ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್!....3 ನಿಮಿಷ 10 ಸೆಕೆಂಡ್‌ನ ಈ ನಿಯಮ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿರಲಿ | Vande Mataram Bill

Vande Mataram Bill > ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್!
Vande Mataram Bill > ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್!
Published on
Vande Mataram Bill: ರಾಷ್ಟ್ರಗೀತೆ ಜನ ಗಣ ಮನಗೆ ಪ್ರಸ್ತುತ ಲಭ್ಯವಿರುವ ಕಾನೂನು ರಕ್ಷಣೆಯನ್ನು ರಾಷ್ಟ್ರೀಯ ಗೀತೆ ವಂದೇ ಮಾತರಂಗೂ ವಿಸ್ತರಿಸುವ ಉದ್ದೇಶದಿಂದ, 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯ್ದೆಗೆ (Prevention of Insults to National Honour Act) ಪ್ರಮುಖ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಸ್ತಾಪಿತ ವಂದೇ ಮಾತರಂ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಂಡಿಸಲು ನಿರ್ಧರಿಸಿದ್ದು, ಈ ಕಾಯ್ದೆ ಅಂಗೀಕಾರಗೊಂಡರೆ, ವಂದೇ ಮಾತರಂ ಗೀತೆಗೆ ನೀಡುವ ಉದ್ದೇಶಪೂರ್ವಕ ಅವಮಾನವು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ.

ಪ್ರಸ್ತಾಪಿತ ಮಸೂದೆಯಿಂದ ಏನೇನು ಬದಲಾವಣೆಗಳಾಗಲಿವೆ?

ಪ್ರಸ್ತಾಪಿತ ಶಾಸನವು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯ್ದೆಗೆ ತಿದ್ದುಪಡಿ ತರಲು ಬಯಸಿದ್ದು, ಇದರಿಂದ ವಂದೇ ಮಾತರಂ ಗೀತೆಯು ರಾಷ್ಟ್ರಗೀತೆಯಷ್ಟೇ ಸಮಾನ ಕಾನೂನು ರಕ್ಷಣೆಯನ್ನು ಪಡೆಯಲಿದೆ. ಈ ಕಾಯ್ದೆ ಜಾರಿಗೆ ಬಂದ ನಂತರ, ರಾಷ್ಟ್ರೀಯ ಗೀತೆಗೆ ವಂದೇ ಮಾತರಂಗೆ ಮಾಡುವ ಯಾವುದೇ ಉದ್ದೇಶಪೂರ್ವಕ ಅವಮಾನ ಅಥವಾ ಅದನ್ನು ಹಾಡುವಾಗ ಉಂಟುಮಾಡುವ ಯಾವುದೇ ಉದ್ದೇಶಪೂರ್ವಕ ಅಡಚಣೆಯು, ಈಗಾಗಲೇ ರಾಷ್ಟ್ರಗೀತೆಯ (ಜನ ಗಣ ಮನ) ಪ್ರಕರಣಗಳಲ್ಲಿ ಅನ್ವಯವಾಗುವ ಮಾದರಿಯಲ್ಲೇ ಕ್ರಿಮಿನಲ್ ಶಿಕ್ಷೆಗೆ ಗುರಿಯಾಗಬಹುದು.

ವಂದೇ ಮಾತರಂಗೆ ಅವಮಾನ ಮಾಡಿದರೆ ಶಿಕ್ಷೆ ಏನು?

ಪ್ರಸ್ತಾಪಿತ ಕಾನೂನಿನ ಅಡಿಯಲ್ಲಿ, ವಂದೇ ಮಾತರಂ ಗೀತೆಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ಅದನ್ನು ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ಯಾರೇ ಆದರೂ ಈ ಕೆಳಗಿನ ಶಿಕ್ಷೆಯನ್ನು ಎದುರಿಸಬೇಕಾಗಬಹುದು:
  • 3 ವರ್ಷಗಳವರೆಗೆ ಜೈಲು ಶಿಕ್ಷೆ
  • ದಂಡ
  • ಜೈಲು ಶಿಕ್ಷೆ ಮತ್ತು ದಂಡಎರಡೂ
  • ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ವರ್ಷಪೂರ್ತಿ ಆಚರಣೆಯ ಭಾಗವಾಗಿ ಸರ್ಕಾರವು ಈ ಮಸೂದೆಯನ್ನು ತರುತ್ತಿದೆ.

