ಫ್ಲಾಶ್ಬ್ಯಾಕಿಗೆ ಒಮ್ಮೆ ಹೊರಳೋಣ. 1991ರ ಮೇ ಮಾಸವದು. ದೇಶದ ವಿದೇಶಿ ವಿನಿಮಯದ ಸಾಮರ್ಥ್ಯ ಸಂಪೂರ್ಣ ಸೋತು ಸುಣ್ಣವಾಗಿ, ದಿನದ ಮಟ್ಟಿಗೆ ಸರಕಾರ ನಡೆಸುವುದೂ ಸಾಧ್ಯವಾಗದ ಸ್ಥಿತಿಗೆ ತಲುಪಿತ್ತು. ಆಗ ಕೇಂದ್ರದಲ್ಲಿದ್ದದ್ದು ಚಂದ್ರಶೇಖರ ನೇತೃತ್ವದ ಅಲ್ಪಮತದ ಸರಕಾರ. ತುರ್ತು ಕೈಸಾಲದ ರೂಪದಲ್ಲಿ ದಿನಚರಿಗೆ ಹಣ ಹೊಂದಿಸಲೂ ತತ್ವಾರ ಉಂಟಾದ ಕಾರಣ ಬ್ಯಾಂಕ್ ಆಫ್ ಸ್ವಿಜರ್ಲ್ಯಾಂಡ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ನಿಂದ ಸಾಲ ಎತ್ತಬೇಕಾಯಿತು. ಆಗ ದೇಶದ ಆರ್ಥಿಕ ಭದ್ರತೆಗೆ ಕಾಯ್ದಿರಿಸಿದ್ದ 114 ಟನ್ ಬಂಗಾರವನ್ನು ಏರ್ಲಿಫ್ಟ್ ಮಾಡಲು ಆರ್ಬಿಐಗೆ ಸರಕಾರ ಸೂಚಿಸಿತು. ಬ್ಯಾಂಕ್ ಆಫ್ ಸ್ವಿಜರ್ಲ್ಯಾಂಡ್ಗೆ 47 ಟನ್, ಬ್ಯಾಂಕ್ ಆಫ್ ಇಂಗ್ಲೆಂಡ್ಗೆ 67 ಟನ್ ಬಂಗಾರವನ್ನು ಸಾಗಿಸಿ ಅಡ ಇಡಲಾಗಿತ್ತು. ಆಗ ಭಾರತದ ವಿದೇಶಿ ವಿನಿಮಯ ಸಂಗ್ರಹ ಇದ್ದದ್ದು ಕೇವಲ ಒಂದು ಬಿಲಿಯನ್ ಡಾಲರ್. ಹೋಲಿಸುವುದಾದರೆ ಇಂದಿನ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಿಂತಲೂ ಭಾರತ ಆರ್ಥಿಕವಾಗಿ ಜರ್ಜರಿತವಾಗಿತ್ತು.