"ಖವಾಜಾ ಆಸಿಫ್ ಮನೆಗೆ ನುಗ್ಗಿ ಕೊಲ್ಲುತ್ತೇವೆ"; ಕೋಲ್ಕತ್ತಾಗೆ ಪಾಕಿಸ್ತಾನ ನೀಡಿದ ಬೆದರಿಕೆ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಖಡಕ್ ವಾರ್ನಿಂಗ್..Abhishek Banerjee​

Abhishek Banerjee
Abhishek Banerjee
Published on
ಕೋಲ್ಕತ್ತಾ: "ಮಮತಾ ಬ್ಯಾನರ್ಜಿ ಮತ್ತು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ದಿನ, ನಾವು ಅವರ ಮನೆಗೇ ನುಗ್ಗಿ ಅವರನ್ನು ಮುಗಿಸುತ್ತೇವೆ" ಎಂದು ಕೋಲ್ಕತ್ತಾ ಮೇಲಿನ ದಾಳಿ ಬಗ್ಗೆ ಮಾತನಾಡಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif Minister of Defence of Pakista) ಹೇಳಿಕೆ ವಿರುದ್ಧ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಿಡಿಕಾರಿದರು.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಮತದಾನ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳಿಂದ ಪ್ರಚಾರ ಕಾವೇರಿದೆ. ಸಿಲಗುರಿಯಲ್ಲಿ ತೃಣಮೂಲ ಕಾಂಗ್ರೆಸ್​ ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್​ರಿಗೆ ಎಚ್ಚರಿಕೆ ಕೊಟ್ಟರು.
ಪಾಕ್ ಸಚಿವ ಹೇಳಿದ್ದೇನು?
ಭಾರತದೊಂದಿಗೆ ಸಂಘರ್ಷವೇನಾದರೂ ಸಂಭವಿಸಿದರೆ ಅದು ಕೇವಲ ಗಡಿಭಾಗಕ್ಕೆ ಸೀಮಿತವಾಗುವುದಿಲ್ಲ, ಬದಲಾಗಿ ಕೋಲ್ಕತ್ತಾವನ್ನು ಕೂಡ ಗುರಿಯಾಗಿಸಿಕೊಳ್ಳಲಾಗುವುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇತ್ತೀಚೆಗೆ ಹೇಳಿಕೆಯೊಂದನ್ನು ಕೊಟ್ಟಿದ್ದು ಭಾರಿ ತಲ್ಲಣವನ್ನು ಸೃಷ್ಟಿಸಿತ್ತು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಈ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಖವಾಜಾ ಆಸಿಫ್ ಅವರು ಕೋಲ್ಕತ್ತಾ ಸ್ಫೋಟಿಸೋದಾಗಿ ಎರಡು ದಿನದ ಹಿಂದೆ ಹೇಳಿದ್ರು. ಆದರೆ, ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು, ರಕ್ಷಣಾ ಸಚಿವರು ಏನೂ ಮಾತನಾಡದೆ ಮೌನವಾಗಿರೋದಾದ್ರು ಯಾಕೆ. ನಾನು ಖವಾಜಾ ಆಸಿಫ್ ಹೆಸರನ್ನು ನನ್ನ ಪಟ್ಟಿಯಲ್ಲಿ ಬರೆದಿಟ್ಟುಕೊಂಡಿದ್ದೇನೆ. ಮಮತಾ ಬ್ಯಾನರ್ಜಿ ಮತ್ತು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ದಿನ, ನಾವು ಅವರ ಮನೆಗೇ ನುಗ್ಗಿ ಅವರನ್ನು ಕೊಲ್ಲುತ್ತೇವೆ" ಎಂದು ಅಭಿಷೇಕ್ ಬ್ಯಾನರ್ಜಿ ಗುಡುಗಿದರು.
"ಪ್ರಧಾನಿ ಮೋದಿ ಅವರು ಕೂಚ್ ಬೆಹಾರ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಮುಳುಗಿ ಹೋಗಿದ್ದಾರೆ. ಅವರಿಗೆ ಟಿಎಂಸಿ ವಿರುದ್ಧ ಮಾತನಾಡಲು ಅಷ್ಟೆ ಬರೋದು. ಕೋಲ್ಕತ್ತಾಗೆ ಪಾಕಿಸ್ತಾನ ಬೆದರಿಕೆ ಹಾಕಿದಾಗ ಮಾತ್ರ ಏನೂ ಮಾತನಾಡದೆ ಮೌನ ವಹಿಸಿದ್ದಾರೆ. ಅಮಿತ್​ ಶಾ ಅವರು ಕೋಲ್ಕತ್ತಾದವರು ಬಾಂಗ್ಲಾದೇಶದವರು, ಪಾಕಿಸ್ತಾನಿಗಳು ಎಂದು ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಪಾಕಿಸ್ತಾನವು ಕೋಲ್ಕತ್ತಾಗೆ ಬೆದರಿಕೆ ಹಾಕಿದಾಗ ಅವರು ಮೂಕ ಪ್ರೇಕ್ಷಕರಾಗ್ಬಿಟ್ಟಿದ್ದಾರೆ" ಎಂದು ಅಭಿಷೇಕ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net