ಸಿಎಂ ಪಟ್ಟಕ್ಕಿಂತ 'ಆ ಸಣ್ಣ' ಆಸೆಯೆ ದೊಡ್ಡದಾಯ್ತಾ?..ನಿತೀಶ್ ಕುಮಾರ್ ರಾಜ್ಯಸಭಾ ಎಂಟ್ರಿಯ ಇನ್​ಸೈಡ್​ ಸ್ಟೋರಿ ಇಲ್ಲಿದೆ! | Nitish Kumar

Nitish Kumar | ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್
Nitish Kumar | ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್
Published on
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಬಹುತೇಕ ಪಕ್ಕಾ ಆಗಿದ್ದು, ಈಗಾಗಲೇ ಅವರ ನಾಮಪತ್ರ ರಶೀದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್‌ನಲ್ಲಿ ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಕೇವಲ ನಾಲ್ಕು ತಿಂಗಳೊಳಗೆ ನಿತೀಶ್ ಕುಮಾರ್ ರಾಜೀನಾಮೆಯ ಸುದ್ದಿ ರಾಜಕೀಯ ವಿಶ್ಲೇಷಕರನ್ನು ಗೊಂದಲಕ್ಕೀಡು ಮಾಡಿದೆ.
ಸಿಎಂ ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ತಮ್ಮ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಈ ಹಿಂದೆ ಕುಟಂಬ ರಾಜಕಾರಣವನ್ನು ಕಟುವಾಗಿ ವಿರೋಧಿಸುತ್ತಿದ್ದ ನಿತೀಶ್ ಕುಮಾರ್, ಈ ಕಲ್ಪನೆಯನ್ನು ನೋಡಿ ಅಸಹ್ಯಪಡುತ್ತಿದ್ದರು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ತಮ್ಮ ಮಗನಿಗೆ ಪಟ್ಟ ಕಟ್ಟಲು ಸಿದ್ಧರಾದಂತೆ ಕಂಡು ಬರುತ್ತಿದೆ.

ನಿತೀಶ್ ಕುಮಾರ್ ಆರೋಗ್ಯದ ಬಗ್ಗೆ ಕಳವಳ

ಎನ್‌ಡಿಎ ಸಾಧಿಸಿರುವ ಅನೇಕ ಗೆಲುವುಗಳಲ್ಲಿ ನಿತೀಶ್​ ಕುಮಾರ್ ಪಾಲಿದೆ. ಸದ್ಯ ಅವರ ವಯಸ್ಸು 75. ಕಳೆದ ಎರಡು ವರ್ಷಗಳಿಂದ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿನ ಅವರ ವಿಚಿತ್ರ ವರ್ತನೆಯ ವಿಡಿಯೋಗಳು ವೈರಲ್ ಆಗಿವೆ. ತೇಜಸ್ವಿ ಯಾದವ್ ನೇತೃತ್ವದ ಆರ್​ಜೆಡಿ ನಿತೀಶ್​ರ ಆರೋಗ್ಯ ಸ್ಥಿತಿಯನ್ನು ಪ್ರಶ್ನಿಸಲು ಚುನಾವಣೆ ಸಮಯದಲ್ಲಿ ಈ ವಿಡಿಯೋಗಳನ್ನು ಬಳಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ನಿತೀಶ್​​ ಕುಮಾರ್​ ಅವರನ್ನು ರಾಜ್ಯಸಭೆಗೆ ಕಳುಹಿಸುವ ತೀರ್ಮಾನಕ್ಕೆ ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಬಂದಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಹಿರಿಯ ನಾಯಕನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಅವರ ಆರೋಗ್ಯದ ಬಗ್ಗೆ ಎದುರಾಗಿರುವ ಪ್ರಶ್ನೆಗಳನ್ನು ಕಡಿಮೆಗೊಳಿಸಬಹುದು ಎನ್ನುವುದು ವರಿಷ್ಟರ ಲೆಕ್ಕಾಚಾರ.

