ದೀದಿ-ಉದ್ಧವ್ ಕೋಟೆಗೆ ಲಗ್ಗೆ ಇಟ್ಟಾಯ್ತು!.. ಆದ್ರೆ ಎಸ್‌ಪಿ ಒಡೆಯೋದು ಅಸಾಧ್ಯ ಯಾಕೆ..? ಇಲ್ಲಿದೆ ಇನ್ಸೈಡ್ ಸ್ಟೋರಿ | Samajwadi Party Split

Samajwadi Party Split | ಆದ್ರೆ ಎಸ್‌ಪಿ ಒಡೆಯೋದು ಅಸಾಧ್ಯ ಯಾಕೆ..? ಇಲ್ಲಿದೆ ಇನ್ಸೈಡ್ ಸ್ಟೋರಿ
Samajwadi Party Split | ಆದ್ರೆ ಎಸ್‌ಪಿ ಒಡೆಯೋದು ಅಸಾಧ್ಯ ಯಾಕೆ..? ಇಲ್ಲಿದೆ ಇನ್ಸೈಡ್ ಸ್ಟೋರಿ
Published on
Samajwadi Party Split: ತೃಣಮೂಲ ಕಾಂಗ್ರೆಸ್ ಮತ್ತು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಪಾಳಯದಲ್ಲಿ ಭುಗಿಲೆದ್ದಿರುವ ಬಂಡಾಯದ ನಡುವೆಯೇ, ಈಗ ಉತ್ತರ ಪ್ರದೇಶದ ರಾಜಕಾರಣದಲ್ಲೂ ಸಮಾಜವಾದಿ ಪಕ್ಷದ ಕುರಿತು ಹೊಸ ರಾಜಕೀಯ ಚರ್ಚೆಗಳು ಮುಂಚೂಣಿಗೆ ಬಂದಿವೆ. ಎಸ್​​ಪಿಯ ಹಲವು ಸಂಸದರು ಮತ್ತು ಹಿರಿಯ ನಾಯಕರು ಶೀಘ್ರದಲ್ಲೇ ಪಕ್ಷ ತೊರೆಯಲಿದ್ದಾರೆ ಎಂದು ಸಚಿವ ಓಂ ಪ್ರಕಾಶ್ ರಾಜ್‌ಭರ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿಕೆ ನೀಡಿದ್ದಾರೆ.
ರಾಜ್‌ಭರ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರ ಈ ಹೇಳಿಕೆಗಳ ಬೆನ್ನಲ್ಲೇ, ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಬಣ) ಮತ್ತು ಬಂಗಾಳದ ಟಿಎಂಸಿ ಸಂಸದರಂತೆ ಸಮಾಜವಾದಿ ಪಕ್ಷದಲ್ಲೂ ದೊಡ್ಡ ಒಡಕು ಉಂಟಾಗಲಿದೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಎದ್ದಿವೆ. ಆದರೆ, ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಸಂಸತ್ತಿನ ಸಂಖ್ಯೆಗಳ ಲೆಕ್ಕಾಚಾರವನ್ನು ಗಮನಿಸಿದರೆ, ಎಸ್​​ಪಿ ಸಂಸದರಲ್ಲಿ ಮಟ್ಟದ ಒಡಕು ಮೂಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಎಸ್‌ಪಿಯ ಇಬ್ಬರು ಸಂಸದರು ರಾಜ್‌ಭರ್ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ರಾಜ್‌ಭರ್ ಮತ್ತು ಕೇಶವ್ ಮೌರ್ಯ ಹೇಳಿದ್ದೇನು..?

