೇ ವರ್ಗದ ಮಹಿಳೆ. ಸುರೇಖಾ ಅವರ ಮಗಳು ಏನೋ ಹೇಳಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ ಮತ್ತು ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಕಷ್ಟಗಳನ್ನು ಎದುರಿಸಿ ಮಹಿಳೆ ಉನ್ನತ ಸ್ಥಾನ ತಲುಪುವುದು ದೊಡ್ಡ ಸಾಧನೆ!

ರಾಜಕೀಯದ ಸವಾಲುಗಳು ಮತ್ತು ಸಂಕಷ್ಟಗಳನ್ನು ಎದುರಿಸಿ ಉನ್ನತ ಸ್ಥಾನ ತಲುಪುವುದು ಮಹಿಳೆಗೆ ದೊಡ್ಡ ಸಾಧನೆ ಎಂದಿರುವ ಬಿಜೆಪಿ ಸಂಸದೆ, ಮಹಿಳೆಯೊಬ್ಬರು ಇಷ್ಟೆಲ್ಲಾ ಕಷ್ಟಪಟ್ಟು ತಲುಪಿದ ಸ್ಥಾನದಿಂದ ಅವರನ್ನು ವಜಾಗೊಳಿಸಿರುವುದು ಸರಿಯಲ್ಲ ಎಂದಿದ್ದಾರೆ. ಆದಾಗ್ಯೂ, ಕೊಂಡ ಸುರೇಖಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಗಳ ವಿವಾದಾತ್ಮಕ ಹೇಳಿಕೆಗಳ ಬೆನ್ನಲ್ಲೇ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ರಾಜ್ಯ ಅರಣ್ಯ ಮತ್ತು ಧಾರ್ಮಿಕ ದತ್ತಿ ಸಚಿವೆಯಾಗಿದ್ದ ಕೊಂಡ ಸುರೇಖಾ ಅವರನ್ನು ಸಂಪುಟದಿಂದ ತಕ್ಷಣವೇ ವಜಾಗೊಳಿಸಿದ್ದಾರೆ. ಈ ಕುರಿತು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರಿಗೆ ಶಿಫಾರಸು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಸುರೇಖಾ ಮಗಳು, ಸಿಎಂ ಹಾಗೂ ಪಕ್ಷದ ನಾಯಕರ ವಿರುದ್ಧ ಮಾಡಿದ್ದ ಹೇಳಿಕೆಗಳು ಆಡಳಿತ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಸುರೇಖಾ ಅವರನ್ನು ವಜಾಗೊಳಿಸುವುದರ ಜೊತೆಗೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಜಿ. ಚಿನ್ನಾ ರೆಡ್ಡಿ ಅವರ ನೇಮಕವನ್ನೂ ರದ್ದುಗೊಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ಕೆ ಸಿ ವೇಣುಗೋಪಾಲ್ ಅವರೊಂದಿಗೆ ದೆಹಲಿಯಲ್ಲಿ ಸಿಎಂ ರೇವಂತ್ ರೆಡ್ಡಿ, ಡಿಸಿಎಂ ಮಲ್ಲು ಭಟ್ಟಿ ವಿಕ್ರಮಾರ್ಕ ಹಾಗೂ ಪಿಸಿ‍ಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ನಡೆಸಿದ ಸಭೆಯ ನಂತರ ಈ ನಿರ್ಧಾರ ಹೊರಬಿದ್ದಿದೆ. ಇಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ಮುಂಚಿತವಾಗಿಯೇ ಶಿಫಾರಸು ಮಾಡಿತ್ತು.

ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಕೊಂಡ ಸುರೇಖಾ

ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮೀನಾಕ್ಷಿ ನಟರಾಜನ್ ಅವರನ್ನು ಭೇಟಿಯಾದ ಕೊಂಡ ಸುರೇಖಾ, ತಮ್ಮ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದ ಕಾರಣ ಸಂಪುಟದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಮಗಳ ಹೇಳಿಕೆಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಪ್ರತಿಪಾದಿಸಿದ್ದ ಅವರು, ತಮ್ಮ ವಿರುದ್ಧ ಧ್ವನಿ ಎತ್ತಿರುವ ಶಾಸಕರ ಹಿಂದೆ ಯಾರೋ ಒಬ್ಬರು ಇದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ತಮ್ಮ ಮೇಲಿನ ಕ್ರಮದ ವಿರುದ್ಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಇಮೇಲ್ ಮೂಲಕ ದೂರು ನೀಡಿದ್ದರು.
ಇನ್ನೊಂದೆಡೆ, ಕಾಂಗ್ರೆಸ್ ಶಾಸಕರೊಬ್ಬರನ್ನು ಟೀಕಿಸಿದ್ದಕ್ಕಾಗಿ ಜಿ. ಚಿನ್ನಾ ರೆಡ್ಡಿ ಅವರ ಹುದ್ದೆಯನ್ನೂ ಸರ್ಕಾರ ರದ್ದುಗೊಳಿಸಿದೆ. ತೆರವಾದ ರಾಜ್ಯ ಯೋಜನಾ ಮಂಡಳಿಯ ನೂತನ ಉಪಾಧ್ಯಕ್ಷರನ್ನಾಗಿ ಗದ್ವಾಲ ವಿಜಯಲಕ್ಷ್ಮಿ ಅವರನ್ನು ನೇಮಿಸಲಾಗಿದ್ದು, ಮಾಜಿ ಸಂಸದೆ ಜಿ. ಸುಧಾ ರಾಣಿ ಅವರನ್ನು ವಾರಂಗಲ್‌ನ ಕಾಕತೀಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net