ಡಾಲರ್ ​ಮುಂದೆ ರೂಪಾಯಿ ಏಕೆ ಕುಸಿಯುತ್ತಿದೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಭಾರತದ ಆರ್ಥಿಕತೆ ವೇಗವಾಗಿ ಮುಂದುವರಿಯುತ್ತಿದೆ, ಜಗತ್ತಿನ ಇತರ ಎಲ್ಲ ದೇಶಗಳಿಗಿಂತ ನಮ್ಮ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಹೆಚ್ಚಾಗುತ್ತಿದೆ, ಬೆಳವಣಿಗೆ ದರ (ಗ್ರೋಥ್​ ರೇಟ್​) ಏರುಗತಿಯಲ್ಲಿದೆ...' ಎನ್ನುವ ಮಾತುಗಳನ್ನು ನಾವು ಕೇಳುತ್ತಲೇ ಇದ್ದೇವೆ. ಇದರ ನಡುವೆ ಅಮೆರಿಕನ್​ ಡಾಲರ್​ ಎದುರು ಭಾರತದ ರೂಪಾಯಿ ಕುಸಿತ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರೂಪಾಯಿ ಈ ಪ್ರಮಾಣದ ಅಪಮೌಲ್ಯವಾಗಿರುವುದು ಇದೇ ಮೊದಲು ಎನ್ನುವಂತೆ ಇದು ಸುದ್ದಿಯಾಗಿದೆ. ಜನಸಾ
ಮಾನ್ಯನಿಗೂ "ಅದೇನು ಡಾಲರ್​ ಎದುರು ನಮ್ಮ ರೂಪಾಯಿ ಮೌಲ್ಯ ಕಳೆದುಕೊಂಡಿದೆಯಂತೆ' ಎಂದು ಮಾತಾಡಿಕೊಳ್ಳುವಂತೆ ಇದು ಸುದ್ದಿಯಾಗಿದೆ. ಆದರೆ ಗಮನಿಸಿ. ಇದು ವಿತ್ತ ಜಗತ್ತಿನಲ್ಲಿ ಮಾಮೂಲು. ಏರಿಳಿತ ಎನ್ನುವುದು ಸಹಜ.
ನೀವೊಮ್ಮೆ ಇತಿಹಾಸ ತಿರುವಿ ಹಾಕಿದರೆ ಸಾಕು. ರೂಪಾಯಿ ಏರಿಳಿತದ ಹಾದಿ ನಿಚ್ಚಳವಾಗಿ ಕಾಣುತ್ತದೆ. ನಾವು ಬಹಳ ಹಿಂದಿನ ವರ್ಷಗಳ ಲೆಕ್ಕ ನೋಡುವುದಕ್ಕೆ ಹೋಗುವುದು ಬೇಡ. 2025ರ ಫೆಬ್ರವರಿಯಲ್ಲಿಯೂ ಇವತ್ತಿನ ಪರಿಸ್ಥಿತಿಯೇ ಇತ್ತು. ಅಮೆರಿಕನ್​ ಡಾಲರ್​ ಎದುರು 82/83ರಲ್ಲಿದ್ದ ರೂಪಾಯಿ ಒಮ್ಮೆಲೇ 87/88ರ ಮಟ್ಟಕ್ಕೆ ಏರಿಕೆ ಕಂಡಿತ್ತು. ಅಂದರೆ ನಮ್ಮ ರೂಪಾಯಿ ಅಪಮೌಲ್ಯವಾಗಿತ್ತು. ಆಗ ಇದು ಇವತ್ತಿನಷ್ಟು ದೊಡ್ಡ ಸುದ್ದಿಯಾಗಲಿಲ್ಲ! ಗಮನಿಸಿ, ಒಂದೆರಡು ತಿಂಗಳಲ್ಲೇ ಅದು ಮತ್ತೆ 83ರ ಸಮೀಪಕ್ಕೆ ಬಂದು ನಿಂತಿತ್ತು.

