_1780855534886.webp?w=480&auto=format%2Ccompress&fit=max)
_1780855534886.webp?w=480&auto=format%2Ccompress&fit=max)
ಅಷ್ಟಕ್ಕೂ ಈ ಆಂಟಿಬಯಾಟಿಕ್ಸ್ ನಿರೋಧಿ ಬ್ಯಾಕ್ಟೀರಿಯಾಗಳು ಇರುವುದು ಗಟಾರಿನ ಕೊಳಚೆ ನೀರಿನಲ್ಲಿ. ಹೀಗಿರುವಾಗ ನಮಗ್ಯಾಕೆ ಮಂಡೆ ಬಿಸಿ ಎಂದು ನಿಮಗನ್ನಿಸಿರಬಹುದು. ಅದಕ್ಕುತ್ತರವನ್ನು ತಿಳಿಯುವ ಮುನ್ನ ಆಂಟಿಬಯಾಟಿಕ್ಸ್ನ ಹಿನ್ನೆಲೆಯನ್ನೊಮ್ಮೆ ಅರಿತುಕೊಳ್ಳೋಣ. 1928ರಲ್ಲಿ ಬೇರ್ಯಾವುದೋ ಪ್ರಯೋಗದಲ್ಲಿ ತೊಡಗಿದ್ದ ವಿಜ್ಞಾನಿ ಅಲೆಕ್ಸಾಂಡರ್ ಗ್ರಹಾಮ್ ಬೆಲ್ ಆಕಸ್ಮಾತ್ತಾಗಿ ಕಂಡುಹಿಡಿದ ಪೆನ್ಸಿಲಿನ್ಅನ್ನು ಜಗತ್ತಿನ ಮೊದಲ ‘ನೈಸರ್ಗಿಕ ಆಂಟಿಬಯಾಟಿಕ್’ ಎಂದು ಹೇಳಲಾಗುತ್ತದೆ. ಇದನ್ನು ಶತಮಾನದ ಸಂಶೋಧನೆಯೆಂದು ಬಣ್ಣಿಸುವುದೂ ಉಂಟು. ಆ ಉಪಮೆಯನ್ನು ನೀಡಿರುವುದರ ಹಿಂದೆ ಬಲವಾದ ಕಾರಣಗಳಿವೆ. ಆಂಟಿಬಯಾಟಿಕ್ಅನ್ನು ವೈದ್ಯಕೀಯ ಕ್ಷೇತ್ರ ಒಪ್ಪಿಕೊಂಡು ಚಿಕಿತ್ಸಾ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವ ಮೊದಲು ಬ್ಯಾಕ್ಟೀರಿಯಾದ ಮೂಲಕ ಹರಡುವ ನ್ಯೂಮೋನಿಯಾದಂತಹ ಸೋಂಕುರೋಗಗಳಿಗೆ ಜಾಗತಿಕವಾಗಿ ಭಾರಿ ಪ್ರಮಾಣದಲ್ಲಿ ಜನರು ತುತ್ತಾಗಿ ಸಾವುನೋವುಗಳು ಸಂಭವಿಸುತ್ತಿದ್ದವು. ಆಂಟಿಬಯಾಟಿಕ್ ಫೀಲ್ಡಿಗಿಳಿದ ಮೇಲೆ ಆ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಬ್ರೇಕ್ ಬಿತ್ತು. ಅವುಗಳ ಸಂಖ್ಯೆಯನ್ನು ಕುಗ್ಗಿಸಿ ರೋಗಗಳನ್ನು ಔಷಧದ ಮೂಲಕ ಗುಣಪಡಿಸುವ ರೇಂಜಿಗೆ ತಂದು ನಿಲ್ಲಿಸಲಾಯಿತು. ಇದರಿಂದ ಜಾಗತಿಕವಾಗಿ ಬ್ಯಾಕ್ಟೀರಿಯಾ ಮೂಲದಿಂದ ಹರಡುವ ರೋಗಗಳಿಂದ ಸಂಭವಿಸುವ ಸಾವುನೋವಿನ ಸಂಖ್ಯೆ ಇಳಿದು ಜನರ ಜೀವಿತಾವಧಿ ವೃದ್ಧಿಯಾಯಿತು. ತನ್ನ ನೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸನಿಹದಲ್ಲಿರುವ ಆಂಟಿಬಯಾಟಿಕ್ ಒಂದು ಅಂದಾಜಿನಂತೆ ಇಲ್ಲಿಯವರೆಗೆ 20 ಕೋಟಿ ಜನರ ಜೀವ ಉಳಿಸಿದೆ.
