ಸುಮ್ಮನೆ 80 ರೂ. ಕೇಳಲ್ಲ! ಕೇದರನಾಥ್​ ವ್ಯಾಪಾರಿಗಳ ಅಸಲಿ ಸಂಕಷ್ಟವಿದು; ಮೋಸ ಎನ್ನುವ ಗ್ರಾಹಕರಿಗೆ ಈ ವಿಡಿಯೋ

ದೃಶ್ಯದ ಒಂದು ತುಣುಕು
ದೃಶ್ಯದ ಒಂದು ತುಣುಕು
Published on

ಪ್ರಮುಖ ಮುಖ್ಯಾಂಶಗಳು

  • ಕೇದರನಾಥ್​ದಲ್ಲಿ ಒಂದು ಲೀಟರ್​ ನೀರಿನ ಬಾಟಲಿಗೆ 80 ರೂ.
  • 20 ರೂ. ಬದಲಿಗೆ 80 ರೂ. ಕೇಳೋದು ಮೋಸ ಅಲ್ಲವೇ?
  • ಅಲ್ಲಿನ ಅಸಲಿ ಕಥೆ ಹೇಳುತ್ತೆ ಈ ವಿಡಿಯೋಗಳು
ಉತ್ತರಾಖಂಡ: ಇದೇ ಏ.22ರಂದು ರುದ್ರಪ್ರಯಾಗ್​ ಜಿಲ್ಲೆಯಲ್ಲಿರುವ ಕೇದರನಾಥ್​ ದೇವಸ್ಥಾನ ಭಕ್ತರ ಪ್ರವೇಶಕ್ಕೆ ತೆರೆದಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಟ್ಟದ ಮೇಲೆ ನೆಲೆಸಿರುವ ಭಗವಂತನನ್ನು ಕಾಣಲು ಹೋಗುವ ಜನರಿಗೆ ಕುಡಿಯುವ ನೀರು ಅತ್ಯವಶ್ಯಕ. ಹೀಗಿರುವಾಗ, ಅಲ್ಲಿನ ವ್ಯಾಪಾರಿಗಳು ಒಂದು ಲೀಟರ್​ ನೀರಿನ ಬಾಟಲಿಗೆ ಪಡೆಯುವ ಹಣ ಕೇಳಿದರೆ ಹಲವರು ಸಿಟ್ಟಾಗುತ್ತಾರೆ.
ಸಾಮಾನ್ಯವಾಗಿ ದೇಗುಲಕ್ಕೆ ಹೋಗುವ ಭಕ್ತರು ನೀರಿನ ಬಾಟಲಿಯನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆ ಪೈಕಿ ಕೆಲವೇ ಕೆಲವರು ಬಾಟಲಿ ಇಟ್ಟುಕೊಂಡಿರುತ್ತಾರೆ. ಉಳಿದ ಬಹುತೇಕರು, ಸ್ಥಳೀಯ ಅಂಗಡಿಗಳಲ್ಲಿ ಅರ್ಧ ಅಥವಾ ಒಂದು ಲೀಟರ್​ ನೀರಿನ ಬಾಟಲಿಯನ್ನು ಖರೀದಿ ಮಾಡುತ್ತಾರೆ. ಎಲ್ಲರಿಗೂ ತಿಳಿದಿರುವಂತೆ, ದೇಶದಲ್ಲಿ 1 ಲೀ. ನೀರಿಗೆ 18ರಿಂದ 20 ರೂ. ಬೆಲೆ. ಆದರೆ, ಕೇದರನಾಥ್​ದಲ್ಲಿ ಲೀಟರ್​ ವಾಟರ್ ಬಾಟಲಿಗೆ 80 ರೂ. ಪಡೆಯಲಾಗುತ್ತೆ. ಇದು ಅನೇಕ ಗ್ರಾಹಕರ ಪಿತ್ತವನ್ನು ನೆತ್ತಿಗೇರಿಸಿದೆ.