ಸಚಿವ ಓಂ ಪ್ರಕಾಶ್ ರಾಜ್‌ಭರ್ ಅವರು, ಸಮಾಜವಾದಿ ಪಕ್ಷದಲ್ಲಿ (ಎಸ್‌ಪಿ) ಶೀಘ್ರದಲ್ಲೇ ದೊಡ್ಡ ಬಿರುಕು ಉಂಟಾಗುವುದು ನಿಶ್ಚಿತ ಎಂದಿದ್ದಾರೆ. ಅಷ್ಟೇ ಅಲ್ಲದೆ, ಎಸ್‌ಪಿ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಜೊತೆಗೆ, ಬಂಡಾಯ ಸಾರಲಿರುವ ಸಂಸದರನ್ನು ಸನಾತನ್ ಪಾಂಡೆ ಮುನ್ನಡೆಸಲಿದ್ದಾರೆ ಎಂದು ರಾಜ್‌ಭರ್ ಪುನರುಚ್ಚರಿಸಿದ್ದಾರೆ.
ಮತ್ತೊಂದೆಡೆ, ಡಿಸಿಎಂ ಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು, ಎಸ್‌ಪಿಯ 25 ರಿಂದ 26 ಸಂಸದರು ಪಕ್ಷವನ್ನು ತೊರೆಯಲು ಸಿದ್ಧರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಮುಂಬರುವ 2028 ರ ವಿಧಾನಸಭಾ ಚುನಾವಣೆಯ ನಂತರ ಅವರು ತಾವಾಗಿಯೇ ಪಕ್ಷದಿಂದ ಹೊರಬರಲಿದ್ದಾರೆ. ಅಖಿಲೇಶ್ ಅವರ ಸೈಕಲ್ ಇನ್ನು ಮುಂದೆ ಓಡಲು ಸಾಧ್ಯವಿಲ್ಲ," ಎಂದು ಲೇವಡಿ ಮಾಡಿರುವ ಮೌರ್ಯ, ಎಸ್‌ಪಿ ಸಂಸದರು ಬಿಜೆಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮತ್ತು ಮೈತ್ರಿಕೂಟದ ನಾಯಕರ ಈ ಸ್ಫೋಟಕ ಹೇಳಿಕೆಗಳು ವಿರೋಧ ಪಕ್ಷದ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಆದರೆ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಕ್ಷದ ಇತರ ನಾಯಕರು ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಬಿಜೆಪಿ ಸರ್ಕಾರವು ತನ್ನ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಮಾಡುತ್ತಿರುವ ರಾಜಕೀಯ ಪ್ರೇರಿತ ಯತ್ನ ಎಂದು ಕಿಡಿಕಾರಿದ್ದಾರೆ.

ಎಸ್​ಪಿಯಲ್ಲಿ ಒಡಕು ಅಷ್ಟು ಸುಲಭವಲ್ಲ ಯಾಕೆ ಗೊತ್ತಾ..?

ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷವು 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬರೋಬ್ಬರಿ 37 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಅಖಿಲೇಶ್ ನಾಯಕತ್ವಕ್ಕೆ ಸಿಕ್ಕ ದೊಡ್ಡ ಜನಾದೇಶವಾಗಿತ್ತು. ಹಾಲಿ ಎಸ್‌ಪಿ ಸಂಸದರಲ್ಲಿ ಬಹುತೇಕರು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದವರಾಗಿದ್ದು, ಅವರ ರಾಜಕೀಯ ಐಡೆಂಟಿಟಿ ಅಖಿಲೇಶ್ ಯಾದವ್ ಮತ್ತು ಎಸ್‌ಪಿಯ ಸೈಕಲ್ ಚಿಹ್ನೆಯೊಂದಿಗೆ ಬೆಸೆದುಕೊಂಡಿದೆ. ಹಾಗಾಗಿ, ಇವರೆಲ್ಲರೂ ಒಟ್ಟಾಗಿ ಬಂಡಾಯ ಏಳುವುದು ಕಷ್ಟ.
ದೇಶದ ಪಕ್ಷಾಂತರ ನಿಷೇದ ಕಾಯ್ದೆಯ ಪ್ರಕಾರ, ಲೋಕಸಭೆಯಲ್ಲಿ ಅಧಿಕೃತವಾಗಿ ಬಣ ಬದಲಾಯಿಸಲು ಕನಿಷ್ಠ ಮೂರನೇ ಎರಡರಷ್ಟು ಸಂಸದರ ಬೆಂಬಲ ಅಗತ್ಯವಿರುತ್ತದೆ. ಎಸ್‌ಪಿಯ 37 ಸಂಸದರ ಪೈಕಿ ಕನಿಷ್ಠ 25 ಸಂಸದರು ಏಕಕಾಲದಲ್ಲಿ ಬಂಡಾಯವೆದ್ದರೆ ಮಾತ್ರ ಅನರ್ಹತೆಯಿಂದ ಬಚಾವಾಗಲು ಸಾಧ್ಯ . ಇಷ್ಟು ದೊಡ್ಡ ಸಂಖ್ಯೆಯ ಸಂಸದರನ್ನು ಒಟ್ಟುಗೂಡಿಸಿ ಬಂಡಾಯ ಏಳುವಂತೆ ಮಾಡುವುದು ಸುಲಭದ ಕೆಲಸವಲ್ಲ.
ಪ್ರಸ್ತುತ ಇರುವ 37 ಸಂಸದರಲ್ಲಿ 5 ಸಂಸದರು ಸ್ವತಃ ಅಖಿಲೇಶ್ ಯಾದವ್ ಅವರ ಕುಟುಂಬದವರೇ ಆಗಿದ್ದಾರೆ (ಅಖಿಲೇಶ್, ಅವರ ಪತ್ನಿ ಡಿಂಪಲ್ ಯಾದವ್, ಧರ್ಮೇಂದ್ರ ಯಾದವ್, ಆದಿತ್ಯ ಯಾದವ್ ಮತ್ತು ಅಕ್ಷಯ್ ಯಾದವ್). ಇವರ ಜೊತೆಗೆ ನಾಲ್ವರು ಮುಸ್ಲಿಂ ಸಂಸದರಿದ್ದಾರೆ. ಉಳಿದಂತೆ ಗೆದ್ದಿರುವ ಬಹುತೇಕರು ದಲಿತ ಮತ್ತು ಒಬಿಸಿ (OBC) ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಅಖಿಲೇಶ್ ಅವರೇ ರಾಜಕೀಯವಾಗಿ ಮುಂಚೂಣಿಗೆ ತಂದಿದ್ದಾರೆ. ಹೀಗಾಗಿ ಅವರು ಎಸ್‌ಪಿ ತೊರೆದು ಬೇರೆ ಪಕ್ಷ ಸೇರುವುದು ಬಹುತೇಕ ಅಸಾಧ್ಯ.

