ಗೆದ್ದವರನ್ನೆಲ್ಲಾ ಸೆಳೆಯುವುದೇ ಈ ಮಣ್ಣಿನ ಗುಣನಾ..? ಉದ್ಧವ್ ಬಣದ ಸಂಸದ ಶಿಂಧೆ ಪಾಳಯ ಸೇರಿದ್ದರ ಹಿಂದಿದೆ ಭೀಕರ ಇತಿಹಾಸ | Parbhani LokSabha

Parbhani LokSabha |  ಉದ್ಧವ್ ಬಣದ ಸಂಸದ ಶಿಂಧೆ ಪಾಳಯ ಸೇರಿದ್ದರ ಹಿಂದಿದೆ ಭೀಕರ ಇತಿಹಾಸ
Parbhani LokSabha | ಉದ್ಧವ್ ಬಣದ ಸಂಸದ ಶಿಂಧೆ ಪಾಳಯ ಸೇರಿದ್ದರ ಹಿಂದಿದೆ ಭೀಕರ ಇತಿಹಾಸ
Published on
Parbhani LokSabha: ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದ ಅತ್ಯಂತ ಪ್ರಮುಖ ರಾಜಕೀಯ ಕೇಂದ್ರವಾದ ಪರ್ಭಣಿ ಲೋಕಸಭಾ ಕ್ಷೇತ್ರದಲ್ಲಿ ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ಸಂಸದ ಸಂಜಯ್ ಬಾಂಡು ಜಾಧವ್ ತಮ್ಮ ಪಕ್ಷವನ್ನು ತೊರೆದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿರುವುದು ಕೇವಲ ಒಂದು ವೈಯಕ್ತಿಕ ನಿರ್ಧಾರವಾಗಿ ಉಳಿದಿಲ್ಲ. ಇದು ಪರ್ಭಣಿ ಕ್ಷೇತ್ರದ ಜನಪ್ರತಿನಿಧಿಗಳು ದಶಕಗಳಿಂದ ಸಂಸತ್ತಿನಲ್ಲಿ ಮುಂದುವರಿಸಿಕೊಂಡು ಬಂದಿರುವ ಒಂದು ವಿಚಿತ್ರ ಬಂಡಾಯದ ಇತಿಹಾಸದ ವಿಸ್ತರಣೆಯಾಗಿದೆ.
ಮುಂಬೈನಿಂದ ಸುಮಾರು ಐದು ನೂರು ಕಿಲೋಮೀಟರ್ ದೂರದಲ್ಲಿರುವ ಪರ್ಭಣಿಯು ಸಾಂಪ್ರದಾಯಿಕವಾಗಿ ಶಿವಸೇನೆಯ ಭದ್ರವಾದ ಕೋಟೆಯಾಗಿದ್ದರೂ ಸಹ, ಇಲ್ಲಿಂದ ಗೆದ್ದು ಹೋದ ಸಂಸದರು ಮಾತ್ರ ಎಂದಿಗೂ ಪಕ್ಷದೊಂದಿಗೆ ಸುದೀರ್ಘ ಸಂಬಂಧವನ್ನು ಹೊಂದಿರಲಿಲ್ಲ. ಅವರು ಆಗಾಗ ಅವಿಭಜಿತ ಶಿವಸೇನೆಯನ್ನು ತೊರೆದು ವಿರೋಧಿ ಪಾಳಯಗಳನ್ನು ಸೇರಿಕೊಳ್ಳುತ್ತಾ ಬಂದಿದ್ದು, ಸಂಜಯ್ ಜಾಧವ್ ಈ ಸರಣಿ ಬಂಡಾಯದ ಇತ್ತೀಚಿನ ಕೊಂಡಿಯಾಗಿದ್ದಾರೆ.

ಜಾಧವ್​ ಪಕ್ಷಾಂತರಕ್ಕೆ ಕಾರಣರಾದ್ರಾ ಆ ಶಾಸಕ..?

