ಪ್ರಧಾನಿ ಮೋದಿ ಆಯೋಜಿಸಿದ್ದ ಡಿನ್ನರ್‌ಗೆ ಜಿನ್‌ ಪಿಂಗ್ ಗೈರು: ಔತಣಕೂಟಕ್ಕೆ ಚೀನಾ ಅಧ್ಯಕ್ಷ ಬಾರದಿರಲು ಅಸಲಿ ಕಾರಣವೇನು ಗೊತ್ತಾ..? | Xi Jinping Skipped Dinner

Xi Jinping Skipped Dinner
Xi Jinping Skipped Dinner
Published on
Xi Jinping Skipped Dinner: ಇಲ್ಲಿನ ಭಾರತ ಮಂಟಪದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ನಡುವೆ ಶನಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸಿದ್ದ ಔತಣಕೂಟವನ್ನು ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್ ಮತ್ತು ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಸೇರಿದಂತೆ ಬ್ರಿಕ್ಸ್ ಒಕ್ಕೂಟದ ಕೆಲ ನಾಯಕರು ಗೈರುಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಚೀನಾ ಅಧ್ಯಕ್ಷರು ಶನಿವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿದ್ದು, ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ಪ್ರಧಾನಿ ಮೋದಿ ಅವರೊಂದಿಗೆ ಸುದೀರ್ಘ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ನಾಯಕರಿಗೆ ಅಂದು ಅತ್ಯಂತ ದೀರ್ಘವಾದ ಹಾಗೂ ಪ್ರಮುಖ ರಾಜತಾಂತ್ರಿಕ ಚಟುವಟಿಕೆಗಳಿಂದ ಕೂಡಿದ ದಿನವಾಗಿತ್ತು. ಸುಧೀರ್ಘ ವಿಮಾನ ಪ್ರಯಾಣದ ನಂತರ ದೆಹಲಿಗೆ ಆಗಮಿಸಿದ್ದ ಜಿನ್‌ ಪಿಂಗ್ ಅವರು, ಸತತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ತೀವ್ರ ಆಯಾಸಗೊಂಡಿದ್ದರು, ಆದ್ದರಿಂದ ಈ ಔತಣಕೂಟವನ್ನು ಕಡಿತಗೊಳಿಸಿ ಗೈರಾಗಿದ್ದರು ಎಂದು ಮೂಲಗಳು ಸ್ಪಷ್ಟಪಡಿಸಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಔತಣಕೂಟದಲ್ಲಿ ಭಾಗವಹಿಸಿದ ಪುಟಿನ್!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಬ್ರಿಕ್ಸ್ ಒಕ್ಕೂಟದ ಇತರ ಪ್ರಮುಖ ನಾಯಕರು ಪ್ರಧಾನಿ ಮೋದಿ ಆಯೋಜಿಸಿದ್ದ ಈ ಔತಣಕೂಟದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಕೇಂದ್ರ ಸಚಿವರು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಹ ಉಪಸ್ಥಿತರಿದ್ದರು. ಕೇಂದ್ರ ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪಶ್ಚಿಮ ಬಂಗಾಳದ ಸುವೇಂಧು ಅಧಿಕಾರಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಸಹ ಔತಣಕೂಟಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಸಂಸತ್ ಭವನದಿಂದ ದೆಹಲಿಯ ಮಧ್ಯಭಾಗದಲ್ಲಿರುವ ಭಾರತ್ ಮಂಟಪಂಗೆ ಎರಡು ಬಸ್‌ಗಳಲ್ಲಿ ಔತಣಕೂಟಕ್ಕಾಗಿ ಆಗಮಿಸಿದರು. ಎರಡು ದಿನಗಳ ಕಾಲ ನಡೆಯುತ್ತಿರುವ ಈ ಬ್ರಿಕ್ಸ್ ಶೃಂಗಸಭೆಯು ಇಂದು ಮುಕ್ತಾಯಗೊಳ್ಳಲಿದ್ದು, 11 ಸದಸ್ಯ ರಾಷ್ಟ್ರಗಳು ಮತ್ತು 10 ಪಾಲುದಾರ ರಾಷ್ಟ್ರಗಳ ನಾಯಕರು ಹಾಗೂ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಇಂದು ಪ್ರಧಾನಿ ಮೋದಿ ಅವರು ಏಳು ದೇಶಗಳ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ನಿನ್ನೆ (ಶನಿವಾರ) ಪ್ರಧಾನಿ ಮೋದಿ ಮತ್ತು ಜಿನ್‌ ಪಿಂಗ್ ಅವರು ಭಾರತ-ಚೀನಾ ಬಾಂಧವ್ಯದ ಕುರಿತು ಪರಿಶೀಲನೆ ನಡೆಸಿದ್ದಲ್ಲದೆ, ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಉಭಯ ನಾಯಕರು ಅಭಿಪ್ರಾಯ ಭೇದಗಳು ಅಥವಾ ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು ಎಂದು ಒತ್ತು ನೀಡಿದ್ದಾರೆ. ಅಲ್ಲದೆ, ಎರಡೂ ರಾಷ್ಟ್ರಗಳು ತಮ್ಮ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಆಯಕಟ್ಟಿನ ಹಾಗೂ ದೀರ್ಘಕಾಲೀನ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದ್ದಾರೆ.
2025 ರ ಆಗಸ್ಟ್​​ನಲ್ಲಿ ಟಿಯಾಂಜಿನ್‌ನಲ್ಲಿ ನಡೆದ ತಮ್ಮ ಕೊನೆಯ ಭೇಟಿಯ ನಂತರ ಭಾರತ-ಚೀನಾ ದ್ವಿಪಕ್ಷೀಯ ಬಾಂಧವ್ಯದಲ್ಲಿ ಕಂಡುಬಂದ ಸ್ಥಿರ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದ್ದಾರೆ. ಎರಡೂ ದೇಶಗಳು ತಮ್ಮ ಸಂಬಂಧದ ಬಗ್ಗೆ ಕಾರ್ಯತಂತ್ರದ ಮತ್ತು ದೀರ್ಘಕಾಲೀನ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು. ಎರಡು ಕಡೆಯವರು ಪರಸ್ಪರ ಗೌರವ, ಪರಸ್ಪರ ಸೂಕ್ಷ್ಮತೆ ಮತ್ತು ಪರಸ್ಪರ ಹಿತಾಸಕ್ತಿಯಿಂದ ಮಾರ್ಗದರ್ಶನ ಪಡೆಯಬೇಕು ಎಂದು ಪ್ರಧಾನ ಮಂತ್ರಿಯವರು ಒತ್ತಿಹೇಳಿದ್ದಾರೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net