ರಾಜ್ಯಸಭೆಯ ಆಸೆ

ನಿತೀಶ್ ಕುಮಾರ್ ಅವರಿಗೆ ರಾಜ್ಯಸಭಾ ಸದಸ್ಯರಾಗಬೇಕೆಂಬ ಹಂಬಲ ಇಂದು ನಿನ್ನೆಯದಲ್ಲ, ಅದು ಅವರ ದಶಕಗಳ ಕಾಲದ ಕನಸು ಎಂದು ಅವರ ಆಪ್ತ ವಲಯದ ಅನೇಕ ನಾಯಕರು ನೆನಪಿಸಿಕೊಡಿದ್ದಾರೆ.
2022ರಲ್ಲಿ ಪತ್ರಕರ್ತರೊಂದಿಗೆ ನಡೆದ ಅನೌಪಚಾರಿಕ ಮಾತುಕತೆಯ ಸಂದರ್ಭದಲ್ಲಿ ನಿತೀಶ್ ಕುಮಾರ್ ತಮ್ಮ ಮನದ ಇಂಗಿತವನ್ನು ಹೊರಹಾಕಿದ್ದರು. ನನಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯಿಲ್ಲ. ಆದರೆ, ಇದುವರೆಗೆ ರಾಜ್ಯಸಭೆಯ ಸದಸ್ಯನಾಗಿಲ್ಲ ಎಂಬ ಕೊರಗಿದೆ. ಆ ಅವಕಾಶ ಸಿಕ್ಕರೆ ಖಂಡಿತ ಹಿಂಜರಿಯುವುದಿಲ್ಲ ಎಂದು ಹೇಳಿದ್ದರಂತೆ. ಅದಕ್ಕೆ ಈಗ ಕಾಲ ಕೂಡಿ ಬಂದಂತಾಗಿದೆ.
ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ರಾಜಕೀಯ ಪಯಣ ಆರಂಭಿಸಿದ ಬಿಹಾರದ ನಾಯಕರುಗಳೆಂದರೆ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಮತ್ತು ಸುಶೀಲ್ ಕುಮಾರ್ ಮೋದಿ. ಈ ಮೂವರ ಜೊತೆಗೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಮತ್ತು ಶರದ್ ಯಾದವ್ ಕೂಡ ಬಿಹಾರ ರಾಜಕಾರಣದ ದಿಗ್ಗಜರು.

ನಿತೀಶ್ ಕುಮಾರ್ ಸ್ಥಾನಕ್ಕೆ ಯಾರು..?

ಬಿಹಾರದ ರಾಜಕೀಯ ವಲಯದಲ್ಲಿ ನಿತೀಶ್ ಕುಮಾರ್ ಬದಲಿಗೆ ಯಾವ ಬಿಜೆಪಿ ನಾಯಕ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಊಹಾಪೋಹಗಳು ಜೋರಾಗಿವೆ. ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕೇಂದ್ರ ಸಚಿವ ನಿತ್ಯಾನಂದ ರೈ ಮತ್ತು ಬಿಹಾರ ಸಚಿವ ದಿಲೀಪ್ ಕುಮಾರ್ ಜೈಸ್ವಾಲ್ ಹೆಸರು ಮುಂಚೂಣಿಯಲ್ಲಿದೆ.
ಗೃಹ ಖಾತೆ ನಿಭಾಯಿಸುತ್ತಿರುವ ಚೌಧರಿ, ಬಿಹಾರದ ಅತ್ಯಂತ ಪ್ರಭಾವಿ ಬಿಜೆಪಿ ನಾಯಕರಲ್ಲಿ ಒಬ್ಬರು ಮತ್ತು ಸರ್ಕಾರದಲ್ಲಿ ನಂಬರ್ 2 ಆಗಿದ್ದಾರೆ. ನಿತ್ಯಾನಂದ ರೈ ಕೇಂದ್ರ ಸರ್ಕಾರದಲ್ಲಿ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಜೈಸ್ವಾಲ್ ಮೂರು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ರೇಸ್​ನಲ್ಲಿರುವ ಮೂವರು ಕೂಡ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net