ಅಖಿಲೇಶ್ ಕೇಸ್ ಹೇಗೆ ಭಿನ್ನ..?

ಶಿವಸೇನೆ (ಯುಬಿಟಿ) ಮತ್ತು ಟಿಎಂಸಿ ಪ್ರಕರಣಗಳ ಹಿನ್ನೆಲೆಯೇ ಬೇರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿ ಮೂಡಿದ ಬಿರುಕಿಗೆ ವಿಧಾನಸಭಾ ಚುನಾವಣೆಯ ಸೋಲು ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ಅಸಮಾಧಾನವೇ ಮುಖ್ಯ ಕಾರಣವಾಗಿತ್ತು. ಪರಿಣಾಮವಾಗಿ ಬಂಡಾಯ ಸಂಸದರು ಎನ್​​​ಚಿಪಿಐ ಜೊತೆ ವಿಲೀನವಾಗುವ ಚರ್ಚೆಗಳು ನಡೆದವು.
ಇತ್ತ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಲೋಕಸಭೆಯಲ್ಲಿ ಹೊಂದಿದ್ದ 9 ಸಂಸದರ ಪೈಕಿ 6 ಸಂಸದರು ಏಕನಾಥ್ ಶಿಂಧೆ ಬಣಕ್ಕೆ ಜಿಗಿದಿದ್ದಾರೆ. ಶಿಂಧೆ ಈಗಾಗಲೇ 2022 ರಲ್ಲೇ ಬಂಡಾಯವೆದ್ದು ಅಧಿಕಾರ ಹಿಡಿದು ಪಕ್ಷದಲ್ಲಿ ಮತ್ತೊಂದು ಬಲಿಷ್ಠ ಶಕ್ತಿ ಕೇಂದ್ರವಾಗಿ ಬೆಳೆದಿದ್ದರಿಂದ ಸಂಸದರು ಅವರತ್ತ ಮುಖ ಮಾಡಿದರು. ಆದರೆ, ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್ ಯಾದವ್ ಅವರಿಗೆ ಪರ್ಯಾಯವಾಗಿ ನಿಲ್ಲಬಲ್ಲ ಅಥವಾ ಇಷ್ಟು ದೊಡ್ಡ ಸಂಖ್ಯೆಯ ಸಂಸದರನ್ನು ತನ್ನತ್ತ ಸೆಳೆಯಬಲ್ಲ ಯಾವುದೇ ಪ್ರಬಲ ನಾಯಕ ಸದ್ಯಕ್ಕೆ ಇಲ್ಲ. ಎಸ್‌ಪಿಯ ಸಂಘಟನಾತ್ಮಕ ನಿಯಂತ್ರಣ ಮತ್ತು ವೋಟ್ ಬ್ಯಾಂಕ್ ಸಂಪೂರ್ಣವಾಗಿ ಅಖಿಲೇಶ್ ಕೈಯಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಮಾಜವಾದಿ ಪಕ್ಷದಿಂದ ಒಬ್ಬಿಬ್ಬರು ನಾಯಕರು ವೈಯಕ್ತಿಕ ಕಾರಣಗಳಿಗಾಗಿ ಪಕ್ಷ ತೊರೆಯಬಹುದೇ ಹೊರತು, ದೊಡ್ಡ ಗುಂಪಾಗಿ ಪಕ್ಷಾಂತರ ಮಾಡುವುದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ, ಓಂ ಪ್ರಕಾಶ್ ರಾಜ್‌ಭರ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಕೇವಲ ವಿರೋಧ ಪಕ್ಷಗಳ ಒಗ್ಗಟ್ಟನ್ನು ಕುಗ್ಗಿಸುವ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ರಾಜಕೀಯ ತಂತ್ರಗಾರಿಕೆಯ ಭಾಗವೆಂದೇ ವಿಶ್ಲೇಷಿಸಲಾಗುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net