ಹೈಕಮಾಂಡ್ ನಿರ್ಧಾರಕ್ಕೆ ಬದ್ಧ!...ರಾಹುಲ್ ಗಾಂಧಿಯೇ ನಮ್ಮ ನಾಯಕ... ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ವದಂತಿಗೆ ತೆರೆ ಎಳೆದ ಚನ್ನಿ | Charanjit Channi

Charanjit Channi >ರಾಹುಲ್ ಗಾಂಧಿಯೇ ನಮ್ಮ ನಾಯಕ... ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ವದಂತಿಗೆ ತೆರೆ ಎಳೆದ ಚನ್ನಿ
Charanjit Channi >ರಾಹುಲ್ ಗಾಂಧಿಯೇ ನಮ್ಮ ನಾಯಕ... ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ವದಂತಿಗೆ ತೆರೆ ಎಳೆದ ಚನ್ನಿ
Published on
ಚಂಡೀಗಢ: ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಉಂಟಾಗಿದೆ ಎನ್ನಲಾದ ಭಿನ್ನಮತದ ವರದಿಗಳನ್ನು ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ (Charanjit Channi) ಗುರುವಾರ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಾವು ಪಕ್ಷದಲ್ಲೇ ಮುಂದುವರಿಯುವುದಾಗಿ ಮತ್ತು ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡುವ ಯಾವುದೇ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನವದೆಹಲಿಯ ಇಂದಿರಾ ಭವನದಲ್ಲಿ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಚನ್ನಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ದೆಹಲಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಿ, ನಾನು ಕಾಂಗ್ರೆಸ್ ಹೈಕಮಾಂಡ್‌ ಅನ್ನು ಗೌರವಿಸುತ್ತೇನೆ ಮತ್ತು ರಾಹುಲ್ ಗಾಂಧಿ ನನ್ನ ನಾಯಕರಾಗಿದ್ದಾರೆ. ಹೈಕಮಾಂಡ್‌ ಮುಂದೆ ನನ್ನ ವಿಚಾರಗಳನ್ನು ಮಂಡಿಸಿದ್ದು, ಹಿರಿಯ ನಾಯಕರು ನನ್ನ ಮಾತುಗಳನ್ನು ಆಲಿಸಿದ್ದಾರೆ ಎಂದರು.
ರಾಹುಲ್ ಗಾಂಧಿ ನಮ್ಮ ನಾಯಕ, ನಾವು ಅವರನ್ನು ಪ್ರೀತಿಸುತ್ತೇವೆ. ನಮ್ಮ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರು ಪಕ್ಷದೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಎಂದಿಗೂ ಪಕ್ಷದ ವಿರುದ್ಧವಾಗಿಲ್ಲ, ಪಕ್ಷಕ್ಕೆ ಮುಜುಗರ ತರಲು ಯತ್ನಿಸಿಲ್ಲ ಎಂದು ಚನ್ನಿ ಹೇಳಿದರು.

ರಿಪೋರ್ಟ್ ಸಲ್ಲಿಸಿದ ಭೂಪೇಶ್ ಬಾಘೇಲ್

ಇನ್ನೊಂದೆಡೆ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಭೂಪೇಶ್ ಬಾಘೇಲ್ ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಆಧಾರದ ಮೇಲೆ, ಅಸಮಾಧಾನಗೊಂಡಿರುವ ಬಣವನ್ನು ಸಮಾಧಾನಪಡಿಸಲು ಪಕ್ಷದ ಹಿರಿಯ ನಾಯಕರು ಸಮಾಲೋಚನೆ ನಡೆಸಿದ್ದಾರೆ. ರಾಜ್ಯಾಧ್ಯಕ್ಷ ರಾಜಾ ವಾರಿಂಗ್ ಪರವಾಗಿ 8 ರಿಂದ 9 ಶಾಸಕರು ಮತ್ತು 4 ಸಂಸದರು, 29 ಜಿಲ್ಲಾಧ್ಯಕ್ಷರ ಪೈಕಿ 25 ಅಧ್ಯಕ್ಷರು ಬೆಂಬಲಕ್ಕೆ ನಿಂತಿರುವುದರಿಂದ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಆಸಕ್ತಿ ತೋರಿಸಿಲ್ಲ ಎಂದು ತಿಳಿದುಬಂದಿದೆ.

ಪಂಜಾಬ್ ಕಾಂಗ್ರೆಸ್‌ನಲ್ಲಿ ಕಿತ್ತಾಟ ಏಕೆ..?

2022 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ವಿರುದ್ಧ ಕಾಂಗ್ರೆಸ್ ಸೋತಾಗಿನಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕಿತ್ತಾಟ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸಾಂಸ್ಥಿಕ ನೇಮಕಾತಿಗಳು, ನಾಯಕತ್ವದ ಶೈಲಿ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವನ್ನು ಸಿದ್ಧಗೊಳಿಸುವ ತಂತ್ರಗಳ ಬಗ್ಗೆ ಬಣಗಳ ನಡುವೆ ಪದೇ ಪದೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪಕ್ಷವನ್ನು ಮತ್ತೆ ಸಂಘಟಿಸುವ ಜವಾಬ್ದಾರಿಯೊಂದಿಗೆ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಪಂಜಾಬ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ಚನ್ನಿ, ಸುಖ್‌ಜಿಂದರ್ ಸಿಂಗ್ ರಾಂಧವಾ ಮತ್ತು ಹಲವು ಶಾಸಕರು ಸೇರಿದಂತೆ ಹಿರಿಯ ನಾಯಕರ ಒಂದು ವಿಭಾಗವು ಅವರ ನಾಯಕತ್ವದಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸುತ್ತಿರುವುದು ಹೈ ಕಮಾಂಡ್​ ತಲೆ ನೋವಿಗೆ ಕಾರಣವಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net