ವಂದೇ ಮಾತರಂ ಗಾಯನಕ್ಕೆ ಪ್ರಸ್ತಾಪಿತ ಮಾರ್ಗಸೂಚಿಗಳು

ಈ ಮಸೂದೆಯು ರಾಷ್ಟ್ರೀಯ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ಸಹ ವಿವರಿಸುತ್ತದೆ. ಅವುಗಳು ಕೆಳಗಿನಂತಿವೆ:
  1. ಇದನ್ನು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಬೇಕು.
  2. ಅಧಿಕೃತ ಕಾರ್ಯಕ್ರಮಗಳು ಪ್ರಾರಂಭವಾಗುವ ಮೊದಲು ಇದನ್ನು ಪ್ರದರ್ಶಿಸಬೇಕು.
  3. ಎಲ್ಲಾ ಆರು ಚರಣಗಳನ್ನು ಹಾಡಬೇಕು.
  4. ಸಂಪೂರ್ಣ ಗಾಯನವು ಸುಮಾರು 3 ನಿಮಿಷ 10 ಸೆಕೆಂಡುಗಳನ್ನು ತೆಗೆದುಕೊಳ್ಳಬೇಕು.
  5. ಅದನ್ನು ಹಾಡುವಾಗ ಜನರು ಅಟೆನ್ಶನ್ (ಸಾವಧಾನ) ಭಂಗಿಯಲ್ಲಿ ನಿಲ್ಲಬೇಕು.
  6. ಶಾಲೆಗಳು ಬೆಳಗಿನ ಪ್ರಾರ್ಥನೆಗೆ ಮೊದಲು ವಂದೇ ಮಾತರಂ ಅನ್ನು ಪ್ಲೇ ಮಾಡಬೇಕು ಅಥವಾ ಹಾಡಬೇಕು.
ವಂದೇ ಮಾತರಂ ಹಿನ್ನಲೆ!...
ವಂದೇ ಮಾತರಂ ಗೀತೆಯನ್ನು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ್ದಾರೆ. ಈ ರಾಷ್ಟ್ರೀಯ ಗೀತೆಯು ಆರು ಚರಣಗಳನ್ನು ಒಳಗೊಂಡಿದ್ದು, ಸಂಸ್ಕೃತ ಮತ್ತು ಬಂಗಾಳಿ ಭಾಷೆಗಳ ಸಮ್ಮಿಶ್ರಣದಲ್ಲಿ ಬರೆಯಲಾಗಿದೆ. ಇದನ್ನು ಮೊದಲು 1896 ರಲ್ಲಿ ಕೋಲ್ಕತ್ತಾದಲ್ಲಿ ಸಾರ್ವಜನಿಕವಾಗಿ ಹಾಡಲಾಯಿತು ಮತ್ತು ಮೂಲತಃ ಬಂಕಿಮ ಚಂದ್ರ ಅವರ ಪ್ರಸಿದ್ಧ ಕಾದಂಬರಿ ಆನಂದಮಠದಲ್ಲಿ ಪ್ರಕಟವಾಯಿತು. ದಶಕಗಳಿಂದ, ಈ ಗೀತೆಯು ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ರಾಷ್ಟ್ರೀಯ ಅಸ್ಮಿತೆಯ ಅತ್ಯಂತ ಶಾಶ್ವತ ಸಂಕೇತಗಳಲ್ಲಿ ಒಂದಾಗಿದೆ.
ಸಂಸತ್ತಿನಲ್ಲಿ ಮಂಡನೆಯಾಗುವ ಮೊದಲೇ, ಪ್ರಸ್ತಾಪಿತ ಶಾಸನವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಈ ಮಸೂದೆಯನ್ನು ರಾಷ್ಟ್ರೀಯ ಗೌರವವನ್ನು ಬಲಪಡಿಸುವ ಹೆಜ್ಜೆ ಎಂದು ಬಿಂಬಿಸಿದ್ದರೆ, ಕಾಂಗ್ರೆಸ್ ಈ ನಡೆಯನ್ನು ಟೀಕಿಸಿದ್ದು, ಇದು ಮೋದಿ ಸರ್ಕಾರದ ಜೈಲ್​ ಫಸ್ಟ್​​ ಆಡಳಿತ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದೆ.

ನಿನ್ನೆ ಸಂಸತ್ತಿನಲ್ಲಿ ಆಗಿದ್ದೇನು..?

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ವಿರೋಧ ಪಕ್ಷಗಳ ಪ್ರತಿಭಟನೆಗೆ ಸಾಕ್ಷಿಯಾದವು. ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅಯೋಧ್ಯೆಯ ರಾಮಮಂದಿರ ಕಾಣಿಕೆ ದುರುಪಯೋಗ ಪ್ರಕರಣಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಭಾರಿ ಗದ್ದಲ ಸೃಷ್ಟಿಸಿದ್ದರಿಂದ ಕಲಾಪಗಳನ್ನು ಪದೇ ಪದೇ ಮುಂದೂಡಲಾಯಿತು. ಸಂಸತ್ತಿನ ಹೊರಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳ ನಾಯಕರು, ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದರು.
ಎರಡನೇ ದಿನವೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ವಿಪಕ್ಷಗಳು ನಿರ್ಧರಿಸಿದ್ದು, ಅಧಿವೇಶನದ ತಂತ್ರಗಾರಿಕೆಯನ್ನು ರೂಪಿಸಲು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಿಪಕ್ಷಗಳ ಪ್ರಮುಖ ನಾಯಕರ ಸಭೆ ಕರೆಯಲಾಗಿದೆ. ಅಧಿವೇಶನದ ಸಮಯದಲ್ಲಿ ಈ ರೀತಿ ನಾಯಕರು ಸಭೆ ಸೇರಿ ಜಂಟಿ ಕಾರ್ಯತಂತ್ರ ರೂಪಿಸುವುದು ನಿಯಮಿತವಾಗಿ ನಡೆಯುವ ಪ್ರಕ್ರಿಯೆಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net