2025ರಲ್ಲಿ ನಡೆದ ಆ ಘಟನೆಯೇ ಎಲ್ಲವನ್ನೂ ಬದಲಿಸಿತು!...ಸಂದೀಪ್ ಪಾಠಕ್ ಎಂಬ ಅಮಿತ್ ಷಾರನ್ನು ಕಳೆದುಕೊಂಡಿದ್ದೇಕೆ ಕೇಜ್ರಿವಾಲ್​..? ​| Sandeep Pathak

Sandeep Pathak |  ಅರವಿಂದ್ ಕೇಜ್ರಿವಾಲ್ ಆಪ್ತ ಸಂದೀಪ್ ಪಾಠಕ್
Sandeep Pathak | ಅರವಿಂದ್ ಕೇಜ್ರಿವಾಲ್ ಆಪ್ತ ಸಂದೀಪ್ ಪಾಠಕ್
Published on
Sandeep Pathak: ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದರಲ್ಲಿ ಮೂರನೇ ಎರಡರಷ್ಟು ನಾಯಕರು ತಮ್ಮ ಶಾಸಕಾಂಗ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ ಘಟನೆಯು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಆಪ್​ ನಾಯಕತ್ವವು ಇಂತಹದೊಂದು ಬಿಕ್ಕಟ್ಟನ್ನು ನಿರೀಕ್ಷಿಸಿತ್ತಾದರೂ, ಸದ್ಯ ಈ ಪಟ್ಟಿಯಲ್ಲಿರುವ ಸಂದೀಪ್ ಪಾಠಕ್ ಹೆಸರು ಪಕ್ಷದ ಆಂತರಿಕ ವಲಯದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿದೆ.
ಎಎಪಿಯ ಅತ್ಯಂತ ನಿಷ್ಠಾವಂತ ಮತ್ತು ಬಿಜೆಪಿಯ ಕಟು ಟೀಕಾಕಾರ ಎಂದು ಗುರುತಿಸಿಕೊಂಡಿದ್ದ ಪಾಠಕ್, ಪಕ್ಷ ಬಿಡುವುದಷ್ಟೆ ಅಲ್ಲದೆ, ತಾವು ದಶಕಗಳ ಕಾಲ ವಿರೋಧಿಸಿಕೊಂಡು ಬಂದಿದ್ದ ಬಿಜೆಪಿಯನ್ನೇ ಸೇರುತ್ತಾರೆ ಎಂಬುದು ಹಿರಿಯ ನಾಯಕರ ಊಹೆಗೂ ಮೀರಿತ್ತು.

ಇವರು ಆಮ್​ ಆದ್ಮಿ ಪಾಲಿಗೆ ಅಮಿತ್​ ಷಾ!

ಬ್ಯಾಕ್‌ರೂಮ್ ಆಪರೇಟರ್ ಎಂದೇ ಖ್ಯಾತರಾಗಿದ್ದ ಸಂದೀಪ್ ಪಾಠಕ್, ಕೇವಲ ಸಂಖ್ಯೆಗಳು ಮತ್ತು ಫಲಿತಾಂಶಗಳಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದ ತಜ್ಞರಾಗಿದ್ದರು. ಅರವಿಂದ್ ಕೇಜ್ರಿವಾಲ್ ಪಾಲಿಗೆ ಇವರು ಚಾಣಕ್ಯನಂತಿದ್ದರು. ಇನ್ನೂ ಮುಂದುವರೆದು ಹೇಳುವುದಾದರೆ ಇವರು ಆಮ್​ ಆದ್ಮಿಯಲ್ಲಿದ್ದ ಅಮಿತ್ ಷಾ. 2025ರ ಆರಂಭದವರೆಗೆ ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ಇವರು, ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ ಹರಿಯಾಣದ ಮೈತ್ರಿ ಮಾತುಕತೆ ಸೇರಿದಂತೆ ಸಾಂಸ್ಥಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.
2025ರ ಬಳಿಕ ಕೇಜ್ರಿವಾಲ್ ಮತ್ತು ಪಕ್ಷದ ಕೇಂದ್ರ ಕಾರ್ಯತಂತ್ರದಿಂದ ಪಾಠಕ್​ ಅಂತರ ಹೆಚ್ಚಾಗುತ್ತಾ ಹೋಯಿತು. ಕಳೆದ ವರ್ಷದ ದೆಹಲಿ ವಿಧಾನಸಭಾ ಚುನಾವಣಾ ಸಮಯದಲ್ಲಿ ಇವರ ತಂತ್ರಗಳು ವಿಫಲವಾದವು ಎಂಬ ಆರೋಪ ಕೇಳಿಬಂದಿತ್ತು. ಅತಿಯಾದ ಭರವಸೆ ಮತ್ತು ಕಳಪೆ ಸಾಧನೆಯ ಕಾರಣದಿಂದಾಗಿ ಪಕ್ಷದ ಮುಖ್ಯಸ್ಥರೇ ಇವರನ್ನು ಪ್ರಶ್ನಿಸತೊಡಗಿದ್ದರು, ಇದು ಅಂತಿಮವಾಗಿ ಅವರನ್ನು ಮುಖ್ಯ ನಿರ್ಧಾರಗಳಿಂದ ಹೊರಗಿಡುವಂತೆ ಮಾಡಿತು ಎನ್ನಲಾಗಿದೆ.

ಏ. 23 ರಂದು ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದವರೇ ಬಿಜೆಪಿಗೆ ಜಂಪ್​!

