ಗ್ಯಾರಂಟಿಗಿಂತ ಪಾಸ್‌ಪೋರ್ಟ್ ಫೈಟ್​ ಜೋರು! ಹಿಮಂತ ಸಾಮ್ರಾಜ್ಯಕ್ಕೆ ಕಾಂಗ್ರೆಸ್ ಇಟ್ಟ ಡಾಕ್ಯುಮೆಂಟ್ ಬಾಂಬ್​ನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ! | Assam Election

Assam Election | ಪಾಸ್‌ಪೋರ್ಟ್ ಫೈಟ್​
Assam Election | ಪಾಸ್‌ಪೋರ್ಟ್ ಫೈಟ್​
Published on
Assam Election: ಚುನಾವಣೆಗಳೆಂದರೆ ಉಚಿತ ವಿದ್ಯುತ್, ಬಸ್ ಪ್ರಯಾಣ, ಉದ್ಯೋಗ, ರಸ್ತೆ ಮತ್ತು ಮನೆಗಳಂತಹ ಭರವಸೆಗಳು ಮುಂಚೂಣಿಯಲ್ಲಿರುತ್ತವೆ. ಆದರೆ ಅಸ್ಸಾಂನಲ್ಲಿ ಏಪ್ರಿಲ್ 9 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯು ಸಂಪೂರ್ಣವಾಗಿ ವಿಭಿನ್ನವಾದ ದಾರಿ ಹಿಡಿದಿದ್ದು, ಇಲ್ಲಿ ಅಭಿವೃದ್ಧಿಯ ವಿಷಯಗಳಿಗಿಂತ ಪಾಸ್‌ಪೋರ್ಟ್ ಮತ್ತು ಐಡೆಂಟಿಟಿಯೇ ಪ್ರಮುಖ ಚುನಾವಣಾ ಅಸ್ತ್ರಗಳಾಗಿವೆ
ಭಾರತೀಯ ಎಂಬ ಗುರುತಿನ ಬಗ್ಗೆ ದೀರ್ಘಕಾಲದ ಚರ್ಚೆ ನಡೆಯುತ್ತಿರುವ ಅಸ್ಸಾಂನಲ್ಲಿ, ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರರ ಪಾಸ್‌ಪೋರ್ಟ್ ಮತ್ತು ವಿದೇಶಿ ನಂಟಿನ ಬಗ್ಗೆ ಆರೋಪ ಮಾಡುತ್ತಿರುವುದು ರಾಜಕೀಯ ಸಂಚಲನ ಮೂಡಿಸಿದೆ. ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರ ಮನೆ ಬಾಗಿಲಿಗೆ ತಲುಪಿರುವುದು ಈ ವಿವಾದವನ್ನು ಮತ್ತಷ್ಟು ತಾರಕಕ್ಕೇರಿಸಿದೆ.

ಇಲ್ಲಿಂದಲೇ ಪ್ರಾರಂಭ

ಈ ಪಾಸ್‌ಪೋರ್ಟ್ ವಿವಾದಕ್ಕೆ ಮೊದಲು ನಾಂದಿ ಹಾಡಿದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ. ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ 2022 ರಲ್ಲಿ ಬ್ರಿಟಿಷ್ ಪಾಸ್‌ಪೋರ್ಟ್ ಪಡೆಯುವ ಉದ್ದೇಶದಿಂದ ತಮ್ಮ ಅಪ್ರಾಪ್ತ ಮಗನ ಭಾರತೀಯ ಪಾಸ್‌ಪೋರ್ಟ್ ಬಳಸಿದ್ದಾರೆ ಎಂದು ಶರ್ಮಾ ಗಂಭೀರ ಆರೋಪ ಮಾಡಿದ್ದರು. ಗೌರವ್ ಪತ್ನಿಯ ಪಾಕಿಸ್ತಾನಿ ಮೂಲದ ಹಿನ್ನೆಲೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ನಾಯಕರಿಗೆ ಭಾರತದ ಬಗ್ಗೆ ನಿಷ್ಠೆಯಿಲ್ಲ ಎಂದು ಬಿಂಬಿಸಲು ಹಿಮಂತ ಅವರು ಈ ದಾಳಿಯನ್ನು ಬಳಸಿಕೊಂಡರು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ ಯುಎಇ, ಆಂಟಿಗುವಾ ಮತ್ತು ಈಜಿಪ್ಟ್ ಸೇರಿದಂತೆ ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದರು. ಮುಸ್ಲಿಮರ ವಿರುದ್ಧ ಮಾತನಾಡುವ ಹಿಮಂತ ಪತ್ನಿ ಇಸ್ಲಾಮಿಕ್ ದೇಶಗಳ ಪಾಸ್‌ಪೋರ್ಟ್ ಹೊಂದಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಆರೋಪ ತಳ್ಳಿಹಾಕಿದ ಶರ್ಮಾ ದಂಪತಿ

