ದೇಶದ ಸ್ವಾತಂತ್ರ್ಯಕ್ಕೆ ಆ. 15ರ ದಿನವನ್ನೇ ಆಯ್ಕೆ ಮಾಡಿದ್ದೇಕೆ?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬ್ರಿಟಿಷ್ ಸರ್ಕಾರದ ಗುರಿ ಇದ್ದದ್ದು 1948ರ ಜೂನ್
  • 10 ತಿಂಗಳು ಮೊದಲೇ ಬಿಟ್ಟುಕೊಟ್ಟ ಮೌಂಟ್​ಬ್ಯಾಟನ್

ಬ್ರಿಟಿಷ್ ಸರ್ಕಾರ 1948ರ ಜೂನ್ 30ರೊಳಗೆ ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಲು ತೀರ್ಮಾನಿಸಿತ್ತು. ಆದರೆ, ಭಾರತ ಅದಕ್ಕೂ ಹತ್ತು ತಿಂಗಳು ಮುಂಚಿತವಾಗಿ, ಅಂದರೆ 1947ರ ಆಗಸ್ಟ್ 15ಕ್ಕೇ ಸ್ವಾತಂತ್ರ್ಯ ಪಡೆಯಿತು. ಬ್ರಿಟಿಷರು ನಿಗದಿಪಡಿಸಿಕೊಂಡಿದ್ದ ಆ ಗಡುವು ಇದ್ದಕ್ಕಿದ್ದಂತೆ ಬದಲಾದದ್ದು ಏಕೆ? ಈ ನಿರ್ಧಾರದ ಹಿಂದೆ ವೈಸ್​ರಾಯ್ ಲಾರ್ಡ್ ಮೌಂಟ್​ಬ್ಯಾಟನ್ ಅವರ ಪಾತ್ರ ಏನಿತ್ತು? ಇದಕ್ಕಿರುವ ಎರಡನೇ ಮಹಾಯುದ್ಧದ ಲಿಂಕ್ ಏನು? ಅರ್ಧರಾತ್ರಿಯಲ್ಲಿ ಸ್ವಾತಂತ್ರ್ಯ ಘೊಷಣೆಯಾಗಲು ಜ್ಯೋತಿಷಿಗಳು ಹೇಗೆ ಕಾರಣರಾದರು? ಈ ಎಲ್ಲದರ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

ಭಾರತದಲ್ಲಿದ್ದ ಬ್ರಿಟಿಷ್ ಆಡಳಿತ 1947ರ ಆರಂಭದ ಹೊತ್ತಿಗಾಗಲೇ ತೀವ್ರ ಬಿಕ್ಕಟ್ಟಿಗೆ ಸಿಲುಕಿತ್ತು. ಭಾರತಕ್ಕೆ ಅಧಿಕಾರ ಹಸ್ತಾಂತರಿಸಲು ಮತ್ತು ಸಂವಿಧಾನ ರಚನೆಗೆ ದಾರಿ ಮಾಡಿಕೊಡಲು 1946ರಲ್ಲಿ ಬ್ರಿಟನ್ ಸರ್ಕಾರ ಕ್ಯಾಬಿನೆಟ್ ಮಿಷನ್ ಎಂಬ ಪ್ರಮುಖ ನಿಯೋಗವನ್ನು ಕಳಿಸಿತು. ಆರಂಭದಲ್ಲಿ ಪ್ರತ್ಯೇಕ ಪಾಕಿಸ್ತಾನ ರಚನೆಯ ಬೇಡಿಕೆಯನ್ನು ತಳ್ಳಿಹಾಕಿದ್ದ ಆ ನಿಯೋಗ, ದೇಶವನ್ನು ವಿಭಜಿಸದೆ ಒಂದೇ ಒಕ್ಕೂಟವಾಗಿ ಉಳಿಸಲು ಪ್ರಯತ್ನಿಸಿತು. ಆದರೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಒಮ್ಮತ ಮೂಡಿಸುವಲ್ಲಿ ಅದು ವಿಫಲವಾಯಿತು. ಪ್ರತ್ಯೇಕ ಪಾಕಿಸ್ತಾನದ ಬೇಡಿಕೆ ಮುಂದಿಟ್ಟುಕೊಂಡು 1946ರ ಆಗಸ್ಟ್ 16ರಂದು ಜಿನ್ನಾ ಕರೆ ನೀಡಿದ ‘ಡೈರೆಕ್ಟ್ ಆಕ್ಷನ್ ಡೇ’ ಕೋಲ್ಕತ್ತಾದಲ್ಲಿ ತೀವ್ರ ಕೋಮುಗಲಭೆಗೆ ಕಾರಣವಾಯಿತು. 