ಆರಂಭದಲ್ಲಿ ಆಂಟಿಬಯಾಟಿಕ್ಗಳ ಬಳಕೆ ಸೋಂಕುರೋಗ ಹರಡುತ್ತಿದ್ದ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ನಿಯಂತ್ರಿಸಿ ರೋಗ ಹತೋಟಿಗೆ ತರುವ ಕಾರ್ಯಕ್ಕಷ್ಟೇ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ಹೃದಯದ ಶಸ್ತ್ರಚಿಕಿತ್ಸೆ, ಅಂಗಗಳ ಬದಲಿಸುವಿಕೆ, ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿರುವ ಕಿಮೋಥೆರಪಿಯಂತಹ ಚಿಕಿತ್ಸಾ ವಿಧಾನಗಳಲ್ಲಿ ಚಿಕಿತ್ಸಾನಂತರ ರೋಗಿಗೆ ಸೋಂಕು ತಗಲದಿರುವುದನ್ನು ಖಾತ್ರಿಪಡಿಸಲು ಇವುಗಳ ಬಳಕೆಯನ್ನು ವಿಸ್ತರಿಸಲಾಯಿತು. ಆಂಟಿಬಯಾಟಿಕ್ ತಯಾರಿಕೆಗೆ ಕಡಿಮೆ ಖರ್ಚು ತಗಲುವ ಪರಿಣಾಮ ಜಾನುವಾರುಗಳ ಶುಶ್ರೂಷೆಯಲ್ಲಿಯೂ ಇವುಗಳ ಬಳಕೆಯನ್ನು ವಿಸ್ತರಿಸಲಾಯಿತು. ಬಳಕೆ- ಉತ್ಪಾದನೆ ಊಹೆಗೂ ಮೀರಿ ಬೆಳೆಯಿತು. ಇತ್ತೀಚೆಗೆ ಕೆನಡಾದ ಮೆಕ್ನಿಲ್ ವಿಶ್ವವಿದ್ಯಾಲಯ ನಡೆಸಿದ ಗಣತಿ ಪ್ರಕಾರ ವಿಶ್ವಾದ್ಯಂತ 2000ರಲ್ಲಿ ಬಳಸಲ್ಪಟ್ಟ ಆಂಟಿಬಯಾಟಿಕ್ನ ಪ್ರಮಾಣ 2015ಕ್ಕೆ ಹೋಲಿಸಿದಾಗ ಶೇ. 65ರಷ್ಟು ಏರಿಕೆ ಕಂಡುಬಂದಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿರುವ ಆಂಟಿಬಯಾಟಿಕ್ ನಿಜಕ್ಕೂ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ. ನಾವು ಔಷಧಿಯಾಗಿ ಸೇವಿಸುವ ಆಂಟಿಬಯಾಟಿಕ್ನ ಸ್ವಲ್ಪವೇ ಪ್ರಮಾಣ ದೇಹದಲ್ಲಿ ಬಳಕೆಯಾಗಿ ಹೆಚ್ಚಿನ ಪ್ರಮಾಣ ತಾಜ್ಯವಾಗಿ ಮಲ ಮೂತ್ರದ ಮೂಲಕ ಹೊರಗೆ ಹೋಗುತ್ತದೆ. ಆಂಟಿಬಯಾಟಿಕ್ ಸೇರಿದಂತೆ ಹೀಗೆ ದೇಹದಿಂದ ಹೊರಹಾಕಲ್ಪಡುವ ಹೆಚ್ಚಿನ ತಾಜ್ಯಗಳು ತಾಜ್ಯಸಂಸ್ಕರಣಾ ಘಟಕಗಳ ಮೂಲಕ ಹಾದು ಹೋದರೂ ಅದರಿಂದ ಹೆಚ್ಚಿನ ಫಾಯಿದೆ ಇಲ್ಲ. ಒಂದೆರಡು ಅಪವಾದ ಬಿಟ್ಟರೆ ಜಾಗತಿಕವಾಗಿ ಹೆಚ್ಚಿನ ತಾಜ್ಯಸಂಸ್ಕರಣಾ ಘಟಕಗಳು ಔಷಧೀಯ ತಾಜ್ಯಗಳನ್ನು ಸಂಪೂರ್ಣವಾಗಿ ತಡೆಯಬಲ್ಲ ಕ್ಷಮತೆಯನ್ನು ಹೊಂದಿಲ್ಲ. ಹೀಗಾಗಿ ಸ್ವಲ್ಪ ಪ್ರಮಾಣದ ಆಂಟಿಬಯಾಟಿಕ್ ಮತ್ತಿತರ ಔಷಧೀಯ ತಾಜ್ಯಗಳನ್ನು ಹೊಂದಿರುವ ಸಂಸ್ಕರಿತ ನೀರು ನದಿ ಮತ್ತು ಸಮುದ್ರವನ್ನು ಸೇರುತ್ತದೆ. ಇದು ಒಂದೆಡೆಯಾದರೆ ಕೃಷಿಕಾರ್ಯಕ್ಕೆ ಬಳಸುವ ರಸಗೊಬ್ಬರದಲ್ಲಿ ಮಿಳಿತವಾದ ಔಷಧೀಯ ತಾಜ್ಯಗಳೂ ಮಳೆಯ ನೀರಿಗೆ ಹರಿದುಬಂದು ಜಲಮೂಲ ಸೇರಿಕೊಳ್ಳುತ್ತವೆ.
ಇದೀಗ ಮತ್ತೆ ರೂರ್ಕಿಯ ಗಟಾರಿನ ವಿಷಯಕ್ಕೆ ಬರೋಣ. ಅದರಲ್ಲಿ ಹರಿದು ಹೋಗುತ್ತಿರುವ ನೀರು ಬಾವಿಯನ್ನೋ, ಕೆರೆಯನ್ನೋ ಸೇರಿಕೊಂಡು ಆ ನೀರನ್ನು ಕಲುಷಿತಗೊಳಿಸಿ ಅದನ್ನು ಬಳಸಿದ ಜನ, ಜಾನುವಾರುಗಳ ಹೊಟ್ಟೆಯಲ್ಲಿ ಸೇರಿಕೊಂಡ ನಂತರದ ಪರಿಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಸಾಮಾನ್ಯವಾಗಿ ಹೀಗೆ ಕಲುಷಿತಗೊಂಡ ನೀರನ್ನು ಸೇವಿಸಿದವರಲ್ಲಿ ವಾಂತಿ, ಭೇದಿ ಕಾಣಿಸಿಕೊಳ್ಳುತ್ತದೆ. ರೋಗಿಯ ದೇಹದಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ನಿಯಂತ್ರಿಸಲು ಇಂತಹ ಪರಿಸ್ಥಿತಿಯಲ್ಲಿ ಆಂಟಿಬಯಾಟಿಕ್ಗಳನ್ನು ನೀಡಿದಾಗ ಅವುಗಳಿಗೆ ಕ್ಯಾರೆ ಎನ್ನದ ಆಂಟಿಬಯಾಟಿಕ್ ನಿರೋಧಿ ಬ್ಯಾಕ್ಟೀರಿಯಾಗಳು ರೋಗವನ್ನು ನಿಯಂತ್ರಣಕ್ಕೆ ಸಿಗದ ರೇಂಜಿಗೆ ಕೊಂಡೊಯ್ದು ಅದು ರೋಗಿಗೆ ಮಾರಣಾಂತಿಕವಾಗಿ ಪರಿಣಮಿಸಬಹುದು. ವಿಷಯ ಅಷ್ಟಕ್ಕೇ ನಿಲ್ಲುವುದಿಲ್ಲ. ಆ ಜಲಮೂಲವು ಒಬ್ಬನಿಗಷ್ಟೆ ಸೀಮಿತವಲ್ಲದ ಕಾರಣಕ್ಕೆ ಅದರ ಎಲ್ಲ ಬಳಕೆದಾರರ ದೇಹದೊಳಗೂ ಹೋಗುವ ಆ ಬ್ಯಾಕ್ಟೀರಿಯಾಗಳು ಅವರೆಲ್ಲರಿಗೂ ರೋಗವನ್ನು ಅಂಟಿಸಿ ಅದನ್ನೊಂದು ಜಾಡ್ಯವನ್ನಾಗಿ ಪರಿವರ್ತಿಸುತ್ತವೆ.