ಮೌಲ್ಯ ಇಳಿಕೆಗೆ 5 ಪ್ರಮುಖ ಕಾರಣಗಳು

1. ಡಾಲರನ್ನು ಜಾಗತಿಕ ಹಣ ಎಂದು ಒಪ್ಪಿಕೊಂಡಿರುವುದು ಕಾರಣ. ಅಂದರೆ, ನಾವು ಕೊಳ್ಳುವ ತೈಲೋತ್ಪನ್ನಗಳು ಮತ್ತಿತರ ಆಮದು ಎಲ್ಲವನ್ನೂ ನಾವು ಭಾರತೀಯ ರೂಪಾಯಿ ಕೊಟ್ಟು ಕೊಳ್ಳುವುದು ಸಾಧ್ಯವಿಲ್ಲ. ಜಗತ್ತಿನ ಬಹುತೇಕ ದೇಶಗಳು ಡಾಲರನ್ನೇ ವಿನಿಮಯ ಹಣವನ್ನಾಗಿ ಬಳಸುತ್ತವೆ. ಹೀಗಾಗಿ ನಾವು ನೀಡುವ ಹಣ ಡಾಲರ್​. ಒಂದು ಡಾಲರ್​ ಹಣ ಇಷ್ಟು ರೂಪಾಯಿಗೆ ಸಮ ಎಂದು ಒಂದು ನಿಗದಿತ ಮೊತ್ತವಿಲ್ಲ. ಇವುಗಳ ನಡುವಿನ ಮೌಲ್ಯವು ಗಳಿಗೆ ಗಳಿಗೆಗೂ ಬದಲಾಗುತ್ತ ಇರುತ್ತದೆ. ಡಾಲರಿನಲ್ಲಿ ನಾವು ವಹಿವಾಟು ಮಾಡುವುದಿಲ್ಲ ಎಂದು ಎರಡನೇ ಮಹಾಯುದ್ಧದ ನಂತರ ಸ್ಪಷ್ಟವಾಗಿ ಧ್ವನಿಯೆತ್ತಿದ್ದರೆ ಇಂದು ಈ ದಿನವನ್ನು ನಾವು ನೋಡುವ ಪ್ರಮೇಯ ಬರುತ್ತಿರಲಿಲ್ಲ. ಎರಡನೇ ಮಹಾಯುದ್ಧದ ನಂತರ ಜಾಗತಿಕ ಮಟ್ಟದಲ್ಲಿ ನಡೆದ ಸಭೆಯಲ್ಲಿ ಯಾರ ಬಳಿ ಹೆಚ್ಚು ಚಿನ್ನವಿರುತ್ತದೆಯೋ ಅವರ ಹಣವನ್ನು ಜಾಗತಿಕ ಹಣ ಎಂದು ಘೋಷಿಸುವುದಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅಂದಿಗೆ ಹೆಚ್ಚಿನ ಗೋಲ್ಡ್​ ರಿಸರ್ವ್​ ಹೊಂದಿದ್ದ ಅಮೆರಿಕ ಸುಲಭವಾಗಿ ದೊಡ್ಡಣ್ಣನ ಪಟ್ಟವನ್ನು ಪಡೆದುಕೊಂಡು ಬಿಡುತ್ತದೆ. ಆ ನಂತರದ್ದು ದಿನನಿತ್ಯದ ಡಬಲ್​ ಸ್ಟ್ಯಾಂಡರ್ಡ್​ ಕಥೆಗಳು. ಎಲ್ಲ ಸನ್ನಿವೇಶಗಳನ್ನು ತನ್ನ ಒಳಿತಿಗೆ ಬಳಸಿಕೊಂಡ ಅಮೆರಿಕ ಬೆಳೆದು ನಿಂತದ್ದು ಇಂದಿಗೆ ಇತಿಹಾಸ.
