ಮುಂಬೈ ಬಿಟ್ಟು ಚೆನ್ನೈ ಸೇರ್ತಾರಾ ಹಾರ್ದಿಕ್ ಪಾಂಡ್ಯ?ಇನ್‌ಸ್ಟಾಗ್ರಾಮ್‌ನ ಆ ‘07:07’ ರಹಸ್ಯ ಸ್ಟೋರಿಯ ಅಸಲಿ ಕಥೆಯೇನು? Hardik Pandya

ಮುಂಬೈ ಬಿಟ್ಟು ಚೆನ್ನೈ ಸೇರ್ತಾರಾ ಹಾರ್ದಿಕ್ ಪಾಂಡ್ಯ?ಇನ್‌ಸ್ಟಾಗ್ರಾಮ್‌ನ ಆ ‘07:07’ ರಹಸ್ಯ ಸ್ಟೋರಿಯ ಅಸಲಿ ಕಥೆಯೇನು?
ಮುಂಬೈ ಬಿಟ್ಟು ಚೆನ್ನೈ ಸೇರ್ತಾರಾ ಹಾರ್ದಿಕ್ ಪಾಂಡ್ಯ?ಇನ್‌ಸ್ಟಾಗ್ರಾಮ್‌ನ ಆ ‘07:07’ ರಹಸ್ಯ ಸ್ಟೋರಿಯ ಅಸಲಿ ಕಥೆಯೇನು?
Published on
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ಯಾರೂ ಊಹಿಸದ ಕ್ರಾಂತಿಕಾರಿ ಆಟಗಾರರ ಅದಲು-ಬದಲು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ ಆಗಿದೆಯೇ ಎಂಬ ಚರ್ಚೆಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರೇ ದಾರಿ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಂಚಿಕೊಂಡಿರುವ ಒಂದು ಅತ್ಯಂತ ನಿಗೂಢ ಸ್ಟೋರಿ, ಅವರು ಮುಂಬೈ ಪಾಳಯವನ್ನು ತೊರೆದು ಅವರ ಕಡು ವೈರಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ವದಂತಿಗಳಿಗೆ ಭಾರಿ ತೀವ್ರತೆ ನೀಡಿದೆ.
ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೊಬೈಲ್ ಸ್ಕ್ರೀನ್‌ನ ಸಮಯವನ್ನು ತೋರಿಸುವ ಫೋಟೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘07:07’ (7 ಗಂಟೆ 7 ನಿಮಿಷ) ಎಂದು ನಮೂದಾಗಿದೆ. ಈ 'ನಂಬರ್ 7' ಭಾರತೀಯ ಕ್ರಿಕೆಟ್‌ನ ದೃವತಾರೆ ಹಾಗೂ ಸಿಎಸ್‌ಕೆ ತಂಡದ ಸಾರ್ವಕಾಲಿಕ ಲೆಜೆಂಡ್ ಎಂ.ಎಸ್. ಧೋನಿ ಅವರ ಜರ್ಸಿ ಸಂಖ್ಯೆಯಾಗಿದೆ. ಧೋನಿ ಮತ್ತು ಸಿಎಸ್‌ಕೆ ಸಾಮ್ರಾಜ್ಯವನ್ನು ನೇರವಾಗಿ ಉಲ್ಲೇಖಿಸುವ ಈ ಪೋಸ್ಟ್, ಐಪಿಎಲ್ ಕ್ರಿಕೆಟ್ ವಲಯದಲ್ಲಿ ಈಗ ಹೊಸ ಸಂಚಲನ ಮೂಡಿಸಿದೆ.
ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಜೊತೆಗಿನ ಆ ರಹಸ್ಯ ಸಭೆಯ ರಹಸ್ಯವೇನು?
ಹಾರ್ದಿಕ್ ಪಾಂಡ್ಯ ಅವರ ಈ ಸೋಶಿಯಲ್ ಮೀಡಿಯಾ ಆಕ್ಟಿವಿಟಿ ಕೇವಲ ಕಾಕತಾಳೀಯ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಕ್ರಿಕೆಟ್ ವಿಶ್ಲೇಷಕರು. ಏಕೆಂದರೆ, ಪ್ರಸಕ್ತ ಐಪಿಎಲ್ ಸೀಸನ್‌ನ ಲೀಗ್ ಹಂತದ ಪಂದ್ಯವೊಂದರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದಾಗ, ಪಂದ್ಯ ಮುಗಿದ ತಕ್ಷಣ ಹಾರ್ದಿಕ್ ಪಾಂಡ್ಯ ಅವರು ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಅವರೊಂದಿಗೆ ಸುದೀರ್ಘ ಹಾಗೂ ರಹಸ್ಯ ಮಾತುಕತೆ ನಡೆಸಿದ್ದರು. ಅಂದಿನ ವಿಡಿಯೋ ಮತ್ತು ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೇಡಿಂಗ್ ಕುರಿತು ಭಾರಿ ಚರ್ಚೆ ಹುಟ್ಟುಹಾಕಿದ್ದವು. ಈಗ ‘07:07’ ಪೋಸ್ಟ್ ಆ ಎಲ್ಲಾ ವದಂತಿಗಳಿಗೆ ಬೂಸ್ಟರ್ ಡೋಸ್ ನೀಡಿದಂತಾಗಿದೆ.