ಸ್ಥಳೀಯ ಅಂಗಡಿಯವರು ಒಂದು ಲೀ. ನೀರಿನ ಬಾಟಲಿಗೆ 80 ರೂ. ತೆಗೆದುಕೊಳ್ಳುವ ಬಗ್ಗೆ ಹೆಚ್ಚಾಗಿ ವಿವರಿಸಲು ಹೋಗೋದಿಲ್ಲ. ಕಾರಣ, ಅಗತ್ಯಬಿದ್ದವರು ಖರೀದಿ ಮಾಡುತ್ತಾರೆ. ಇಲ್ಲದವರು, ಬೈಕೊಂಡು ಮುಂದೆ ಹೋಗುತ್ತಾರೆ ಎಂದು ಸುಮ್ಮನಾಗುತ್ತಾರೆ. ಕಾರಣ, ಪ್ರತಿ ಬಾರಿ ಯಾಕೆ ಅಷ್ಟೊಂದು? ಎನ್ನುವ ಜನರಿಗೆ ಉತ್ತರಿಸುವ ತಾಳ್ಮೆ ಆ ವ್ಯಾಪಾರಿಗಳಿಗೆ ಇರೋದಿಲ್ಲ. ಅಷ್ಟಕ್ಕೂ 80 ರೂ. ಹಿಂದಿರುವ ಅಸಲಿ ಕಾರಣವೇನು ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳು ಜ್ವಲಂತ ಸಾಕ್ಷಿ.
ಮಹಿಳೆಯೊಬ್ಬರು ಯಾಕೆ ಇಷ್ಟೊಂದು ಎಂಬ ಪ್ರಶ್ನೆಗೆ ಉತ್ತರಿಸುವ ಸ್ಥಳೀಯ ವ್ಯಾಪಾರಿ, ಲೀಟರ್​ ನೀರಿನ ಬಾಟಲಿಯ ಒಂದು ಲೋಡ್​ ಅನ್ನು ಮೇಲಕ್ಕೆ ತರಿಸಿಕೊಳ್ಳಲು ನಾವು 1500 ರೂ. ಕೊಡ್ತೀವಿ. ಕಾರಣ, ಇಷ್ಟು ಮೇಲಕ್ಕೆ ಯಾವುದೇ ರಸ್ತೆಗಳ ಸಂಪರ್ಕ ಇಲ್ಲ. ಯಾವ ಡೆಲಿವರಿ ಏಜೆಂಟ್​ಗಳೂ ಇಲ್ಲ. 4ರಿಂದ 5 ತಿಂಗಳು ಮಾತ್ರ ನಮಗೆ ಇಲ್ಲಿ ವ್ಯಾಪಾರ. ಒಂದು ಕತ್ತೆಗಳ ಮೇಲೆ ಹೇರಿಕೊಂಡು ಬರಬೇಕು ಅಥವಾ ಬೆನ್ನಿನ ಮೇಲೆ ಹೇರಿಕೊಂಡು ತರಬೇಕು ಎಂದು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ, ವ್ಯಾಪಾರಿಯ ಮಾತು ಎಷ್ಟು ಅಸಲಿ ಎಂಬುದಕ್ಕೆ ವ್ಯಕ್ತಿಯೊಬ್ಬ ಲೀಟರ್​ ನೀರಿನ ಬಾಟಲಿಯ ಲೋಡ್​ ಅನ್ನು ತನ್ನ ಹೆಗಲ ಮೇಲೆ ಕಷ್ಟಪಟ್ಟು ಹೇರಿಕೊಂಡು ಬರುತ್ತಿರುವ ದೃಶ್ಯವೇ ಸಾಕ್ಷಿ. ಇದನ್ನು ನೋಡಿದರೆ, ಯಾರಿಗಾದರೂ ಒಂದು ನಿಮಿಷ ಅಯ್ಯೋ ಪಾಪ ಅನ್ನಿಸುತ್ತದೆ. ಈ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕೆಲವರಿಗೆ ಮನವರಿಕೆ ಮಾಡಿಸಿದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net