2. ಭಾರತದಲ್ಲಿ ಹೂಡಿಕೆ ಮಾಡಿರುವ ವಿದೇಶಿಯರು, ಸಂಸ್ಥೆಗಳು ಇಂದಿಗೆ ಮತ್ತೆ ಮರಳಿ ಅಮೆರಿಕದ ಕಡೆಗೆ ಮುಖ ಮಾಡಿವೆ. ಈ ಹೂಡಿಕೆದಾರರು ಪಾರಿವಾಳಗಳಿದ್ದಂತೆ. ಎಲ್ಲಿ ಹೆಚ್ಚಿನ ಕಾಳಿನ ವಾಸನೆ ಬರುತ್ತದೆಯೋ ಅಲ್ಲಿಗೆ ಹಾರಿ ಬಿಡುತ್ತಾರೆ. ಈಗ ಆಗಿರುವುದು ಕೂಡ ಅದೇ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಫಾರಿನ್​ ಇನ್ಟ್ರುಟ್ಯೂಷನಲ್​ ಇನ್ವೆಸ್ಟರ್ಸ್​) ಲಾಭವನ್ನು ಬುಕ್​ ಮಾಡಿ ಹಣವನ್ನು ಡಾಲರ್​ ಮೂಲಕ ವರ್ಗಾವಣೆ ಮಾಡಿಕೊಳ್ಳಲು ಹೊರಟಾಗ ಕೂಡ ರೂಪಾಯಿಯ ಮೌಲ್ಯ ಇಳಿಯುತ್ತದೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿರುವ ವಿದೇಶಿ ಸಂಸ್ಥೆಗಳು ಹೆಚ್ಚಿನ ಲಾಭ ನೋಡಿದಾಗ ತಮ್ಮ ಷೇರನ್ನು ಮಾರುವುದರ ಮೂಲಕ ಹಣವನ್ನು ಪಡೆದುಕೊಂಡು ಮರಳಿ ತಮ್ಮ ಮೂಲ ದೇಶಕ್ಕೆ ಕಳಿಸಲು ಯತ್ನಿಸುತ್ತವೆ. ಇದು ಸಹಜ. ಭಾರತದ ಮಟ್ಟಿಗೆ ಇದು ಬಂಡವಾಳ ಹಿಂತೆಗೆತ ಎನ್ನುವಂತಾಗುತ್ತದೆ. ಹೀಗೆ ಭಾರತದಿಂದ ಹೊರಕ್ಕೆ ಹೋಗುವ ಹಣವನ್ನು ಕ್ಯಾಪಿಟಲ್​ ಔಟ್​ಫ್ಲೋ ಎನ್ನಲಾಗುತ್ತದೆ. ಸಹಜವಾಗೇ ಇದು ಸಾಮಾನ್ಯ ಸಮಯಕ್ಕಿಂತ ಹೆಚ್ಚಿನ ಡಾಲರ್​ ಮೇಲಿನ ಡಿಮ್ಯಾಂಡ್​ ಸೃಷ್ಟಿಸುತ್ತದೆ. ರೂಪಾಯಿ ಕುಸಿತಕ್ಕೆ ನಾಂದಿ ಹಾಡುತ್ತದೆ. ಡಿ. 4ರವರೆಗೆ, ಅಂದರೆ ಕೇವಲ 4 ದಿನಗಳಲ್ಲಿ 13 ಸಾವಿರ ಕೋಟಿ ರೂ. ಹೊರತೆಗೆದಿದ್ದಾರೆ. ಒಟ್ಟಾರೆ ಈ ವರ್ಷ ಅಂದರೆ 2025ರ ಡಿ. 4ರವರೆಗೆ ಹೀಗೆ 1,56,796 ಕೋಟಿ ರೂ. ಬಂಡವಾಳ ಹಿಂಪಡೆದಿದ್ದಾರೆ.
3. ಭಾರತದಲ್ಲಿ ಹೆಚ್ಚಾಗಿರುವ ಹಣದುಬ್ಬರವನ್ನು ಗಮನಿಸಿಯೂ ಆರ್​ಬಿಐ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ರೆಪೋ ರೇಟ್​ ಬಹಳ ಸಮಯದವರೆಗೆ ಯಥಾಸ್ಥಿತಿ ಕಾಯ್ದುಕೊಂಡು ಬಂತು. ಡಿ. 5ರಂದು ರೆಪೋ ರೇಟ್​ ಶೇ. 0.25 ಕಡಿಮೆ ಮಾಡಿದೆ. ಭಾರತದಂತಹ ಎಮರ್ಜಿಂಗ್​ ಮಾರುಕಟ್ಟೆಯಲ್ಲಿ ಹಣ ಹೂಡುವುದು ಅಮೆರಿಕದಂತಹ ದೇಶದಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿ. ಹೆಚ್ಚಿನ ಅಪಾಯ ತೆಗೆದುಕೊಂಡು ಕೂಡ ನಿರೀತ ಲಾಭ ಸಿಗದೇ ಇದ್ದುರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣವನ್ನು ಹೊರತೆಗೆಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಡಾಲರ್​ ಎದುರು ರೂಪಾಯಿ ಕುಸಿತ ಕಂಡಿದೆ.
4. ಭಾರತದ ವಸ್ತುಗಳ ಮೇಲೆ ಅಮೆರಿಕ ವಿಧಿಸುತ್ತಿರುವ ಹೆಚ್ಚಿನ ತೆರಿಗೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಮಾರುಕಟ್ಟೆಯ ಸೆಂಟಿಮೆಂಟ್​ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚಿನ ವೇಳೆ ಹೀಗಾಗುತ್ತದೆ ಎನ್ನುವ ಊಹಾಪೋಹ ಕೂಡ ಕುಸಿತಕ್ಕೆ ದಾರಿ ಮಾಡಿಕೊಡುತ್ತದೆ.
