ರಾತ್ರಿ ಮದುವೆ.. ಬೆಳಗಾಗುವಷ್ಟರಲ್ಲಿ ಮಾಯವಾದ ಪತ್ನಿ: ಈ ಕಿಲಾಡಿ ನವವಧುವಿನ ಪ್ಲ್ಯಾನ್​ ಕೇಳಿದ್ರೆ ಬೆಚ್ಚಿಬೀಳ್ತೀರಾ! | Wedding Scam

Wedding Scam
Wedding Scam
Published on
ಮುಂಬೈ: ಅತಿ ಬುದ್ಧಿವಂತಿಕೆಯಿಂದ ಮದುವೆ ಎಂಬ ಪವಿತ್ರ ಬಂಧವನ್ನೇ ಬಂಡವಾಳ ಮಾಡಿಕೊಂಡು ಅಮಾಯಕ ಪುರುಷರನ್ನು(Wedding Scam) ವಂಚಿಸುತ್ತಿದ್ದ 'ಕಿಲಾಡಿ ನವವಧು' ಮತ್ತು ಆಕೆಯ 'ನಕಲಿ ತಂದೆ'ಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗಿ ಎರಡೇ ದಿನಗಳಲ್ಲಿ ಪತಿಯ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದಿನೊಂದಿಗೆ ಕಾಲ್ಕಿತ್ತುತ್ತಿದ್ದ ಈ ಜೋಡಿಯ ಕರಾಳ ಮುಖ ಈಗ ಬಯಲಾಗಿದೆ.

ಹೇಗಿತ್ತು ಈ ಕಿಲಾಡಿಗಳ ವಂಚನಾ ಜಾಲ?

ಮೀರಾ ರೋಡ್‌ನ ಕಾಶಿಮೀರಾ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ವಿರಾರ್ ನಿವಾಸಿ ನೇಹಾ ಖಂಡೇಲ್ವಾಲ್ ಅಲಿಯಾಸ್ ಜನ್ನತ್ (22) ಮತ್ತು ನಾಸಿಕ್ ಮೂಲದ ಕೇಸರಿಮಾಲ್ ರಂಕಾ (45) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಸೇರಿ ರೂಪಿಸುತ್ತಿದ್ದ ಸ್ಕೆಚ್ ಯಾವುದೇ ಸಿನೆಮಾ ಕಥೆಗಿಂತ ಕಡಿಮೆ ಇರಲಿಲ್ಲ.
ಟಾರ್ಗೆಟ್ ಯಾರು?: ಈ ಗ್ಯಾಂಗ್ ಮುಖ್ಯವಾಗಿ 40 ವರ್ಷ ದಾಟಿದ, ವಿಚ್ಛೇದನ ಪಡೆದ ಅಥವಾ ಏಕಾಂಗಿಯಾಗಿರುವ ಶ್ರೀಮಂತ ಪುರುಷರನ್ನು ಹುಡುಕುತ್ತಿತ್ತು.
ನಕಲಿ ಸಂಬಂಧ: ಕೇಸರಿಮಾಲ್ ರಂಕಾ ಈ ಹುಡುಗಿಯ ತಂದೆ ಅಥವಾ ಚಿಕ್ಕಪ್ಪನಂತೆ ನಟಿಸಿ ವರನ ಕಡೆಯವರನ್ನು ಸಂಪರ್ಕಿಸುತ್ತಿದ್ದ. ನೇಹಾಳ ಸುಂದರ ಫೋಟೋಗಳನ್ನು ಕಳುಹಿಸಿ ವರನಿಗೆ ಬಲೆ ಬೀಸುತ್ತಿದ್ದ.
ಮದುವೆ ಸಂಭ್ರಮ: ಎಲ್ಲವೂ ಸರಿಹೋದ ಮೇಲೆ ಅದ್ದೂರಿಯಾಗಿ ಮದುವೆ ನಡೆಯುತ್ತಿತ್ತು. ವರನ ಮನೆಯವರು ನೀಡುವ ಉಡುಗೊರೆಗಳು ಮತ್ತು ಒಡವೆಗಳನ್ನು ಈಕೆ ಸಂತೋಷದಿಂದ ಸ್ವೀಕರಿಸುತ್ತಿದ್ದಳು.