ಮುಂಬೈನಲ್ಲಿ ಹಾರ್ದಿಕ್ ವೈಫಲ್ಯ; ಸಿಎಸ್‌ಕೆಗೆ ನಾಯಕನ ಅವಶ್ಯಕತೆ!

ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ನಿರ್ಧಾರ ಹಾರ್ದಿಕ್ ಮತ್ತು ಮುಂಬೈ ಇಬ್ಬರಿಗೂ ವರ್ಕೌಟ್ ಆಗಿಲ್ಲ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮೂರು ಸೀಸನ್‌ಗಳ ಪೈಕಿ ಬರೋಬ್ಬರಿ ಎರಡು ಬಾರಿ ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪುವಲ್ಲಿ ಸಂಪೂರ್ಣ ವಿಫಲವಾಗಿ ಮುಖಭಂಗ ಅನುಭವಿಸಿದೆ. ಮುಂಬೈ ಅಭಿಮಾನಿಗಳಿಂದಲೂ ಹಾರ್ದಿಕ್ ನಿರಂತರ ಟ್ರೋಲ್ ಎದುರಿಸುತ್ತಿದ್ದಾರೆ.
ಮತ್ತೊಂದೆಡೆ, ಎಂ.ಎಸ್. ಧೋನಿ ನಂತರದ ಯುಗದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದ ಶೈಲಿಯ ಬಗ್ಗೆ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲವು ಅಸಮಾಧಾನಗಳಿದ್ದು, ಧೋನಿ ಅವರೊಂದಿಗೆ ಅತ್ಯಂತ ಆಪ್ತ ಹಾಗೂ ಗೌರವಾನ್ವಿತ ಬಾಂಧವ್ಯ ಹೊಂದಿರುವ ಹಾರ್ದಿಕ್ ಪಾಂಡ್ಯ ಸಿಎಸ್‌ಕೆ ತಂಡಕ್ಕೆ ಅತ್ಯಂತ ನೈಸರ್ಗಿಕವಾಗಿ ಹೊಂದಿಕೆಯಾಗಬಲ್ಲ ಆಟಗಾರ ಮತ್ತು ನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ.
ಸದ್ಯಕ್ಕೆ ಎರಡೂ ಫ್ರಾಂಚೈಸಿಗಳಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಮುಂದಿನ ಮೆಗಾ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಹಳದಿ ಜರ್ಸಿ ತೊಡುವುದು ಬಹುತೇಕ ಖಚಿತ ಎಂಬ ವಾತಾವರಣ ಸೃಷ್ಟಿಯಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಗಗನಕ್ಕೇರಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net