5. ಇಂದಿಗೂ ಅಮೆರಿಕನ್​ ಡಾಲರ್​ನಲ್ಲಿ ಜಗತ್ತಿನ ಶೇ. 70ರಷ್ಟು ವಹಿವಾಟು ನಡೆಯುತ್ತಿದೆ. ಆದ್ದರಿಂದ ವಿತ್ತ ಜಗತ್ತಿನ ಮೂಗುದಾರ ಅಮೆರಿಕದ ಕೈಲಿದೆ. ಅದು ತನಗೆ ಬೇಕಾದಂತೆ ಅದನ್ನು ತಿರುಚುವ ಮತೆಯನ್ನು ಹೊಂದಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಆದ ಕುಸಿತ ಸುದ್ದಿಯಾಗಲಿಲ್ಲ. ಆದರೆ ಇದೀಗ ರಷ್ಯಾದ ಅಧ್ಯ ಪುಟಿನ್​ ಭಾರತಕ್ಕೆ ಬಂದಿರುವ ಸಮಯದಲ್ಲಿ ರೂಪಾಯಿ ಕುಸಿತ ಕಾಣುತ್ತದೆ ಮತ್ತು ಅದು ದೊಡ್ಡ ಸುದ್ದಿಯಾಗುತ್ತದೆ. ಹೀಗಾಗಿ ರಾಜಕೀಯ ಕಾರಣಗಳನ್ನು ಕೂಡ ಅಲ್ಲಗಳೆಯಲು ಸಾಧ್ಯವಿಲ್ಲ.

ಪರಿಣಾಮಗಳೇನು?

1 ಕಚ್ಚಾ ತೈಲದ ಬೆಲೆ ಏರಿಕೆ: ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾಗದೇ ಹೋದರೂ ಭಾರತದಲ್ಲಿ ತೈಲ ಬೆಲೆ ಹೆಚ್ಚಾಗುತ್ತದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕುಸಿತ ಕಂಡರೂ ನಮಗೆ ಬೆಲೆ ಇಳಿಕೆಯಾಗುವುದಿಲ್ಲ. ಏಕೆಂದರೆ ನಾವು ತೈಲೋತ್ಪನ್ನ ಕೊಳ್ಳಲು ನೀಡುವುದು ಡಾಲರ್​. ಉದಾಹರಣೆ ನೋಡೋಣ. ನಾವು 1000 ಡಾಲರ್​ ತೈಲ ಕೊಂಡರೆ 73 ಸಾವಿರ ರೂ. ಕೊಡಬೇಕಾಗಿತ್ತು. ಈಗ 77 ಸಾವಿರ. ಹೀಗಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾಗದಿದ್ದರೂ ನಾವು ತೈಲಕ್ಕೆ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ. ಸರಕಾರ ಹೆಚ್ಚಿನ ಬೆಲೆಯನ್ನು ಜನರ ಮೇಲೆ ವರ್ಗಾಯಿಸದೇ ಇರಬಹುದು. ಅಥವಾ ರಷ್ಯಾ ಜತೆಗೆ ಹೊಸ ಒಪ್ಪಂದ ಮಾಡಿಕೊಳ್ಳಬಹುದು.
2. ಆಮದು ಬೆಲೆಯಲ್ಲಿ ಹೆಚ್ಚಳ: ತೈಲದ ಮೇಲಿನ ಉದಾಹರಣೆಯನ್ನು ನೀವು ಎಲ್ಲ ಆಮದಿಗೂ ಅನ್ವಯಿಸಬಹುದು. ಇಲೆಕ್ಟ್ರಾನಿಕ್​ ಉಪಕರಣಗಳು, ಆಟೋಮೊಬೈಲ್​ ಹೀಗೆ ನಾವು ಹೊರ ದೇಶಗಳಿಂದ ಏನೆಲ್ಲಾ ಪದಾರ್ಥಗಳನ್ನು ತರಿಸಿಕೊಳ್ಳುತ್ತೇವೆಯೋ ಅವೆಲ್ಲವುಗಳ ಬೆಲೆ ಹೆಚ್ಚಳವಾಗುತ್ತದೆ.
3. ಹೆಚ್ಚಿನ ಹೊಡೆತ: ವಿದೇಶಿ ಸಾಲಗಳ ಮರುಪಾವತಿ ಮತ್ತು ಭಾರತೀಯ ಸಬ್ಸಿಡಿ ಯರಿ ಸಂಸ್ಥೆಗಳ ಮೇಲೆ ಹೆಚ್ಚಿನ ಹೊಡೆತ ಬೀಳುತ್ತದೆ.