ಈ ರಾಜಕೀಯ ಪಲ್ಲಟದ ಸಮಯವು ಬಹಳ ಕುತೂಹಲಕಾರಿಯಾಗಿದ್ದು, ರಾಘವ್ ಛಡ್ಡಾ ಬಂಡಾಯವು ಮುಂಬರುವ ಆಗಸ್ಟ್ ತಿಂಗಳಲ್ಲಿ ಸ್ಫೋಟಗೊಳ್ಳಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ನಿನ್ನೆ ಮಧ್ಯಾಹ್ನ (ಶುಕ್ರವಾರ.ಏ.25) ಈ ವಿಲೀನ ಪ್ರಕ್ರಿಯೆ ಅಚ್ಚರಿ ಎಂಬಂತೆ ಜಾರಿಯಾಯಿತು. ಇದರ ಹಿಂದೆ ದೊಡ್ಡ ಮಟ್ಟದ ಸಿದ್ಧತೆ ನಡೆದಿತ್ತು ಎಂಬುದಕ್ಕೆ ಸಾಕ್ಷಿಯಾಗಿ, ಪಕ್ಷಾಂತರಗೊಂಡ ಸಂಸದರಲ್ಲಿ ಒಬ್ಬರು ಏಪ್ರಿಲ್ 23ರಂದು ಎಎಪಿ ನಾಯಕರನ್ನೇ ಭೇಟಿಯಾಗಿ ಚರ್ಚೆ ನಡೆಸಿದ್ದರು. ಆದರೆ ಸ್ವತಃ ಅವರೇ ಪಕ್ಷ ಬಿಡುತ್ತಿದ್ದಾರೆ ಎಂಬ ಸುಳಿವು ನಾಯಕರಿಗೆ ಸಿಕ್ಕಿರಲಿಲ್ಲ.
ಈ ಬಿಕ್ಕಟ್ಟಿನಲ್ಲಿ ಇತರ ಪ್ರಮುಖ ನಾಯಕರ ಪಾತ್ರವೂ ದೊಡ್ಡದಿದ್ದು, ಏಪ್ರಿಲ್ 15ರಂದು ಅಶೋಕ್ ಮಿತ್ತಲ್ ಮೇಲೆ ಇಡಿ ದಾಳಿ ನಡೆದಾಗ, ರಾಘವ್ ಛಡ್ಡಾ ಅವರೇ ಬಿಜೆಪಿಯೊಂದಿಗೆ ಸಮನ್ವಯ ಸಾಧಿಸಿ ಈ ದಾಳಿಗೆ ಸಹಕರಿಸಿದ್ದಾರೆ ಎಂಬ ಗಂಭೀರ ಆರೋಪ ಆಪ್​ನಿಂದ ಕೇಳಿಬಂದಿತ್ತು. ಇತ್ತ ಸ್ವಾತಿ ಮಲಿವಾಲ್ ಈ ಮೊದಲೇ ಕೇಜ್ರಿವಾಲ್ ನಿವಾಸದ ಸ್ಲ್ಯಾಪ್‌ಗೇಟ್ ಘಟನೆಯಿಂದಾಗಿ ಪಕ್ಷದೊಂದಿಗೆ ವಿರೋಧ ಕಟ್ಟಿಕೊಂಡಿದ್ದರು. ಕ್ರಿಕೆಟಿಗ ಮತ್ತು ಸಂಸದ ಹರ್ಭಜನ್ ಸಿಂಗ್​​ರನ್ನು ಮನವೊಲಿಸಲು ಚಂಡೀಗಢದಿಂದ ನಡೆಸಿದ ನಿರಂತರ ಪ್ರಯತ್ನಗಳು ಕೂಡ ಫಲ ನೀಡಲಿಲ್ಲ, ಅವರು ಕರೆಗಳಿಗೆ ಉತ್ತರಿಸುವುದನ್ನೇ ನಿಲ್ಲಿಸಿದ್ದರು ಎನ್ನಲಾಗಿದೆ.

ಇದು ಅತಿದೊಡ್ಡ ಹಿನ್ನಡೆ!...

ಆಮ್ ಆದ್ಮಿ ಪಕ್ಷವು ಸದ್ಯ ಈ ಬಿಕ್ಕಟ್ಟನ್ನು ಕಾನೂನಾತ್ಮಕವಾಗಿ ಎದುರಿಸಲು ಸಜ್ಜಾಗಿದ್ದು, ಪಕ್ಷಾಂತರ ವಿರೋಧಿ ಕಾಯ್ದೆಯಡಿ ಪಾಠಕ್, ಛಡ್ಡಾ ಮತ್ತು ಅಶೋಕ್ ಮಿತ್ತಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಸಭೆಯ ಮುಖ್ಯ ಸಚೇತಕ ಎನ್ ಡಿ ಗುಪ್ತಾ ಅವರಿಗೆ ಮನವಿ ಮಾಡಿದೆ ಎಂದು ತಿಳಿದುಬಂದಿದ್ದು, ಇದರ ಫಲಿತಾಂಶ ಏನೇ ಇರಲಿ, ಕೇವಲ ಒಂದೇ ತಿಂಗಳ ಅವಧಿಯಲ್ಲಿ ರಾಷ್ಟ್ರೀಯ ಸಾಂಸ್ಥಿಕ ಪ್ರಧಾನ ಕಾರ್ಯದರ್ಶಿ, ಕೇಜ್ರಿವಾಲ್​ರ ಆಪ್ತ ಮತ್ತು ರಾಜ್ಯಸಭೆಯ ಉಪ ನಾಯಕನನ್ನು ಕಳೆದುಕೊಂಡಿರುವುದು ಆಪ್​ ಇತಿಹಾಸದಲ್ಲೇ ಅತಿದೊಡ್ಡ ಹಿನ್ನಡೆ ಎನ್ನುವುದರಲ್ಲಿ ಅನುಮಾನವಿಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net