ಸಾರ್ವಜನಿಕ ಗಟಾರುಗಳಿಗೆ ಯಾವುದೇ ನಿಯಮವಿಲ್ಲ ಎಂದು ನಾವೆಲ್ಲ ಅಂದುಕೊಂಡಿರುತ್ತೇವೆ. ಅದರಲ್ಲಿ ಮನೆಗುಡಿಸಿ ಎಸೆಯುವ ಕಸದ ಜತೆಗೆ ಬಳಸಿದ ಸ್ಯಾನಿಟರಿ ಪ್ಯಾಡ್, ಡೈಪರ್, ಮಾಂಸದ ತಾಜ್ಯ, ಎಕ್ಸ್ಪೈರ್ ಆದ ಔಷಧ ಹೀಗೆ ಪ್ರತಿಯೊಬ್ಬರೂ ಅನುದಿನ ಎಸೆದ ತ್ಯಾಜ್ಯಗಳಿರುತ್ತವೆ. ಗಟಾರು ಸೇರಿದ ವೈದ್ಯಕೀಯ ತಾಜ್ಯಗಳು ಇದೀಗ ಹೊಸ ರೋಗಗಳನ್ನು ಸೃಷ್ಟಿಸುವ ತಾಣಗಳಾಗಿ ಮಾರ್ಪಟ್ಟಿವೆ.
ರೂರ್ಕಿಯ ಗಟಾರುಗಳ ತಾಜ್ಯದ ನೀರನ್ನು ಪರಿಶೀಲಿಸಿದ ತಂಡ ಕಂಡುಕೊಂಡಂತೆ, ಹಳೆ ಔಷಧದ ಬಾಟಲಿಗಳೂ ಸೇರಿದಂತೆ ವೈದ್ಯಕೀಯ ತಾಜ್ಯಗಳ ಉಪಸ್ಥಿತಿಯಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳು ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುತ್ತ ಆಂಟಿಬಯಾಟಿಕ್ಗಳನ್ನು ನಿರೋಧಿಸುವ ಶಕ್ತಿಯನ್ನು ಬೆಳೆಸಿಕೊಂಡಿವೆ. ಅಲ್ಲಿಗೆ ಇಂತಹ ತಾಜ್ಯಗಳನ್ನು ಹೊಂದಿರುವ ಗಟಾರುಗಳು ರೋಗಗಳನ್ನು ಹೊಡೆದೋಡಿಸುವ ನಮ್ಮ ಅಸ್ತ್ರಗಳ ವಿರುದ್ಧವೇ ಹೋರಾಡಿ ಜಯಿಸಬಲ್ಲ ವಿರೋಧಿಸೈನ್ಯವನ್ನು ತರಬೇತಿಗೊಳಿಸುವ ಕೇಂದ್ರಗಳಾಗಿ ರೂಪುಗೊಳ್ಳುತ್ತಿರುವುದು ಆತಂಕದ ವಿಷಯ.