4. ಗ್ರಾಹಕರ ಮೇಲೆ ಹೊರೆ: ಮೇಲಿನ ಮೂರು ಕಾರಣಗಳು ಭಾರತದಲ್ಲಿ ಇನ್ನಷ್ಟು ಬೆಲೆ ಏರಿಕೆಗೆ ಕೂಡ ಕಾರಣವಾಗುತ್ತವೆ. ಸದ್ಯದ ಮಟ್ಟಿಗೆ ಕಾರ್ಪೊರೇಟ್​ ಹೌಸ್​ಗಳಿಗೆ ಹೆಚ್ಚು ಪೆಟ್ಟು ಎನ್ನುವಂತೆ ಕಂಡರೂ ಅವು ತಮ್ಮ ಮೇಲೆ ಬಿದ್ದ ಹೆಚ್ಚಿನ ಹೊರೆಯನ್ನು ಗ್ರಾಹಕನಿಗೆ ವರ್ಗಾಯಿಸುತ್ತವೆ. ಹೀಗಾಗಿ ಮುಂದಿನ 15 ದಿನದಲ್ಲಿ ಬೆಲೆ ಏರಿಕೆಯ ಹೊಡೆತ ಜನಸಾಮಾನ್ಯರು ಕೂಡ ಅನುಭವಿಸಲಿದ್ದಾರೆ.
5. ಬಡ್ಡಿ ದರ ಹೆಚ್ಚಳ: ಹೆಚ್ಚಿದ ಹಣದುಬ್ಬರವು ಬಡ್ಡಿ ದರಗಳ ಏರಿಕೆಗೆ ಕಾರಣವಾಗುತ್ತದೆ. ಹೀಗೆ ಬಡ್ಡಿ ದರ ಏರಿಕೆಯಾದರೆ ಮಾರುಕಟ್ಟೆಯಲ್ಲಿ ಸಾಲ ದುಬಾರಿಯಾಗಲಿದೆ. ಇದು ಉದ್ಯಮಗಳಿಗೆ ಒಳ್ಳೆಯ ಸುದ್ದಿಯಲ್ಲ. ಆದರೆ ಅಚ್ಚರಿ ಎನ್ನುವಂತೆ ಆರ್​ಬಿಐ ಡಿ. 5ರಂದು ಬಡ್ಡಿದರ ಕಡಿಮೆ ಮಾಡಿದೆ.
ಗಮನಿಸಿ ನೋಡಿ. ಇವೆಲ್ಲವೂ ಚೈನ್​ ಲಿಂಕ್​ ಹೊಂದಿವೆ. ಇವು ಎರಡು ಅಲುಗಿನ ಕತ್ತಿ ಇದ್ದ ಹಾಗೆ. ಸಮಬದ್ಧತೆ, ಲಯ ಕಾಪಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಹೆಚ್ಚಿನ ಕುಸಿತ ತಪ್ಪಿಸಲು ಆರ್​ಬಿಐ ಮಧ್ಯ ಪ್ರವೇಶಿಸುತ್ತದೆ. ಆದರೆ ಡಿ. 5ರ ಸಭೆಯಲ್ಲಿ ಆರ್​ಬಿಐ ರೂಪಾಯಿ ತನ್ನ ಸಹಜ ಲಯವನ್ನು ತಾನೇ ಕಂಡುಕೊಳ್ಳಲಿದೆ ಎನ್ನುವ ಹೇಳಿಕೆ ನೀಡಿದೆ. ಯಾವುದೇ ಬೇರೆ ರೀತಿಯ ಕ್ರಮವನ್ನು ಆರ್​ಬಿಐ ತೆಗೆದುಕೊಂಡಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಇದು ಸರಿ ಅಥವಾ ತಪ್ಪು ಎನ್ನುವ ಏಕಮುಖ ವಿಶ್ಲೇಷಣೆ ಅನಗತ್ಯ. ವಿತ್ತಜಗತ್ತಿನಲ್ಲಿ ಇಂತಹ ಏರಿಳಿತಗಳು ಸಾಮಾನ್ಯ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗಲು ಆರ್​ಬಿಐ ಬಿಡುವುದಿಲ್ಲ. ನಂಬಿಕೆಯಿರಲಿ.
-ರಂಗಸ್ವಾಮಿ ಮೂಕನಹಳ್ಳಿ (ಲೇಖಕರು ಹಣಕಾಸು ತಜ್ಞರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net