ಈ ಹಿಂಸಾಚಾರ ನೌಖಾಲಿ, ಬಿಹಾರ ಮತ್ತು ಪಂಜಾಬ್​ಗೂ ಹರಡಿತು. ಈ ಸನ್ನಿವೇಶದಲ್ಲಿ ಬ್ರಿಟಿಷ್ ವೈಸ್​ರಾಯ್ ಲಾರ್ಡ್ ವೆವೆಲ್, ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯಲು ತಕ್ಷಣವೇ ನಿರ್ಗಮನ ದಿನಾಂಕವನ್ನು ಘೊಷಿಸುವಂತೆ ಲಂಡನ್​ನಲ್ಲಿದ್ದ ಪ್ರಧಾನಿ ಕ್ಲೆಮೆಂಟ್ ಅಟ್ಲಿ ಅವರಿಗೆ ಒತ್ತಾಯಿಸಿದರು. ವೆವೆಲ್ ಅವರ ಬ್ರೇಕ್​ಡೌನ್ ಪ್ಲಾನ್​ ಅನ್ನು ತಿರಸ್ಕರಿಸಿದ ಬ್ರಿಟಿಷ್ ಸರ್ಕಾರ, ಹೊಸ ವೈಸ್​ರಾಯ್ರನ್ನು ನೇಮಿಸಲು ನಿರ್ಧರಿಸಿತು. 1947ರ ಫೆ. 20ರಂದು ಹೌಸ್ ಆಫ್ ಕಾಮನ್ಸ್​ನಲ್ಲಿ ಪ್ರಧಾನಿ ಅಟ್ಲಿ ಪ್ರಮುಖ ಘೊಷಣೆಯೊಂದನ್ನು ಮಾಡಿದರು- ‘ಬ್ರಿಟನ್ 1948ರ ಜೂನ್ ತಿಂಗಳ ಒಳಗಾಗಿ ಭಾರತೀಯ ನಾಯಕರಿಗೆ ಅಧಿಕಾರ ಹಸ್ತಾಂತರಿಸಲಿದೆ.’ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಲಾರ್ಡ್ ಲೂಯಿಸ್ ಮೌಂಟ್​ಬ್ಯಾಟನ್ ಅವರನ್ನು ಹೊಸ ವೈಸ್​ರಾಯ್ ಆಗಿ ನೇಮಿಸಲಾಯಿತು.