ಮೂರು ಬಾರಿ ಸಂಸದರಾಗಿ ಮತ್ತು ಎರಡು ಬಾರಿ ಪರ್ಭಣಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಜಾಧವ್, ಸ್ಥಳೀಯ ಶಾಸಕ ಡಾ. ರಾಹುಲ್ ಪಾಟೀಲ್ ಅವರೊಂದಿಗೆ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಪಾಟೀಲ್ ಅವರ ಕುಟುಂಬವು ಈ ಭಾಗದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದು, ಪ್ರಾದೇಶಿಕ ನಾಯಕತ್ವದ ಈ ಸಂಘರ್ಷವೇ ಜಾಧವ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಕುತೂಹಲಕಾರಿ ಸಂಗತಿಯೆಂದರೆ, ತಮ್ಮ ಬೆಂಬಲಿಗರಲ್ಲಿ ಬಾಂಡು ಬಾಸ್ ಎಂದೇ ಜನಪ್ರಿಯರಾಗಿರುವ ಸಂಜಯ್ ಜಾಧವ್ ಅವರ ರಾಜಕೀಯ ಶೈಲಿಯೇ ಹಿಂದೆ ಪರ್ಭಣಿಯಿಂದ ಗೆದ್ದಿದ್ದ ಇತರ ಶಿವಸೇನಾ ಸಂಸದರು ಪಕ್ಷದ ವಿರುದ್ಧ ಬಂಡಾಯವೆದ್ದು ಹೊರಹೋಗಲು ಮುಖ್ಯ ಕಾರಣ ಎಂದು ಅವರ ಮೇಲೆ ಆರೋಪಗಳು ಕೇಳಿಬಂದಿದ್ದವು.
ಪರ್ಭಣಿ ಕ್ಷೇತ್ರವು ಆರಂಭದಿಂದಲೂ ತೀವ್ರ ಕೋಮು ಧ್ರುವೀಕರಣದ ರಾಜಕಾರಣಕ್ಕೆ ಹೆಸರಾಗಿದ್ದು, ಇದೇ ಕಾರಣದಿಂದಾಗಿ ಶಿವಸೇನೆಯು ದೇಶದ ಸಂಸತ್ತಿನಲ್ಲಿ ತನ್ನ ಖಾತೆಯನ್ನು ತೆರೆಯಲು ಈ ಕ್ಷೇತ್ರ ಪ್ರಮುಖ ಕಾರಣವಾಗಿತ್ತು. 1989ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆಯ ಅಶೋಕ್ ದೇಶ್‌ಮುಖ್ ಇಲ್ಲಿಂದ ಆಯ್ಕೆಯಾಗುವ ಮೂಲಕ ಸಂಸತ್ತಿನಲ್ಲಿ ಪಕ್ಷದ ಮೊದಲ ನಾಲ್ಕು ಜನರ ಸಂಸದರ ತಂಡವನ್ನು ಪ್ರತಿನಿಧಿಸಿದ್ದರು. ಅವರೊಂದಿಗೆ ಮುಂಬೈ ಸೌತ್ ಸೆಂಟ್ರಲ್‌ನಿಂದ ವಾಮನ್‌ರಾವ್ ಮಹಾಡಿಕ್, ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಪತ್ರಕರ್ತ ಹಾಗೂ ನಾಟಕಕಾರ ವಿದ್ಯಾಧರ್ ಅಲಿಯಾಸ್ ಅಣ್ಣಾ ಗೋಖಲೆ ಮತ್ತು ಔರಂಗಾಬಾದ್‌ನಿಂದ ಮೊರೇಶ್ವರ್ ಸೇವೆ ಆಯ್ಕೆಯಾಗಿದ್ದರು. ಆದರೆ ಅಧಿಕೃತ ದಾಖಲೆಗಳ ಪ್ರಕಾರ ದೇಶ್‌ಮುಖ್ ಅವರು ಸ್ವತಂತ್ರ ಸಂಸದರಾಗಿದ್ದರು ಮತ್ತು 1991ರಲ್ಲಿ ಮತ್ತೊಮ್ಮೆ ಆಯ್ಕೆಯಾದ ತಕ್ಷಣವೇ ಶಿವಸೇನೆಯನ್ನು ತೊರೆದಿದ್ದರು.

ಇಲ್ಲಿ ಬಿಲ್ಲು ಬಾಣದ್ದೇ ಹವಾ!..

ದೇಶ್‌ಮುಖ್ ನಂತರ ಬಂದ ಸುರೇಶ್ ಜಾಧವ್ ಪಾಟೀಲ್ 1999ರಲ್ಲಿ, ತುಕರಾಮ್ ರೆಂಗೆ ಪಾಟೀಲ್ 2004ರಲ್ಲಿ ಹಾಗೂ ಗಣೇಶ್‌ರಾವ್ ರಾವತ್ ದುಧಗಾಂವ್ಕರ್ 2009ರಲ್ಲಿ ಶಿವಸೇನೆಯಿಂದ ಗೆದ್ದು ನಂತರ ಪಕ್ಷಾಂತರ ಮಾಡಿದ್ದರು. ಇದರಲ್ಲಿ ರೆಂಗೆ ಪಾಟೀಲ್ ಅವರು 2009ರಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ನಡೆದ ಅವಿಶ್ವಾಸ ನಿರ್ಣಯದ ಮತದಾನದ ವೇಳೆ ಸಂಸತ್ತಿಗೆ ಗೈರುಹಾಜರಾದ ಮಹಾರಾಷ್ಟ್ರದ ಇಬ್ಬರು ಸಂಸದರಲ್ಲಿ ಒಬ್ಬರಾಗಿದ್ದರು. ಆಗ ಬಿಜೆಪಿಯ ಹರಿಭಾವು ರಾಥೋಡ್ ಮತ್ತೊಬ್ಬ ಗೈರಾದ ಸಂಸದರಾಗಿದ್ದರು. ರೆಂಗೆ ಪಾಟೀಲ್ ಅವರು ಆಗ ಶಾಸಕರಾಗಿದ್ದ ಸಂಜಯ್ ಜಾಧವ್ ಅವರೊಂದಿಗೆ ನಿರಂತರ ರಾಜಕೀಯ ಸಂಘರ್ಷ ಹೊಂದಿದ್ದರು. ಲೋಕಸಭೆಯಲ್ಲಿ ಎರಡು ಅವಧಿಗಳನ್ನು ಪೂರೈಸಿದ ನಂತರವೂ ಶಿವಸೇನೆಯಲ್ಲೇ ಉಳಿದಿದ್ದ ಏಕೈಕ ಸಂಸದ ಎಂಬ ಹೆಗ್ಗಳಿಕೆ ಸಂಜಯ್ ಜಾಧವ್ ಅವರದ್ದಾಗಿತ್ತು, ಆದರೆ ಈಗ ಅವರೂ ಸಹ ಪಕ್ಷ ಬದಲಾಯಿಸಿದ್ದಾರೆ.
1999 ರಿಂದ ಪರ್ಭಣಿಯ ಮತದಾರರು ಸದಾ ಶಿವಸೇನೆಯ ಬಿಲ್ಲು ಮತ್ತು ಬಾಣದ ಚಿಹ್ನೆಗೇ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ. 1998ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ನ ಸುರೇಶ್ ವರ್ಪುಡ್ಕರ್ ಅವರು ಶಿವಸೇನೆಯ ಸುರೇಶ್ ಜಾಧವ್ ಪಾಟೀಲ್ ಅವರನ್ನು ಸೋಲಿಸಿದ್ದನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಚುನಾವಣೆಯಲ್ಲಿ ಶಿವಸೇನೆಯೇ ಇಲ್ಲಿ ಜಯಭೇರಿ ಬಾರಿಸಿದೆ. ಪರ್ಭಣಿಯಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿದ್ದು, 80ರ ದಶಕದಲ್ಲಿ ಮುಂಬೈನಿಂದ ಹೊರಗೆ ಹಿಂದುತ್ವದ ಆಧಾರದ ಮೇಲೆ ನೆಲೆಯೂರಲು ಯತ್ನಿಸುತ್ತಿದ್ದ ಶಿವಸೇನೆಗೆ ಈ ಜನಸಂಖ್ಯಾ ಸಮೀಕರಣವು ಭಾರಿ ಅನುಕೂಲ ಮಾಡಿಕೊಟ್ಟಿತ್ತು.

ಇವಿಎಂನಲ್ಲಿ ಶಿವಸೇನೆ ಚಿಹ್ನೆ ಮಾಯ!..