ಜಲಮೂಲಗಳನ್ನು ಆಂಟಿಬಯಾಟಿಕ್ ಸೇರಿದಂತೆ ಔಷಧೀಯ ವಸ್ತುಗಳು ಕಲುಷಿತಗೊಳಿಸುವುದು ಮನುಷ್ಯ, ಪ್ರಾಣಿ ಮತ್ತು ಜಲಚರಗಳ ಮೇಲೆ ದೂರಗಾಮಿ ದುಷ್ಪರಿಣಾಮಗಳನ್ನು ಉಂಟುಮಾಡಬಲ್ಲ ಬೆಳವಣಿಗೆ. ಆಶ್ಚರ್ಯವೆಂದರೆ ಈ ಕುರಿತು ವಿಜ್ಞಾನಿಗಳ ಒಂದು ಗುಂಪು ಎಚ್ಚರಿಸುತ್ತ ಬಂದಿದ್ದರೂ ಜಾಗತಿಕವಾಗಿ ಇದರ ವಿರುದ್ಧ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದೇ ಇಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುವ ಔಷಧಿಗಳನ್ನು ಎರಡು ಬಗೆಯ ವಸ್ತುಗಳ ಸಮ್ಮಿಲನದಿಂದ ತಯಾರಿಸಲಾಗುತ್ತದೆ. ಮೊದಲನೆಯದು ಆಕ್ಟಿವ್ ಫಾರ್ವಸ್ಯೂಟಿಕಲ್ ಇನ್ಗ್ರೆಡಿಯೆಂಟ್ (ಎಪಿಐ) ಅರ್ಥಾತ್ ಸಕ್ರಿಯ ಔಷಧೀಯ ಘಟಕಾಂಶ. ರಾಸಾಯನಿಕ ಅಥವಾ ಜೈವಿಕ ವಸ್ತುವಾಗಿರುವ ಎಪಿಐ ನಮ್ಮ ದೇಹದೊಡನೆ ನೇರವಾಗಿ ಸಂವಹನ ನಡೆಸಿ ರೋಗವನ್ನು ಗುಣಪಡಿಸುತ್ತದೆ. ಹಾಗೆ ನೋಡಿದರೆ ಒಂದರ್ಥದಲ್ಲಿ ಎಪಿಐ ಅನ್ನುವುದೇ ಮೂಲ ಔಷಧಿಯಾಗಿದ್ದು ಇದರ ಜತೆಗೆ ಎರಡನೇ ಪೈಕಿಯ ವಸ್ತುವನ್ನು ಅದನ್ನು ಹಿಡಿದಿಟ್ಟುಕೊಳ್ಳಲು, ಅದಕ್ಕೊಂದು ಬಣ್ಣ ಮತ್ತು ವಾಸನೆ ನೀಡುವ ಜತೆಗೆ ಅದರ ಆಯುಷ್ಯ ಹೆಚ್ಚಿಸಲು ಬಳಸಲಾಗುತ್ತದೆ. ರೋಗ ಗುಣಪಡಿಸುವಲ್ಲಿ ಈ ವಸ್ತುಗಳ ಕಾಣಿಕೆ ಶೂನ್ಯವಾಗಿರುವ ಕಾರಣಕ್ಕೆ ಇದಕ್ಕಾಗಿ ನಮ್ಮ ದೇಹದ ಮೇಲೆ ಯಾವುದೇ ಪರಿಣಾಮಗಳನ್ನು ಬೀರದ ನಿಷ್ಕ್ರಿಯ ವಸ್ತುಗಳನ್ನು (ಎಕ್ಸಿಪೈಂಟ್ಸ್) ಬಳಸಲಾಗುತ್ತದೆ. ಮೂಲಗಳ ಪ್ರಕಾರ ಜಾಗತಿಕವಾಗಿ ಅಜಮಾಸು 4000 ಎಪಿಐಗಳನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇವುಗಳ ತಯಾರಿಕೆಯ ಮೂಲಕಾರಣವಾದ ರೋಗತಡೆಯನ್ನು ಯಶಸ್ವಿಯಾಗಿ ನಿಭಾಯಿಸುವ ಹರುಷದ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ವಿವಿಧ ದಾರಿಗಳಿಂದ ಎಲ್ಲ ಅಡೆತಡೆ ಗಳನ್ನು ದಾಟಿ ಈ ಔಷಧಗಳು ಜಲಮೂಲವನ್ನು ತಲುಪುವ ಪ್ರಮಾಣ ಹೆಚ್ಚಾಗಿರುವುದು ನಿಜಕ್ಕೂ ಕಳವಳಕಾರಿ ವಿಷಯ.