ಎರಡೇ ದಿನಕ್ಕೆ ಮಾಯವಾಗುತ್ತಿದ್ದ ಪತ್ನಿ!

ಮದುವೆಯ ಸಂಭ್ರಮ ಮುಗಿದು ಪತಿಯ ಮನೆಯಲ್ಲಿ ನೆಲೆಸಿದ ಕೇವಲ ಎರಡರಿಂದ ಮೂರು ದಿನಗಳಲ್ಲಿ ನೇಹಾ ತನ್ನ ಅಸಲಿ ಆಟ ಆರಂಭಿಸುತ್ತಿದ್ದಳು. ಮನೆಯವರೆಲ್ಲರೂ ನಿದ್ರಿಸುವ ವೇಳೆ ಅಥವಾ ಯಾರು ಇಲ್ಲದ ಸಮಯ ನೋಡಿ, ಲಾಕರ್‌ನಲ್ಲಿದ್ದ ಚಿನ್ನಾಭರಣ, ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಬಾಚಿಕೊಂಡು, ಹೊರಗೆ ಕಾಯುತ್ತಿದ್ದ ತನ್ನ 'ನಕಲಿ ತಂದೆ' ಕೇಸರಿಮಾಲ್ ಜೊತೆ ಪರಾರಿಯಾಗುತ್ತಿದ್ದಳು.
ಮರುದಿನ ಎಚ್ಚರಗೊಂಡು ನೋಡುವಾಗ ಪತ್ನಿಯೂ ಇಲ್ಲ, ಮನೆಯಲ್ಲಿದ್ದ ಸಂಪತ್ತೂ ಇಲ್ಲದಿದ್ದನ್ನು ಕಂಡು ಪತಿಯಂದಿರು ಕಂಗಾಲಾಗುತ್ತಿದ್ದರು. ಮರ್ಯಾದೆಗೆ ಅಂಜಿ ಹಲವರು ದೂರು ನೀಡುತ್ತಿರಲಿಲ್ಲ, ಇದನ್ನೇ ಈ ಗ್ಯಾಂಗ್ ಬಂಡವಾಳ ಮಾಡಿಕೊಂಡಿತ್ತು.

ಬಲೆಗೆ ಬಿದ್ದಿದ್ದು ಹೇಗೆ?

ಮಹಾರಾಷ್ಟ್ರದಾದ್ಯಂತ ಇಂತಹದ್ದೇ ಶೈಲಿಯ ಸುಮಾರು ಐದು ಪ್ರಕರಣಗಳು ದಾಖಲಾಗಿದ್ದವು. ಕಾಶಿಮೀರಾ ಪೊಲೀಸರು ತಾಂತ್ರಿಕ ಸಾಕ್ಷ್ಯಗಳು ಮತ್ತು ಮೊಬೈಲ್ ಲೊಕೇಶನ್ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಇಬ್ಬರ ಸುಳಿವು ಸಿಕ್ಕಿದೆ. ವಿರಾರ್‌ನಲ್ಲಿ ಕೆಲವು ವರ್ಷಗಳ ಹಿಂದೆ ಭೇಟಿಯಾಗಿದ್ದ ಈ ಜೋಡಿ, ಸುಲಭವಾಗಿ ಹಣ ಸಂಪಾದಿಸಲು ಈ 'ಮದುವೆ ವಂಚನೆ' ದಾರಿಯನ್ನು ಆಯ್ದುಕೊಂಡಿದ್ದರು.
"ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ವಂಚಿಸುತ್ತಿದ್ದರು. ಸದ್ಯ ಐದು ಪ್ರಕರಣಗಳು ಬೆಳಕಿಗೆ ಬಂದಿವೆ, ಆದರೆ ತನಿಖೆ ಮುಂದುವರಿದಂತೆ ಇನ್ನಷ್ಟು ಸಂತ್ರಸ್ತರ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ," ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದುವೆಗೂ ಮುನ್ನ ಇರಲಿ ಜಾಗೃತೆ

ಈ ಪ್ರಕರಣವು ಮದುವೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಪಾಯಗಳ ಬಗ್ಗೆ ದೊಡ್ಡ ಎಚ್ಚರಿಕೆ ನೀಡಿದೆ. ಅಪರಿಚಿತರು ನೀಡುವ ಪ್ರಸ್ತಾಪಗಳನ್ನು ಕುರುಡಾಗಿ ನಂಬಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net