ಬ್ರಿಟಿಷರಿಗೆ ಭಯ ಹುಟ್ಟಿಸಿದ್ದ ಹಿಂಸಾಚಾರ

ಲಾರ್ಡ್ ಮೌಂಟ್​ಬ್ಯಾಟನ್ 1947ರ ಮಾ. 22ರಂದು ದೆಹಲಿಗೆ ಬಂದಿಳಿದರು. ಮಾ. 24ರಂದು ವೈಸ್​ರಾಯ್ ಆಗಿ ಪ್ರಮಾಣವಚನ ಸ್ವೀಕರಿಸಿದ ಅವರು, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು. ಸುದೀರ್ಘ ಮಾತುಕತೆಗಳ ನಂತರ, 1947ರ ಜೂನ್ 3ರಂದು ಮೌಂಟ್​ಬ್ಯಾಟನ್ ತಮ್ಮ ದೇಶವಿಭಜನೆಯ ಬ್ಲೂಪ್ರಿಂಟ್ ಪ್ರಕಟಿಸಿದರು. ಪಾಕಿಸ್ತಾನ ಎಂಬ ಹೊಸ ರಾಷ್ಟ್ರದ ರಚನೆ, ಪಂಜಾಬ್ ಮತ್ತು ಬೆಂಗಾಲ್ ಪ್ರಾಂತ್ಯಗಳ ವಿಭಜನೆ ಹಾಗೂ ವಾಯವ್ಯ ಗಡಿ ಪ್ರಾಂತ್ಯದಲ್ಲಿ ಜನಾ ಭಿಪ್ರಾಯ ಸಂಗ್ರಹಣೆಗೆ ಈ ಯೋಜನೆ ದಾರಿ ಮಾಡಿಕೊಟ್ಟಿತು. ಆದರೆ ಈ ಜೂನ್ 3ರ ಯೋಜನೆಯಲ್ಲಿದ್ದ ಅತ್ಯಂತ ದೊಡ್ಡ ಅಚ್ಚರಿಯೆಂದರೆ ಅಧಿಕಾರ ಹಸ್ತಾಂತರದ ದಿನಾಂಕವನ್ನು ಮೂಲ ಗಡುವಾಗಿದ್ದ 1948ರ ಜೂನ್​ನಿಂದ ಹತ್ತು ತಿಂಗಳು ಪ್ರೀಪೋನ್ ಮಾಡಲಾಗಿತ್ತು! 

ಅಧಿಕಾರ ಹಸ್ತಾಂತರವನ್ನು ವಿಳಂಬಗೊಳಿಸಿದರೆ ಭಾರತದಲ್ಲಿ ಬ್ರಿಟಿಷ್ ಆಡಳಿತದ ಹಿಡಿತ ಪೂರ್ಣವಾಗಿ ತಪ್ಪಿಹೋಗುತ್ತದೆ ಮತ್ತು ಕೋಮು ಹಿಂಸಾಚಾರ ಇನ್ನಷ್ಟು ವಿಕೋಪಕ್ಕೆ ಹೋಗುತ್ತದೆ ಎಂದು ಮೌಂಟ್​ಬ್ಯಾಟನ್ ನಂಬಿದ್ದರು ಎನ್ನುತ್ತಾರೆ ಇತಿಹಾಸಕಾರರು. ದೀರ್ಘಕಾಲದ ಮಾತುಕತೆಗಳಿಂದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕರೂ ರೋಸಿ ಹೋಗಿದ್ದರು. ಹೀಗಾಗಿ ಅಧಿಕಾರ ಹಸ್ತಾಂತರ ಎಷ್ಟು ತ್ವರಿತವಾಗಿ ಆಗುತ್ತದೆಯೋ ಅಷ್ಟು ಒಳ್ಳೆಯದು ಎಂದು ಸಮ್ಮತಿಸಿಬಿಟ್ಟಿದ್ದರು.

ಎರಡನೇ ಮಹಾಯುದ್ಧದ ಲಿಂಕ್

ಆ. 15ರ ದಿನಾಂಕವನ್ನೇ ಮೌಂಟ್​ಬ್ಯಾಟನ್ ಹೇಗೆ ಆಯ್ಕೆ ಮಾಡಿಕೊಂಡರು ಎಂಬುದು ಕುತೂಹಲಕಾರಿ. ‘ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಾವುದೇ ಆಲೋಚನೆ ಮಾಡದೇ ಮೌಂಟ್​ಬ್ಯಾಟನ್ ಈ ದಿನಾಂಕ ಘೊಷಿಸಿದ್ದರು!’ ಎಂಬ ಅಂಶ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲಾಪಿಯರ್ ಅವರ ‘ಫ್ರೀಡಂ ಅಟ್ ಮಿಡ್​ನೈಟ್’ ಪುಸ್ತಕದಲ್ಲಿದೆ. ದಶಕಗಳ ನಂತರ ಒಮ್ಮೆ ಮೌಂಟ್​ಬ್ಯಾಟನ್ ಕೂಡ ಇದೇ ರೀತಿಯ ವಿವರಣೆ ನೀಡಿದ್ದರು. ‘ನಾನು ಆಯ್ಕೆ ಮಾಡಿದ ದಿನಾಂಕ ಇದ್ದಕ್ಕಿದ್ದಂತೆ ತಲೆಯಲ್ಲಿ ಬಂದಿದ್ದು. ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ನಾನು ಆ ದಿನಾಂಕವನ್ನು ಹೇಳಿದೆ. 

