ಏರ್ ಇಂಡಿಯಾಗೆ ಏನಿದು ಕಂಟಕ? ದೋಷವಿಲ್ಲ ಎಂದಿದ್ರೂ ಇಂಧನ ಸ್ವಿಚ್​ಗಳಲ್ಲಿ ಮತ್ತದೇ ಸಮಸ್ಯೆ! 'ರನ್'​, 'ಕಟ್​ಆಫ್'​ ಎಂದರೇನು? ​

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಏರ್ ಇಂಡಿಯಾ ವಿಮಾನ ಸಂಸ್ಥೆಗೆ ತಪ್ಪದ ಕಂಟಕ?
  • 2025ರ ಏರ್ ಇಂಡಿಯಾ ದುರಂತ ನೆನಪಿಸಿದ ಮತ್ತೊಂದು ಘಟನೆ
  • ಲಂಡನ್​ನ ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ವಿಮಾನದಲ್ಲೂ ಇಂಜಿನ್​ ಸ್ವಿಚ್​ ದೋಷ
  • ರನ್​ನಿಂದ ಎರಡು ಬಾರಿ ಕಟ್​ಆಫ್​ಗೆ ಹೋದ ಸ್ವಿಚ್​
ನವದೆಹಲಿ: ಕಳೆದ ವರ್ಷ ಜೂನ್​ 12ರಂದು ಅಹಮದಾಬಾದ್​ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಇಂದಿಗೂ ಮರೆಯಲಾಗದ ಭೀಕರ ಅಪಘಾತ. ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಈ ದುರ್ಘಟನೆಯಲ್ಲಿ ಬರೋಬ್ಬರಿ 260 ಮಂದಿ ಸಾವಿಗೀಡಾದರು. 242 ಪ್ರಯಾಣಿಕರ ಪೈಕಿ ಓರ್ವ ಪವಾಡದಂತೆ ಬದುಕುಳಿದಿದ್ದು ಬಿಟ್ಟರೆ ಇನ್ನೆಲ್ಲರೂ ಸಜೀವ ದಹನವಾದರು. ಪ್ರಯಾಣಿಕರು ಮಾತ್ರವಲ್ಲದೇ, ಕಾಲೇಜು ಕಟ್ಟಡಕ್ಕೆ ಡಿಕ್ಕಿಯಾದ ಪರಿಣಾಮ ಮಹಡಿಯೊಳಗಿದ್ದ ವಿದ್ಯಾರ್ಥಿಗಳು ಸೇರಿ ಒಟ್ಟು 19 ಮಂದಿ ಅಪಘಾತದಲ್ಲಿ ಉಸಿರು ಚೆಲ್ಲಿದರು.

ಅತ್ಯಂತ ಘೋರ ದುರಂತ

ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಅಪಘಾತಕ್ಕೆ ಏನೆಲ್ಲ ಕಾರಣ? ಎಂಬ ಪ್ರಶ್ನೆಗಳು ದೇಶದಲ್ಲಿ ಭಾರೀ ಸಂಚಲನ ಹುಟ್ಟುಹಾಕಿತು. ಆರಂಭದಲ್ಲಿ ವಿಮಾನ ದುರಂತದ ಪ್ರಾಥಮಿಕ ವರದಿ ಹೊರಬಿದ್ದರೂ ಪತನಕ್ಕೆ ಪೈಲೆಟ್​ ನೇರ ಹೊಣೆಯೇ? ಎಂಬ ಪ್ರಶ್ನೆ ಇಂದಿಗೂ ಅಸ್ಪಷ್ಟವಾಗಿಯೇ ಉಳಿದಿದೆ. ಇದಕ್ಕೆ ಮೂಲ ಕಾರಣ ಇಂಧನ ಸ್ವಿಚ್​ನಲ್ಲಿ ಆದ ಬದಲಾವಣೆ. ಪೈಲೆಟ್​ ಸಹಾಯವಿಲ್ಲದೆ, 'ರನ್'​ನಲ್ಲಿದ್ದ ಸ್ವಿಚ್​ ಸೀದಾ 'ಕಟ್​ಆಫ್'​ ತಲುಪಿದ್ದೇ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಕಾರಣವಾಗಿದ್ದು.

ಬೋಯಿಂಗ್​ನಲ್ಲಿ ಏಕಿಂತ ಸಮಸ್ಯೆ?