ಸಾಮಾನ್ಯವಾಗಿ ವೈದ್ಯರು ಔಷಧಿ ಬರೆದು ಕೊಡುವಾಗ ರೋಗಿಯ ವಯಸ್ಸು, ತೂಕ, ಲಿಂಗವನ್ನು ಪರಿಗಣಿಸುವುದನ್ನು ಕಂಡಿರುತ್ತೀರಿ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಒಂದೇ ರೋಗಕ್ಕೆ ನಿಮಗೆ ಕೊಟ್ಟಿರುವ ಮಾತ್ರೆಯು ಮತ್ತೊಬ್ಬನಿಗೆ ಓವರ್ಡೋಸ್ ಆಗಬಹುದು. ತೊಂದರೆ ಇರುವುದು ಇಲ್ಲೇ. ಜಲಮೂಲಗಳನ್ನು ಸೇರಿಕೊಳ್ಳುವ ಔಷಧೀಯ ವಸ್ತುಗಳು ನೀರಲ್ಲಿ ಸೇರಿಕೊಂಡು ದುರ್ಬಲಗೊಂಡರೂ ಅವುಗಳು ಜಲಚರಗಳ ಪಾಲಿಗೆ ಓವರ್ಡೋಸ್ಗಳೇ. ಜತೆಗೆ ಅವುಗಳಲ್ಲಿರುವ ನಿಷ್ಕ್ರಿಯ ವಸ್ತುಗಳು (ಎಕ್ಸಿಪೈಂಟ್ಸ್) ಹೆಚ್ಚು ಸಮಯ ಈ ಔಷಧಗಳ ಆಯಸ್ಸನ್ನು ವಿಸ್ತರಿಸುವ ಕಾರಣಅವು ನೀರಿನಲ್ಲಿ ದೊಡ್ಡ ಇನ್ನಿಂಗ್ಸ್ ಆಡುತ್ತವೆ. ಹೀಗಾಗಿ ಅವು ಹೇಗೆ ಮತ್ತು ಎಷ್ಟು ಕಾಲ ನೀರಿನೊಳಗೆ ತಮ್ಮ ಚಮತ್ಕಾರ ತೋರಿಸುತ್ತವೆ ಎಂಬುದು ಊಹೆಗೂ ನಿಲುಕದ ವಿಷಯ. ಇತ್ತೀಚಿನ ಸಂಶೋಧನೆಯೊಂದರಲ್ಲಿ ಕಂಡುಕೊಂಡಂತೆ ತಾಜ್ಯದ ಮೂಲಕ ನದಿನೀರಿಗೆ ಸೇರಿಕೊಂಡ ಗರ್ಭನಿರೋಧಕ ಮಾತ್ರೆಗಳು ನೀರಿನೊಳಗಿನ ಗಂಡು ಮೀನುಗಳ ಲಿಂಗ ಪರಿವರ್ತಿಸುವುದರ ಜತೆಗೆ ಹೆಣ್ಣುಗಳ ಫಲವತ್ತತೆಯನ್ನು ಕುಗ್ಗಿಸುವುದನ್ನು ಗಮನಿಸಲಾಗಿದೆ.
ಒಂದೆರಡು ವರ್ಷಗಳ ಹಿಂದೆ ಅಮೆರಿಕದ ಯಾರ್ಕ್ ಸ್ಟಡಿ ವಿಶ್ವವಿದ್ಯಾಲಯವು ವಿಶ್ವದ ನೂರಕ್ಕೂ ಹೆಚ್ಚು ದೇಶಗಳಲ್ಲಿನ 1000 ನದಿನೀರಿನ ಮಾದರಿಗಳಲ್ಲಿರುವ ಔಷಧೀಯ ವಸ್ತುಗಳ ಪ್ರಮಾಣವನ್ನು ಪರೀಕ್ಷಿಸಿ ವರದಿ ಪ್ರಕಟಿಸಿತು. ಅದರ ಪ್ರಕಾರ, ತಂಡ ಪರೀಕ್ಷಿಸಿದ ಕಾಲುಭಾಗದಷ್ಟು ಮಾದರಿಗಳಲ್ಲಿ ಔಷಧೀಯ ವಸ್ತುಗಳ ಪ್ರಮಾಣ ಅಪಾಯದ ಮಟ್ಟ ಮೀರಿತ್ತು. ಉಳಿದ ಮಾದರಿಗಳಲ್ಲಿಯೂ ಅದು ಗಣನೀಯ ಮಟ್ಟದಲ್ಲಿರುವುದು ಕಳವಳಕಾರಿ ಎಂದು ವರದಿ ಉಲ್ಲೇಖಿಸಿದೆ. ಇದೇ ವರದಿ ಆಧರಿಸಿ ನದಿಗಳಿಗೆ ಅವು ಹೊಂದಿರುವ ಔಷಧೀಯ ವಸ್ತುಗಳ ಪ್ರಮಾಣದ ಮೇಲೆ ಅಂಕಗಳನ್ನು ನೀಡಿದಲ್ಲಿ ಪಾಕಿಸ್ತಾನದ ಲಾಹೋರ್ನಲ್ಲಿ ಹರಿಯುವ ರಾವಿ ನದಿ ಮೊದಲ ಸ್ಥಾನದಲ್ಲಿದ್ದು ಭಾರತದ ದೆಹಲಿಯ ಯಮುನಾ ನದಿ 4ನೇ ಸ್ಥಾನದಲ್ಲಿದೆ. ಇದು ಕೇವಲ ದೆಹಲಿಯವರಿಗೆ ಸಂಬಂಧಿಸಿದ್ದು ಎಂದು ನಾವು ನಿರಾಳರಾಗುವಂತಿಲ್ಲ. ಆ ವರದಿಯಲ್ಲಿರುವ ಕಳವಳಕಾರಿ ಮಾದರಿಗಳ ಪಟ್ಟಿಯಲ್ಲಿ ಉತ್ತರ ದಕ್ಷಿಣವೆನ್ನದೇ ದೇಶಾದ್ಯಂತ ಎಲ್ಲ ಪ್ರಮುಖ ನದಿ, ಜಲಮೂಲಗಳ ಹೆಸರಿದೆ.
ಒಂದು ಸಮೀಕ್ಷೆ ಪ್ರಕಾರ ಭಾರತದ ಶೇ. 78ರಷ್ಟು ತಾಜ್ಯನೀರು ಸರಿಯಾಗಿ ಸಂಸ್ಕರಣೆಗೊಳ್ಳದೇ ಜಲಮೂಲ ಸೇರುತ್ತಿದೆ. ಇದರ ಜತೆಗೆ ಪರಿಣತರು ಹೇಳುವಂತೆ ಅತಿಹೆಚ್ಚು ಔಷಧಗಳನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ಆ ಕಾರ್ಖಾನೆಗಳು ಈ ಪಿಡುಗು ಹೆಚ್ಚಲು ತಮ್ಮದೇ ಕಾಣಿಕೆಯನ್ನು ನೀಡುತ್ತಿವೆ. ನಮ್ಮಲ್ಲಿರುವ ತಾಜ್ಯದ ಮಿತಿಗಳು ಔಷಧೀಯ ವಸ್ತುಗಳ ಪ್ರಮಾಣದ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಿರುವ ರೀತಿಯಲ್ಲಿರುವುದೂ ತಪ್ಪಿತಸ್ಥರಿಗೆ ಫ್ರೀಹಿಟ್ ಆಗಿ ಪರಿಣಮಿಸಿದೆ. ಇತ್ತೀಚೆಗೆ ಆಂಟಿಬಯಾಟಿಕ್ ಸೇರಿದಂತೆ ಔಷಧೀಯ ತಾಜ್ಯಗಳನ್ನು ಹೆಚ್ಚು ಕ್ಷಮತೆಯಿಂದ ಸಂಸ್ಕರಿಸುವ ನೂತನ ತಂತ್ರಜ್ಞಾನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವನ್ನು ಅಳವಡಿಸಿಕೊಳ್ಳುವುದರ ಜತೆಗೆ ತಾಜ್ಯಗಳ ಮಿತಿಗಳನ್ನು ಪುನರ್ವಿಮಶಿಸಿ ಕಟ್ಟಳೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ಈ ಪಿಡುಗಿಗೆ ಲಗಾಮು ಹಾಕಲು ಸಾಧ್ಯವಿದೆ. ಅದೆಲ್ಲ ಸರಿ, ನಾಳೆಯಿಂದ ಮನೆಯ ಮೂಲೆಯಲ್ಲಿ ಬಿದ್ದಿರುವ ಹಳೆಯ ಔಷಧಿ, ಉಪಯೋಗಿಸಿರುವ ನ್ಯಾಪ್ಕಿನ್, ಡೈಪರ್ಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂದಿದ್ದೀರಿ?
-(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)