ಈ ಆಪಾದನೆ ತಳ್ಳಿಹಾಕಿರುವ ಹಿಮಂತ ಬಿಸ್ವಾ ಶರ್ಮಾ, ಪವನ್ ಖೇರಾ ಮತ್ತು ಗೌರವ್ ಗೊಗೊಯ್ ಮಾತುಗಳಿಗೂ ಹಾಗೂ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಗುಂಪುಗಳಿಗೂ ಸಂಬಂಧವಿದೆ ಎಂದು ತಮ್ಮ ತಂಡ ಪತ್ತೆಹಚ್ಚಿದೆ ಎಂದು ಪ್ರತಿವಾದ ಮಂಡಿಸಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳು ಗೌರವ್ ಗೊಗೊಯ್​ಗೆ ಬೆಂಬಲ ನೀಡುತ್ತಿರುವುದು ಅವರ ಬಲವಾದ ಪಾಕಿಸ್ತಾನಿ ಸಂಪರ್ಕಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಅಸ್ಸಾಂನ ಅಪ್ಪರ್ ಅಸ್ಸಾಂ ಭಾಗದಲ್ಲಿ ಅಹೋಮ್ ಸಮುದಾಯದ ಪ್ರಭಾವ ಹೆಚ್ಚಿದ್ದು, ಗೌರವ್ ಗೊಗೊಯ್ ಅದೇ ಸಮುದಾಯದವರಾಗಿದ್ದಾರೆ. ಹೀಗಾಗಿ ಗೌರವ್​ರನ್ನು ವಿದೇಶಿ ಗುರುತಿನೊಂದಿಗೆ ಮತ್ತು ಪಾಕಿಸ್ತಾನದೊಂದಿಗೆ ಜೋಡಿಸುವ ಮೂಲಕ ಅವರ ಪ್ರಭಾವವನ್ನು ಕುಗ್ಗಿಸಲು ಹಿಮಂತ ಪ್ರಯತ್ನಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹಿಮಂತ ಬಿಸ್ವಾ ಶರ್ಮಾ 2013 ರಲ್ಲಿ ಗೌರವ್ ಪಾಕಿಸ್ತಾನ ಭೇಟಿ ಮತ್ತು ಅವರ ಪತ್ನಿಯ ಎನ್‌ಜಿಒ ಕೆಲಸಗಳನ್ನು ಪದೇ ಪದೇ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ಈಗ ಕಾಂಗ್ರೆಸ್ ಅದೇ ಪಾಸ್‌ಪೋರ್ಟ್ ಅಸ್ತ್ರವನ್ನು ಹಿಮಂತ ವಿರುದ್ಧವೇ ಬಳಸುವ ಮೂಲಕ ಚುನಾವಣೆಯಲ್ಲಿ ಕೊನೆಯ ಕ್ಷಣದ ಮುನ್ನಡೆ ಪಡೆಯಲು ಪ್ರಯತ್ನಿಸುತ್ತಿದೆ.
ಅಸ್ಸಾಂನ ಈ ಚುನಾವಣೆಯಲ್ಲಿ ಅಭಿವೃದ್ಧಿ ಭರವಸೆಗಳಿಗಿಂತ ಪೌರತ್ವದ ಪುರಾವೆಯಾದ ಪಾಸ್‌ಪೋರ್ಟ್ ಒಂದು ಪ್ರಮುಖ ರಾಜಕೀಯ ದಾಳವಾಗಿ ಮಾರ್ಪಟ್ಟಿರುವುದು ಭಾರತೀಯ ಚುನಾವಣಾ ಇತಿಹಾಸದಲ್ಲೇ ವಿಶಿಷ್ಟ ವಿದ್ಯಮಾನವಾಗಿದೆ. ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 9 ರಂದು ಅಸ್ಸಾಂನಲ್ಲಿ ಮತದಾನ ನಡೆಯಲಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಎಲ್ಲಾ ಫಲಿತಾಂಶಗಳು ಹೊರಬೀಳಲಿವೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net