ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಆದೇಶ ಕೊಟ್ಟವರು ಯಾರು? ಹೊಣೆಗಾರಿಕೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ರಾಹುಲ್ ಗಾಂಧಿ | Rahul Gandhi

ಅಮಿತ್ ಶಾ ಮತ್ತು ರಾಹುಲ್ ಗಾಂಧಿ
ಅಮಿತ್ ಶಾ ಮತ್ತು ರಾಹುಲ್ ಗಾಂಧಿ
Published on
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗಕ್ಕೆ ಆದೇಶ ನೀಡಿದವರು ಯಾರು? ಸರ್ಕಾರ ಈ ಕುರಿತು ಹೊಣೆಗಾರಿಕೆ ವಹಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಪತ್ರ ಬರೆದಿದ್ದಾರೆ.
ಶನಿವಾರ(ಜು. 25) ರಾಹುಲ್ ಗಾಂಧಿಯವರು ಬರೆದ ಪತ್ರದಲ್ಲಿ,ಜುಲೈ 20, 2026 ರಂದು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಬರ್ಬರ ದಾಳಿಗೆ ಹೊಣೆಗಾರಿಕೆಯನ್ನು ಒತ್ತಾಯಿಸಲು ನಾನು ಬರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ವಿದ್ಯಾರ್ಥಿಗಳು ನ್ಯಾಯಯುತ ಮತ್ತು ಜವಾಬ್ದಾರಿಯುತ ಶಿಕ್ಷಣ ವ್ಯವಸ್ಥೆಯನ್ನು ಒತ್ತಾಯಿಸುತ್ತಿದ್ದರು. ಅವರ ಮಾತು ಕೇಳುವ ಬದಲು, ಭದ್ರತಾ ಪಡೆಗಳು ಮಾರಕ ಆಯುಧಗಳು ಮತ್ತು ಅಶ್ರುವಾಯು ಸೇರಿದಂತೆ ವಿವೇಚನಾರಹಿತ ಬಲಪ್ರಯೋಗ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನೂರಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹಿಳಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ, ಅವರ ಖಾಸಗಿ ಭಾಗಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅತ್ಯಂತ ಆಘಾತಕಾರಿ ಎಂದರೆ ಮಾರಕ ಪೆಲೆಟ್ ಗನ್ ಗಳ ಬಳಕೆ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳು. ಪತ್ರಕರ್ತ ಸೇರಿದಂತೆ ಗಂಭೀರ ಗಾಯಗಳಿಂದ ಬಳಲುತ್ತಿರುವ ಜನರನ್ನು ಸ್ಪಷ್ಟವಾಗಿ ತೋರಿಸುತ್ತವೆ. ನಾನು 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಬ್ ಅವರನ್ನು ಭೇಟಿಯಾದೆ, ಅವರು ಈಗ ತೀವ್ರ ನೋವಿನಿಂದ ಬಳಲುತ್ತಿದ್ದಾರೆ. ಪೆಲೆಟ್ ಗನ್ ಗಳಿಂದ ಗುಂಡು ಹಾರಿಸಿದ್ದರಿಂದ ಕಣ್ಣು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದಿದ್ದಾರೆ.
ದೆಹಲಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳು ಅಂತಿಮವಾಗಿ ನಿಮಗೆ ಉತ್ತರಿಸುತ್ತವೆ. ಆದ್ದರಿಂದ ನಾನು ಕೇಳುತ್ತೇನೆ. ಗೃಹ ಸಚಿವರಾಗಿ, ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್‌ಗಳು ಸೇರಿದಂತೆ ಮಾರಕ ಬಲಪ್ರಯೋಗವನ್ನು ನೀವು ಅನುಮೋದಿಸಿದ್ದೀರಾ? ಇಲ್ಲದಿದ್ದರೆ, ಯಾರು ಆದೇಶ ಮಾಡಿದರು ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನಾಕಾರರ ಮೇಲೆ ಸಾಮಾನ್ಯ ಉಡುಪಿನಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿಗಳ ಗುರುತಿನ ಬಗ್ಗೆಯೂ ಅವರು ಸ್ಪಷ್ಟೀಕರಣವನ್ನು ಕೇಳಿರುವ ಅವರು, ಸಾಮಾನ್ಯ ಉಡುಪಿನಲ್ಲಿದ್ದ ಕೆಲವರು ವಿದ್ಯಾರ್ಥಿಗಳನ್ನು ಲಾಠಿಗಳಿಂದ ಹೊಡೆಯುತ್ತಿದ್ದವರು ಪೊಲೀಸ್ ಸಿಬ್ಬಂದಿಯೇ ಅಥವಾ ಸ್ವಯಂಸೇವಕರಾ? ಅವರ ನಿಯೋಜನೆಗೆ ಅಧಿಕಾರ ನೀಡಿದವರ್ಯಾರು ಎಂದು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರ ಪತ್ರಕ್ಕೆ ಗೃಹಸಚಿವಾಲಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net