ಕಳೆದ ಲೋಕಸಭಾ ಚುನಾವಣೆಯು ಪರ್ಭಣಿ ಇತಿಹಾಸದಲ್ಲೇ ಅತ್ಯಂತ ಭಿನ್ನವಾಗಿತ್ತು, ಏಕೆಂದರೆ ಮೊದಲ ಬಾರಿಗೆ ಈ ಕ್ಷೇತ್ರದ ಇವಿಎಂನಲ್ಲಿ ಶಿವಸೇನೆಯ ಸಾಂಪ್ರದಾಯಿಕ ಬಿಲ್ಲು ಬಾಣದ ಚಿಹ್ನೆ ಇರಲಿಲ್ಲ. ಸಂಜಯ್ ಜಾಧವ್ ಅವರು ಉದ್ಧವ್ ಠಾಕ್ರೆ ಬಣದ ಉರಿಯುವ ಪಂಜು ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿದ್ದರು ಮತ್ತು ಅವರ ಎದುರಾಳಿಯಾಗಿ ರಾಷ್ಟ್ರೀಯ ಸಮಾಜ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಚಿವ ಮಹಾದೇವ್ ಜಂಕರ್ ಕಣದಲ್ಲಿದ್ದರು. ಈ ಚುನಾವಣೆಯಲ್ಲಿ ಸಂಜಯ್ ಜಾಧವ್ ಸುಮಾರು ಒಂದು ಲಕ್ಷದ ಮೂವತ್ತೈದು ಸಾವಿರ ಮತಗಳ ಭಾರಿ ಅಂತರದಿಂದ ಜಯಗಳಿಸಿದರು. ಒಬಿಸಿ ಧಂಗರ್ ಅಂದರೆ ಕುರುಬ ಸಮುದಾಯದ ಪ್ರಮುಖ ನಾಯಕರಾಗಿದ್ದ ಜಂಕರ್ ಅವರ ವಿರುದ್ಧ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರ ಅಲೆಯ ಕಾರಣದಿಂದಾಗಿ ಮರಾಠಾ ಮತದಾರರು ಜಾಧವ್ ಅವರ ಪರವಾಗಿ ಗಟ್ಟಿಯಾಗಿ ಕ್ರೋಡೀಕರಣಗೊಂಡರು.
ಇದರ ಜೊತೆಗೆ ದಲಿತರು ಮತ್ತು ಅತ್ಯಂತ ಆಶ್ಚರ್ಯಕರವಾಗಿ ಸಾಂಪ್ರದಾಯಿಕ ಶಿವಸೇನೆಯ ವಿರೋಧಿಗಳಾಗಿದ್ದ ಮುಸ್ಲಿಂ ಮತದಾರರು ಕೂಡ ಜಂಕರ್ ಅವರನ್ನು ಸೋಲಿಸಲು ಒಗ್ಗಟ್ಟಾಗಿ ಸಂಜಯ್ ಜಾಧವ್​ಗೆ ಮತ ಚಲಾಯಿಸಿದ್ದರು. ಈ ಮೂಲಕ ಪರ್ಭಣಿಯ ರಾಜಕೀಯವು ಧರ್ಮದ ಆಧಾರದ ಧ್ರುವೀಕರಣದಿಂದ ಜಾತಿ ಆಧಾರಿತ ಸಮೀಕರಣದ ಕಡೆಗೆ ಮುಖ ಮಾಡಿತ್ತು. ಆದರೆ ಇದರ ಬೆನ್ನಲ್ಲೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಪರ್ಭಣಿ ಲೋಕಸಭಾ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಭರ್ಜರಿ ಜಯ ಸಾಧಿಸಿತು ಮತ್ತು ಮಹಾವಿಕಾಸ್ ಅಘಾಡಿಯಿಂದ ಗೆದ್ದ ಏಕೈಕ ನಾಯಕನಾಗಿ ಸಂಜಯ್ ಜಾಧವ್ ಅವರ ರಾಜಕೀಯ ವಿರೋಧಿ ಡಾ. ರಾಹುಲ್ ಪಾಟೀಲ್ ಹೊರಹೊಮ್ಮಿದರು.

ಶಾಪ ತೊಡೆದು ಹಾಕ್ತಾರಾ ಜಾಧವ್​​..?

ಇತಿಹಾಸವನ್ನು ಗಮನಿಸಿದರೆ ಶಿವಸೇನೆಯನ್ನು ತೊರೆದು ಹೋದ ಅಶೋಕ್ ದೇಶ್‌ಮುಖ್, ಸುರೇಶ್ ಜಾಧವ್ ಪಾಟೀಲ್, ರೆಂಗೆ ಪಾಟೀಲ್ ಮತ್ತು ದುಧಗಾಂವ್ಕರ್ ಅವರಂತಹ ಪ್ರಬಲ ನಾಯಕರು ನಂತರದ ದಿನಗಳಲ್ಲಿ ರಾಜಕೀಯವಾಗಿ ಮೂಲೆಗುಂಪಾದರು. ಪ್ರಸ್ತುತ ಶಿಂಧೆ ಬಣ ಸೇರ್ಪಡೆಯಾಗಿರುವ ಮತ್ತು ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿರುವ ಸಂಜಯ್ ಬಾಂಡು ಜಾಧವ್ ಪರ್ಭಣಿಯ ಸಂಸದರಿಗೆ ಅಂಟಿಕೊಂಡಿರುವ ಈ ರಾಜಕೀಯ ಶಾಪವನ್ನು ಮುರಿದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ರಾಜಕೀಯ ವಿಶ್ಲೇಷಕರು ಕುತೂಹಲದಿಂದ ಗಮನಿಸುತ್ತಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net