ಇಡೀ ಘಟನೆಯ ಮೇಲುಸ್ತುವಾರಿ ನನ್ನ ಕೈಯಲ್ಲೇ ಇದೆ ಎಂಬುದನ್ನು ತೋರಿಸಲು ನಾನು ಬಯಸಿದ್ದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳನ್ನು ಆರಿಸಿಕೊಳ್ಳಬೇಕು ಎಂದುಕೊಂಡಿದ್ದೆ, ತಕ್ಷಣ ಆಗಸ್ಟ್ 15 ನೆನಪಾಯಿತು. ಏಕೆ ಗೊತ್ತೇ? ಅಂದು ಜಪಾನ್ ಶರಣಾಗತಿಯ ಎರಡನೇ ವಾರ್ಷಿಕೋತ್ಸವ ಇತ್ತು!’ ಎಂದು ಮೌಂಟ್​ಬ್ಯಾಟನ್ ಒಂದೆಡೆ ನೆನಪಿಸಿಕೊಂಡಿದ್ದರು. 1945ರ ಆ. 15ರಂದು ಎರಡನೇ ಮಹಾಯುದ್ಧದಲ್ಲಿ ಯೂರೋಪಿಯನ್ ಮಿತ್ರಪಡೆಗಳಿಗೆ ಜಪಾನ್ ಶರಣಾಗುವುದಾಗಿ ಘೊಷಿಸಿತ್ತು. ಅದು ವಿಜೆ ಡೇ (ವಿಕ್ಟರಿ ಓವರ್ ಜಪಾನ್ ಡೇ) ಎಂದೇ ಪ್ರಸಿದ್ಧವಾಗಿದೆ. ಆ ಸಮಯದಲ್ಲಿ ಮೌಂಟ್​ಬ್ಯಾಟನ್ ಅವರು ಆಗ್ನೇಯ ಏಷ್ಯಾ ಕಮಾಂಡ್​ನ ಸುಪ್ರೀಂ ಅಲೈಡ್ ಕಮಾಂಡರ್ ಆಗಿದ್ದರು. ಅವರ ಮಿಲಿಟರಿ ಜೀವನದ ಅತಿದೊಡ್ಡ ವಿಜಯದ ಸವಿನೆನಪಿನ ದಿನವೇ ಆ. 15 ಆಗಿತ್ತು. ಹೀಗಾಗಿ, ತಮ್ಮ ವೈಯಕ್ತಿಕ ಸೇನಾ ವಿಜಯದ ದಿನಾಂಕವೇ ಸ್ವತಂತ್ರ ಭಾರತ ಹಾಗೂ ಪಾಕಿಸ್ತಾನದ ಉದಯದ ದಿನಾಂಕವಾಗಿ ಮೌಂಟ್​ಬ್ಯಾಟನ್ ಬಾಯಲ್ಲಿ ಅಪ್ರಯತ್ನಪೂರ್ವಕವಾಗಿ ಬಂದಿತ್ತು!

ಜ್ಯೋತಿಷಿಗಳ ವಿರೋಧ...