ಜೂನ್ 12ರಂದು ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ಬೋಯಿಂಗ್ 787 ವಿಮಾನದಲ್ಲಿದ್ದ ಪೈಲಟ್ "ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?" ಎಂದು ಕೇಳುವುದನ್ನು ಹಾಗೂ ನಾನದನ್ನು ಮಾಡಿಲ್ಲ ಎಂದು ಎರಡನೇ ಪೈಲಟ್​ ಹೇಳಿರುವುದನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಸೆರೆಹಿಡಿದಿದೆ. ವಿಮಾನ ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಇಂಧನ ರನ್​ ಸ್ವಿಚ್​, ಕಟ್​ ಆಫ್​ ಆಗಿದ್ದು ಹೇಗೆ ಎಂಬುದು ತೀವ್ರ ಗೊಂದಲಕ್ಕೆ ಕಾರಣವಾಯಿತು. ಹೀಗಾಗಿ, ಇಂಧನ ಸ್ವಿಚ್‌ಗಳ ಮೇಲೆ ಚರ್ಚೆಗಳು ಶುರುವಾಯಿತು. ಈಗ ಮತ್ತೊಂದು ಬೋಯಿಂಗ್ ವಿಮಾನದಲ್ಲಿ ಇದೇ ರೀತಿಯ ತಾಂತ್ರಿಕ ದೋಷ ಕಂಡುಬಂದಿರುವುದು ಸದ್ಯ ಭಾರೀ ಆತಂಕಕ್ಕೆ ದೂಡಿದೆ.

ಸಮಸ್ಯೆಯಿಲ್ಲ ಎಂದಿದ್ರೂ ಮತ್ತದೇ ದೋಷ ಏಕೆ?

ಫೆ.02ರಂದು ಲಂಡನ್​ನ ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ AI 132 ವಿಮಾನದಲ್ಲಿ ಇಂಧನ ಸ್ವಿಚ್​ ಎರಡು ಬಾರಿ ರನ್​ನಿಂದ ಕಟ್​ಆಫ್​ಗೆ ಹೋಗಿದ್ದರ ಬಗ್ಗೆ ಪೈಲೆಟ್​ ಸಂಸ್ಥೆಗೆ ವರದಿ ಮಾಡಿದ್ದರು. ಅದರಲ್ಲೂ ವಿಮಾನ ಇನ್ನೇನು ಟೇಕಾಫ್​ ಆಗಬೇಕು ಎನ್ನುವ ಸಮಯದಲ್ಲೇ ಹೀಗಾಗಿದೆ. ಆದರೆ, ಅಲ್ಲಿಂದ ಬೆಂಗಳೂರಿಗೆ ಬರುವವರೆಗೂ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇದು ದೊಡ್ಡ ಅನಾಹುತವನ್ನೇ ತಪ್ಪಿಸಿದೆ. ಇಂಜಿನ್ ಸ್ಟಾರ್ಟ್ ಆಗುವ ವೇಳೆ ಇಂಧನ ಸ್ವಿಚ್​ ರನ್​ನಿಂದ ದಿಢೀರ್​ ಕಟ್ಆಫ್ ಸ್ಥಾನಕ್ಕೆ ಶಿಫ್ಟ್​ ಆಗಿದೆ. ಅಹಮದಾಬಾದ್​ ದುರಂತ ಬಳಿಕ ಎಲ್ಲ ವಿಮಾನಗಳನ್ನು ಪರಿಶೀಲಿಸಿದ್ದ ಬೋಯಿಂಗ್, ಅಂತಹ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದಿತ್ತು. ಆದರೀಗ, ಅದೇ ರೀತಿಯ ತಾಂತ್ರಿಕ ದೋಷ ಪತ್ತೆಯಾಗಿರುವುದು ಕಳವಳಕಾರಿ.

ಏನಿದು ಇಂಧನ ನಿಯಂತ್ರಣ ಸ್ವಿಚ್‌ಗಳು?

ಇಂಧನ ನಿಯಂತ್ರಣ ಸ್ವಿಚ್‌ಗಳು ವಿಮಾನದ ಕಾಕ್​ಪಿಟ್​ನ ಅತ್ಯವಶ್ಯಕ ಘಟಕ. ಇದು ವಿಮಾನದ ಇಂಜಿನ್​ಗಳಿಗೆ ಇಂಧನ ಹರಿವನ್ನು ನಿಯಂತ್ರಿಸುತ್ತದೆ. ಪತನವಾದ ಬೋಯಿಂಗ್​ 787 ಡ್ರೀಮ್​ಲೈನರ್​ ವಿಮಾನ, ಎರಡು ಜಿಇ ಇಂಜಿನ್​ಗಳನ್ನು ಹೊಂದಿದ್ದು, ವಿಮಾನದ ಥರ್ಸ್ಟ್​ ಲೆವೆರ್ಸ್​ ಕೆಳಗಡೆ ಇಂಧನ ಕಂಟ್ರೋಲ್​ ಸ್ವಿಚ್​ಗಳನ್ನು ಇರಿಸಲಾಗಿರುತ್ತದೆ.

ಇಂಧನ ಸ್ವಿಚ್​ಗಳ ಬಹುಮುಖ್ಯ ಕಾರ್ಯಗಳೇನು?

ನೆಲದ ಮೇಲೆ ಇಂಜಿನ್‌ಗಳನ್ನು ಪ್ರಾರಂಭಿಸುವುದು ಅಥವಾ ಸ್ಥಗಿತಗೊಳಿಸುವುದು. ತುರ್ತು ಪರಿಸ್ಥಿತಿಯಲ್ಲಿ ಹಾರಾಟದ ಸಮಯದಲ್ಲಿ ಇಂಜಿನ್‌ಗಳನ್ನು ಹಸ್ತಚಾಲಿತವಾಗಿ ಸ್ಥಗಿತಗೊಳಿಸುವುದು ಅಥವಾ ಮರುಪ್ರಾರಂಭಿಸುವುದು. ಅಂದಹಾಗೆ ಈ ಸ್ವಿಚ್‌ಗಳನ್ನು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅವುಗಳು ನಿಗದಿತ ಸ್ಥಾನದಲ್ಲಿ ಉಳಿಯಲು ಸ್ಪ್ರಿಂಗ್-ಲೋಡ್ ಆಗಿರುತ್ತವೆ ಮತ್ತು ಅವುಗಳನ್ನು "RUN" (ಇಂಧನ ಹರಿಯುವಿಕೆ) ದಿಂದ "CUTOFF" (ಇಂಧನ ನಿಲ್ಲಿಸುವುದು)ಗೆ ಸರಿಸಲು, ಪೈಲಟ್, ಸ್ವಿಚ್ ಸ್ಥಾನವನ್ನು ಬದಲಾಯಿಸುವ ಮೊದಲು ಅದನ್ನು ಮೇಲಕ್ಕೆ ಎಳೆಯಬೇಕು.

ಸಾಮಾನ್ಯ ಕಾರ್ಯಾಚರಣೆಗಳಲ್ಲಿ ಇಂಧನ ಸ್ವಿಚ್‌ಗಳ ಪಾತ್ರ

ದಿನನಿತ್ಯದ ಕಾರ್ಯಾಚರಣೆಗಳ ಸಮಯದಲ್ಲಿ, ಪೈಲಟ್‌ಗಳು ಮುಖ್ಯವಾಗಿ ಇಂಜಿನ್ ಸ್ಟಾರ್ಟ್-ಅಪ್ ಮತ್ತು ಸ್ಥಗಿತಗೊಳಿಸುವ ಕಾರ್ಯವಿಧಾನಗಳ ಸಮಯದಲ್ಲಿ ಇಂಧನ ಸ್ವಿಚ್‌ಗಳನ್ನು ಬಳಸುತ್ತಾರೆ. ಸ್ವಿಚ್​ ಅನ್ನು ಮೇಲಕ್ಕೆ ಎತ್ತಿ “RUN” ಸ್ಥಾನದ ಕಡೆಗೆ ಸರಿಸಿದರೆ, ಇಂಧನವು ಇಂಜಿನ್‌ಗಳಿಗೆ ಹರಿಯುತ್ತದೆ ಮತ್ತು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದೇ ರೀತಿ ಸ್ವಿಚ್ ಅನ್ನು “CUTOFF” ಗೆ ಸರಿಸುವುದರಿಂದ ತಕ್ಷಣವೇ ಇಂಧನ ಪೂರೈಕೆ ನಿಲ್ಲುತ್ತದೆ ಮತ್ತು ಇಂಜಿನ್ ಸ್ಥಗಿತಗೊಳ್ಳುತ್ತದೆ. ಸುರಕ್ಷಿತ ನೆಲದ ಕಾರ್ಯಾಚರಣೆಗಳಿಗೆ ಮತ್ತು ಕೆಲವು ವಿಮಾನದಲ್ಲಿನ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಈ ಕಾರ್ಯವು ತುಂಬಾ ಅತ್ಯಗತ್ಯವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net