ಮೌಂಟ್​ಬ್ಯಾಟನ್ ಘೊಷಿಸಿದ ಆ. 15ರ ದಿನಾಂಕಕ್ಕೆ ಭಾರತದ ಜ್ಯೋತಿಷಿಗಳಿಂದ ಮತ್ತು ಕೆಲವು ರಾಜಕೀಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಹಿಂದೂ ಪಂಚಾಂಗದ ಪ್ರಕಾರ 1947ರ ಆಗಸ್ಟ್ 15 ‘ಅಶುಭ ದಿನ’ ಎಂಬುದು ಅವರ ವಾದವಾಗಿತ್ತು. 1947ರ ಆ. 8ರಂದು ಬ್ರಿಟನ್​ನ ಆರನೇ ಜಾರ್ಜ್ ರಾಜನಿಗೆ ಮೌಂಟ್​ಬ್ಯಾಟನ್ ಕಳುಹಿಸಿದ 16ನೇ ವೈಯಕ್ತಿಕ ವರದಿಯಲ್ಲಿ ಹೀಗೆ ಬರೆದಿದ್ದರು. ‘ಇಲ್ಲಿನ ಜ್ಯೋತಿಷಿಗಳು ಆ. 13 ಮತ್ತು ಆ. 15 ಎರಡೂ ಅಶುಭ ದಿನಗಳೆಂದೂ, ಆ. 14 ಅತ್ಯಂತ ಶುಭ ದಿನವೆಂದೂ ಘೊಷಿಸಿದ್ದಾರೆ. ಅಧಿಕಾರ ಹಸ್ತಾಂತರದ ದಿನಾಂಕವನ್ನು ನಿಗದಿಪಡಿಸುವ ಮೊದಲು ಜ್ಯೋತಿಷಿಗಳನ್ನು ಸಂರ್ಪಸಬೇಕಿತ್ತು ಎಂಬುದು ನನಗೆ ಗೊತ್ತಿರಲಿಲ್ಲ!’ ಪ್ರಖ್ಯಾತ ಜ್ಯೋತಿಷಿಯೊಬ್ಬರು ಮೌಂಟ್​ಬ್ಯಾಟನ್​ಗೆ ಪತ್ರ ಬರೆದು, ‘ಆ. 15ರಂದು ಸ್ವಾತಂತ್ರ್ಯ ನೀಡಬೇಡಿ’ ಎಂಬುದಾಗಿ ವಿನಂತಿಸಿದ್ದರು. 

ಅಶುಭ ಮುಹೂರ್ತದಲ್ಲಿ ಹುಟ್ಟುವ ರಾಷ್ಟ್ರವು ಕ್ಷಾಮ, ಪ್ರವಾಹ ಮತ್ತು ಮಾರಣಹೋಮಗಳ ಶಾಪಕ್ಕೆ ಗುರಿಯಾಗುತ್ತದೆ ಎಂದು ಅವರು ಎಚ್ಚರಿಸಿದ್ದರು. ಈ ವಿಷಯ ‘ಫ್ರೀಡಂ ಅಟ್ ಮಿಡ್​ನೈಟ್’ ಪುಸ್ತಕದಲ್ಲಿ ದಾಖಲಾಗಿದೆ. ಜ್ಯೋತಿಷಿಗಳ ಎಚ್ಚರಿಕೆ ಮತ್ತು ಮೌಂಟ್​ಬ್ಯಾಟನ್ ಅವರ ಹಠ ಎರಡನ್ನೂ ಸರಿದೂಗಿಸಲು ಭಾರತೀಯ ನಾಯಕರು ಒಂದು ಉಪಾಯವನ್ನು ಹುಡುಕಿದರು. ಹಿಂದೂ ಸಂಪ್ರದಾಯದ ಪ್ರಕಾರ ಹೊಸ ದಿನವು ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತದೆ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಮಧ್ಯರಾತ್ರಿ 12 ಗಂಟೆಗೆ ಹೊಸ ದಿನಾಂಕ ಆರಂಭವಾಗುತ್ತದೆ. ಆದ್ದರಿಂದ, ಆ. 14ರ ರಾತ್ರಿ 12 ಗಂಟೆಗೆ (ಅಂದರೆ ಆ. 15ರ ಆರಂಭದ ಕ್ಷಣದಲ್ಲಿ) ಅಧಿಕಾರ ಹಸ್ತಾಂತರ ಮಾಡಿಕೊಳ್ಳುವುದು ಎಂದು ರಾಜಿ ಸೂತ್ರ ಕಂಡುಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net